ಬೆಂಗಳೂರು: ರಾಜ್ಯ ಸರ್ಕಾರದ ವತಿಯಿಂದ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಬಂಗಾರದ ರಥ ನಿರ್ಮಾಣ ವಿಚಾರದಲ್ಲಿ ಸ್ಪಷ್ಟನೆ ನೀಡಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಭಕ್ತರು ಯೋಜನೆಯ ಪುನಾರಂಭಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.
2005 ಮತ್ತು 2006 ರಲ್ಲಿಯೇ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ರಥ ನಿರ್ಮಾಣಕ್ಕೆ ಅಂದಿನ ಸರ್ಕಾರ ಅನುಮೋದನೆ ನೀಡಿ ಆದೇಶ ಹೊರಡಿಸಲಾಗಿತ್ತಾದರೂ ಅದು ಸಾಧ್ಯವಾಗಿರಲಿಲ್ಲ. ಇತ್ತೀಚೆಗೆ ಕ್ಷೇತ್ರದ ಭಕ್ತರು ತಮ್ಮ ಭೇಟಿಯಾಗಿ ಹಿಂದಿನ ರಥ ನಿರ್ಮಾಣ ಯೋಜನೆಯನ್ನು ಪುನರಾರಂಭಿಸುವಂತೆ ಮನವಿ ಮಾಡಿದ್ದು, ರಥ ನಿರ್ಮಾಣಕ್ಕೆ ಅಗತ್ಯವಾದ ಚಿನ್ನ ಮತ್ತು ನಿರ್ಮಾಣ ವೆಚ್ಚಗಳ ಅಂದಾಜು ಪರಿಷ್ಕರಿಸಿ ಸಚಿವ ಸಂಪುಟದಲ್ಲಿ ಪ್ರಸ್ತಾವನೆಯನ್ನು ಮಂಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ.
ಮುಜರಾಯಿ ಇಲಾಖೆಗೆ ಕುಕ್ಕೆ ದೇವಸ್ಥಾನದಿಂದ ಸಾಕಷ್ಟು ಆದಾಯ ಹರಿದುಬರುತ್ತಿದೆ. 13 ವರ್ಷಗಳ ಹಿಂದೆ 2005ರಲ್ಲಿ ಕುಮಾರಸ್ವಾಮಿ ದೇವಸ್ಥಾನಕ್ಕೆ ರಥ ನಿರ್ಮಾಣ ಮಾಡಿಕೊಡುವ ಬಗ್ಗೆ ಹರಕೆ ಮಾಡಿಕೊಂಡಿದ್ದು, 2006ರಲ್ಲಿ ಕುಮಾರಸ್ವಾಮಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಂತಹ ಸಂದರ್ಭದಲ್ಲಿ ಚಿನ್ನದ ರಥ ನಿರ್ಮಿಸಲು ಆದೇಶಿಸಿದ್ದರು. ಬಳಿಕ ಅದು ಸಾಕಾರಗೊಂಡಿರಲಿಲ್ಲ. ಆದರೆ, ಈಗ ರಾಜಕೀಯ ವ್ಯಕ್ತಿಗಳ ಆಪ್ತ ಜ್ಯೋತಿಷಿ ದ್ವಾರಕಾನಾಥ್ ಅವರ ಸಲಹೆಯಂತೆ ರಥ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.
Discussion about this post