ಶಿವಮೊಗ್ಗ: 2019ರ ಲೋಕಸಭಾ ಚುನಾವಣೆಯ ಸಂಭ್ರಮ ಹಾಗೂ ಬಿಸಿಯಲ್ಲಿ ದೇಶ ಮುಳುಗೇಳುತ್ತಿದ್ದು, ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡುವಂತೆ ಚುನಾವಣಾ ಆಯೋಗ ಸೇರಿದಂತೆ ಬಹಳಷ್ಟು ಖಾಸಗೀ ಸಂಸ್ಥೆಗಳೂ ಸಹ ಪ್ರಚಾರ ಮಾಡುತ್ತಾ, ಜನರಲ್ಲಿ ಜಾಗೃತಿ ಮೂಡಿಸುತ್ತಿವೆ.
ಮತದಾನ ಮಾಡುವ ವಿಚಾರದಲ್ಲಿ ನೋಡುವುದಾದರೆ, ಒಂದು ಕ್ಷೇತ್ರದಲ್ಲಿ ಸ್ಫರ್ಧಿಸಿರುವ ಯಾವುದೇ ಅಭ್ಯರ್ಥಿಗೆ ನನಗೆ ಮತದಾನ ಮಾಡಲು ಇಚ್ಛೆಯಿಲ್ಲ ಎಂದಾದರೆ, ಯಾರಿಗೂ ಇಲ್ಲ ಅಂದರೆ ನೋಟಾ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿರುವುದು ತಿಳಿದೇ ಇದೆ.
ಯಾವುದೇ ಅಭ್ಯರ್ಥಿಗಳು ನನಗೆ ಇಷ್ಟವಾಗಲಿಲ್ಲ ಎಂದು ಮತದಾನದಿಂದ ದೂರ ಉಳಿದರೆ, ಅವರ ನಕಲಿ ಮತದಾನವಾಗುವ ಆತಂಕವಿದೆ. ಹೀಗಾಗಿಯೇ ಭಾರತದಲ್ಲಿ ಕೇಂದ್ರ ಚುನಾವಣಾ ಆಯೋಗ 2009ರಲ್ಲಿ ’ನೋಟಾ’ ಪದ್ದತಿಯನ್ನು ಜಾರಿಗೆ ತಂದಿತು.
ಇತ್ತೀಚಿನ ವರ್ಷಗಳಲ್ಲಿ ಈ ನೋಟಾಗೆ ಮತದಾನ ಮಾಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಂತಹ ಮತದಾನ ಯಾವುದಕ್ಕೂ ಬಾರದೇ ವ್ಯರ್ಥವಾಗುತ್ತಿರುವುದೇ ಹೆಚ್ಚು. ಹೀಗಾಗಿ, ಇದನ್ನು ತಡಗಟ್ಟಿ ಯೋಗ್ಯ ವ್ಯಕ್ತಿಗೆ ಮತದಾನ ಮಾಡಿ ಎಂದು ಶಿವಮೊಗ್ಗದಲ್ಲಿ ನಿವೃತ್ತ ಡಿವೈಎಸ್’ಪಿ ಒಬ್ಬರು ವಿಶಿಷ್ಠ ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಭದ್ರತಾ ಇಲಾಖೆಯಲ್ಲಿ ಡಿವೈಎಸ್’ಪಿ ಆಗಿ ದೇಶ ಸೇವೆ ಮಾಡಿ ಪ್ರಸ್ತುತ ವಿಶ್ರಾಂತ ಜೀವನ ನಡೆಸುತ್ತಿರುವ ರಾಮಚಂದ್ರ ಮಾಳದೇವರ ಅವರೇ ಈ ರೀತಿ ಜಾಗೃತಿ ಮೂಡಿಸುತ್ತಿರುವ ದೇಶಪ್ರೇಮಿ.
’ದಯವಿಟ್ಟು ನೋಟಾ ಮತದಾನ ಮಾಡಬೇಡಿ’-ಪ್ರಜಾಪ್ರಭುತ್ವವೆಂಬ ದೇಗುಲಕ್ಕೆ ಯೋಗ್ಯ ವ್ಯಕ್ತಿಯನ್ನು ಚುನಾಯಿಸಲು ಪ್ರತಿಯೊಬ್ಬರೂ ನಿಮ್ಮ ಹಕ್ಕು ಎಂಬ ಮತ ಚಲಾಯಿಸಿ. ನಿಮ್ಮಿಂದ ಮತದಾನ, ದೇಶದ ಸುಭದ್ರ ಸರ್ಕಾರದ ಸೋಪಾನ. ಮತದಾನ ದಿನ ರಜೆಯೆಂದ ವಿನೋದ ವಿಹಾರ ಬೇಡ ಎಂಬ ಸಾಲುಗಳನ್ನು ತಮ್ಮ ಕಾರಿನ ಮೇಲೆ ವಿಭಿನ್ನವಾಗಿ ಮುದ್ರಿಸಿಕೊಂಡಿರುವ ರಾಮಚಂದ್ರ ಅವರು, ತಾವು ತೆರಳಿದೆಡೆಯೆಲ್ಲಾ ಇದನ್ನು ಜನರಿಗೆ ಹೇಳುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ತಮ್ಮ ಕಾರಿನ ಎರಡೂ ಭಾಗದಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಇದನ್ನು ಬರೆಸಿದ್ದಾರೆ.
ಈ ಕುರಿತಂತೆ ಕಲ್ಪ ನ್ಯೂಸ್ ಜೊತೆಯಲ್ಲಿ ಮಾತನಾಡಿದ ಅವರು, ಚುನಾವಣೆ ಬಗ್ಗೆ ಜನರಲ್ಲಿ ಇನ್ನೂ ಬಹಳಷ್ಟು ಅರಿವು ಮೂಡಬೇಕಾದ ಅಗತ್ಯವಿದೆ. ಹೀಗಾಗಿ, ಈ ನಿಟ್ಟಿನಲ್ಲಿ ಏನನ್ನಾದರೂ ಮಾಡಬೇಕು ಎಂಬ ತುಡಿತದ ಫಲವಾಗಿಯೇ ಈ ಭಿತ್ತಿ ಪ್ರಚಾರ ಎನ್ನುತ್ತಾರೆ.
ಇದೇ ನಿಟ್ಟಿನಲ್ಲಿ ನೋಟಾ ಚಲಾವಣೆಯಿಂದ ತಮ್ಮ ಹಕ್ಕನ್ನು ಬೇರೆಯವರು ಚಲಾಯಿಸದಂತೆ ತಡೆಯಲು ಸಾಧ್ಯವಾಗುತ್ತದೆಯೇ ಹೊರತು, ಚಲಾಯಿಸಿದ ಮತ ದೇಶಕ್ಕೆ ಉತ್ತಮ ನಾಯಕನನ್ನು ಆಯ್ಕೆ ಮಾಡುವಲ್ಲಿ ಯಾವುದೇ ರೀತಿಯಲ್ಲಿ ಪ್ರಯೋಜನಕ್ಕೆ ಬಾರದೇ ಹೋಗುತ್ತದೆ. ಒಬ್ಬೊಬ್ಬ ಅಭ್ಯರ್ಥಿಗಳಲ್ಲಿ ಒಂದೊಂದು ರೀತಿಯ ಇಷ್ಟವಾಗುವ ಹಾಗೂ ಇಷ್ಟವಾಗದೇ ಇರುವ ಗುಣಗಳಿರುವುದು ಸಹಜ. ಆದರೆ, ಲೋಕಸಭೆಯಂತಹ ಚುನಾವಣೆಯಲ್ಲಿ ದೇಶಕ್ಕೆ ಬಲಿಷ್ಠ ನಾಯಕನ ಆಯ್ಕೆ ಮಾಡುವ ಗುರುತರವಾದ ಜವಾಬ್ದಾರಿ ಪ್ರತಿ ಮತದಾರನ ಮೇಲಿರುತ್ತದೆ. ಹೀಗಾಗಿ, ನೀವು ಚಲಾಯಿಸುವ ಮತ ನೋಟಾ ಆಗಿ, ಅದು ವ್ಯರ್ಥವಾಗುವ ಬದಲಾಗಿ ದೇಶಕ್ಕೆ ಬಲಿಷ್ಠ ನಾಯಕನ ಆಯ್ಕೆಗೆ ಪೂರಕವಾಗಿ ಮತದಾನ ಮಾಡಿ ಎಂದು ಮನವಿ ಮಾಡುತ್ತಾರೆ.
ಇನ್ನು, ಲೋಕಸಭಾ ಚುನಾವಣೆಯೆನ್ನುವುದು ದೇಶದ ಅತಿದೊಡ್ಡ ಹಬ್ಬ ಎನ್ನುವ ಜೊತೆಯಲ್ಲಿ ಪ್ರಜಾಪ್ರಭುತ್ವದ ಸೌಂದರ್ಯವನ್ನು ವೃದ್ಧಿಸಲು ಸಾರ್ವಜನಿಕರಿಗೆ ದೊರೆಯುವ ಒಂದು ದೊಡ್ಡ ಅವಕಾಶ. ಇಂತಹ ಚುನಾವಣೆ ದಿನ ಸಾರ್ವತ್ರಿಕ ರಜೆಯಿರುವ ಕಾರಣ ಮೋಜು ಮಸ್ತಿ ಮಾಡಲು ತೆರಳಬೇಡಿ. ಬದಲಾಗಿ, ಪ್ರತಿಯೊಬ್ಬರೂ ಮತದಾನ ಮಾಡಿ. ಅದರಲ್ಲೂ ನೋಟಾ ಚಲಾವಣೆ ಮಾಡದೇ, ಯೋಗ್ಯ ಹಾಗೂ ಬಲಿಷ್ಠ ನಾಯಕನ ಆಯ್ಕೆಗಾಗಿ ಮತದಾನ ಮಾಡಿ ಎಂದು ಮನವಿ ಮಾಡಿದ್ದಾರೆ.
ರಾಮಚಂದ್ರ ಅವರ ಈ ಸಾಮಾಜಿಕ ಹಾಗೂ ದೇಶದ ಕಳಕಳಿಯ ಈ ಪ್ರಯತ್ನಕ್ಕೆ ಸಿಹಿಮೊಗ್ಗೆ ವಿಶ್ರಾಂತ ನೌಕರರ ಸಂಯುಕ್ತ ಸಂಘದ ಗೌರವಾಧ್ಯಕ್ಷ ನಿವೃತ್ತ ಡಿಸಿಎಫ್ ರವಿಕುಮಾರ್, ಅಧ್ಯಕ್ಷ ಪಿ.ಒ. ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಕೆ.ಟಿ. ಶ್ರೀನಿವಾಸ ರಾವ್, ನಿವೃತ್ತ ಅಧಿಕಾರಿಗಳಾದ ಶಿವಶಂಕರ್, ಡಾ.ಸುಧೀಂದ್ರ, ಮಂಜುನಾಥ್ ಶರ್ಮಾ, ಎನ್.ಎಸ್. ಕುಮಾರ್ ಸೇರಿದಂತೆ ಸಂಘದ ಎಲ್ಲ ಸದಸ್ಯರು ಕೈ ಜೋಡಿಸಿದ್ದಾರೆ. ರಾಮಚಂದ್ರ ಮಾಳದೇವರ ಅವರು ಸಂಘದ ಸದಸ್ಯರೂ ಸಹ ಆಗಿದ್ದಾರೆ.
(ಲೇಖನ: ಡಾ.ಸುಧೀಂದ್ರ)
Discussion about this post