ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕೊರೋನಾ ವ್ಯಾಪಕತೆ ಹಿನ್ನೆಲೆಯಲ್ಲಿ ಹಬ್ಬ ಹರಿದಿನಗಳಿಗೆ ಬ್ರೇಕ್ ಬೀಳುತ್ತಿರುವ ನಡುವೆ ಜಗದೋದ್ಧಾರಕನ ಜನ್ಮದಿನದ ಹಬ್ಬಕ್ಕಾಗಿ ಬನಶಂಕರಿ 3 ನೆಯ ಹಂತದ 100 ಅಡಿ ರಿಂಗ್ ರಸ್ತೆಯ ಹೊಸಕೆರೆಹಳ್ಳಿಯಲ್ಲಿ ಪ್ಯಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ಶ್ರೀಕೃಷ್ಣನ ವಿಗ್ರಹಕ್ಕೆ ಭರ್ಜರಿ ಬೇಡಿಕೆಯಿತ್ತು.
ಕೃಷ್ಣ ಜನ್ಮಾಷ್ಟಮಿಗೆಂದೇ ಶ್ರೀಕೃಷ್ಣನ ಅನೇಕ ಲೀಲೆಗಳನ್ನು ಹೇಳುವ ಗೊಂಬೆಗಳನ್ನು ತಯಾರು ಮಾಡಿ ಹಬ್ಬದ ವ್ಯಾಪಾರದ ನಿರೀಕ್ಷೆಯಲ್ಲಿ ಇದ್ದೇನೆ ಎಂದು ಕಲ್ಪ ನ್ಯೂಸ್ ಜೊತೆ ಮಾತಿಗೆ ಸಿಕ್ಕ ವಿಗ್ರಹ ವ್ಯಾಪಾರ ನಡೆಸುವ ರಾಜೇಶ್ ಹೇಳುತ್ತಾರೆ.
ವಿಶೇಷವೆಂದರೆ ರಾಜೇಶ್ ಅವರು ದೇವರುಗಳ ಗೊಂಬೆ ತಯಾರಿಸಿ ಮಾರುವುದೇ ಹೆಚ್ಚು. ಅವರ ಬಳಿ ರಾಮ, ಆಂಜನೇಯ, ಸಾಯಿ ಬಾಬಾ, ಗಣಪತಿ ಹೀಗೆ ಹಲವು ದೇವರ ಗೊಂಬೆಗಳಿವೆ.
ಜನ್ಮಾಷ್ಟಮಿ ಪ್ರಯುಕ್ತ ಶ್ರೀಕೃಷ್ಣ , ರಾಧೆ ಹಾಗೂ ಬೆಣ್ಣೆ ಕೃಷ್ಣ ಇವರ ಕಲೆಯಲ್ಲಿ ಅರಳಿ ನಿಂತಿದ್ದಾರೆ. ಹೆಚ್ಚಿನವು ಅಚ್ಚುಗಳ ಮೂಲಕ ರೂಪುಗೊಂಡ ಗೊಂಬೆಗಳು. ಒಂದು ಮೂರ್ತಿಯ ಬೆಲೆ ಅದರ ಗಾತ್ರದ ಮೇಲೆ ನಿರ್ಧಾರವಾಗುತ್ತದೆ. ನಮ್ಮಲ್ಲಿ ಮೂರ್ತಿ ಬೆಲೆ 150 ರಿಂದ ಆರಂಭವಾಗಿ 2500 ರೂ.ಗಳವರೆಗೆ ಕೃಷ್ಣನ ವಿಗ್ರಹವಿದೆ ಎನ್ನುತ್ತಾರೆ ರಾಜೇಶ್.
ಗಿರಿ ನಗರದ ನಿವಾಸಿ ವೀಣಾ ಅವರು ಶ್ರೀಕೃಷ್ಣನ ವಿಗ್ರಹವನ್ನು ತೆಗೆದುಕೊಂಡು ಇಂದಿನ ಜನಾಮಷ್ಟಮಿಗೆ ಸಿದ್ಧತೆ ನಡೆಸಿದ್ದು, ಅವರ ಮನೆಯಲ್ಲಿ ಇಂದು ಸಂಜೆ ಹಬ್ಬದ ಸಂಭ್ರಮಕ್ಕೆ ಸಿದ್ದತೆ ಮಾಡಿಕೊಂಡಿದ್ದೇವೆ ಎನ್ನುತ್ತಾರೆ.
ಜಗದೋದ್ಧಾರಕನ ಜನ್ಮದಿನದ ಪುರಾಣ ಹಿನ್ನೆಲೆ
ದಶಾವತಾರಗಳಲ್ಲಿ ಎಂಟನೆಯ ಅವತಾರವೇ ಶ್ರೀಕೃಷ್ಣ. ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿ ಕೃಷ್ಣ ಹುಟ್ಟಿದ ದಿನ. ಅಷ್ಟಮಿಯ ಮಧ್ಯರಾತ್ರಿ, ಕಾರಾಗೃಹದಲ್ಲಿ ಕೃಷ್ಣನ ಜನನವಾಯಿತೆಂದು ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ.
ಮಥುರಾ ಕೃಷ್ಣನ ಜನ್ಮಸ್ಥಳ. ಹುಟ್ಟಿದೊಡನೆ ತಂದೆ ವಸುದೇವ ಅವನನ್ನು ಸೋದರಮಾವನಾದ ಕಂಸನಿಗೆ ತಿಳಿಯದಂತೆ ಗೋಕುಲಕ್ಕೆ ಕರೆದೊಯ್ಯುತ್ತಾನೆ. ಅಲ್ಲಿ ನಂದರಾಜನ ಮನೆಯಲ್ಲಿ ಕೃಷ್ಣನನ್ನು ಬಿಟ್ಟು ಬರುತ್ತಾನೆ. ಈ ಕಾರ್ಯಕ್ಕೆ ಪ್ರಕೃತಿಯು ನೆರವಾಗುತ್ತದೆ. ದೇವಕಿ ಕೃಷ್ಣನಿಗೆ ಜನ್ಮ ನೀಡಿದ ತಾಯಿಯಾದರೆ, ಯಶೋಧೆ ಅವನನ್ನು ಸಾಕಿ ಬೆಳೆಸಿದ ತಾಯಿ.
ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಬಗ್ಗೆ ಒಂದು ಜಿಜ್ಞಾಸೆ
ಉಡುಪಿಯಲ್ಲಿ ಸೌರಮಾನದ ಪ್ರಕಾರ ಆಚರಣೆ ಮಾಡುತ್ತಾರೆ. ಉಳಿದ ಕಡೆಯಲ್ಲಿ ಚಾಂದ್ರಮಾನ ಆಚರಣೆ ಮಾಡುತ್ತಾರೆ. ಯಾವುದೇ ಆಚರಣೆ ಮಾಡಿದರೂ ಸೇರುವುದು ದೇವರಿಗೆ ಪೂಜೆ ಅಲ್ಲವೇ, ಒಳ್ಳೆಯದು ಎನ್ನುತ್ತಾರೆ ಬೆಂಗಳೂರಿನ ಗುರುದತ್ತ ಬಡಾವಣೆಯ ನಿವಾಸಿ ಕೇಶವ ಭಟ್ಟರು.
ಸಂಪ್ರದಾಯ-ಸಂಭ್ರಮ-ಅಲಂಕಾರ-ಆಚರಣೆ
ಕೃಷ್ಣ ಜನ್ಮಾಷ್ಟಮಿಯ ದಿನದಂದು, ಮನೆ ಮತ್ತು ದೇವಾಲಯಗಳನ್ನು ಸುಂದರವಾಗಿ ಅಲಂಕರಿಸಲಾಗುತ್ತದೆ. ಕೃಷ್ಣನ ಪುಟ್ಟ ಹೆಜ್ಜೆಗಳನ್ನು ರಂಗೋಲಿಯಲ್ಲಿ ಬರೆದು ಸಂಭ್ರಮಿಸಲಾಗುತ್ತದೆ.
ಕೃಷ್ಣನ ವಿಗ್ರಹಗಳನ್ನು ವಿಧವಿಧವಾಗಿ ಅಲಂಕರಿಸಿ, ಬಗೆಬಗೆಯ ತಿಂಡಿಗಳನ್ನು ಮಾಡಿ ಬಾಲ ಕೃಷ್ಣನನ್ನು ಪೂಜಿಸಲಾಗುತ್ತದೆ. ಕೆಲವು ಕಡೆ, ಮಧ್ಯರಾತ್ರಿಯವರೆಗೆ ಉಪವಾಸವಿದ್ದು, ಪೂಜೆ ಸಲ್ಲಿಸಿ, ಅರ್ಘ್ಯ ನೀಡಿ ನಂತರ ಆಹಾರ ಸ್ವೀಕರಿಸುವ ಸಂಪ್ರದಾಯವಿದೆ.
ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ
Get In Touch With Us info@kalpa.news Whatsapp: 9481252093
Discussion about this post