ಫಲ್ಘುಣಿ ನದಿ ಪ್ರಶಾಂತವಾಗಿ ಝುಳು ಝುಳು ಹರಿಯುವ ತಾಯಿ ರಾಜರಾಜೇಶ್ವರಿ ದೇವಿ ಬೇಡಿ ಬಂದ ಭಕ್ತ ಸಾಗರದ ಇಷ್ಟಾರ್ಥಗಳನ್ನು ಈಡೇರಿಸುತ್ತಾ ಪ್ರಸನ್ನಳಾಗಿ ನೆಲೆಸಿರುವ ಪುಣ್ಯಕ್ಷೇತ್ರವೇ ಪೊಳಲಿ.
ಈ ತಾಯಿಯ ಕೃಪೆಯಿಂದ ಜನಿಸಿದ ಒಬ್ಬ ಹಠವಾದಿ ಪುಟಾಣಿ ಸಾಧಕಿಯ ಸಾಧನೆಯ ಹಾದಿಯನ್ನು ನಿಮ್ಮೆದುರಿಗೆ ಇಡಲು ಬಯಸುತ್ತೇನೆ.
ವಿಜೆ ಎಂಬುದರ ಅರ್ಥವೇ ತಿಳಿಯದಿದ್ದರೂ ತನ್ನ ಹೆಸರಿನ ಪಕ್ಕ ವಿಜೆ ಎಂಬುದನ್ನು ಹಾಕಿಸಿಕೊಳ್ಳಬಯಸಿದ ಈಕೆ ಕೊನೆಗೂ ತಾನಂದುಕೊಂಡಂತೆ ಛಲ ಬಿಡದೇ ವಿಜೆ ಆಗಿದ್ದಾಳೆ. ಆಕೆಯೇ ಶ್ರೀಮತಿ ಪ್ರೇಮ ಮತ್ತು ಶ್ರೀಕೃಷ್ಣ ದಂಪತಿಗಳ ಮುದ್ದಿನ ಪುತ್ರಿ ತೀರ್ಥ ಪೊಳಲಿ.
ಈಕೆಯ ವಯಸ್ಸು ಕೇವಲ 9 ವರ್ಷ. ಕಲಿಯುತ್ತಿರುವುದು 5ನೆಯ ತರಗತಿ.(ರಾಜ್ ಆಕಾಡೆಮಿ ಗಂಜಿಮಠ ಶಾಲೆಯಲ್ಲಿ) ಆದರೂ ಈಕೆಯ ಮುಗ್ಧ ಮಾತಿನ ಮೋಡಿಗೆ ಮರುಳಾಗದ ಜನರೇ ಇಲ್ಲ ಎನ್ನಬಹುದು. ಒಮ್ಮೆ ಕೇಳಿದರೆ ಮತ್ತೊಮ್ಮೆ ಮಗದೊಮ್ಮೆ ಕೇಳಬೇಕೆಂಬ ಹಂಬಲ ಹುಟ್ಟಿಸುವ ಈಕೆಯ ಕಂಠಸಿರಿ ಕೇಳುಗರನ್ನು ಹೊಸದೊಂದು ಲೋಕಕ್ಕೆ ಕರೆದೊಯ್ಯುತ್ತದೆ.
ಈಕೆ ಬಹುಮುಖ ಪ್ರತಿಭೆ. ನಿರೂಪಣೆ ಜೊತೆಗೆ ನಟನೆ ಮತ್ತು ಯಕ್ಷಗಾನ ರಂಗದಲ್ಲಿ ಆಸಕ್ತಿ ಹೊಂದಿರುವ ಇವಳು ರಕ್ಷಿತ್ ಪಡ್ರೆಯವರ ಮಾರ್ಗದರ್ಶನ ದಲ್ಲಿ ಯಕ್ಷಗಾನ ಅಭ್ಯಾಸ ಮಾಡುತ್ತಿದ್ದಾಳೆ. ಖಾಸಗಿ ವಾಹಿನಿಯೊಂದರಲ್ಲಿ ಡ್ರಾಮಾದ ಮೂಲಕ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದು ಇದರ ಜೊತೆ ಬಾಲನಟಿಯಾಗಿಯೂ ಮಿಂಚು ಹರಿಸಿದ್ದಾಳೆ.
ಪನೊಡ ಬೊಡ್ಚ ಎಂಬ ತುಳು ಸಿನಿಮಾದ ಮೂಲಕ ತನ್ನ ನಟನಾ ಸಾಮರ್ಥ್ಯ ತೋರಿಸುವ ತೀರ್ಥ ಪೊಳಲಿ ಪ್ರಸ್ತುತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆರಂಬಾರ್ ಚಿತ್ರದಲ್ಲಿ ಕೂಡಾ ನಟಿಸಿದ್ದು ಅದು ಇನ್ನೂ ಶೂಟಿಂಗ್ ಹಂತದಲ್ಲಿದೆ. ಮತ್ತು ಓ ಸ್ಟಾರ್ ವಾಹಿನಿಯ ಜ್ಯೂನಿಯರ್ ಡ್ರಾಮ ಪಂಟರ್ಸ್ ನಲ್ಲಿ ಭಾಗವಹಿಸಿದ್ದಾಳೆ.
ಇನ್ನೂ ಈಕೆಯ ನಿರೂಪಣೆ ಕುರಿತು ತಿಳಿದರೆ ನೀವು ಆಶ್ಚರ್ಯಪಡುತ್ತೀರಿ. ಏಕೆಂದರೆ ಈ ಪುಟಾಣಿ ಅಭಿಮತ ವಾಹಿನಿಯಲ್ಲಿ ವಿಕೆಂಡ್ ವಿಥ್ ಮಿ ಎನ್ನುವ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾಳೆ. ಜೊತೆಗೆ ತುಳು ಕಾರ್ಯಕ್ರಮದ ನಿರೂಪಣೆ ಸಲುವಾಗಿ ಮಾಯಾ ನಗರಿ ಮುಂಬೈ ನಗರಕ್ಕೆ ಹೋಗಿ ಅಲ್ಲಿನ ಜನರಿಂದ ಕೂಡಾ ಮೆಚ್ಚುಗೆ ಪಡೆದಿದ್ದಾಳೆ. ಇದುವರೆಗೂ ಸುಮಾರು ಇನ್ನೂರಕ್ಕೂ ಮಿಕ್ಕಿ ಕಾರ್ಯಕ್ರಮಗಳಲ್ಲಿ ಯಶಸ್ವಿಯಾಗಿ ನಿರೂಪಣೆ ಮಾಡಿದ ಕೀರ್ತಿ ಇವಳದು.
ಈಕೆಯ ಸಾಧನೆ ಗುರುತಿಸಿ ಹಲವು ಸಂಘ ಸಂಸ್ಥೆಗಳು ಈಕೆಗೆ ಸನ್ಮಾನ ಮಾಡಿವೆ. ಮಡಿಲು ಸನ್ಮಾನ ಪ್ರಶಸ್ತಿ 2018 ಪ್ರಶಸ್ತಿ, ಕರ್ನಾಟಕ ಪ್ರತಿಭಾ ರತ್ನ ಪ್ರಶಸ್ತಿ ಈಕೆಯ ಮುಡಿಗೇರಿವೆ. ಜೊತೆಗೆ ಈಕೆ ತುಳುವ ಕುವರಿ ಬಿರುದಾಂಕಿತೆಯೂ ಹೌದು.
ಈಕೆಯ ಸಾಧನೆಯ ಹಾದಿ ಇನ್ನಷ್ಟು ಎತ್ತರಕ್ಕೆ ಏರಲಿ ದೇಶದ ಕೀರ್ತಿಯನ್ನ ವಿದೇಶದಲ್ಲಿಯೂ ಈಕೆ ಬೆಳಗುವಂತೆ ಮಾಡಲಿ ಎಂಬ ಆಶಯ ಪ್ರತಿಭಾ ಪೋಷಕರಾದ ನಮ್ಮೆಲ್ಲರದು.
ನಮಸ್ಕಾರ
ಲೇಖನ, ಚಿತ್ರಕೃಪೆ: ವೀಡಿಯೋ ರೋಹನ್ ಪಿಂಟೋ ಗೇರುಸೊಪ್ಪ
Discussion about this post