ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ರಾಜ್ಯದ 13 ಜಿಲ್ಲೆಗಳ ವ್ಯಾಪ್ತಿಗೊಳಪಡುವ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಮಲೆನಾಡಿನ ಪರಿಸರಕ್ಕೆ ಧಕ್ಕೆಯಾಗದಂತೆ ಹಿರಿಯರ ಮಾರ್ಗದರ್ಶನಗಳನ್ನು ಪಡೆದು, ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ ಅವರು ಹೇಳಿದರು.
ಅವರು ಇಂದು ಪ್ರಾಧಿಕಾರದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳಿಗೆ ವಿವರಗಳನ್ನು ನೀಡಿ ಮಾತನಾಡುತ್ತಿದ್ದರು.
ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ನೆರೆಯ ನಾಲ್ಕಾರು ಜಿಲ್ಲೆಗಳ 20ಕ್ಕೂ ಹೆಚ್ಚಿನ ಗ್ರಾಮಗಳಿಗೆ ಭೇಟಿ ನೀಡಿ, ಅಲ್ಲಿನ ಜನರೊಂದಿಗೆ ಸಮಾಲೋಚನೆ ನಡೆಸಿ, ಅವರಿಂದ ಅಹವಾಲುಗಳನ್ನು ಸ್ವೀಕರಿಸಲಾಗಿದೆ. ಅಧಿಕಾರದ ಮಿತಿ ಹಾಗೂ ಅನುದಾನದ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು ಸೌಲಭ್ಯಗಳನ್ನು ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದರು.
ಕಳೆದ ಆರ್ಥಿಕ ವರ್ಷದಲ್ಲಿ ಸರ್ಕಾರವು ಮಂಡಳಿಯನ್ನು ಪ್ರತಿನಿಧಿಸುವ ಎಲ್ಲಾ ಸದಸ್ಯರುಗಳಿಗೆ ತಲಾ ಒಂದು ಕೋಟಿ ರೂ.ಗಳನ್ನು ಅವರ ಕ್ಷೇತ್ರದ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳಲು ಕ್ರಿಯಾ ಯೋಜನೆಯನ್ನು ರೂಪಿಸಲು ಅವಕಾಶ ಕಲ್ಪಿಸಿತ್ತು. ಇದರಲ್ಲಿ 86.55 ಕೋಟಿ ವೆಚ್ಚದ 1080 ಕಾಮಗಾರಿಗಳ ಬೇಡಿಕೆ ಇದ್ದು, ಅವುಗಳಿಗೆ ಅನುಮೋದನೆ ನೀಡಿದೆ. ಪ್ರಸಕ್ತ ಸಾಲಿಗೆ ಅನ್ವಯಿಸುವಂತೆ ಮುಂದುವರೆದ ಕಾಮಗಾರಿಗಳ ಕ್ರಿಯಾಯೋಜನೆಯಲ್ಲಿ 92.68 ಕೋಟಿ ರೂ. ವೆಚ್ಚದ 1278 ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಅವುಗಳಲ್ಲಿ ಪ್ರಮುಖವಾಗಿ ರಸ್ತೆ ಮತ್ತು ಸೇತುವೆಗಳ ನಿರ್ಮಾಣ, ಸಮುದಾಯ ಭವನಗಳ ನಿರ್ಮಾಣ, ಶಾಲಾ ಕಟ್ಟಡಗಳು, ಅಂಗನವಾಡಿ ಕಟ್ಟಡಗಳು, ಕುಡಿಯುವ ನೀರಿನ ಘಟಕಗಳು, ಸಣ್ಣ ನೀರಾವರಿ ಯೋಜನೆಗಳು ಹಾಗೂ ಕಟ್ಟಡ ಮತ್ತು ಇತರೆ ಕಾಮಗಾರಿಗಳು ಒಳಗೊಂಡಿವೆ ಎಂದರು.
ಪ್ರಸಕ್ತ ಸಾಲಿನ ಆಯವ್ಯಯದಲ್ಲಿ 27.48 ಕೋಟಿ ರೂ.ಗಳ ಅನುದಾನ ನಿಗಧಿಪಡಿಸಿದೆ. ಮಂಡಳಿಯಲ್ಲಿ ಉಳಿದ ಅನುದಾನ ಸೇರಿದಂತೆ ಒಟ್ಟು 26.55 ಕೋಟಿ ಲಭ್ಯವಿದ್ದು, ಅದರ ವಿವರಣೆಯೊಂದಿಗೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಮಂಡಳಿಯ ಮುಂದುವರೆದ ಕಾಮಗಾರಿಗಳ ಕ್ರಿಯಾ ಯೋಜನೆಯ 1278 ಕಾಮಗಾರಿಗಳಲ್ಲಿ ವಾರ್ಷಿಕ ಅಂತ್ಯಕ್ಕೆ ಬದ್ಧವಾಗಿದ್ದ 845 ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಅನುಮೋದನೆ ನೀಡಿದೆ. ಬಾಕಿ ಇರುವ ವಿವಿಧ ಕ್ಷೇತ್ರಗಳ 433 ಕಾಮಗಾರಿಗಳು ಹಾಗೂ ಇವುಗಳ ಅನುಷ್ಠಾನಕ್ಕೆ ಅಗತ್ಯವಿರುವ ರೂ.35.96 ಕೋಟಿಗಳ ಅನುದಾನದೊಂದಿಗೆ ಅನುಮೋದನೆಯನ್ನು ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಕೈಗೊಳ್ಳುವ ಎಲ್ಲಾ ಕಾಮಗಾರಿಗಳು ಗುಣಮಟ್ಟದ್ದಾಗಿರುವಂತೆ ಹಾಗೂ ಕಳಪೆಯಾಗದಂತೆ ಗಮನಿಸಲಾಗುವುದು. ಈ ಕಾಮಗಾರಿಗಳು ಸೆಪ್ಟಂಬರ್ ಮಾಸಾಂತ್ಯದೊಳಗಾಗಿ ಪೂರ್ಣಗೊಳಿಸಬೇಕು. ತಪ್ಪಿದಲ್ಲಿ ಕಾಮಗಾರಿ ಕೈಗೊಳ್ಳದಿರುವ ಯೋಜನೆಗಳನ್ನು ರದ್ದುಪಡಿಸಲು ಕ್ರಮವಹಿಸಲಾಗುವುದು ಎಂದ ಅವರು ಗುತ್ತಿಗೆದಾರರು ಕಾಮಗಾರಿ ಸ್ಥಳದಲ್ಲಿ ಪ್ರಕಟಣಾ ಫಲಕ ಅಳವಡಿಸುವಂತೆ ಸೂಚಿಸಿದರು.
2012-16ರ ಅವಧಿಯಲ್ಲಿ ಮಂಡಳಿ ವತಿಯಿಂದ ನಡೆದ ಅನೇಕ ಕಾಮಗಾರಿಗಳಲ್ಲಿ ಸುಮಾರು 65 ಕೋಟಿ ರೂ.ಗಳ ಅವ್ಯವಹಾರ ನಡೆದಿರುವ ಬಗ್ಗೆ ಮಾಹಿತಿ ಇದ್ದು, ಅವುಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಳ್ಳಲಾಗುವುದು ಎಂದರು.
ಈ ಮಂಡಳಿಗೆ ಮಾನ್ಯ ಮುಖ್ಯಮಂತ್ರಿಗಳು ಸೇರಿದಂತೆ 12 ಲೋಕಸಭಾ ಸದಸ್ಯರು, 65 ವಿಧಾನಸಭಾ ಸದಸ್ಯರು, 21 ವಿಧಾನ ಪರಿಷತ್ ಸದಸ್ಯರು, 13 ಜಿಲ್ಲಾ ಪಂಚಾಯಿತಿ ಸದಸ್ಯರು, 13 ಜಿಲ್ಲಾಧಿಕಾರಿಗಳು ಹಾಗೂ 9 ನಾಮ ನಿರ್ದೇಶಿತ ಸದಸ್ಯರು ಇರಲಿದ್ದಾರೆ. ಇವರಲ್ಲಿ 7 ಸಚಿವರು ಹಾಗೂ ಕೇಂದ್ರದ 02 ಸಚಿವರು ಸೇರಿ ಸುಮಾರು 135 ಜನ ಸದಸ್ಯರನ್ನೊಳಗೊಂಡ ಪ್ರಾಧಿಕಾರ ಪ್ರಾದೇಶಿಕವಾಗಿ ಪರಿಷ್ಕರಿಸಿ, ಪುನರ್ ರಚಿಸುವ ಕುರಿತು ಸರ್ಕಾರ ಈಗಾಗಲೇ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದೆ ಎಂದವರು ತಿಳಿಸಿದರು.
ಈ ಸಂದರ್ಭದಲ್ಲಿ ಕೆ.ಎಸ್. ಮಣಿ ಅವರು ಉಪಸ್ಥಿತರಿದ್ದರು.
Get In Touch With Us info@kalpa.news Whatsapp: 9481252093
Discussion about this post