ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಇಂದು ಮಧುಮೇಹ ಸರ್ವೇಸಾಮಾನ್ಯವಾಗಿದೆ. ಹಳಬರಲ್ಲಿ ಇದು ಮಧುಮೇಹ, ಸಕ್ಕರೆ ಕಾಯಿಲೆ, ಸಿಹಿಮೂತ್ರ ರೋಗ, ಡಯಾಬಿಟಿಸ್ ಹಾಗೂ ಇತ್ತೀಚಿನವರೆಗೆ ಶುಗರ್ ಕಂಪ್ಲೈಂಟ್ ಎಂದೂ ಜನಜನಿತವಾಗಿದೆ. ಈ ರೋಗದ ಬಗ್ಗೆ ನಮ್ಮ ದೇಶದಲ್ಲಿ ಬಹು ಹಿಂದೆ ಉಲ್ಲೇಖವಿದೆ.
ಸುಶ್ರುತ ಸಂಹಿತೆ(400ಬಿಸಿ)ಯಲ್ಲಿ ಸಿಹಿಮೂತ್ರ ವಿಸರ್ಜನೆ ಮತ್ತು ಸಕ್ಕರೆ ಕಾಯಿಲೆಯ ವಿಧಗಳು ಚರ್ಚಿಸಲ್ಪಟ್ಟಿದೆ. ಈ ರೋಗಕ್ಕೆ ಡಯಾಬಿಟಿಸ್ (ಅತಿಮೂತ್ರ ವಿಸರ್ಜನೆ ಎಂಬ ಅರ್ಥದಲ್ಲಿ) ಎಂಬ ಹೆಸರನ್ನು ಮೊದಲ ಶತಮಾನದಲ್ಲೇ ಗ್ರೀಕ್ ವೈದ್ಯ ಏರಿಯಟಸ್ ನೀಡಿದ್ದ. ನಂತರ ಎಫ್’ಜಿ ಬ್ಯಾಂಟಿಂಗ್ ಮತ್ತು ಸಿಎಚ್ ಬೆಸ್ಟ್. ಅವರು 1921ರ ಜುಲೈ 30ರಂದು ಇನ್ಸುಲಿನ್ ಕಂಡುಹಿಡಿದು ನೊಬೆಲ್ ಪ್ರಶಸ್ತಿಗೆ ಭಾಜನರಾದದ್ದು ಮಧುಮೇಹ ಚಿಕಿತ್ಸಾ ಕ್ರಮಗಳಲ್ಲಿ ಒಂದು ಮೈಲುಗಲ್ಲು.
ಡಯಾಬಿಟಿಸ್ ಹೇಗೆ ಬರುತ್ತದೆ?
ನಾವು ಸೇವಿಸಿದ ಆಹಾರವು ರಕ್ತದಲ್ಲಿ ಸಕ್ಕರೆಯಾಗಿ (ಗ್ಲುಕೋಸ್) ಜೀವಕೋಶಗಳಿಗೆ ಶಕ್ತಿಯ ಮೂಲವಾಗಿ ತಲುಪುತ್ತದೆ. ಈ ಕ್ರಿಯೆಗೆ ಇನ್ಸುಲಿನ್ ಹಾರ್ಮೋನ್ ಅತ್ಯವಶ್ಯ. ಇನ್ಸುಲಿನ್ ಕಡಿಮೆ ಉತ್ಪತ್ತಿಯಾದಲ್ಲಿ ಅಥವಾ ಸರಿಯಾಗಿ ಕೆಲಸ ಮಾಡದಿದ್ದಲ್ಲಿ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗುತ್ತದೆ. ಇದೇ ಮಧುಮೇಹ ಅಥವಾ ಸಕ್ಕರೆ ಕಾಯಿಲೆ.
ಪ್ರತಿಯೊಬ್ಬ ವ್ಯಕ್ತಿಯ ದೇಹದ ರಕ್ತದಲ್ಲಿ ಸಕ್ಕರೆಯು ಒಂದು ನಿರ್ಧಿಷ್ಟ ಪ್ರಮಾಣವನ್ನು ಮೀರಿದಾಗ ಅದು ಮೂತ್ರಜನಕಾಂಗಗಳಿಂದ ಹಾದು ಮೂತ್ರದಲ್ಲಿ ಕಾಣಿಸಿಕೊಳ್ಳುತ್ತದೆ. ಅದೇ ಸಿಹಿಮೂತ್ರ ರೋಗ. ಮೂತ್ರದಲ್ಲಿ ಸಕ್ಕರೆ ಕಾಣಿಸಿಕೊಳ್ಳುವ ಮೊದಲೇ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಿರುತ್ತದೆ. ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.
ಜಾಗತಿಕ ಮಟ್ಟದ ಸಮಸ್ಯೆ
ಮಧುಮೇಹ ವಿಶ್ವದಾದ್ಯಂತ ಹೆಚ್ಚುತ್ತಿದ್ದು 2025ರ ವೇಳೆಗೆ ಮಧುಮೇಹಿಗಳ ಸಂಖ್ಯೆ 300 ಮಿಲಿಯನ್ ತಲುಪುವ ಅಂದಾಜಿನ ಆತಂಕವಿದೆ. ಇದರಲ್ಲಿ ಶೇ.75 ರೋಗಿಗಳು ಅಭಿವೃದ್ಧಿಶೀಲ ದೇಶಗಳಲ್ಲಿ ಕಂಡು ಬರುತ್ತಾರೆ. ಇದರಲ್ಲಿ ಶೇ.30-35 ರೋಗಿಗಳು ಭಾರತ ಹಾಗೂ ಚೀನಾಗಳಲ್ಲಿ ಸಿಗುತ್ತಾರೆ! ಮಧುಮೇಹ ಸುದೀರ್ಘಾವಧಿಯ ಕಾಯಿಲೆ. ಅದು ಅನೇಕ ದುಷ್ಪರಿಣಾಮಗಳಿಗೆ ಕಾರಣ. ಮುಖ್ಯವಾಗಿ ಕಣ್ಣು, ಮೂತ್ರ ಜನಕಾಂಗ, ಮತ್ತು ಕೊಲೆಸ್ಟ್ರಾಲ್’ಗೆ ಸಂಬಂಧಿಸಿದ ರಕ್ತನಾಳ ತೊಂದರೆಗಳಾದ ಹೃದ್ರೋಗ, ಪಾರ್ಶ್ವವಾಯು, ಕೈಕಾಲು ಅಂಗ ವಿಚ್ಛೇದನದಂತಹ ಮಾರಕ ಸಂಭವನೀಯತೆಗಾಗಿ ಬಹಳ ಪ್ರಾಮುಖ್ಯವಾಗುತ್ತದೆ.
ಇದಲ್ಲದೇ ಸಾಮಾನ್ಯ ಸೋಂಕುಗಳು ಉಲ್ಬಣಿಸಿ ಒಟ್ಟಾರೆಯಾಗಿ ಮಧುಮೇಹಿಗೂ ಮತ್ತು ಕುಟುಂಬಕ್ಕೂ ಆರ್ಥಿಕವಾಗಿ ಹೊರೆಯಾಗುತ್ತದೆ. ಇದರಿಂದ ವೈದ್ಯಕೀಯ ವೆಚ್ಚವಲ್ಲದೇ ಸುಸೂತ್ರ ಜೀವನ ನಿರ್ವಹಣೆ ಕಷ್ಟಸಾಧ್ಯ.
ಮಧುಮೇಹಿಗರೇ ಗಮನಿಸಿ!
ಇನ್ಸುಲಿನ್ ಆವಿಷ್ಕಾರದ ಪೂರ್ವದಲ್ಲಿ ಮಧುಮೇಹದಿಂದ ಸಾವುಗಳು ಸಾಮಾನ್ಯವಾಗಿತ್ತು. ಇಂದು ಹಾಗಿಲ್ಲ. ಈ ಕಾಯಿಲೆಯೊಂದಿಗೂ ಸುಸೂತ್ರ ಜೀವನ ನಿರ್ವಹಣೆ ಸಾಧ್ಯ. ಮಧುಮೇಹದ ಪತ್ತೆ ಹಾಗೂ ಸೂಕ್ತ ಚಿಕಿತ್ಸೆಗಳ ಅರಿವಿನಿಂದ ಮಧುಮೇಹಿ ಇಂದು ಹೆಚ್ಚು ಸಮಯ ಸಮರ್ಪಕ ಜೀವನ ನಿರ್ವಹಿಸಬಲ್ಲ. ಮಧುಮೇಹ ಮಕ್ಕಳಲ್ಲಿ ಆಟ ಪಾಠಕ್ಕೆ, ಉಳಿದವರಲ್ಲಿ ದೈನಂದಿನ ಕೆಲಸ ಕಾರ್ಯಕ್ಕೆ, ಮದುವೆಗೆ, ತಾಯ್ತನಕ್ಕೆ ಅಡ್ಡಿಯಾಗದಂತೆ ನಿರ್ವಹಿಸಬಲ್ಲ ಕಾಯಿಲೆ. ಹೋಟೆಲ್, ಸಭೆ ಸಮಾರಂಭ, ಪಾರ್ಟಿಗಳಲ್ಲಿ ಮಧುಮೇಹಿಗಳು ಹಿಂಜರಿಯದೇ ಖುಷಿಯಿಂದ ಪಾಲ್ಗೊಳ್ಳಬಹುದು. 300 ಮಿಲಿಯನ್ ಮಧುಮೇಹಿಗಳಲ್ಲಿ ತಾನು ಒಬ್ಬನಾದೆ ಎಂಬ ಕೀಳರಿಮೆ ತಾಳದೇ ಎಲ್ಲರಂತೆ ಹೆಮ್ಮೆಯಿಂದ ಜೀವಿಸಬಹುದಾಗಿದೆ. ಅದಕ್ಕೆ ಬೇಕಾಗಿರುವುದು ಕಾಯಿಲೆಯ ಬಗೆಗಿನ ಅರಿವು, ಸಮರ್ಪಕ ಚಿಕಿತ್ಸೆ ಮತ್ತು ಸ್ವಯಂ ನಿರ್ವಹಣೆ. ಇವೆಲ್ಲ ರೋಗಿಯ ಜವಾಬ್ದಾರಿಯಾಗಬೇಕು.
ಡಯಾಬಿಟಿಸ್ ನಿರ್ವಹಣೆ ಹೇಗೆ?
ಮಧುಮೇಹದ ನಿರ್ವಹಣೆ ವೈದ್ಯಕೀಯ ಪ್ರಗತಿಯಿಂದಾಗಿ ಆಶಾದಾಯಕವಾಗಿದೆ. ಈ ಮಾಹಿತಿ ರೋಗಿಗಳನ್ನು ಸೂಕ್ತವಾಗಿ ತಲುಪಬೇಕಿದೆ. ರಕ್ತದಲ್ಲಿ ಸಕ್ಕರೆ ಅಂಶದ ಸಂಪೂರ್ಣ ಹತೋಟಿ, ಮಧುಮೇಹದ ದುಷ್ಪರಿಣಾಮಗಳ ಅರಿವು ಇಂದಿನ ಅಗತ್ಯ.
ಹತೋಟಿಯಿಲ್ಲದ ಮಧುಮೇಹ ಅಪಾಯಕಾರಿ
ಅದು ಆ ಕ್ಷಣದಲ್ಲಿ ಸದ್ದಿಲ್ಲದೇ ಮೌನವಾಗಿ ನಿದ್ರಿಸುತ್ತಿರಬಹುದು. ಮುಂದೊಂದು ದಿನ ಅದರ ದುಷ್ಪರಿಣಾಮ ತಪ್ಪಿದ್ದಲ್ಲ. ಅದು ತರುವ ದೈಹಿಕ, ಮಾನಸಿಕ, ಆರ್ಥಿಕ ಹಿಂಜರಿತಗಳು ರೋಗಿ ಮತ್ತು ಅವರ ಕುಟುಂಬಕ್ಕಲ್ಲದೇ ಸಮಗ್ರ ದೇಶಕ್ಕೂ ಹಿನ್ನಡೆ. ತನ್ನ ಕಾಯಿಲೆಯನ್ನು ಮರೆತು ಅಥವಾ ಮುಚ್ಚಿಟ್ಟು ಹಿಂಜರಿಯಬಾರದು ಅಥವಾ ಮ್ಯಾಜಿಕ್, ರೆಮಿಡಿ, ಶೀಘ್ರ ಗುಣಪಡಿಸುವ ಜಾಹೀರಾತು ಚಿಕಿತ್ಸೆಗೆ ತನ್ನ ಆರೋಗ್ಯವನ್ನು ಬಲಿ ಕೊಡಬಾರದು.
ಮಧುಮೇಹಿಗರೇ ಧೈರ್ಯ ತಾಳಿರಿ!
ಏನು ಸೇವಿಸಿದರೆ ಏನಾಗುತ್ತೋ ಎಂಬ ಭಯ ಅಥವಾ ಅಕಾಲಿಕ ಕಿಡ್ನಿ ತೊಂದರೆ, ಹೃದಯಾಘಾತದಿಂದ ಮರಣವನ್ನಪ್ಪಿದವರ ಬಗ್ಗೆ ದುಃಸ್ವಪ್ನದಲ್ಲಿ ಬೆಚ್ಚುತ್ತಾ ಖಿನ್ನತೆಯಿಂದ ತೊಳಲಾಡಬಾರದು. ವೈಜ್ಞಾನಿಕವಾಗಿ ತನಗೆ ಒಪ್ಪಿತವಾದ ಚಿಕಿತ್ಸೆ ಪಡೆದು ತನ್ನ ಮಧುಮೇಹವನ್ನು ನಿಯಂತಣದಲ್ಲಿಡಬೇಕು. ಆಗಾಗ್ಗೆ ರಕ್ತ ಪರೀಕ್ಷೆ, ವೈದ್ಯರ ಸಲಹೆಗಳ ಮೂಲಕ ಮತ್ತಷ್ಟು ಖಾತ್ರಿಪಡಿಸಿಕೊಳ್ಳಬೇಕು. ವೈದ್ಯರ ಮಾರ್ಗದರ್ಶನ, ಕುಟುಂಬ, ಸ್ನೇಹಿತರ ಸಹಕಾರ ಪಡೆದು ಮಧುಮೇಹಕ್ಕೆ ಸೂಕ್ತ ಉತ್ತರ ನೀಡಿ ಈಸಬೇಕು, ಈಸಿ ಜೈಸಬೇಕು.
ಮಧುಮೇಹವನ್ನು ಸಮರ್ಥ ಜೀವನಶೈಲಿಯಿಂದ (ಆಹಾರ ಕ್ರಮ, ದೈಹಿಕ ಪರಿಶ್ರಮ, ಆರೋಗ್ಯಕರ ತೂಕ) ತಡೆಯಬಹುದು. ಮುಂದೂಡಬಹುದು. ಇದು ರೋಗಿಯಲ್ಲಿ ಸಕ್ಕರೆ ಹತೋಟಿಗೂ ಸಹಾಯಕ. ರಕ್ತದ ಸಕ್ಕರೆ ಅಂಶ ಸಹಜ ಸ್ಥಿತಿಯಲ್ಲಿ ಕಾಯ್ದುಕೊಂಡ ಮಧುಮೇಹಿ ಮುಂದಾಗುವ ದುಷ್ಪರಿಣಾಮಗಳಿಂದ ತಪ್ಪಿಸಿಕೊಳ್ಳಬಹುದು, ಮುಂದೂಡಬಹುದು ಅಥವಾ ಅದರ ತೀವ್ರತೆಯನ್ನು ಕಡಿಮೆಯಾಗಿಸಬಹುದು.
ತಜ್ಞ ಸಲಹಾ ವೈದ್ಯರು
ಶ್ರೀಲಕ್ಷ್ಮೀ ನರ್ಸಿಂಗ್ ಹೋಂ
Get in Touch With Us info@kalpa.news Whatsapp: 9481252093
Discussion about this post