ಕಲ್ಪ ಮೀಡಿಯಾ ಹೌಸ್ | ಕೊಪ್ಪಳ |
ಹಂಪಿಗೆ ಸಮೀಪದ ಸಾಣಾಪುರದಲ್ಲಿ ವಿದೇಶ ಮಹಿಳೆ ಮೇಲಿನ ಭೀಕರ ಅತ್ಯಾಚಾರ ಹಾಗೂ ಅಮೆರಿಕಾ ಪ್ರವಾಸಿಗನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಪ್ರಕರಣ ಕುರಿತಂತೆ ಗಂಗಾವತಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯಕ್ ಅವರು ತೀರ್ಪು ಪ್ರಕಟಿಸಿದ್ದು, ಪೈಶಾಚಿಕ ಕೃತ್ಯ ಎಸಗಿದ್ದ ಮೂವರು ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ್ದಾರೆ.
ಈ ಪ್ರಕರಣದಲ್ಲಿ ಮಲ್ಲೇಶ್ ಅಲಿಯಾಸ್ ಹಂದಿಮಲ್ಲ, ಸಾಯಿ ಮತ್ತು ಶರಣಪ್ಪ ಎಂಬ ಮೂವರು ಆರೋಪಿಗಳನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಫೆಬ್ರವರಿ 6ರಂದು ನ್ಯಾಯಾಲಯವು ಆರೋಪಿಗಳನ್ನು ದೋಷಿಗಳೆಂದು ತೀರ್ಪು ನೀಡಿತ್ತು. ಇಂದು ತೀರ್ಪು ಪ್ರಕಟಿಸಲಾಗಿದೆ.
ಘಟನೆ ಹಿನ್ನೆಲೆ:
2025ರ ಮಾರ್ಚ್ ತಿಂಗಳಲ್ಲಿ ಹಂಪಿ ಸಮೀಪದ ಸಾಣಾಪೂರದಲ್ಲಿ ಇಸ್ರೇಲ್ ಮೂಲದ ಮಹಿಳೆ ಮೇಲೆ ಮೂವರು ಆರೋಪಿಗಳು ಕ್ರೂರವಾಗಿ ಅತ್ಯಾಚಾರ ಮಾಡಿದ್ದರು. ಅಲ್ಲದೇ, ಅಮೆರಿಕಾದ ಪ್ರವಾಸಿಗನನ್ನು ಹತ್ಯೆ ಮಾಡಿದ್ದರು.
ಈ ಅಮಾನವೀಯ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖಂಡನೆಗೆ ಗುರಿಯಾಗಿತ್ತು. ಈ ಘಟನೆಯಿಂದ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಕ್ಕೂ ಭಾರೀ ಹೊಡೆತ ಬಿದ್ದಿತ್ತು.
ಪ್ರಕರಣ ದಾಖಲಾಗುತ್ತಿದ್ದಂತೆಯೇ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಅಲ್ಲದೇ, ಚುರುಕಿನ ತನಿಖೆ ನಡೆಸಿ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸುದೀರ್ಘ ವಿಚಾರಣೆ ಬಳಿಕ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಾಲಯ, ಮೂವರೂ ಅಪರಾಧಿಗಳು ಎಂದು ಖಚಿತಪಡಿಸಿತು.
ಘಟನೆ ನಡೆದ ಕೇವಲ ಒಂಬತ್ತು ತಿಂಗಳಲ್ಲೇ ತೀರ್ಪು ಪ್ರಕಟಿಸಿರುವುದು ನ್ಯಾಯಾಂಗದ ದಕ್ಷತೆಗೆ ಸಾಕ್ಷಿಯಾಗಿದೆ. ಇಂತಹ ಕ್ರೂರ ಕೃತ್ಯಗಳಿಗೆ ಸಮಾಜದಲ್ಲಿ ಯಾವುದೇ ಸ್ಥಳವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ನ್ಯಾಯಾಲಯ ನೀಡಿದೆ.
ಈ ತೀರ್ಪು ಕಾನೂನಿನ ಕಠಿಣತೆಯನ್ನು ಮತ್ತೊಮ್ಮೆ ತೋರಿಸಿದ್ದು, ಅಪರಾಧಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















