ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹೊಸಪೇಟೆ: ತಾಲೂಕಿನಲ್ಲಿ ಒಂದಾದ ಮೇಲೆ ಒಂದು ಸರಣಿ ಕೊಲೆಗಳು ನಡೆಯುತ್ತಿದ್ದು, ನಾಗೇನಹಳ್ಳಿಯಲ್ಲಿ ಮಹಿಳೆ, ಲಾರಿ ಚಾಲಕ ಮತ್ತು ವಕೀಲರ ಹತ್ಯೆಗಳ ನೆನಪು ಮಾಸುವ ಮುನ್ನವೇ ನಗರದ ಟಿಬಿ ಡ್ಯಾಂ ಬಳಿ ಇನ್ನೊಂದು ಕೊಲೆ ನಡೆದಿರುವ ಘಟನೆ ನಡೆದಿದೆ.
ಚೂಪಾದ ಕಲ್ಲುಗಳನ್ನು ಬಳಸಿ, ಅಂಗಿಯಿಂದ ಎರಡೂ ಕೈ ಕಟ್ಟಿ ದುಷ್ಕೃತ್ಯ ನಡೆಸಲಾಗಿದೆ ಎನ್ನಲಾಗಿದೆ.
ಮೈಕಲ್ ಜಾನ್ ಎಂಬಾತ ಮೃತ ವ್ಯಕ್ತಿ ಎಂದು ಶಂಕಿಸಲಾಗಿದ್ದು, ಸ್ಥಳದಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಟಿ.ಬಿ.ಡ್ಯಾಂ ಪೋಲಿಸ್ ಸಿಬ್ಬಂದಿ ಬೆರಳಚ್ಚು ಹಾಗೂ ಶ್ವಾನದಳದ ಸಹಾಯದಿಂದ ಪರಿಶೀಲನೆ ನಡೆಸಿ ಕೊಲೆಗಾರರ ಹುಡುಕಾಟ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಘಟನೆ ವಿವರ:
ಮೈಕಲ್ ಜಾನ್ ಮಾರ್ಚ್ 20ರಂದು ರಾತ್ರಿ 9:30ಕ್ಕೆ ಮನೆಗೆ ಬಂದು ಮತ್ತೆ ಹೊರಗೆ ಹೋಗಿದ್ದಾರೆ. ಬಳಿಕ ಮನೆಯವರು ಜಾನ್ ವಾಪಸ್ ಬಾರದೆ ಇದ್ದ ಕಾರಣ, ಕುಟುಂಬಸ್ಥರು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದ ವೇಳೆ ಮೊಬೈಲ್ ಸ್ವೀಚ್ ಆಫ್ ಆಗಿರುವುದು ಕಂಡುಬಂದಿದೆ. ಮೈಕಲ್ ಜಾನ್ ಕೆಲವೊಮ್ಮೆ ತಡವಾಗಿ ಮನೆಗೆ ಬರುತ್ತಿದ್ದ ಕಾರಣ ಸುಮ್ಮನಾಗಿದ್ದಾರೆ. ಬೆಳಗ್ಗೆ ಮೈಕಲ್ ಜಾನ್ ಕೊಲೆಯಾದ ಸುದ್ದಿ ತಿಳಿದು ಬರಸಿಡಿಲು ಬಡಿದಂತಾಗಿದೆ. ಈ ಹಿಂದೆ ಕೇಬಲ್ ಅಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮೈಕಲ್ ಈಗ ಎಲೆಕ್ಟ್ರಿಷನ್ ಹಾಗೂ ಕಲಾವಿದನಾಗಿ ಕೆಲಸ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ.
ಕೊಲೆಯಾದ ಸ್ಥಳದಲ್ಲಿ ಮೈಕಲ್ ಜಾನ್ ಮೃತದೇಹ ಒಂದು ಕಡೆ ಬಿದ್ದಿದ್ದು, ಅವರು ಧರಿಸಿದ್ದ ಶೂ ಮತ್ತೊಂದು ದಿಕ್ಕಿಗೆ ಬಿದ್ದಿದೆ. ಜಾನ್ ಸ್ಕೂಟಿ ಬೇರೆಡೆ ನಿಲ್ಲಿಸಲಾಗಿದೆ. ಇದರಿಂದ ವ್ಯಕ್ತಿಯನ್ನು ಅಟ್ಟಾಡಿಸಿಕೊಂಡು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮದ್ಯವ್ಯಸನಿಗಳ ತಾಣವಾದ ಈ ಸ್ಥಳ ರಾತ್ರಿಯಾದರೆ ಜನರ ಓಡಾಟ ಇರುವುದಿಲ್ಲ ಎನ್ನಲಾಗಿದೆ.
ಈ ಹಿಂದೆ ಅನೇಕ ಬಾರಿ ಟಿಬಿ ಡ್ಯಾಂ ಪೊಲೀಸರು ದಾಳಿ ನಡೆಸಿ ಕ್ರಮ ಕೈಗೊಂಡಿದ್ದರೂ ಸಹ ಅದೇ ಸ್ಥಳದಲ್ಲಿ ಕೊಲೆಯಾಗಿರುವುದು ಪೊಲೀಸರು ಹಾಗೂ ಸಾರ್ವಜನಿಕರಿಗೆ ದಿಗ್ಭ್ರಮೆ ಉಂಟುಮಾಡಿದೆ.
ಮೈಕಲ್ ಜಾನ್ ಅವರಿಗೆ ಸುಮಾರು 14-15 ವರ್ಷದ ಇಬ್ಬರು ಹೆಣ್ಣುಮಕ್ಕಳು ಮತ್ತು ಹೆಂಡತಿ ಅವಲಂಬಿತರಾಗಿದ್ದರು. ವಿದ್ಯುತ್ ದೀಪದ ವ್ಯವಸ್ಥೆ, ರಾತ್ರಿಯ ವೇಳೆ ಪೋಲಿಸ್ ಬಿಟ್ ಹೇಚ್ಚಿಸಬೇಕು. ಹಾಗೂ ಹೊಸಪೇಟೆ ಭಾಗದ ಸರಣಿ ಕೊಲೆಗೆ ಕಡಿವಾಣ ಹಾಕುವುದರ ಮೂಲಕ ಜನರು ನಿರ್ಭೀತಿಯಿಂದ ಇರುಲು ಅವಕಾಶ ಮಾಡಿಕೊಡಬೇಕೆಂಬುದು ಸಾರ್ವಜನಿಕರ ಆಶಯವಾಗಿದೆ.
ವರದಿ: ಮುರುಳೀಧರ್ ನಾಡಿಗೇರ್, ಹೊಸಪೇಟೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post