ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕೊರೋನಾ ಭೀತಿಯ ಕರಿ ಛಾಯೆಯಲ್ಲಿ ಪ್ರತಿನಿತ್ಯ ದೇಗುಲಗಳಲ್ಲಿ ಸೇವೆ ಮಾಡುವ ಸೇವಕರ ಬದುಕಿಗೆ ಕಷ್ಟ ಬಂದಿದೆ. ಇಂತಹ ಕಠಿಣ ಸಂದರ್ಭದಲ್ಲಿ ಭಗವಂತನ ಸೇವಕರ ಕೈಯನ್ನು ಸರ್ಕಾರ ಹಿಡಿಯಲಿದೆ ಎಂದು ಸಚಿವ ಆರ್. ಅಶೋಕ್ ಹೇಳಿದರು.
ಬನಶಂಕರಿ 3ನೆಯ ಹಂತದ ಜನತಾ ಬಜಾರ್’ನಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ನಡೆದ ತ್ರಿಮತಸ್ತ ಅರ್ಚಕರಿಗೆ ಸರ್ಕಾರದ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದಿನ ನಿತ್ಯ ಸಂಪಾದಿಸಿ ಜೀವನ ನಿರ್ವಹಿಸುತ್ತಿರುವ ಅರ್ಚಕರು, ಪುರೋಹಿತರು, ಅಡುಗೆ ಕೆಲಸ ಮಾಡುವ ಬ್ರಾಹ್ಮಣ ಜನಾಂಗದವರಿಗೆ ನೆರವಾಗಲು ನಾವು ಬದ್ದರಾಗಿದ್ದೇವೆ ಎಂದರು.
ಹಿಂದೂ ಧರ್ಮ ಉಳಿದರೆ ದೇಶ ಉಳಿಯುತ್ತದೆ ಹಾಗೂ ನೀವು ಚೆನ್ನಾಗಿದ್ದರೆ ಧರ್ಮ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟರು.
ಸಂಕಷ್ಟ ಎದುರಾಗಿದೆ ಎಂದು ಯಾರೂ, ಯಾವುದೇ ರೀತಿಯಲ್ಲಿ ಹೆದರಬೇಡಿ. ಎಲ್ಲ ರೀತಿಯಲ್ಲೂ ಸರ್ಕಾರ ನಾಡಿನ ಜನತೆಯ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಿದೆ. ಮುಂದೆಯೂ ಮಾಡಿಕೊಂಡು ಹೋಗುತ್ತದೆ ಎಂದರು.
ಉತ್ತರಹಳ್ಳಿಯ ವಸಂತಪುರದಲ್ಲಿರುವ ಐತಿಹಾಸಿಕ ಮತ್ತು ಪುರಾತನ ದೇವಾಲಯದಲ್ಲಿ ಮೇ 12 ರಂದು ವಸಂತ ವಲ್ಲಭನ ಸನ್ನಿಧಾನದಲ್ಲಿ 500 ಬ್ರಾಹ್ಮಣರಿಗೆ ಆಹಾರದ ಕಿಟ್ ವಿತರಿಸಲಾಗುತ್ತದೆ ತಿಳಿಸಿದರು.
ಆಹಾರ ಹಾಗೂ ಧಾನ್ಯದ ಕಿಟ್ ಪಡೆಯುವ ಮುನ್ನ ತ್ರಿಮತಸ್ತ ಬ್ರಾಹ್ಮಣರು ವೇದಮಂತ್ರ ಘೋಷ ಮಾಡಿ, ದೇಶಕ್ಕೆ ಬಂದಿರುವ ಕೊರೋನಾ ಪೆಡಂಭೂತವನ್ನು ನಾಶ ಮಾಡಿ, ಲೋಕ ಕಲ್ಯಾಣ ಮಾಡುವಂತೆ ಭಗವಂತನಲ್ಲಿ ಪ್ರಾರ್ಥಿಸಿದರು.
ಈ ವೇಳೆ ಮಾತನಾಡಿದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಕೆ. ರಾಮಪ್ರಸಾದ್, ರಾಜ್ಯ ಸರ್ಕಾರದ ಆರ್ಥಿಕ ನೆರವನ್ನು ಅರ್ಚಕರು, ಪುರೋಹಿತರು ಹಾಗೂ ಅಡುಗೆ ಕೆಲಸಗಾರರಿಗೂ ನೀಡುವಂತೆ ಸಚಿವರಲ್ಲಿ ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ಆರ್ಥಿಕ ನೆರವು ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.
ಸುಮಾರು 200 ತ್ರಿಮತಸ್ತ ಬ್ರಾಹ್ಮಣ ಕುಟುಂಬಕ್ಕೆ ಕಿಟ್ ನೀಡಲಾಯಿತು. ಎಲ್ಲರೂ ಸಾಮಾಜಿಕ ಅಂತರ ಕಾಪಾಡಿಕೊಂಡು ಕಿಟ್ ಪಡೆದರು.
ಪಾಲಿಕೆ ಸದಸ್ಯೆ ಸುಪ್ರಿಯಾ ಮತ್ತು ರಾಜೇಶ್ವರಿ ಚೋಳರಾಜು, ರಾಜ್ಯ ಸಂ ಕಾರ್ಯದರ್ಶಿ ಎಸ್.ಎನ್. ರವಿಶಂಕರ್ ಹಾಜರಿದ್ದರು.
(ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ)
Get in Touch With Us info@kalpa.news Whatsapp: 9481252093
Discussion about this post