ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಕೇಂದ್ರ ಸರಕಾರದ ಯೋಜನೆಗಳು, ಖರ್ಚು, ವೆಚ್ಚ, ಹೂಡಿಕೆ, ಸಾಲ, ಆದಾಯದ ಮೂಲಗಳನ್ನು ವಿವರಿಸುವ ವಾರ್ಷಿಕ ಆಯವ್ಯಯದ ಮೇಲೆ ಎಲ್ಲರ ಚಿತ್ತವಿದೆ. ಬಜೆಟ್ ಮಂಡನೆ ಸರಕಾರದ ಯಶಸ್ಸು-ವೈಫಲ್ಯಗಳ ಮುಖವಾಣಿಯಂತೆ ಕಂಡರೂ ಅದರ ಪರಿಣಾಮ ದೇಶದ ಪ್ರತೀ ಪ್ರಜೆಯ ಮೇಲೂ ಆಗುತ್ತಿರುತ್ತದೆ. ಮುಂಗಡ ಪತ್ರಕ್ಕೆ ದೇಶದ, ದೇಶವಾಸಿಗಳ ಚಿತ್ರಣವನ್ನು ಬದಲಾಯಿಸುವ ಹೊಣೆಗಾರಿಕೆಯಿರುತ್ತದೆ. ಕೊರೊನಾ ಮಹಾಮಾರಿಯ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಕಂಗೆಟ್ಟಿದ ದೇಶದ ಆರ್ಥಿಕತೆ ಸಂಕಷ್ಟದ ಸ್ಥಿತಿಯಿಂದ ಹೊರಬರುವ ಪ್ರಯತ್ನದಲ್ಲಿದೆ. ದೇಶದ ಆರ್ಥಿಕ ಚೇತರಿಕೆ ಜನರ ಲಸಿಕೀಕರಣ ಮತ್ತು ಮುಂದಿನ ಕೋವಿದ್ ಅಲೆಗಳ ತೀವ್ರತೆಗಳ ಮೇಲೆ ಅವಲಂಭಿತವಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೊತ್ತಿನಲ್ಲಿ ನವ ಭಾರತದ ಬುನಾದಿಗಳನ್ನು ಭದ್ರಪಡಿಸುವ ಮತ್ತು ಮಹಾಮಾರಿ ನಂತರದ ಆರ್ಥಿಕತೆಯನ್ನು ನಿರೂಪಿಸುವ ಮಹತ್ವದ ಜವಾಬ್ದಾರಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮೇಲಿದೆ. ಕೊರೊನಾ ಕಾಲದ ಎರಡನೇ ಬಜೆಟ್ ಎಲ್ಲರಿಗೂ ಚೇತೋಹಾರಿಯಾಗಬಲ್ಲದೇ ಎಂಬ ಸವಾಲು ಎಲ್ಲರ ಮುಂದಿದೆ.
2021-22:
2022ರ ಕೇಂದ್ರ ಆರ್ಥಿಕ ಸಮೀಕ್ಷೆಯ ಪ್ರಕಾರ, ಭಾರತ 2021-22ನೇ ವಿತ್ತೀಯ ವರ್ಷದಲ್ಲಿ 9.2% ರಿಯಲ್ ಜಿಡಿಪಿ (ಒಟ್ಟು ದೇಶಿಯ ಉತ್ಪಾದನೆ) ಬೆಳವಣಿಗೆಯ ದರವನ್ನು ಸಾಧಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ ಈ ದರ ೭.೩% ಆಗಿತ್ತು. ಹಾಗಾಗಿಯೇ ಬೆಳವಣಿಗೆ “V- Shape Curve” ರೀತಿ ಕಾಣುತ್ತದೆ. ಕೋವಿದ್ ನಂತರದ ಪರಿಸ್ಥಿತಿಯಲ್ಲಿ ಈ ಬೆಳವಣಿಗೆಯ ದರ ದೊಡ್ಡ ಸಕಾರಾತ್ಮಕ ಜಿಗಿತದಂತೆ ಕಾಣಬಹುದು. ಆದರೆ ವಾಸ್ತವದಲ್ಲಿ ಮಹಾಮಾರಿ ಪೂರ್ವದ ಕಾಲಕ್ಕೆ ಹೋಲಿಸಿದರೆ ಕೋವಿಡ್ ಮಹಾಮಾರಿ ಕಾರಣದಿಂದ ಭಾರತೀಯ ಅರ್ಥವ್ಯವಸ್ಥೆ ಸಂಕುಚಿತಗೊಂಡಿದೆ. ಹೀಗೆ ಸಂಕುಚಿತಗೊಂಡಿರುವ ಸಮಯದಲ್ಲಿ ಸಣ್ಣ ಬೆಳವಣಿಗೆಯೂ ದೊಡ್ಡದಾಗಿ ಕಾಣುತ್ತದೆ.
ಈ ಸಂಕಷ್ಟವನ್ನು ಮೀರಲು ಭಾರತ ಮುಂದಿನ 5-6 ವರ್ಷಗಳ ಕಾಲ ದ್ವಿಗುಣವಾಗಿ ವೃದ್ಧಿಸಬೇಕಾಗಿದೆ. ಕನಿಷ್ಟ 9.5% ರಿಂದ 10% ಬೆಳವಣಿಗೆ ದರವನ್ನು ಸಾಧಿಸಬೇಕು. ಅದಕ್ಕಾಗಿ ಹೆಚ್ಚಿನ ಸರಕಾರಿ-ಖಾಸಗಿ ಬಂಡವಾಳ ಹೂಡಿಕೆ, ರಫ್ತು, ಕೃಷಿ-ಕೈಗಾರಿಕೆ-ಸೇವಾ ವಲಯಗಳ ಕ್ಷಿಪ್ರ ಬೆಳವಣಿಗೆ ಬೃಹತ್ ಪ್ರಮಾಣದಲ್ಲಿ ನಡೆಯಬೇಕಿದೆ. ಆಗ ಅದು ಮಹಾಮಾರಿ ಪೂರ್ವದ ಭಾರತದ ಬೆಳವಣಿಗೆ ದರಕ್ಕೆ ಹೊಂದಿಕೆಯಾಗಬಹುದು. ಇಲ್ಲವಾದರೆ ವಿಶ್ವದ ಮುಂಚೂಣಿ ಆರ್ಥಿಕತೆಗಳ ಸಾಲಿನಲ್ಲಿ ನಿಲ್ಲುವುದು ಬಿಡಿ, ದೇಶದ ಜನರ ಆಶೋತ್ತರಗಳನ್ನು ಪೂರೈಸುವುದೇ ಕಷ್ಟವಾಗಬಹುದು. ಎಲ್ಲರ ಆಶಯದಂತೆ ಮಹಾಮಾರಿ ಕೊನೆಗೊಂಡರೂ ಅದು ವಿಶ್ವಕ್ಕೆ, ದೇಶಕ್ಕೆ, ಆರ್ಥಿಕತೆಯ ಮೇಲೆ ಉಳಿಸಿರುವ ಕರಾಳ ಛಾಯೆ ಭವಿಷ್ಯದಲ್ಲೂ ಬಾಧಿಸುತ್ತಿರುತ್ತದೆ. ಆದರೆ ಎದುರಾಗುವ ಸವಾಲುಗಳನ್ನು ಶೋಕಗೀತೆಯಾಗಿಸದೆ ಅದನ್ನು ಸಮರ್ಥವಾಗಿ ಎದುರಿಸುವ ಹೊಣೆಗಾರಿಕೆ ಸರಕಾರ-ಮಾರುಕಟ್ಟೆ-ಜನರು ಮತ್ತು ಈ ಬಾರಿಯ ಬಜೆಟ್ ಮೇಲಿದೆ.
ವಿತ್ತೀಯ ಕೊರತೆ ಮತ್ತು ಆರ್ಥಿಕ ಪುನಶ್ಛೇತನದ ಸವಾಲುಗಳು:
ಹೆಚ್ಚಿನ ಸುಧಾರಣೆಗೆ ಸಾಲ ಮಾಡುವುದು ಅಗತ್ಯವಾಗಬಹುದು. ಸವಾಲಿನ ಸಮಯದಲ್ಲಿ, ಬದುಕನ್ನು ಪುನರ್ನಿಮಿಸುವ ಸಮಯದಲ್ಲಿ ಅದು ಅನಿವಾರ್ಯ. ಸರಕಾರಗಳು ಮಾಡುವ ಸಾಲಗಳು ಹೂಡಿಕೆಗೆ ಬಳಕೆಯಾದಾಗ ಅದರಿಂದ ಲಾಭ ಒದಗುತ್ತದೆ. ಸಾಲ ಸೇವನೆಗೆ ಬಳಕೆಯಾದರೆ ಸಾಲದ ಮೊತ್ತ ಹಿಗ್ಗುತ್ತಾ ಸಾಗುತ್ತದೆ. ಇದು ದೇಶದ ಹಾಗೂ ದೇಶವಾಸಿಗಳ ಮೇಲೆ ಸಾಲದ ಹೊರೆಗೆ ಕಾರಣವಾಗುತ್ತದೆ. ಹಾಗಾಗಿ ಸಾಲಮಾಡುವ ಸರಕಾರಗಳಿಗೆ ವಿತ್ತೀಯ ಕೊರತೆ ಒಂದು ರೀತಿಯಲ್ಲಿ “necessary evil.” 2003ರ FRBM ಕಾಯ್ದೆ ಬೇಕಾಬಿಟ್ಟಿ ಮಾಡುವ ಸಾಲವನ್ನು ನಿಯಂತ್ರಿಸುವಂತೆ ಮಾಡಿದೆ.

ಮೊದಲ ಲಾಕ್‌ಡೌನ್ ಅವಧಿಯಲ್ಲಿ ಜಿಡಿಪಿ ನಕಾರಾತ್ಮಕ ಬೆಳವಣಿಗೆಯನ್ನು ಸಾಧಿಸಿತ್ತು ಆದರೆ ಕಳೆದೆರಡು ವರ್ಷಗಳಲ್ಲಿ ಆದ ಸಣ್ಣ ಚೇತರಿಕೆಯೂ ಮಹತ್ವದ ಜಿಗಿತದಂತೆಯೇ “V” ತೋರಿತ್ತು. ಆದರೆ Oxfam ಸೇರಿದಂತೆ ಅನೇಕ ವಿತ್ತ ತಜ್ಞರ ಪ್ರಕಾರ ಈ ಬೆಳವಣಿಗೆ ಹೆಚ್ಚು ಅಸಮಾನತೆಯನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ. ಇದು ಕಾರ್ಪೋರೆಟ್ ವಲಯ, ದೊಡ್ಡ ಉದ್ಯಮಗಳು ಈ ಹೊಡೆತದಿಂದ ಪಾರಾಗಿ ಉತ್ತಮವಾದ ಬೆಳವಣಿಗೆ ಕಾಣುತ್ತಿವೆ. ಆದರೆ ಅದೇ ಹೊತ್ತಿಗೆ ಕಾರ್ಮಿಕ ಕೇಂದ್ರಿತ, ಅನೌಪಚಾರಿಕ ವಲಯ, MSMEಗಳಲ್ಲಿ ನಿರುದ್ಯೋಗ, ಬಡತನ, ನಷ್ಟವನ್ನು ಎದುರಿಸುವಂತೆ ಮಾಡಿದೆ ಎಂದು ಹೇಳುತ್ತಿವೆ. ಒಂದು ಸಕಾರಾತ್ಮಕ ಬೆಳವಣಿಗೆ ಮತ್ತೊಂದು ನಕಾರಾತ್ಮಕ ಬೆಳವಣಿಗೆ ಹೀಗಾಗಿ ಇದೊಂದು ರೀತಿ ಅಸಮಾನ “K” ರೇಖೆಯಂತೆ ತೋರುತ್ತದೆ.
ಈ ಅಂತರವನ್ನು ತಗ್ಗಿಸಲು ಸರಕಾರ ಉತ್ಪಾದನಾ ಆಧಾರಿತ ಪ್ರೋತ್ಸಾಹ, ಆತ್ಮನಿರ್ಭರ ಭಾರತದಂತಹ ಸ್ವಾವಲಂಭಿ ಯೋಜನೆಗಳು, ಸಾಮಾಜಿಕ ಸುರಕ್ಷತೆಯನ್ನು ಒದಗಿಸುವ, ಮೂಲಸೌಕರ್ಯ, ಕೃಷಿ, ಗ್ರಾಮೀಣಾಭಿವೃದ್ಧಿ ವಲಯಗಳಲ್ಲಿ ಹೆಚ್ಚಿನ ಹೂಡಿಕೆಯ ಮೂಲಕ ಆರ್ಥಿಕತೆಯಲ್ಲಿ ಹೊಸ ಉದ್ಯೋಗ, ಬೇಡಿಕೆಯನ್ನು ಸೃಷ್ಟಿಸುವ ಪ್ರಯತ್ನವನ್ನು ಮುಂದುವರೆಸಲಿದೆ. ಕೊರೊನಾ ಕಾಲದ ಅಸಹಜ ಲಾಭಕ್ಕೆ ತೆರಿಗೆಯನ್ನು ವಿಧಿಸಿ ಅದರಿಂದ ಸಾಮಾಜಿಕ ಭದ್ರತೆ ಒದಗಿಸುವ ಪ್ರಯತ್ನಗಳಿಂದ ಮಧ್ಯಮವರ್ಗದ ಮತ್ತು ಪ್ರಾಮಾಣಿಕ ತೆರಿಗೆದಾರರ ಹೊರೆಯನ್ನು ತಗ್ಗುವಂತೆ ಮಾಡಬಹುದು.
2022-23:
ಆರ್ಥಿಕ ಸಮೀಕ್ಷೆಯ ಪ್ರಕಾರ, ಸಾಮಾನ್ಯ ಮಾನ್ಸೂನ್, ಕೋವಿಡ್ ಹೊಸ ಅಲೆಗಳ ಅಪಾಯ ಎದುರಾಗದಿದ್ದಲ್ಲಿ, ಜಾಗತಿಕ ತೈಲ ಬೆಲೆ ಪ್ರತೀ ಬ್ಯಾರೆಲ್‌ಗೆ ಸುಮಾರು 70-75 ಡಾಲರ್ ಮೊತ್ತವನ್ನು ಕಾಯ್ದುಕೊಂಡಲ್ಲಿ, ಮತ್ತು ಜಾಗತಿಕ ಕೇಂದ್ರೀಯ ಬ್ಯಾಂಕ್‌ಗಳ ಜಾಗತಿಕ ದ್ರವೀಕರಣದ ಹಿಂತೆಗೆತ, ಸರಕಾರದ ಪೂರೈಕೆ ವ್ಯವಸ್ಥೆಯ ಸುಧಾರಣೆ, ಹಾಗೂ ಸಾಮನ್ಯ ಸ್ಥಿತಿಗಳು ಹಾಗೇ ಮುಂದುವರೆದಲ್ಲಿ 2022-23ರ ಆರ್ಥಿಕ ಸಾಲಿನಲ್ಲಿ 8-8.5% ರಿಯಲ್ ಜಿಡಿಪಿ ಬೆಳವಣಿಗೆಯ ದರವನ್ನು ಕಾಣಲಿದೆ. ಆರ್ಥಿಕತೆಯನ್ನು ಹೀಗೆಯೇ ನಡೆಯುತ್ತದೆ ಎಂದು ನಿರ್ಧರಿಸಲು ಸಾಧ್ಯವಿಲ್ಲ. ನಮ್ಮ ಸುತ್ತಮುತ್ತಲ ಬದಲಾವಣೆ, ಬೆಳವಣಿಗೆ ಆರ್ಥಿಕತೆಯ ಮೇಲೆ ಪ್ರತ್ಯಕ್ಷ ಪರೋಕ್ಷ ಪ್ರಭಾವವನ್ನು ಬೀರುತ್ತಿರುತ್ತದೆ. ಅದಕ್ಕನುಗುಣವಾಗಿ ಬಜೆಟ್ ಹೊರತಾಗಿಯೂ ಆರ್ಥಿಕ ನಿರ್ಧಾರಗಳು ಕಾಲದಿಂದ ಕಾಲಕ್ಕೆ ಸಂರಚನೆಯಾಗುತ್ತಿರುತ್ತವೆ. ಕೋವಿಡ್ ಮೊದಲ ಅಲೆಯ ಹೊಡೆತದ ಪರಿಣಾಮ ಎದುರಾದಾಗಲೇ ಆರ್ಥಿಕ ಪುನಶ್ಚೇತನ, ಬೇಡಿಕೆಯ ಹೆಚ್ಚಿಕೆ, ಆತ್ಮನಿರ್ಭರ ಭಾರತದ ಕಾಯಕಲ್ಪಗಳು ರೂಪುಪಡೆದಿದ್ದು. ಹಾಗಾಗಿ ಬಜೆಟ್‌ನಲ್ಲಿ ಘೋಷಿಸುವುದೇ ಅಂತಿಮವಲ್ಲ.
ಇದು ಪಂಚರಾಜ್ಯಗಳ ಚುನಾವಣಾ ವರ್ಷ. 2024ರ ಚುನಾವಣೆಗೆ ಇನ್ನೆರೆಡೇ ವರ್ಷ. ಚುನಾವಣೆ, ರೈತರ ಮನವೊಲಿಕೆ, ಇತ್ಯಾದಿ ಜನಪ್ರಿಯ ಯೋಜನೆಗಳೊಂದಿಗೆ ವಿಶ್ವದ ಮುಂಚೂಣಿ ಆರ್ಥಿಕತೆಯಾಗಿ ಹೊರಹೊಮ್ಮುವ ಆಶಯ ಇತ್ಯಾದಿ ಸಂಗತಿಗಳಿಗೆ ಉತ್ತರಿಸುವ ಪ್ರಯತ್ನ ಇದಾಗಲಿದೆ. ಇದರೊಂದಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸದದ ಸಂದರ್ಭದಲ್ಲಿ ನವಭಾರತಕ್ಕೆ ಭದ್ರ ಬುನಾದಿ, ಮಧ್ಯಮ ಅವಧಿಯಲ್ಲಿ ಮಹಾಮಾರಿ ನಂತರದ ಆರ್ಥಿಕತೆಯನ್ನು ಕಟ್ಟುವ, ಆರ್ಥಿಕತೆಯನ್ನು ಮರಳಿ ಸಹಜ ಸ್ಥಿತಿಗೆ ತರುವ ಪ್ರಯತ್ನಗಳು, ಹೂಡಿಕೆ, ಉದ್ಯೋಗ, ಅರ್ಥವ್ಯವಸ್ಥೆಯ ಸುಧಾರಣೆ, ಕ್ಷಿಪ್ರವಾಗಿ ಬದಲಾಗುತ್ತಿರುವ ಆರ್ಥಿಕ ವಲಯಗಳ ಕ್ರಾಂತಿಗೆ ಅನುಗುಣಾವಾಗಿ ಭಾರತವನ್ನು ಸಜ್ಜುಗೊಳಿಸುವ ಅನಿವಾರ್ಯತೆ, ಆರೋಗ್ಯ, ಶಿಕ್ಷಣ, ನಗರ-ಗ್ರಾಮೀಣಾಭಿವೃದ್ಧಿ ಮತ್ತು ನರೇಗಾ ಮಾದರಿಯಲ್ಲಿ ನಗರ ಪ್ರದೇಶಗಳಲ್ಲೂ ಉದ್ಯೋಗ ಮತ್ತು ಬೇಡಿಕೆಯನ್ನು ಪುಷ್ಠೀಕರಿಸುವ ಸಂಗತಿಗಳು ಈ ಬಾರಿಯ ಬಜೆಟ್ ನ ಕೇಂದ್ರವಾಗಿರಲಿದೆ. ತತ್ಕಾಲೀನ ಸವಾಲು, ಮುಂದಿನ ೩-೪ ವರ್ಷಗಳ ಮಧ್ಯಮ ಅವಧಿಯ ಅವಶ್ಯಕತೆಗಳು ಮತ್ತು ಸರ್ಕಾರದ ಛಾಪನ್ನು ಸ್ಥಾಪಿಸುವ ಮಹಾಮಾರಿ ನಂತರದ ಭವಿಷ್ಯವನ್ನು ನಿರ್ಮಿಸುವ ಹೊಣೆಗಾರಿಕೆಗಳು ಬಹುಮುಖ್ಯ. ಒಟ್ಟಿನಲ್ಲಿ ಇದು ಕೋವಿಡ್ ಕಾಲದ ಹಾನಿಯನ್ನು ಸರಿದೂಗಿಸಿ, ದೇಶದ ಆರ್ಥಿಕತೆಯನ್ನು ಮರಳಿ ಕಟ್ಟುವ ಅವಕಾಶ-ಅನಿವಾರ್ಯತೆಯ ಐತಿಹಾಸಿಕ ಮಹತ್ವವಿರುವ ಬಜೆಟ್.
-ಶ್ರೇಯಾಂಕ ಎಸ್ ರಾನಡೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post