ಮೊದಲ ಬಾರಿಗೆ ಅನ್ನಿಸುತ್ತಿದೆ ಲೇಖನಿಯಲ್ಲಿ ಬಂಗಾರದ ಶಾಯಿ ಇದ್ದಿದ್ದರೆ ಎಷ್ಟು ಚೆನ್ನಾಗಿ ಇರುತ್ತಿತ್ತು ಎಂದು. ಯಾರ ಬಗ್ಗೆ ಹೀಗೆ ಅನ್ನಿಸಲು ಸಾಧ್ಯ? ಹಿಮಾ ದಾಸ್..!
ಭಾರತದ ಹೆಮ್ಮೆಯ ಪುತ್ರಿ. ಹೆಸರಿನಿಂದ ಹಿಮಾಲಯ ಮತ್ತು ಹಿಮಾಲಯ ಶಿಖರವನ್ನು ಮೀರಿದ ಸಾಧನೆಗಳು. ಬರೀ ಒಂದು ತಿಂಗಳಲ್ಲಿ ಅಥ್ಲೆಟಿಕ್‌ನಲ್ಲಿ ಐದು ಚಿನ್ನದ ಪದಕಗಳನ್ನು ಪಡೆಯುವವರು ಈಗ ಭಾರತದಲ್ಲಿ ಇದ್ದಾರೆ. ಅಸ್ಸಾಂ ರಾಜ್ಯದ ಪ್ರವಾಸಕ್ಕೆ ಅರ್ಧದಷ್ಟು ಸಂಬಳವನ್ನು ನೀಡಿದ ತನ್ನ ರಾಯಭಾರಿ ಸ್ಥಾನದ ಘನತೆ ಮೆರೆದವರು. ಯಾವ ಊರಿನಲ್ಲಿ ಕಾಲಿಗೆ ಒಳ್ಳೆಯ ಶೂಗಳಿಲ್ಲದೆ ಓಡಿದ್ದರೋ ಅದೇ ಮನೆಯ ಅಂಗಳದಲ್ಲಿ ಇಂದು ವಿಶ್ವವಿಖ್ಯಾತ ಶೂ ತಯಾರಿಕಾ ಕಂಪೆನಿ ಒಪ್ಪಂದಕ್ಕಾಗಿ ನಿಂತಿದೆ. ಸಾಧನೆ ಎಂದರೆ ಇದು ಅಲ್ಲವೇ?!
ಭಾರತಕ್ಕೆ ಅಥ್ಲೆಟಿಕ್ಸ್‌ನಲ್ಲಿ ಮೊದಲು ಸ್ವರ್ಣ ಪದಕ ಗೆದ್ದ ಮಹಿಳೆ ಹಿಮಾ ದಾಸ್. ಅಯ್ಯೋ ದೀಪಾವಳಿಗೆ ಪಟಾಕಿ ಸುಡಬೇಡಿ ನನಗೆ ಅಸ್ತಮಾ ಇದೆ ಎನ್ನುತ್ತ ತನ್ನ ಮದುವೆಯಲ್ಲಿ ಲಕ್ಷಾಂತರ ಪಟಾಕಿ ಸಿಡಿಸಿದ ಅಸ್ಸಾಮ್ ರಾಜ್ಯದ ರಾಯಭಾರಿ ದೂರದ ದೇಶದಲ್ಲಿ ಅಸ್ತಮಾ ರಹಿತ ಸಿಗರೇಟು ಸೇದುತ್ತ ಕೂತಿದ್ದಾಳೆ. ಅವಳನ್ನು ರಾಯಭಾರಿ ಸ್ಥಾನದಿಂದ ಕಿತ್ತು ಎಸೆಯುವುದು ಒಳಿತು. ಈಗ ಬೇರೆ ದೇಶದ ನಾಗರೀಕನನ್ನು ಮದುವೆಯಾದ ಅವಳು ಭಾರತದ ಪ್ರಜೆಯಾಗಿರಲು ಸಾಧ್ಯವಿಲ್ಲ. ಭಾರತದ ಪ್ರಧಾನಿಯವರನ್ನು ಭೇಟಿಯಾಗಲು ತುಂಡುಡುಗೆಯಲ್ಲಿ ಬರುವ ಈ ಅಂತಾರಾಷ್ಟ್ರೀಯ ನಾಯಕಿ ಮತೀಯ ದೇಶಗಳಿಗೆ ಭೇಟಿ ನೀಡುವಾಗ ಅವಳ ಪರಿಯನ್ನು ನೀವು ಗಮನಿಸಿರಬಹುದು.
ಭಾರತ ತಂಡ ಕ್ರಿಕೆಟ್ ವಿಶ್ವಕಪ್‌ನಲ್ಲಿ ಸೋತದ್ದನ್ನು ತಿಂಗಳುಗಟ್ಟಲೆ ಚರ್ಚಿಸುವ ಮಾಧ್ಯಮಗಳು ಮತ್ತು ಭಾರತೀಯರು ಇಂತಹ ಮಿಂಚಿನ ಪ್ರತಿಭೆಗಳ ಹಿನ್ನೆಲೆಯ ಅರಿಯಲು ಹೋಗುವುದೇ ಇಲ್ಲ. ಪ್ರತಿ ವರ್ಷ ಇಂತಹ ಅನೇಕ ಎಲೆ ಮರೆಯ ಸಾಧಕರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದರೂ ಅಂತಹವರಿಗೆ ಜನ ಬೆಂಬಲ ಸಿಗುವುದು ದುರ್ಲಭ. ಪ್ರತಿ ಸೆಕೆಂಡಿಗೆ ಲಕ್ಷ ಲಕ್ಷ ಎಣಿಸುವ ಕ್ರಿಕೆಟ್ ಆಟಗಾರರಿಗೆ ಪ್ರೋತ್ಸಾಹಿಸಲು ದೇಶ ಬಿಟ್ಟು ದೇಶಕ್ಕೆ ತೆರಳುವ ಅಭಿಮಾನಿಗಳಿದ್ದಾರೆ. ಆದರೆ ಕೇವಲ ಹತ್ತೊಂಬತ್ತು ವರ್ಷದ ಹಿಮಾ ಐದು ಚಿನ್ನದ ಪದಕಗಳನ್ನು ಒಮ್ಮೆಲೇ ಬಗಲಿಗೆ ಹಾಕಿಕೊಂಡರೂ ಅರ್ಧದಷ್ಟು ಭಾರತೀಯರಿಗೆ ಅವರ ಹೆಸರು ತಿಳಿದಿಲ್ಲ.
ಧಿಂಗ್ ಎಕ್ಸ್‌ಪ್ರೆಸ್ ಖ್ಯಾತಿಯ ಹಿಮಾ ದಾಸ್ ಅಂತಹ ಗಟ್ಟಿ ಹಿನ್ನೆಲೆಯಿಂದ ಬಂದವರೇನು ಅಲ್ಲ. ಅಸ್ಸಾಮ್ ರಾಜ್ಯದ ನಾಗಾಂವ್‌ನ ಧಿಂಗ್‌ನಲ್ಲಿ ಜನವರಿ 9, 2000 ರಲ್ಲಿ ಜನಿಸಿದ ಇವರು ಅಕ್ಕಿಯನ್ನು ಮಾರಿ ಜೀವನ ಸಾಗಿಸುತ್ತಿದ್ದ ಸಾಮಾನ್ಯ ಕೃಷಿ ಕುಟುಂಬದಿಂದ ಬಂದವರು. ಆ ಕುಟುಂಬದ ಐದು ಜನ ಮಕ್ಕಳಲ್ಲಿ ಕೊನೆಯವರಾದ ಇವರು ಪ್ರೌಢಶಾಲೆಯ ತನಕವೂ ಫುಟ್‌ಬಾಲ್ ಅನ್ನು ಧ್ಯಾನಿಸುತ್ತಿದ್ದವರು. ಈಗಲೂ ಭಾರತದ ಪೂರ್ವ ರಾಜ್ಯಗಳಲ್ಲಿ ಫುಟ್‌ಬಾಲ್ ಆರಾಧಕರು ಜಾಸ್ತಿ. ಆದರೆ ಫುಟ್‌ಬಾಲ್‌ನಲ್ಲಿ ಪರಿಣತಿ ಹೊಂದುವ ಯಾವ ಸೌಕರ್ಯವೂ ಅವರ ಬಳಿ ಇರಲಿಲ್ಲ. ಅದೃಷ್ಟವಶಾತ್ ಅವರ ಓಟವನ್ನು ಗಮನಿಸಿದ ಶಿಕ್ಷಕ ಓಟಗಾರ್ತಿಯಾಗಲು ಸೂಚಿಸಿದರು. ನಂತರ ಹಿಂತಿರುಗಿ ನೋಡಿದ್ದೇ ಇಲ್ಲ.
ಇವರ ಬಗ್ಗೆ ಹೇಳಲು ಎಷ್ಟು ಖುಷಿ ಎನ್ನಿಸುತ್ತದೆ ಎಂದರೆ ಹಿಮಾ ದಾಸ್ ಇನ್ನೂ ಹನ್ನೆರಡನೆಯ ತರಗತಿಗೆ ಕಾಲಿಟ್ಟಿರಲಿಲ್ಲ ಆಗಲೇ ಅವರು ಅರ್ಜುನ ಪ್ರಶಸ್ತಿ ಪಡೆದಿದ್ದರು! ಅವರೀಗ ಅಸ್ಸಾಮ್ ರಾಜ್ಯದ ಕ್ರೀಡಾ ರಾಯಭಾರಿ, ಯುನಿಸೆಫ್‌ನ ಮೊದಲ ಯುವ ರಾಯಭಾರಿ. ಸೆಪ್ಟೆಂಬರ್ 2018 ರಲ್ಲಿ ಅಡಿಡಾಸ್ ಶೂ ಕಂಪನಿ ಅವರೊಡನೆ ಒಪ್ಪಂದ ಮಾಡಿಕೊಳ್ಳಲು ಬಂದು ನಿಂತಿತ್ತು. ಅವರ ಸಾಧನೆಗಳ ಬಗ್ಗೆ ಕೇಳಿದರೆ ರೋಮಾಂಚನಕಾರಿ ಅನ್ನಿಸುತ್ತದೆ. ಅವರ ವಯಸ್ಸು ಹತ್ತೊಂಬತ್ತು! ಆಲೋಚಿಸಿ, ಇವರನ್ನು ಸರಿಯಾಗಿ ಬೆಳೆಸಿದರೆ ಸಾಧನೆಗಳನ್ನು ಎಣಿಸಲು ಸಮಯ ಸಾಲುವುದಿಲ್ಲವೇನೋ..?!
-ಸಚಿನ್ ಪಾರ್ಶ್ವನಾಥ್
Discussion about this post