ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿಕಾರಿಪುರ, ಸೊರಬ, ಸಾಗರ ತಾಲೂಕುಗಳಲ್ಲಿ ಬರುವ ಕೆರೆಗಳ ಮೀನು ಕೃಷಿಗೆ #Fish farming ಕರೆಯುವ ಟೆಂಡರ್ ಅವೈಜ್ಞಾನಿಕವಾಗಿದ್ದು, ಮರು ಟೆಂಡರ್ ಕರೆಯಬೇಕೆಂದು ಶಿಕಾರಿಪುರ ತಾಲೂಕಿನ ಮೀನು ಕೃಷಿಕರು ಆಗ್ರಹಿಸಿದ್ದಾರೆ.
ಮೀನು ಕೃಷಿಕರಾದ ಎಂ.ಸಿ.ಮಲ್ಲೇಶಪ್ಪ ಕವುಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿಕಾರಿಪುರ, ಸೊರಬ, ಸಾಗರ ತಾಲೂಕಿನ ಸುಮಾರು 48ಕ್ಕೂ ಹೆಚ್ಚು ಕೆರೆಗಳಲ್ಲಿ ಮೀನು ಸಾಕಾಣಿಕೆಗಾಗಿ ಟೆಂಡರ್‌ನ್ನು ಪ್ರತೀ ವರ್ಷ ಕರೆಯಲಾಗುತ್ತಿತ್ತು. ಆದರೆ ಈ ವರ್ಷ ಅವೈಜ್ಞಾನಿಕವಾಗಿ ಈ ಟೆಂಡರ್‌ನ್ನು ಕರೆಯಲಾಗಿದೆ. ಸಾಮಾನ್ಯವಾಗಿ ಜೂನ್, ಜುಲೈನಲ್ಲಿ ಕರೆಯುವ ಟೆಂಡರ್‌ನ್ನು ಈ ಬಾರಿ ಮಾರ್ಚ್ ತಿಂಗಳಿನಲ್ಲಿಯೇ ಕರೆಯಲಾಗಿದೆ. ಆದರೆ ಈ ಬಗ್ಗೆ ಯಾವ ಸುಳಿವನ್ನೂ ನೀಡದೆ ಪತ್ರಿಕೆಗಳಲ್ಲಿ ಮತ್ತು ಸಂತೆಗಳಲ್ಲಿ ಪ್ರಚಾರ ಮಾಡದೆ ಕೇವಲ ಕೆಲವರಿಗಷ್ಟೆ ಮಾತ್ರ ತಿಳಿಸಿ ಟೆಂಡರ್ ಕರೆದು ಟೆಂಡರ್ ಪ್ರಕ್ರಿಯೆಯನ್ನು ಮುಗಿಸಲಾಗಿದೆ ಎಂದು ಆರೋಪಿಸಿದರು.
ಮಾ.7ರಿಂದ ಏ.7ರವರೆಗೆ ಟೆಂಡರ್‌ಗೆ ಅವಕಾಶವನ್ನು ಕೊಟ್ಟಿದ್ದರೂ ಕೂಡಾ ಈಗ ಟೆಂಡರ್ ದಸ್ತಾವೇಜು ನೋಂದಣಿ ಮಾಡಿಸಲು ಹೋದರೆ ಕಾಲಾವಕಾಶ ಮುಗಿದಿದೆ. ದಿನಾಂಕವೂ ಮುಗಿದಿದೆ ಎಂದು ಹೇಳಲಾಗುತ್ತಿದೆ. ವೆಬ್‌ಸೈಟ್ ಮುಖಪುಟವೇ ತೆರೆಯುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಸಂಪರ್ಕಿಸಿದರೆ ಹಾರಿಕೆ ಉತ್ತರ ನೀಡುತ್ತಾರೆ. ಸರ್ಕಾರದ ಆದೇಶಗಳನ್ನು ಗಾಳಿಗೆ ತೂರಿ ಮೀನು ಕೃಷಿಕರಿಗೆ ಸರಿಯಾದ ಮಾಹಿತಿ ನೀಡದೆ ಹಣವಂತರ ಮೂಲಕ ಒಳ ಒಪ್ಪಂದ ಮಾಡಿಕೊಂಡು ಸರ್ಕಾರದ ಬೊಕ್ಕಸಕ್ಕೆ ಬರುವ ಹಣ ದುರುಪಯೋಗ ಪಡಿಸಿಕೊಂಡು ಕೆಲವೇ ಜನರು ಟೆಂಡರ್ ಪ್ರಕ್ರಿಯೆಯಲ್ಲಿ ಒಳ ಒಪ್ಪಂದದ ಮೂಲಕ ಭಾಗವಹಿಸುವಂತೆ ನೋಡಿಕೊಳ್ಳಲಾಗಿದೆ. ಇದು ಸಣ್ಣ ನೀರಾವರಿ ಇಲಾಖೆಯ ವ್ಯವಸ್ಥೆಯಾಗಿದೆ ಎಂದು ದೂರಿದರು.
ಟೆಂಡರ್‌ನ್ನು ಪಾರದರ್ಶಕವಾಗಿ ಕರೆದಿದ್ದರೆ ಒಂದು ಲಕ್ಷ ಹಣಕ್ಕೆ ಹರಾಜಾಗಬೇಕಿತ್ತು. ಆದರೆ ಆ ಜಾಗದಲ್ಲಿ ಕೇವಲ 15 ಸಾವಿರಕ್ಕೆ ಹರಾಜು ಮಾಡಿ ಉಳಿದ 70 ಸಾವಿರ ಹಣವನ್ನು ಅವ್ಯವಹಾರದ ಮೂಲಕ ಅಧಿಕಾರಿಗಳು ತಮ್ಮ ಜೇಬು ತುಂಬಿಸುವ ಹುನ್ನಾರ ಮಾಡಿದ್ದಾರೆ. ಸಣ್ಣ ನೀರಾವರಿ ಹಾಗೂ ಅಂತರಜಲ ಅಭಿವೃದ್ಧಿ ಇಲಾಖೆಯವರು ಮಳೆಗಾಲದಲ್ಲಿ ಮಾಡಬೇಕಾದ ಕೆರೆಗಳ ಹರಾಜನ್ನು ಮಾರ್ಚ್ ತಿಂಗಳಲ್ಲಿಯೇ ಮಾಡಿದ್ದಾರೆ. ಈಗ ಕೆರೆಗಳಲ್ಲಿ ನೀರಿಲ್ಲ. ನೀರಿಲ್ಲದೆ ಕೆರೆಗಳು ಬತ್ತಿಹೋಗಿವೆ. ಹೇಗೆ ಮೀನು ಸಾಕಲು ಸಾಧ್ಯ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಈ ಹಿಂದೆ ಇದೇ ಕೆರೆಗಳನ್ನು ಇ-ಟೆಂಡರ್ ಮೂಲಕ ಕಟ್ಟಿಸಿಕೊಂಡು ಟೆಂಡರ್ ಪ್ರಕ್ರಿಯೆ ಮಾಡಿದ್ದರೂ ಆನಂತರ ಯಾರೋ ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಟೆಂಡರ್ ಪ್ರಕ್ರಿಯೆ ನಿಲ್ಲಿಸಿದ್ದರು ಎಂದರು.
ನಾವು ಈ ಹಿಂದೆ ಕೆರೆಗಳ ಗುತ್ತಿಗೆ ಪಡೆದು ಟೆಂಡರ್ ಹಾಕಿ ಹಣ ಕೂಡಾ ಕಟ್ಟಿದ್ದೆವು. ಮೀನು ಕೃಷಿಕರು ಬಡ್ಡಿ ಸಾಲ ಪಡೆದು ಬಂಗಾರ ಅಡವಿಟ್ಟು ಟೆಂಡರ್‌ನಲ್ಲಿ ಭಾಗವಹಿಸಿದ್ದೆವು. ಈ ರೀತಿ ಟೆಂಡರ್ ಪ್ರಕ್ರಿಯೆ ನಿಲ್ಲಿಸಿದ್ದ 8 ತಿಂಗಳ ನಂತರ ನಮಗೆ ಹಣ ವಾಪಾಸ್ ಕೊಟ್ಟಿದ್ದಾರೆ. ಇದು ಎಂತಹ ಅವೈಜ್ಞಾನಿಕವಾದದ್ದು. ಅಲ್ಲದೆ ಮಾಹಿತಿಯನ್ನೇ ಇಲಾಖೆಗಳು ತಿಳಿಸುತ್ತಿಲ್ಲ. ಇದರಿಂದ ಮೀನು ಕೃಷಿಕರಿಗೆ ತುಂಬಾ ಸಂಕಷ್ಟವಾಗಿದೆ ಎಂದರು.
ಆದ್ದರಿಂದ ಈಗ ಕರೆದಿರುವ ಟೆಂಡರ್ ಪ್ರಕ್ರಿಯೆಯ ದಿನಾಂಕವನ್ನು ಜೂನ್, ಆಗಸ್ಟ್‌ವರೆಗೆ ಮುಂದುವರಿಸಬೇಕು. ಇಲ್ಲವೆ ಟೆಂಡರ್ ಪ್ರಕ್ರಿಯೆ ನಿಲ್ಲಿಸಿ ಹೊಸದಾಗಿ ಟೆಂಡರ್‌ನ್ನು ಕರೆಯಬೇಕು. ಇಲ್ಲದಿದ್ದರೆ ಮೀನುಗಾರಿಕೆ ಮತ್ತು ನೀರಾವರಿ ಇಲಾಖೆಗಳ ಮುಂದೆ ಹೋರಾಟವನ್ನು ಮೀನು ಕೃಷಿಕರು ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮೀನು ಕೃಷಿಕರಾದ ಶಂಕರಾನಾಯ್ಕ, ಬಾಬು ನಾಯ್ಕ, ಮೊಹಮ್ಮದ್ ಫರ್ವಿಜ್, ಜಬೀವುಲ್ಲಾ, ನಾಗರಾಜಯ್ಯ, ಶಿವಾನಾಯ್ಕ, ಸಮೀವುಲ್ಲಾ ಖಾನ್, ಅಬ್ದುಲ್, ಖಬೂತರ್, ಸಿಗ್‌ಬತ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















