ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪದ ಇರ್ಕಿ ಮಠವು ಮಧ್ವಾಚಾರ್ಯರು ಸಂಚಾರದ ವಾಸ್ತವ್ಯ ಮಾಡುತ್ತಿದ್ದಂತಹ ಮಠ. ಗ್ರಹಸ್ತಾಶ್ರಮಿಗೆ ಮುದ್ರಾಧಿಕಾರ ಕೊಟ್ಟ ಏಕೈಕ ಮಠ. ಈಗಲೂ ಶ್ರೀಮದಾಚಾರ್ಯರು ಹಿಡಿದ ಮುದ್ರೆ ಈ ಮಠದಲ್ಲಿದೆ.
ಶ್ರೀ ವೆಂಕಟರಮಣ ಉಪಾಧ್ಯಾಯರು ಪೇಜಾವರ ಶ್ರೀಗಳ ಸಮಕಾಲೀನರೂ, ವೇದ ವಿದ್ವಾಂಸರೂ, ಮಹಾ ನಿಷ್ಟಾವಂತರೂ, ಸಕಲ ಜನರ ಪ್ರೇಮಿಯೂ ಆಗಿದ್ದರು. ಇತ್ತೀಚೆಗೆ ಕೆಲವು ತಿಂಗಳ ಹಿಂದೆ ಕಾಲವಾದರು. ಇವರಷ್ಟು ದೊಡ್ಡ ಘನ ಪಂಡಿತರು ಇವರ ಜೀವಿತಾವಧಿ ಕಾಲದಲ್ಲಿ ಇದ್ದವರು ಬೆರಳೆಣಿಕೆ ಮಾತ್ರ.
ಪೇಜಾವರ ಶ್ರೀಗಳದ್ದೇ ನಡೆ ನುಡಿ, ನೆನಪು ಶಕ್ತಿ. ಯಾವುದೇ ರೋಗ ರುಜಿನಗಳಿಂದ ಬಳಲದೆ ತೊಂಭತ್ತು ವರ್ಷ ಬದುಕಿದವರು. ವಿಶೇಷ ಎಂದರೆ ಒಂದೇ ವರ್ಷದಲ್ಲಿ ಈ ಬಾಲ್ಯ ಸ್ನೇಹಿತರು ಊರ್ಧ್ವ ಲೋಕ ಪಯಣ ಬೆಳೆಸಿದರು. ಈ ಉಪಾಧ್ಯಾಯರು ಬಹುಷಃ ಅವರ ಅರಿವಿನಲ್ಲಿ ಒಂದೇ ಒಂದು ಹಿಂಸೆಯಾಗಲೀ, ಅಪರಾಧವಾಗಲೀ ತಪ್ಪನ್ನಾಗಲೀ ಮಾಡಿದ ಸಾಕ್ಷಿಗಳನ್ನು ನಾನು ಕೇಳಿಲ್ಲ.
ಒಕ್ಕಲು ಮಸೂದೆ ಬಂದು ಭೂಮಿ ಕಳೆದುಕೊಂಡಾಗಲೂ ಕೂಡಾ ದೇವರ ನೈವೇದ್ಯಕ್ಕೆ ಅಕ್ಕಿ ಇಲ್ಲದ ಸಮಸ್ಯೆ ಇತ್ತು. ಆಗ ಮಾತ್ರ ಒಕ್ಕಲಿಗರ ಮನೆಗೆ ಹೋಗಿ ಬೇಡಿ ಅಕ್ಕಿ ತಂದು ದೇವರಿಗೆ ನೈವೇದ್ಯ ಮಾಡುತ್ತಿದ್ದರು. ಒಕ್ಕಲಿಗರು ಮೊದಲು ಕೊಡದೇ ಇದ್ದಾಗ ದೇವರ ಜತೆ ತಾನೂ ಉಪವಾಸವಿದ್ದು ಪೂಜೆ ಮಾಡಿದ್ದರು. ಆಗ ನೊಂದ ಒಕ್ಕಲಿಗರು ದೇವರ ನೈವೇದ್ಯಕ್ಕೆ ಮತ್ತೆಂದೂ ನೈವೇದ್ಯ ಪಾತ್ರೆಯನ್ನು ಬರಿದು ಮಾಡಲಿಲ್ಲ ಎಂದು ಹೇಳುತ್ತಿದ್ದರು.
ಇವರು ರಾಮಕುಂಜ ಶಾಲೆಯಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ ಸೇರಿದಾಗ ಅವರು ಪಡೆಯುತ್ತಿದ್ದ ಸಂಭಾವನೆ ಕೇವಲ ತಿಂಗಳಿಗೆ ನಾಲ್ಕು ರೂಪಾಯಿ. ಅಂದರೆ ಸಾಮಾನ್ಯವಾಗಿ ಈಗಿನ ನಲವತ್ತೈದು ಕೆಜಿ ಅಕ್ಕಿಯ ಬೆಲೆ(ಒಂದು ಮುಡಿ ಅಂತಾರೆ) ಇರ್ಕೀ ಮಠದ ಮೂಲ ದೇವರು ಕೇಶವ. ಶ್ರೀಗಳು ಮಠದ ಪರ್ವ ದಿನಗಳಲ್ಲಿ ಅಲ್ಲಿಗೆ ಹೋಗಿ ದೇವತಾರ್ಚನೆ ಮಾಡಿ ಬರುತ್ತಿದ್ದರು. ಮಧ್ವಾಚಾರ್ಯರೂ ಹೋಗಿ ಆ ದೇವರಿಗೆ ಪೂಜೆ ಸಲ್ಲಿಸುತ್ತಿದ್ದರು. ನೋಡಿ ಕೃತಾರ್ಥರಾಗಬೇಕಾದ ಮಠ ಇದು.
Get in Touch With Us info@kalpa.news Whatsapp: 9481252093
Discussion about this post