ಕೋಲ್ಕತ್ತಾ: ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಲು ಸಿಬಿಐ ತಂಡ ಪೋಲಿಸ್ ಕಮಿಷನರ್ ರಾಜೀವ್ ಕುಮಾರ್ ಅವರ ನಿವಾಸಕ್ಕೆ ಆಗಮಿಸಿದ ಬಳಿಕ ಕೋಲ್ಕತ್ತ ಪೊಲೀಸರು ಐದು ಸಿಬಿಐ ಅಧಿಕಾರಿಗಳನ್ನೇ ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತಂತೆ ರಾಷ್ಟಿಯ ಮಾಧ್ಯಮಗಳು ವರದಿ ಮಾಡಿದ್ದು, ಕೋಲ್ಕತ್ತಾ ಮೇಯರ್, ಫಿರಹಾದ್ ಹಕೀಮ್ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಕುಮಾರ್ ಅವರ ನಿವಾಸಕ್ಕೆ ಆಗಮಿದ್ದು ಪ್ರಸ್ತುತ ಉನ್ನತ ಮಟ್ಟದ ಸಭೆ ನಡೆಯುತ್ತಿದೆ.
ರೋಸ್ ವ್ಯಾಲಿ ಮತ್ತು ಶಾರದಾ ಪೊಂಜಿ ಹಗರಣಕ್ಕೆ ಸಂಬಂಧಿಸಿ ಕುಮಾರ್ ಅವರನ್ನು ಪತ್ತೆ ಮಾಡಲು ಸಿಬಿಐ ಪ್ರಯತ್ನಿಸುತ್ತಿದೆ. ಇದೀಗ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿತ್ತು.
ಶಾರದಾ ಪೊಂಜಿ ಹಗರಣ ಹಾಗೂ ವಂಚನೆಗೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಪಶ್ಚಿಮ ಬಂಗಾಳದ ವಿಶೇಷ ತನಿಖಾ ತಂಡದ ನೇತೃತ್ವ ವಹಿಸಿದ್ದ ಐಪಿಎಸ್ ಅಧಿಕಾರಿಗಳು ದಾಖಲೆಗಳು ಮತ್ತು ಫೈಲ್ ಗಳ ನಾಪತ್ತೆ ಬಗ್ಗೆ ಪ್ರಶ್ನಿಸಬೇಕಾಗಿದೆ ಆದರೆ ಅವರು ಸಂಸ್ಥೆಯ ಮುಂದೆ ಹಾಜರಾಗುವಂತೆ ಕಳಿಸಿದ್ದ ನೋಟೀಸ್’ಗಳಿಗೆ ಪ್ರತಿಕ್ರಿಯಿಸಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕುಮಾರ್ ಅವರ ನಿವಾಸಕ್ಕೆ ಸಿಬಿಐ ತಂಡ ಬಂದಾಗ, ಅವರನ್ನು ನಿವಾಸದ ಎದುರೇ ತಡೆದು ನಿಲ್ಲಿಸಲಾಗಿದೆ.
ಇನ್ನು ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮಮತಾ ಬ್ಯಾನರ್ಜಿ, ಬಿಜೆಪಿ ಬಂಗಾಳವನ್ನು ಹಾಳು ಮಾಡಲು ಹೊರಟಿದೆ. ನಾನು ಬ್ರಿಗೇಡ್ ರ್ಯಾಲಿಗೆ ಅವಕಾಶ ನೀಡಿಲ್ಲ ಎಂಬ ಏಕೈಕ ಕಾರಣಕ್ಕೆ ಅವರು ಬಂಗಾಳವನ್ನೇ ನಾಶ ಮಾಡಲು ಹೊರಟಿದ್ದಾರೆ ಎಂದು ದೂರಿದ್ದಾರೆ.
Discussion about this post