ಹೊನ್ನಾವರ: ಕರಾವಳಿ ಭಾಗದ ಇಲ್ಲಿ ಹಾದು ಹೋಗುವ ಬಿ.ಎಚ್. ರಸ್ತೆಯಲ್ಲಿ ಅಂದರೆ ಹೊನ್ನಾವರ ನಗರದಿಂದ ಆರು ಕಿಮೀ ದೂರದಲ್ಲೇ ಇರುವ ಕವಲಕ್ಕಿ, ನಗರೆ ಕ್ರಾಸ್-ಬೇರೋಳ್ಳಿ ವ್ಯಾಪ್ತಿಯಲ್ಲಿ ನಡೆದಿರುವ ಡಾಂಬಾರ್ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಸ್ಥಳೀಯರುವ ವ್ಯವಸ್ಥೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಇತ್ತೀಚೆಗಷ್ಟೇ 3.5 ಕಿಮೀ ಉದ್ದದ ಈ ರಸ್ತೆಗೆ ಡಾಂಬರೀಕರಣ ಮಾಡಲಾಗಿದ್ದು, ಕಳಪೆ ಕಾಮಗಾರಿಯ ಪರಿಣಾಮ ರಸ್ತೆಗೆ ಹಾಕಿರುವ ಡಾಂಬಾರ್ ಬರಿಯ ಕೈಯಲ್ಲೇ ಕಿತ್ತುಬರುತ್ತದೆ.
ಸಾಮಾಜಿಕ ಕಳಕಳಿಯುಳ್ಳ ರಾಜೇಶ್ ಗುಂಡಬಾಳ ಹಾಗೂ ಗಣೇಶ್ ಅಡಿಗ ಎಂಬ ಯುವಕರು ಈ ಹಗರಣವನ್ನು ಫೇಸ್’ಬುಕ್ ಮೂಲಕ ಬಯಲು ಮಾಡಿದ್ದು, ಇದು ಬಹಳಷ್ಟು ವೈರಲ್ ಆಗಿದೆ.
ಈ ಪ್ರದೇಶಕ್ಕೆ ತೆರಳಿರುವ ಯುವಕರು ರಸ್ತೆಗೆ ಹಾಕಿರುವ ಡಾಂಬಾರ್ ಎಷ್ಟು ಕಳಪೆಯಾಗಿದ್ದು, ಒಂದು ಮಳೆಗೇ ಕೊಚ್ಚಿ ಹೋಗುವ ಆತಂಕವಿದೆ ಎಂಬುದನ್ನು ತೋರಿಸಿದ್ದಾರೆ.
ಈ ವೇಳೆ ಮಾತನಾಡಿರುವ ಕವಲೆಕೆರೆಯ ಆಟೋ ಡ್ರೈವರ್’ವೋರ್ವರು, ಸುಮಾರು 3-4 ವರ್ಷದಿಂದ ಈ ರಸ್ತೆ ಸರಿಯಿರಲಿಲ್ಲ. ಈಗ ಒಂದು ತಿಂಗಳ ಹಿಂದೆ ರಸ್ತೆ ಮಾಡಿದ್ದಾರೆ. ಆದರೆ, ಇದು ಎಷ್ಟು ಕಳಪೆಯಾಗಿದೆ ಎಂದರೆ ಇಲ್ಲಿ ಹಾಕಿರುವ ಡಾಂಬಾರ್ ಕೈಯಿಂದಲೇ ಕಿತ್ತು ಬರುತ್ತಿದೆ ಎಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿನಯ್ ಭಟ್ ಬೆರೋಳ್ಳೀ ಎನ್ನುವವರು ಮಾತನಾಡಿದ್ದು, 10 ವರ್ಷದ ಹಿಂದೆ ಡಾಂಬಾರ್ ಹಾಕಿದ್ದರು.. 2-3 ವರ್ಷದಿಂದ ಈಚೆಗೆ ಆಗುತ್ತದೆ ಎಂಬುದಿತ್ತು. ಈ ಕಳಪೆ ಕಾಮಗಾರಿ ನೋಡಿದರೆ ಒಂದು ಮಳೆಗೇ ಇದು ಕೊಚ್ಚಿ ಹೋಗುತ್ತದೆ. ಸಾವಿರಾರು ಮಂದಿ ಇಲ್ಲಿ ಓಡಾಡುತ್ತದೆ. ನೂರು ಬಸ್ ಹಾಗೂ ಸ್ವಂತ ವಾಹನದವರು ಇಲ್ಲಿ ಓಡಾಡುತ್ತಾರೆ. ಈ ಕಳಪೆ ಕಾಮಗಾರಿಯಿಂದ ಮತ್ತೆ ರಸ್ತೆ ಹದಗೆಡುವುದು ನಿಶ್ಚಿತ ಎಂದು ಕಿಡಿ ಕಾರಿದ್ದಾರೆ.
ಈ ಕುರಿತಂತೆ ಮಾತನಾಡಿರುವ ರಾಜೇಶ್ ಗುಂಡಬಾಳ ಮತ್ತು ಗಣೇಶ ಅಡಿಗ ಅವರುಗಳು ವಿಶ್ವ ಗುಣಮಟ್ಟದ ರಸ್ತೆ, ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಸ್ಮಾರಕವಾಗಲಿರುವ, ಕರಾವಳಿಯ ಅದ್ಭುತಗಲ್ಲೊಂದಾಗಲಿರುವ ಕವಲಕ್ಕಿ ನಗರೆ ರಸ್ತೆ. ಡಾಂಬರು ಲೇಪಿತ ಜಲ್ಲಿ ಕಲ್ಲು ಗ್ರಾಮಸ್ಥರ ಮನೆಯ ದೇವರ ಕೋಣೆಯ ಸಾಲಿಗ್ರಾಮ ಆಗಲಿದೆ ಎಂದು ವ್ಯಂಗ್ಯ ಮಿಶ್ರಿತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿ ಇನ್ನೊಂದು ಪ್ರಮುಖ ವಿಚಾರವೆಂದರೆ, ರಸ್ತೆ ಕಾಮಗಾರಿ ಯಾವ ಇಲಾಖೆಯ ಅಡಿ, ಯಾವ ಯೋಜನೆಯ ಅಡಿ ನಡೆದಿದೆ, ಇದರ ಗುತ್ತಿಗೆದಾರರು ಯಾರು, ಕೆಲಸ ಯಾವಾಗ ಆರಂಭವಾಯಿತು, ಯಾವಾಗ ಮುಕ್ತಾಯವಾಯಿತು, ನಿರ್ವಹಣೆ ಎಷ್ಟು ವರ್ಷ-ಯಾರದ್ದು ಹೊಣೆ, ಎಷ್ಟು ವೆಚ್ಚವಾಗಿದೆ ಎಂಬ ನಾಮಫಲಕವನ್ನು ಎಲ್ಲೂ ಪ್ರಕಟಿಸದೇ ಇರುವುದು ಕಾಮಗಾರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎನ್ನುವುದಕ್ಕೆ ಪ್ರಮುಖ ಸಾಕ್ಷಿಯಾಗಿದೆ.
ಈ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು ಈ ಕಳಪೆ ಕಾಮಗಾರಿ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಇಲಾಖೆ ಗಮನಹರಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಜೊತೆಯಲ್ಲಿ, ಮಳೆಗಾಲ ಆರಂಭಕ್ಕೂ ಮುನ್ನ ರಸ್ತೆಗೆ ಗುಣಮಟ್ಟದ ಮರು ಡಾಂಬರೀಕರಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

















