ಶಿವಮೊಗ್ಗ: ಸರ್ಕಾರಿ ನೌಕರಿಯಲ್ಲಿರುವ ಯಾರೇ ಆಗಲಿ ಅಟೆಂಡರ್’ನಿಂದ ಹಿಡಿದು ಅಧಿಕಾರಿ ಜಿಲ್ಲಾಧಿಕಾರಿ, ಉನ್ನತ ಶ್ರೇಣಿಯ ಕಾರ್ಯದರ್ಶಿ ಹುದ್ದೆಯವರೆಗೂ ಪ್ರತಿಯೊಬ್ಬರೂ ತಮ್ಮತಮ್ಮ ಹುದ್ದೆಯಲ್ಲಿ ಶ್ರೇಷ್ಠತೆಯನ್ನು ತುಂಬಲು ಪ್ರಯತ್ನಿಸಬೇಕು. ಆಗಮಾತ್ರ ಇಡೀ ಆಫೀಸು. ಇಡೀ ಇಲಾಖೆಗೆ ಉತ್ತಮ ಹೆಸರು ಬರುತ್ತದೆ ಎಂದು ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಕರೆ ನೀಡಿದ್ದಾರೆ.
ಸರ್ಕಾರಿ ಅಧಿಕಾರಿ ಮತ್ತು ನೌಕರರಿಗೆ ಏರ್ಪಡಿಸಿದ್ದ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ನಮ್ಮ ಸಂವಿಧಾನದಲ್ಲಿ ಮೂಲಭೂತ ಕರ್ತವ್ಯಗಳಲ್ಲಿ ಈ ಅಂಶ ಕಾಣಿಸಲಾಗಿದೆ. ನಾವು ಮೂಲಭೂತ ಹಕ್ಕುಗಳ ಬಗ್ಗೆ ಬಹಳವಾಗಿ ಮಾತಾಡುತ್ತೇವೆ. ಆದರೆ ಮೂಲಭೂತ ಕರ್ತವ್ಯಗಳ ಬಗ್ಗೆ ಯೋಚಿಸುವುದೇ ಇಲ್ಲ. ಪ್ರತಿಯೊಬ್ಬರೂ ತಮ್ಮ ಕರ್ತವ್ಯಕ್ಕೆ ಕಟಿಬದ್ಧರಾಗಿರತಕ್ಕದ್ದು ಅರ್ಪಣೆಯಿಂದ ಹೊಣೆಗಾರಿಕೆ ಅರಿತು ಕೆಲಸ ನಿರ್ವಹಿಸಿದರೆ ಅಲ್ಲಿ ಶ್ರೇಷ್ಠತೆ ತಾನಾಗಿಯೇ ಬರುತ್ತದೆ ಎಂದರು.
ಕೆ. ಜೈರಾಜ್ ವಿರಚಿತ “ರಾಜಮಾರ್ಗ” ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿರುವವರಿಗೆ ಪುಸ್ತಕ ಓದಿನ ಬಗ್ಗೆ ಯಾರೂ ಹೇಳಬೇಕಿಲ್ಲ. ಕವಿ ಸಾಹಿತಿಗಳನ್ನು ಜ್ಞಾನಪೀಠ ಪುರಸ್ಕೃತರನ್ನು ನಾಡಿಗೆ ಕೊಟ್ಟ ಹೆಮ್ಮೆಯ ಜಿಲ್ಲೆಯಿದಾಗಿದೆ. ಪ್ರಸ್ತುತ ಹಿರಿಯ ಐಎಎಸ್ ಅಧಿಕಾರಿಯಾಗಿ ಸೇವೆಸಲ್ಲಿಸಿ ನಿವೃತ್ತರಾದ ನಂತರ ತಮ್ಮ ಸೇವೆಯ ಅನುಭವಗಳನ್ನು ಈ ಪುಸ್ತಕದಲ್ಲಿ ಬಹಳ ಚೆನ್ನಾಗಿಯೇ ನಿರೂಪಿಸಿದ್ದಾರೆ. ಅವರು ತಾವು ಅನುಭವಿಸಿದ ಪ್ರತಿಯೊಂದು ಘಟನೆಗಳನ್ನು ತುಂಬ ಪ್ರಾಮಾಣಿಕವಾಗಿ ನಮ್ಮ ಮುಂದಿಟ್ಟದ್ದಾರೆ. ಒಬ್ಬ ಅಧಿಕಾರಿ ತನಗಿರುವ ಅಧಿಕಾರದ ವ್ಯಾಪ್ತಿಯನ್ನು ಅರ್ಥಮಾಡಿಕೊಂಡು ಅದನ್ನ ಜನಗಳ ಒಳಿತಿಗಾಗಿ ಚಲಾಯಿಸಿದರೆ ಅದು ಸಾರ್ಥಕವಾಗುತ್ತದೆ. ಇಲ್ಲದಿದ್ದರೆ ಅದು ನಿರರ್ಥಕ. ಹೀಗಾಗಿ ಜನರ ಸಮಸ್ಯೆಗಳಿಗೆ ಹೇಗೆ ಸ್ಪಂದಿಸಬೇಕು. ಅದಕ್ಕೆ ತಾನು ಹೇಗೆ ಸನ್ನದ್ಧನಾಗಬೇಕು ಎಂಬುದನ್ನು ಜೈರಾಜ್ ಅವರು ಪರಿಣಾಮಕಾರಿಯಾಗಿ ಬರೆದಿದ್ದಾರೆ. ಅಂತಹ ಸಮರ್ಥ ಅಧಿಕಾರಿಯನ್ನು ತಾವು ಈ ಕಾರ್ಯಾಗಾರಕ್ಕೆ ಆಹ್ವಾನಿಸಿರುವುದು ಶ್ಲಾಘನೀಯ ಎಂದರು.
ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಜೈರಾಜ್ ಮಾತನಾಡಿಮ ಮೊದಲು ಪುಸ್ತಕವನ್ನು ಇಂಗ್ಲಿಷ್ ನಲ್ಲಿ ಬರೆದೆ. ಅದನು ಕನ್ನಡಕ್ಕೆ ಅನುವಾದ ಮಾಡಿರುವವರು ಮಿತ್ರರಾದ ಪ್ರಹ್ಲಾದರಾವ್ ಎಂದು ತಿಳಿಸಿದರು.
ಯಾರೇ ಆಗಲಿ ಸರ್ಕಾರಿ ಸೇವೆಯಲ್ಲಿರುವವರು ಮೊದಲು ತಮ್ಮ ಕೆಲಸದಲ್ಲಿ ಬದ್ಧತೆ ಇರಬೇಕು. ಎರಡನೇಯದಾಗಿ ಆ ಕೆಲಸದಲ್ಲಿ ಪ್ರಭುತ್ವ ಸಾಧಿಸಬೇಕು. ಸಂಪೂರ್ಣ ನಮ್ಮ ಕೆಲಸದ ಪರಿಮಿತಿ, ಜವಾಬ್ದಾರಿ, ಕಾನೂನು ಮಾಹಿತಿ ಇತ್ಯಾದಿ ತಿಳಿದಿರಬೇಕು. ಸಾಮಾನ್ಯವಾಗಿ ಸರ್ಕಾರಿ ನೌಕರರು ಸೋಂಬೇರಿಗಳು ಎಂಬ ತಪ್ಪು ಸಾರ್ವಜನಿಕ ಅಭಿಪ್ರಾಯವಿದೆ. ಈ ಅಭಿಪ್ರಾಯ ತಪ್ಪು. ಇದನ್ನು ಹೋಗಲಾಡಿಸಬೇಕು ಎಂದರು.
ನೌಕರರಿಂದಲೇ ಇಡೀ ಆಡಳಿತ ಯಂತ್ರ ನಡೆಯುತ್ತಿರುವುದು. ಸಮಯದ ಪರಿಮಿತಿಯಲ್ಲಿ ಕೆಲಸ ಪೂರೈಸಬೇಕು. ಅಂತಹ ದಕ್ಷತೆಯನ್ನು ಹೊಂದಬೇಕಿದೆ. ಇವೆಲ್ಲದರ ಜೊತೆಗೆ ಪ್ರಾಮಾಣಿಕತೆಯೂ ಸೇರಬೇಕು. ಇವೆಲ್ಲ ಇದ್ದರೆ ಯಾರೂ ನಮ್ಮ ಕಡೆ ಬೆರಳು ತೋರಿಸುವುದಿಲ್ಲ. ಇದು ನನ್ನ ಮೂವತ್ತೈದು ವರ್ಷದ ಅನುಭವ ಎಂದು ತಮ್ಮ ಸೇವೆಯ ನೆನಪಿನ ಕ್ಷಣಗಳನ್ನು ಸ್ವಾರಸ್ಯವಾಗಿ ಕಾರ್ಯಾಗಾರದಲ್ಲಿ ಹಂಚಿಕೊಂಡರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಾಗಾರದಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಸುಮಾರು ಏಳು ನೂರಕ್ಕೂ ಹೆಚ್ಚು ನೌಕರರು ಉಪಸ್ಥಿತರಿದ್ದರು. ಜಿಲ್ಲಾ ಶಾಖೆಯ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಎಲ್ಲರಿಗೂ ಸ್ವಾಗತ ಕೋರಿ, ವಾಣಿ ಸಂಗಡಿಗರು ಪ್ರಾರ್ಥಿಸಿದರು. ನಂದಿನಿ ಕಾರ್ಯಕ್ರಮ ನಿರೂಪಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಶಿವಮೊಗ್ಗ ಶಾಖೆ ಕಾರ್ಯಾಗಾರವನ್ನು ಆಯೋಜಿಸಿತ್ತು.
(ವರದಿ: ಡಾ.ಸುಧೀಂದ್ರ, ಶಿವಮೊಗ್ಗ)
Discussion about this post