ಶಿವಮೊಗ್ಗ: ತಾವು ರಾಜೀನಾಮೆ ನೀಡುತ್ತೇವೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳುತ್ತಿರುವುದು ಕೇವಲ ಬೂಟಾಟಿಕೆಯಾಗಿದ್ದು, ಮಾನ ಮರ್ಯಾದೆ ಇಲ್ಲದೆ ಮೊದಲ ಸಿಎಂ ಕುಮಾರಸ್ವಾಮಿ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರು ಹೀಗೆ ಬೇಕಾಬಿಟ್ಟಿ ಮಾತನಾಡಿದರೆ, ರಾಜೀನಾಮೆ ನೀಡುತ್ತೇನೆ ಎಂಬ ಸಿಎಂ ಕುಮಾರಸ್ವಾಮಿ ಹೇಳುತ್ತಾರೆ. ಆದರೆ, ಕುತ್ತಿಗೆ ಹಿಡಿದು ಹೊರ ಹಾಕಿದರೂ ಅವರು ಸಿಎಂ ಸ್ಥಾನ ಬಿಟ್ಟು ಹೊರ ಬರಲ್ಲ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ವಿಧಾನಸಭಾ ಚುನಾವಣೆ ನಂತರ ದಿಕ್ಕೆಟ್ಟು ಹೋಗಿದೆ. ಅವರ ಶಾಸಕರನ್ನೇ ಹಿಡಿತದಲ್ಲಿ ಇಟ್ಟುಕೊಳ್ಳಲು ಆಗುತ್ತಿಲ್ಲ. ಒಬ್ಬರನ್ನೊಬ್ಬರನ್ನು ರೆಸಾರ್ಟ್ನಲ್ಲಿ ಕೊಲೆ ಮಾಡಿಕೊಳ್ಳುವ ಹಂತಕ್ಕೆ ಹೋಗಿದ್ದಾರೆ ಎಂದು ಕಿಡಿ ಕಾರಿದರು.
ನಾವು ಯಾವುದೇ ಆಪರೇಷನ್ ಕಮಲ ಮಾಡಲ್ಲ, ಅವರೇ ಆಪರೇಷನ್ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಬಿಟ್ಟು ಬಿಜೆಪಿಗೆ ಬನ್ನಿ ಎಂದು ಕರೆಯಲ್ಲ. ವಿರೋಧ ಪಕ್ಷವಾಗಿ ನಮ್ಮ ಕೆಲಸ ನಾವು ಮಾಡುತ್ತಿದ್ದು, ನಮ್ಮ ಶಾಸಕರು ನಮ್ಮ ಜೊತೆ ಇದ್ದಾರೆ ಎಂದು ಹೇಳಿದರು.
ಇನ್ನು ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಗುಂಪು ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರು ಮೈ ಮೇಲೆ ಜ್ಞಾನ ಇಲ್ಲದಂತೆ ಮಾತಾಡುತ್ತಾರೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಕಾಂಗ್ರೆಸ್ ವಿಫಲವಾಗಿದೆ. ಗಣೇಶ್ ಬಂಧನ ಮಾಡಲು ಕಾಂಗ್ರೆಸ್ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು. ನಾವೇನು ಸನ್ಯಾಸಿಗಳಲ್ಲ. ಅವಕಾಶ ಸಿಕ್ಕರೆ ನಾವು ಅಧಿಕಾರ ಮಾಡುತ್ತೇವೆ. ತಾಕತ್ತಿದ್ದರೆ ಅವರ ಶಾಸಕರನ್ನು ಹಿಡಿತದಲ್ಲಿಟ್ಟುಕೊಳ್ಳಲಿ, ಇಲ್ಲವೇ ರಾಜಿನಾಮೆ ನೀಡಲಿ ಎಂದರು.
Discussion about this post