ಸುದ್ಧಿ: ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಮಕ್ಕಳು ಶ್ರದ್ಧೆಯಿಂದ ಸಂಗೀತ ಕಲಿಯಬೇಕು. ಇದರಿಂದ ಸಂಸ್ಕಾರ ಮತ್ತು ಸಂಸ್ಕೃತಿ ಎರಡೂ ಲಭ್ಯ ಎಂದು ಓಂಕಾರ ಆಶ್ರಮದ ಶ್ರೀ ಮಧುಸೂದನಾನಂದಪುರಿ ಸ್ವಾಮೀಜಿ ಹೇಳಿದರು.
ಕರ್ನಾಟಕ ಶಾಸ್ತ್ರೀಯ ಸಂಗೀತದ ಪ್ರಸಾರ, ಬೆಳವಣಿಗೆ ಮತ್ತು ಆರಾಧನೆಗೆ ಶಿವಮೊಗ್ಗದ ಶ್ರೀ ಗುರುಗುಹ ಸಂಗೀತ ಮಹಾವಿದ್ಯಾಲಯದ ಶ್ರೀ ಗುರುಗುಹ ಗಾನಸಭಾಕ್ಕೆ ಬೆಂಗಳೂರಿನ ಉತ್ತರಹಳ್ಳಿ ಮುಖ್ಯರಸ್ತೆಯ ಓಂಕಾರಾಶ್ರಮದ ಸಭಾಂಗಣದಲ್ಲಿ ಚಾಲನೆ ನೀಡಿ ಅವರು ಅಮೃತೋಪದೇಶ ನೀಡಿದರು.
ಗುರುಗುಹ ಸಂಸ್ಥೆ ಕೇವಲ ಶಿವಮೊಗ್ಗಕ್ಕೆ ಮಾತ್ರ ಸೀಮಿತವಾಗದೇ ರಾಜ್ಯ ಮತ್ತು ದೇಶದ ಗಡಿಗಳನ್ನೂ ದಾಟಿದೆ. ರಾಜಧಾನಿ ಬೆಂಗಳೂರಿನಲ್ಲಿ 10 ಶಾಖೆಗಳು ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತ ವಿದ್ಯೆ ದಾನ ಮಾಡುತ್ತಿವೆ. ಇಲ್ಲಿ ತರಬೇತಿಗೊಂಡವರು ಕೇವಲ ಸಂಗೀತ ಶಿಕ್ಷಕರಲ್ಲ, ಅವರೆಲ್ಲರೂ ಗುರುಗಳಾಗಿದ್ದಾರೆ ಎಂದು ಶ್ಲಾಘಿಸಿದರು.
ಸಂಗೀತ ಎಲ್ಲರಿಗೂ ಒಲಿಯುವುದಿಲ್ಲ. ಕೆಲವರನ್ನು ಮಾತ್ರ ಅದು ಅಪ್ಪಿಕೊಳ್ಳುತ್ತದೆ. ಬಾಲ್ಯದಲ್ಲೇ ಮಕ್ಕಳಿಗೆ ಸಂಗೀತ ವಿದ್ಯೆ ದೊರೆತರೆ ಜೀವನ ಹಸನು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಎನ್. ಹರಿಕುಮಾರ್ ಮಾತನಾಡಿ, ಶಿವಮೊಗ್ಗೆಯಲ್ಲಿ 10 ವರ್ಷದ ನನ್ನ ಅಧಿಕಾರ ಅವಧಿಯಲ್ಲಿ ಕಂಡ ಕೆಲವೇ ಶ್ರೇಷ್ಠ ಕಲಾ ಸಂಸ್ಥೆಗಳಲ್ಲಿ ಗುರುಗುಹ ಅಗ್ರಮಾನ್ಯ ಎಂದರು.
ಯಾವುದೇ ರಾಷ್ಟ್ರೀಯ ಹಬ್ಬ, ಮಂತ್ರಿ ಮಹೋದಯರ ಕಾರ್ಯಕ್ರಮಗಳಲ್ಲಿ ನಾಡಗೀತೆ ಮತ್ತು ರಾಷ್ಟ್ರಗೀತೆ ಹಾಡಲು ಗುರುಗುಹ ವಿದ್ಯಾರ್ಥಿಗಳನ್ನೇ ಜಿಲ್ಲಾಡಳಿತ ಬಯಸುತ್ತಿತ್ತು. ವಿದ್ವಾನ್ ನಾಗರಾಜರ ಸಮಗ್ರ ಪಾಠವೇ ವಿದ್ಯಾರ್ಥಿಗಳನ್ನು ಎಲ್ಲ ಪ್ರಕಾರದ ಗಾಯನಕ್ಕೆ ಅಣಿಗೊಳಿಸುತ್ತದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ವಿಜಯವಾಣಿ ಪತ್ರಿಕೆ ಮುಖ್ಯ ಉಪಸಂಪಾದಕ ಎ.ಆರ್. ರಘುರಾಮ್ ತಮ್ಮ ಭಾಷಣದಲ್ಲಿ, ಕಲಿಯುಗದಲ್ಲಿ ದೇವರಿಗೆ ಸಲ್ಲಿಸುವ ಅತ್ಯಂತ ಶ್ರೇಷ್ಠ ಸೇವೆಯೇ ನಾಮ ಸಂಕೀರ್ತನೆ ಎಂದರು.
ಸಂಗೀತವು ಎಲ್ಲ ವಯೋಮಾನಕ್ಕೂ ಒದಗುವ ಕಲೆ. ವಿದ್ವಾನ್ ನಾಗರಾಜ್ ಗರಡಿಯಲ್ಲಿ ಮೂರನೇ ತಲೆಮಾರು ಕೂಡ ಸಂಗೀತ ದೀಕ್ಷೆ ಪಡೆಯುತ್ತಿರುವುದು ಮಹಾಭಾಗ್ಯ ಎಂದರು.
ಬೆಂಗಳೂರು ಗಾಯನ ಸಮಾಜ ಕಾರ್ಯದರ್ಶಿ ಅಚ್ಚುತರಾವ್ ಪದಕಿ ಮಾತನಾಡಿ, ಗಾಯನ ಸಮಾಜದ 50ನೇ ವರ್ಷದ ಪ್ರಶಸ್ತಿಗೆ ಭಾಜನರಾದ ನಾಗರಾಜ್, ತಿಂಗಳೊಳಗೇ ತಮ್ಮ ಮಹತ್ತರ ಜವಾಬ್ದಾರಿ ಮತ್ತು ಕಲಾ ಬದ್ಧತೆ ಮೆರೆದಿದ್ದಾರೆ. ಪ್ರಶಸ್ತಿ ಬಂದರೆ ಇಂಥ ಸಾಧಕರಿಗೇ ಬರಬೇಕು ಎಂದರು.
ಹಿರಿಯ ಮೃದಂಗ ವಿದ್ವಾಂಸ ನಾಗಭೂಷಣ, ಗುರುಗುಹ ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯ ವಿದ್ವಾನ್ ಶೃಂಗೇರಿ ಎಚ್.ಎಸ್. ನಾಗರಾಜ್ ಇದ್ದರು. ವಿದುಷಿ ಗಾಯತ್ರಿ ಮಯ್ಯ ನಿರೂಪಿಸಿದರು. 100ಕ್ಕೂ ಹೆಚ್ಚು ಮಕ್ಕಳಿಂದ ಗೋಷ್ಠಿ ಗಾಯನ, ನಂತರ ವಿದ್ವಾನ್ ನಾಗರಾಜ್ ಅವರಿಂದ ಶಾಸೀಯ ಸಂಗೀತ ಕಛೇರಿ ನಡೆಯಿತು.
(ವರದಿ: ವಾರುಣಿ, ಬೆಂಗಳೂರು)
Get In Touch With Us info@kalpa.news Whatsapp: 9481252093
Discussion about this post