ಕಲ್ಪ ಮೀಡಿಯಾ ಹೌಸ್ | ಹಾಸನ |
ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ಹಾಸನ (Hassan) ಜಿಲ್ಲೆಯ ಪ್ರವಾಸಿ ತಾಣಗಳ ವೈವಿಧ್ಯತೆ, ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆ, ಧಾರ್ಮಿಕ ಮಹತ್ವ, ನೈಸರ್ಗಿಕ ಸೌಂದರ್ಯ ಮತ್ತು ಸಾಹಸ ಪ್ರವಾಸೋದ್ಯಮದ ಸಾಧ್ಯತೆಗಳನ್ನು ದೇಶ-ವಿದೇಶದ ಪ್ರವಾಸಿಗರಿಗೆ ಪರಿಚಯಿಸುವ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆ ವತಿಯಿಂದ ‘ಹಾಸನ ಪ್ರವಾಸೋದ್ಯಮ ರೀಲ್ಸ್ ಸ್ಪರ್ಧೆ–2026’ (Tourism Reels Competition) ಆಯೋಜಿಸಲಾಗಿದೆ.
ಸೆಪ್ಟೆಂಬರ್ 27ರಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಸೃಜನಶೀಲ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಹಾಸನ ಜಿಲ್ಲೆಯ ಪ್ರವಾಸಿ ತಾಣಗಳನ್ನು ಹೊಸ ತಲೆಮಾರಿಗೆ ಡಿಜಿಟಲ್ ಮಾಧ್ಯಮದ ಮೂಲಕ ಪರಿಚಯಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
Hassan : ವಿವಿಧ ಪ್ರವಾಸೋದ್ಯಮ ವಿಷಯಗಳಲ್ಲಿ ರೀಲ್ಸ್
ಸ್ಪರ್ಧೆಯಲ್ಲಿ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಸಾರ್ವಜನಿಕರು ಸೃಜನಾತ್ಮಕವಾಗಿ ರೀಲ್ಸ್‌ಗಳನ್ನು ಸಿದ್ಧಪಡಿಸಿ ಸಲ್ಲಿಸಬಹುದಾಗಿದೆ.
ಮುಖ್ಯವಾಗಿ ಪಾರಂಪರಿಕ ಮತ್ತು ಐತಿಹಾಸಿಕ ಪ್ರವಾಸೋದ್ಯಮ, ಧಾರ್ಮಿಕ ಪ್ರವಾಸೋದ್ಯಮ, ನೈಸರ್ಗಿಕ ಪ್ರವಾಸೋದ್ಯಮ, ಜಲಪಾತ ಪ್ರವಾಸೋದ್ಯಮ, ಸಾಹಸ ಪ್ರವಾಸೋದ್ಯಮ, ಗ್ರಾಮೀಣ ಪ್ರವಾಸೋದ್ಯಮ, ಆಹಾರ ಮತ್ತು ಸ್ಥಳೀಯ ಸಂಸ್ಕೃತಿ ಸೇರಿದಂತೆ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಇತರೆ ವಿಷಯಗಳನ್ನೂ ರೀಲ್ಸ್‌ಗಳ ಮೂಲಕ ಪರಿಚಯಿಸಬಹುದಾಗಿದೆ.
18 ವರ್ಷ ಮೇಲ್ಪಟ್ಟವರು ಭಾಗವಹಿಸಬಹುದು
ಕರ್ನಾಟಕ ರಾಜ್ಯದ 18 ವರ್ಷ ಮೇಲ್ಪಟ್ಟ ನಾಗರಿಕರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ವೈಯಕ್ತಿಕವಾಗಿ ಅಥವಾ ತಂಡದ ಮೂಲಕ ರೀಲ್ಸ್‌ಗಳನ್ನು ಸಿದ್ಧಪಡಿಸಿ ಸಲ್ಲಿಸಲು ಅವಕಾಶವಿದೆ.
ಒಬ್ಬ ಸ್ಪರ್ಧಾರ್ಥಿಯು ಎರಡು ವಿಭಿನ್ನ ವಿಷಯಗಳ ಗರಿಷ್ಠ ಎರಡು ರೀಲ್ಸ್‌ಗಳನ್ನು ಸಲ್ಲಿಸಬಹುದಾಗಿದೆ.
Also Read>> ಭೀಕರ ರಸ್ತೆ ಅಪಘಾತ: ಜಾರ್ಖಂಡ್ ಸಚಿವೆ ಪುತ್ರಿ ಸೇರಿ ನಾಲ್ವರ ದುರ್ಮರಣ
ರೀಲ್ಸ್‌ಗಳ ಅವಧಿ ಕನಿಷ್ಠ ಒಂದು ನಿಮಿಷದಿಂದ ಗರಿಷ್ಠ ಎರಡು ನಿಮಿಷಗಳವರೆಗೆ ಇರಬೇಕು. ರೀಲ್ಸ್‌ಗಳು ಹಾಸನ ಜಿಲ್ಲೆಯ ಪ್ರವಾಸೋದ್ಯಮ ಹಾಗೂ ಅದರ ಉತ್ತೇಜನಕ್ಕೆ ಸಂಬಂಧಿಸಿದ ವಿಷಯವನ್ನೇ ಒಳಗೊಂಡಿರಬೇಕು.
ಕನ್ನಡ ಅಥವಾ ಆಂಗ್ಲ ಭಾಷೆಯಲ್ಲಿ ರೀಲ್ಸ್
- ಸ್ಪರ್ಧೆಗೆ ಸಲ್ಲಿಸುವ ವೀಡಿಯೋಗಳು ಸ್ಪರ್ಧಾರ್ಥಿಯೇ ಸ್ವತಃ ಚಿತ್ರೀಕರಿಸಿದ ಅಥವಾ ಸೃಜಿಸಿದ ಮೂಲ ಕೃತಿಯಾಗಿರಬೇಕು.
- ರೀಲ್ಸ್‌ಗಳನ್ನು ಕನ್ನಡ ಅಥವಾ ಆಂಗ್ಲ ಭಾಷೆಯಲ್ಲಿ ಮಾತ್ರ ರಚಿಸಬೇಕು.
- ವೀಡಿಯೋ ಕನಿಷ್ಠ 1080p ಗುಣಮಟ್ಟದಲ್ಲಿ ಇರಬೇಕು. MP4 ಅಥವಾ MOV ಮಾದರಿಯ ವೀಡಿಯೋ ಫಾರ್ಮ್ಯಾಟ್‌ನಲ್ಲಿ ಸಲ್ಲಿಸಬಹುದಾಗಿದೆ.
- ಈಗಾಗಲೇ ಪ್ರವಾಸಿ ತಾಣಗಳಿಗೆ ಸಂಬಂಧಿಸಿದ ರೀಲ್ಸ್‌ಗಳನ್ನು ಸಿದ್ಧಪಡಿಸಿದ್ದರೆ, ಅವು 12 ತಿಂಗಳೊಳಗೆ ರಚಿಸಲ್ಪಟ್ಟಿರಬೇಕು.
- ರೀಲ್ಸ್‌ನಲ್ಲಿ ಪ್ರವಾಸಿ ತಾಣದ ಹೆಸರು ಹಾಗೂ ಸ್ಥಳದ ಕುರಿತು ಸಂಕ್ಷಿಪ್ತ ಮತ್ತು ವಾಸ್ತವಿಕ ಮಾಹಿತಿಯನ್ನು ನೀಡುವುದು ಸೂಕ್ತ
- ಆಕ್ಷೇಪಾರ್ಹ ಹಾಗೂ ಕಾನೂನುಬಾಹಿರ ವಿಷಯಕ್ಕೆ ಅವಕಾಶವಿಲ್ಲ
- ಸ್ಪರ್ಧೆಗೆ ಸಲ್ಲಿಸುವ ರೀಲ್ಸ್‌ನಲ್ಲಿ ಯಾವುದೇ ವ್ಯಕ್ತಿ, ಧರ್ಮ, ಸಮುದಾಯ ಅಥವಾ ಸಂಸ್ಥೆಯನ್ನು ಅವಹೇಳನ ಮಾಡುವ, ಆಕ್ಷೇಪಾರ್ಹ ಅಥವಾ ಕಾನೂನುಬಾಹಿರ ವಿಷಯಗಳನ್ನು ಒಳಗೊಂಡಿರಬಾರದು.
- ಐತಿಹಾಸಿಕ ಸ್ಮಾರಕಗಳು, ದೇವಾಲಯಗಳು, ಅರಣ್ಯ ಪ್ರದೇಶಗಳು, ಜಲಾಶಯಗಳು ಹಾಗೂ ಇತರೆ ಸಂರಕ್ಷಿತ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡುವಾಗ ಸಂಬಂಧಪಟ್ಟ ಇಲಾಖೆಗಳ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
- ಸ್ಮಾರಕಗಳು, ಶಿಲ್ಪಗಳು, ದೇವಾಲಯಗಳ ವಿಗ್ರಹಗಳು ಅಥವಾ ಸಂರಕ್ಷಿತ ಪರಂಪರೆಯ ಕಟ್ಟಡಗಳಿಗೆ ಯಾವುದೇ ರೀತಿಯ ಹಾನಿಯಾಗದಂತೆ ಚಿತ್ರೀಕರಣ ನಡೆಸಬೇಕು.
- ಡ್ರೋನ್ ಬಳಸಿ ಚಿತ್ರೀಕರಣ ಮಾಡುವ ಸಂದರ್ಭದಲ್ಲಿ ಸರ್ಕಾರದ ನಿಯಮಗಳು ಮತ್ತು ಅಗತ್ಯ ಅನುಮತಿಗಳನ್ನು ಕಡ್ಡಾಯವಾಗಿ ಪಡೆಯಬೇಕು.
ಕೃತಿಸ್ವಾಮ್ಯ ಉಲ್ಲಂಘನೆಗೆ ಅವಕಾಶವಿಲ್ಲ
ಇತರರ ಕೃತಿಸ್ವಾಮ್ಯಕ್ಕೆ ಒಳಪಟ್ಟ ಸಂಗೀತ, ವೀಡಿಯೋ, ಛಾಯಾಚಿತ್ರ ಅಥವಾ ಇತರೆ ಯಾವುದೇ ವಿಷಯಗಳನ್ನು ಅನುಮತಿಯಿಲ್ಲದೆ ರೀಲ್ಸ್‌ನಲ್ಲಿ ಬಳಸುವಂತಿಲ್ಲ. ರೀಲ್ಸ್‌ನಲ್ಲಿ ಯಾವುದೇ ಜಾಹೀರಾತು ವಿಷಯವನ್ನೂ ಒಳಗೊಂಡಿರಬಾರದು.
ರೀಲ್ಸ್‌ನಲ್ಲಿ ಬಳಸಿರುವ ಸಂಗೀತ, ಧ್ವನಿ, ಚಿತ್ರಗಳು ಹಾಗೂ ಇತರೆ ಖಾಸಗಿ ಅಥವಾ ಜಾಹೀರಾತು ಬಳಕೆಗೆ ಸಂಬಂಧಿಸಿದ ಕಾನೂನುಬದ್ಧ ಜವಾಬ್ದಾರಿ ಸಂಪೂರ್ಣವಾಗಿ ಸ್ಪರ್ಧಾರ್ಥಿಯದ್ದಾಗಿರುತ್ತದೆ. ಈ ಸಂಬಂಧ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಯಾವುದೇ ಜವಾಬ್ದಾರಿ ಹೊಂದಿರುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಸೆ.27ರೊಳಗೆ ರೀಲ್ಸ್ ಸಲ್ಲಿಕೆ
ಸ್ಪರ್ಧಾರ್ಥಿಗಳು ತಮ್ಮ ರೀಲ್ಸ್‌ಗಳನ್ನು ಸೆಪ್ಟೆಂಬರ್ 27ರೊಳಗೆ ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿರುವ ಇ-ಮೇಲ್ ಮೂಲಕ ಸಲ್ಲಿಸಬೇಕು.
ರೀಲ್ಸ್ ಸಲ್ಲಿಸುವ ಸಂದರ್ಭದಲ್ಲಿ ಸ್ಪರ್ಧಾರ್ಥಿಯ ಹೆಸರು, ವಯಸ್ಸು, ವಿಳಾಸ, ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸ, ರೀಲ್ಸ್‌ನ ಶೀರ್ಷಿಕೆ, ಚಿತ್ರೀಕರಿಸಿದ ಪ್ರವಾಸಿ ತಾಣದ ಹೆಸರು ಹಾಗೂ ರೀಲ್ಸ್ ತಮ್ಮದೇ ಮೂಲ ಕೃತಿ ಎಂಬ ಘೋಷಣೆಯನ್ನು ಕಡ್ಡಾಯವಾಗಿ ಸಲ್ಲಿಸಬೇಕು.
ಐದು ಪ್ರಮುಖ ವಿಷಯ ವಿಭಾಗಗಳು
ಸ್ಪರ್ಧೆಯಲ್ಲಿ ಪ್ರಮುಖವಾಗಿ ಕೆಳಗಿನ ವಿಭಾಗಗಳಲ್ಲಿ ರೀಲ್ಸ್‌ಗಳನ್ನು ಸಲ್ಲಿಸಬಹುದಾಗಿದೆ:
ಪಾರಂಪರಿಕ / ಐತಿಹಾಸಿಕ ಪ್ರವಾಸೋದ್ಯಮ
- ಧಾರ್ಮಿಕ ಪ್ರವಾಸೋದ್ಯಮ
- ನೈಸರ್ಗಿಕ ಪ್ರವಾಸೋದ್ಯಮ
- ಜಲಪಾತ ಪ್ರವಾಸೋದ್ಯಮ
- ಸಾಹಸ ಪ್ರವಾಸೋದ್ಯಮ
ಅತ್ಯುತ್ತಮ ರೀಲ್ಸ್‌ಗಳಿಗೆ ನಗದು ಬಹುಮಾನ
ಸ್ಪರ್ಧೆಯಲ್ಲಿ ಆಯ್ಕೆಯಾಗುವ ಅತ್ಯುತ್ತಮ ರೀಲ್ಸ್‌ಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣಪತ್ರ ನೀಡಲಾಗುತ್ತದೆ. ಬಹುಮಾನಗಳ ಸಂಖ್ಯೆ ಮತ್ತು ಮೊತ್ತವನ್ನು ಪ್ರವಾಸೋದ್ಯಮ ಇಲಾಖೆಯು ನಿಗದಿಪಡಿಸಲಿದೆ.
ಸಲ್ಲಿಕೆಯಾಗುವ ರೀಲ್ಸ್‌ಗಳನ್ನು ಪರಿಶೀಲಿಸಲು ಪ್ರವಾಸೋದ್ಯಮ ಇಲಾಖೆಯಿಂದ ಪರಿಶೀಲನಾ/ತೀರ್ಪುಗಾರರ ಸಮಿತಿಯನ್ನು ರಚಿಸಲಾಗುತ್ತದೆ. ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಇಲಾಖೆ ತಿಳಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ
ಸ್ಪರ್ಧೆಯಲ್ಲಿ ಆಯ್ಕೆಯಾಗುವ ರೀಲ್ಸ್‌ಗಳನ್ನು ಜಿಲ್ಲೆಯ ಪ್ರವಾಸೋದ್ಯಮ ಪ್ರಚಾರಕ್ಕಾಗಿ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡಲು ಬಳಸಿಕೊಳ್ಳುವ ಹಕ್ಕನ್ನು ಪ್ರವಾಸೋದ್ಯಮ ಇಲಾಖೆ ಹೊಂದಿರುತ್ತದೆ.
ಹಾಸನ ಜಿಲ್ಲೆಯ ಪ್ರವಾಸಿ ತಾಣಗಳನ್ನು ಹೊಸ ತಲೆಮಾರಿಗೆ ಪರಿಚಯಿಸುವುದರ ಜೊತೆಗೆ, ಜಿಲ್ಲೆಯ ಪ್ರವಾಸೋದ್ಯಮ ಸಾಮರ್ಥ್ಯವನ್ನು ಡಿಜಿಟಲ್ ಮಾಧ್ಯಮದ ಮೂಲಕ ದೇಶ-ವಿದೇಶದ ಪ್ರವಾಸಿಗರಿಗೆ ತಲುಪಿಸುವ ಉದ್ದೇಶವನ್ನು ಈ ಅಭಿಯಾನ ಹೊಂದಿದೆ.
ಹಾಸನವನ್ನು ಇನ್ನಷ್ಟು ಆಕರ್ಷಕ ಪ್ರವಾಸಿ ತಾಣವಾಗಿ ಡಿಜಿಟಲ್ ವೇದಿಕೆಗಳಲ್ಲಿ ಪರಿಚಯಿಸುವ ಈ ಸೃಜನಶೀಲ ಅಭಿಯಾನದಲ್ಲಿ ಜಿಲ್ಲೆಯ ಹಾಗೂ ರಾಜ್ಯದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರವಾಸೋದ್ಯಮ ಇಲಾಖೆ ಮನವಿ ಮಾಡಿದೆ.
ಹೆಚ್ಚಿನ ಮಾಹಿತಿಗಾಗಿ: ಜಿಲ್ಲಾ ಸಮಾಲೋಚಕ ಕಾರ್ತಿಕ್ ಜಿ.ಎಂ. – 8296256593 ಅವರನ್ನು ಸಂಪರ್ಕಿಸಬಹುದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










