ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸೆ.26ರಂದು ಆರಂಭಗೊಂಡಿದ್ದ ನವರಾತ್ರಿ/ದಸರಾ ವೈಭವಕ್ಕೆ ಇಂದು ಬನ್ನಿ ಮುಡಿಯುವ ಮೂಲಕ ಅದ್ದೂರಿ ತೆರೆ ಬಿದ್ದಿದೆ.
ನಗರದ ಎಲ್ಲ ದೇವಾನುದೇವತೆಗಳನ್ನು ವಾಹನಗಳಲ್ಲಿ ಅಲಂಕರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು, ಲಕ್ಷಾಂತರ ಮಂದಿ ಇದಕ್ಕೆ ಸಾಕ್ಷಿಯಾದರು. ಇಂದು ಮಧ್ಯಾಹ್ನ ಕೋಟೆ ಆಂಜನೇಯ ಸ್ವಾಮಿ ದೇವಾಲಯದಿಂದ ಬೆಳ್ಳಿ ಅಂಬಾರಿಯಲ್ಲಿ ನಾಡ ದೇವತೆ ಚಾಮುಂಡೇಶ್ವರಿಯನ್ನು ಅಲಂಕರಿಸಿ ಮೆರವಣಿಗೆ ಮೂಲಕ ಫ್ರೀಡಂ ಪಾರ್ಕ್’ನಲ್ಲಿ ಸಮಾವೇಶಗೊಂಡಿತು.
ಕಲೆ, ಸಾಹಿತ್ಯ, ಸಂಸ್ಕೃತಿ, ಯೋಗ, ಸಾಂಸ್ಕೃತಿಕ ಮಕ್ಕಳು ಯುವಕರು, ರೈತರು, ಪರಿಸರ, ಗೀತ ವೈವಿಧ್ಯ, ನಾಟ್ಯ, ಆಹಾರ ಸೇರಿದಂತೆ ಎಲ್ಲ ಬಗೆಯ ಕಾರ್ಯಕ್ರಮಗಳ ಅದ್ದೂರಿ ರಸದೌತಣ ಈ ಅವಧಿಯಲ್ಲಿ ನೀಡಲಾಯಿತು.
ಇಂದು ಮಧ್ಯಾಹ್ನ 2:30ಕ್ಕೆ ಶಿವಮೊಗ್ಗ ನಗರದ ದೇವಾನುದೇವತೆಗಳೊಂದಿಗೆ ಕೋಟೆ ರಸ್ತೆಯ ಶಿವಪ್ಪ ನಾಯಕ ಅರಮನೆ ಆವರಣದಿಂದ ನಂದಿದ್ವಜಕ್ಕೆ ಪೂಜೆ ಸಲ್ಲಿಸಿ ಶಿವಮೊಗ್ಗ ಪಾಲಿಕೆಯಲ್ಲಿರುವ ಅತ್ಯಂತ ವಿಶೇಷವಾದ ಬೆಳ್ಳಿ ಮಂಟಪ ಹಾಗೂ ಶ್ರೀ ಚಾಮುಂಡೇಶ್ವರಿ ದೇವಿಯ ಬೆಳ್ಳಿ ವಿಗ್ರಹದ ವೈಭವದ ಅಂಬಾರಿ ಮೆರವಣಿಗೆ ಆರಂಭಗೊಂಡಿತು.
ಗಜಪಡೆಗಳೊಂದಿಗೆ ಜಂಬುಸವಾರಿ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಚಂಡಮದ್ದಳೆ, ಯಕ್ಷಗಾನ, ಕೀಲು ಕುದುರೆ, ನೃತ್ಯದ ನಗಿಸುವ ಗೊಂಬೆಗಳ ಕುಣಿತ, ವೀರಗಾಸೆ, ಕಥಕ್ಕಳಿ ಸೇರಿದಂತೆ ವಿವಿಧ ಕಲಾತಂಡಗಳಿಂದಈ ಮೆರವಣಿಗೆಗೆ ವಿಶೇಷ ಕಳೆ ಬಂದಿತ್ತು.
ಸಂಜೆ 7:30ರ ಹೊತ್ತಿಗೆ ವಾಡಿಕೆಯಂತೆ ತಹಶೀಲ್ದಾರ್ ಡಾ.ಎನ್.ಜೆ. ನಾಗರಾಜ್ ಅವರು ಬನ್ನಿ ಮುಡಿಯುವ ಉತ್ಸವಕ್ಕೆ ಬಾಳೆಮರ ಕತ್ತರಿಸುವ ಮೂಲಕ ಚಾಲನೆ ನೀಡಿದರು. ಆನಂತರ ರಾವಣ ಸಂಹಾರ, ಸಿಡಿಮದ್ದು ಪ್ರದರ್ಶನ ನಡೆಯಿತು.
ಈ ಸಂದರ್ಭದಲ್ಲಿ ಮೇಯರ್ ಸುನೀತಾ ಅಣ್ಣಪ್ಪ ಸೇರಿದಂತೆ ಪಾಲಿಕೆ ಎಲ್ಲ ಸದಸ್ಯರು, ಪಾಲಿಕೆಯ ಅಧಿಕಾರಿಗಳು, ನೌಕರರು, ವಿಶೇಷವಾಗಿ ಪೌರಕಾರ್ಮಿಕರು ನೇತೃತ್ವ ವಹಿಸಿದ್ದರು.
ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಕೆ.ಎಸ್. ಈಶ್ವರಪ್ಪ, ಡಿ.ಎಸ್. ಅರುಣ್ ಸೇರಿದಂತೆ ಗಣ್ಯಾತಿಗಣ್ಯರು ಪಾಲ್ಗೊಂಡು ಶುಭಾಶಯ ವಿನಿಮಯ ಮಾಡಿಕೊಂಡರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post