ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ರಾಗಿಣಿ, ಸಂಜನಾ ಮತ್ತಿತರರು ಮಾಡಿರಬಹುದಾದ ಅಪರಾಧಗಳನ್ನು ಎತ್ತಿ ತೋರಿಸುವ ಅತ್ಯುತ್ಸಾಹದಲ್ಲಿ ಸುದ್ದಿ ವಾಹಿನಿಗಳು ವಿವೇಕ ಕಳೆದುಕೊಂಡು ತಮಗೆ ತಾವೆ ಬೆತ್ತಲಾಗುತ್ತಿವೆ!
ಡ್ರಗ್ಸ್ ದಂಧೆಯಲ್ಲಿ ಆರೋಪಿತರಾಗಿ ಕಟಕಟೆಯಲ್ಲಿರುವ ಚಿತ್ರತಾರೆಯರಾದ ರಾಗಿಣಿ, ಸಂಜನಾ ಮುಂತಾದವರು ಕನ್ನಡ ಚಿತ್ರರಂಗದ HOT STARಗಳೇ ನಿಜ. ಕಲೆಯ ವ್ಯಾಪ್ತಿಯಲ್ಲಿ ಅವರಿಗಿರಬಹುದಾದ ಪ್ರತಿಭಾ ಸಾಮರ್ಥ್ಯವೂ ಕೂಡ. ಈ ನಟಿಯರು ಸದ್ಯಕ್ಕೆ ಕನ್ನಡದ ಸುದ್ದಿ ವಾಹಿನಿಗಳ ಪಾಲಿಗೆ ‘Salable HOT Material’ಗಳಂತೆ ಬಳಕೆಯಾಗಲ್ಪಡುತ್ತಿದ್ದಾರೆ. ನೀವು ಗಮನಿಸಿರಬಹುದು. ಡ್ರಗ್ಸ್ ದಂಧೆ ಪ್ರಕರಣದಲ್ಲಿ ರಾಗಿಣಿ, ಸಂಜನಾ ಅವರ ಹೆಸರುಗಳು ಕೇಳಿ ಬಂದಿದ್ದೇ ತಡ, ಕನ್ನಡ ನ್ಯೂಸ್ ಚಾನಲ್‌ಗಳಿಗೆ ಹಬ್ಬದೂಟವೇ ಸಿಕ್ಕಂತಾಗಿ ಉಂಡು ತೇಗಿ ತಾಂಬೂಲ ಜಗಿದು ಪಿಚ ಪಿಚ ಎಂದು ಬಿಡುವಿಲ್ಲದೆ ಉಗಿಯುತ್ತಾ ಕುಳಿತಿವೆ. ಹಾಗೆಂದ ಮಾತ್ರಕ್ಕೆ ಕೇವಲ ಸಂಜನಾ, ರಾಗಿಣಿ ವಿಚಾರದಲ್ಲಿ ಮಾತ್ರವೇ ಹೀಗೇನಾ ಅಂದರೆ ಅಲ್ಲ, ಹೆಣ್ಣು ಯಾವಾಗೆಲ್ಲಾ ಆರೋಪಕ್ಕೆ ಸಿಲುಕುತ್ತಾಳೆ ಹಾಗೆಲ್ಲಾ ನ್ಯೂಸ್ ಚಾನಲ್‌ಗಳ ನಾಲಿಗೆ ಮಸೆದು ಉದ್ದವಾಗುತ್ತದೆ.
ಹಾಗಾದರೆ ಕನ್ನಡ ಸುದ್ದಿ ವಾಹಿನಿಗಳು ಕೇವಲ ಹೆಣ್ಣನ್ನು ಮಾತ್ರವೇ ಈ ರೀತಿಯ ಲೇವಡಿ, ನಿಂದನೆಗಳಿಗೆ ಈಡು ಮಾಡುತ್ತವೆ ಎಂಬ ಆರೋಪವನ್ನು ಅಲ್ಲಗಳೆಯಲು ಗಂಡಿನ ಬಗೆಗೂ ಇದೇ ರೀತಿಯ ಧೋರಣೆ ಹೊಂದಿವೆ ಎಂಬುದನ್ನು ಯಾರಾದರೂ ಹೇಳಿದರೆ ಅದು ಒಪ್ಪಿಕೊಳ್ಳುವಂತಹುದ್ದೇ. ಆದರೆ ಸುದ್ದಿವಾಹಿನಿಗಳಾಗಲಿ, ಇನ್ಯಾವುದೇ ಮಾಧ್ಯಮಗಳಾಗಲಿ ಗಂಡಿನ ಬಗೆಗಿಂತ ಹೆಣ್ಣಿನ ಬಗೆಗಿನ ತೀವ್ರ ವಿರೋಧಿ ಧೋರಣೆ ಹೊಂದಿರುವುದನ್ನು ನಿರಾಕರಿಸಲಾಗದು.
ಧರ್ಮ, ಜಾತಿ, ಲಿಂಗದ ವಿಚಾರಗಳಲ್ಲಿ ಸುದ್ದಿ ವಾಹಿನಿಗಳು ವರ್ತಿಸಬಹುದಾದ ಸಂವೇದನಾಶೀಲ ಸೂಕ್ಷ್ಮತೆಗಳನ್ನು ಕಳೆದುಕೊಂಡಿರುತ್ತವೆ ಎನ್ನುವುದಕ್ಕೆ ಅನೇಕ ಉದಾಹರಣೆಗಳಿವೆ. ಸದ್ಯಕ್ಕೆ ಪ್ರಚಲಿತವಾಗಿರುವ ರಾಗಿಣಿ, ಸಂಜನಾ ಅವರನ್ನು ಸಾಂಕೇತಿಕವಾಗಿಟ್ಟುಕೊಂಡು ಸುದ್ದಿವಾಹಿನಿಗಳನ್ನು ಅವಲೋಕಿಸುವಾಗ ಸ್ತ್ರೀ ವಿರೋಧಿ ಧೋರಣೆಯೊಂದು ಸ್ವೇಚ್ಛಾಚಾರವಾಗಿ ವಿಜೃಂಭಿಸುತ್ತಿರುವುದು ಕಾಣಸಿಗುತ್ತದೆ.
ನಿಮ್ಮ ಮಗು ಬುದ್ದಿಶಾಲಿಯಾಗಿ ಹುಟ್ಟಬೇಕೆ? ಸದೃಢ ಮೈಕಟ್ಟು ಹೊಂದಿ ಕಾಂತಿಯುತವಾಗಬೇಕೆ? ಇಲ್ಲಿದೆ ಮಾರ್ಗ
ರಾಗಿಣಿ, ಸಂಜನಾ (ಈ ಪ್ರಕರಣದಲ್ಲಿ ಮುಂದೆ ಸಿಕ್ಕಿಬೀಳಬಹುದಾದ ಯಾವುದೇ ನಟಿಯರು, ಸೆಲೆಬ್ರಿಟಿಗಳಿರಬಹುದು) ಅವರ ಮೇಲಿನ ಆರೋಪಗಳಿಗೆ ಸದ್ಯಕ್ಕೆ ರಿಯಾಯಿತಿ ಕೊಡಲಾಗದು. ಆದರೆ ಅವರನ್ನು ಸಮಾಜಕ್ಕೆ ತೋರಿಸುವ ಉತ್ಸಾಹದಲ್ಲಿ ಕನ್ನಡ ಸುದ್ದಿವಾಹಿನಿಗಳು ಬಳಸುತ್ತಿರುವ ಭಾಷೆ, ನಡೆದುಕೊಳ್ಳುತ್ತಿರುವ ರೀತಿ ನಾಗರಿಕ ಸಮಾಜಕ್ಕೆ ಯಾವ ರೀತಿಯಲ್ಲಾದರೂ ಶೋಭೆ ತರುವಂತಹದ್ದೇ? ಪತ್ರಿಕೋದ್ಯಮದ ಧರ್ಮವೆಂದಾದರು ಅನಿಸುವುದೆ? ಮೊನ್ನೆ ಮೊನ್ನೆವರೆಗೂ ಬೆಳ್ಳಿ ತೆರೆಯ ಮೋಹಕ, ಮಾದಕ, ಪ್ರತಿಭಾನ್ವಿತ ಚೆಲುವೆಯರಾಗಿದ್ದ ರಾಗಿಣಿ, ಸಂಜನಾ ಈಗ ಕನ್ನಡ ಸುದ್ದಿ ವಾಹಿನಿಗಳ ಪರದೆಯ ಮೇಲೆ, ನಿರೂಪಕರ ಬಾಯಿಯಲ್ಲಿ ಏನೆಲ್ಲಾ ಆಗಿ ಹೋಗಿಬಿಟ್ಟರು ಎಂಬುದನ್ನು ಗಮನಿಸುವಾಗ ಹೆಣ್ಣಿನ ಅಸ್ಮಿತೆಯನ್ನೆ ಲೇವಡಿಯಲ್ಲಿ ಲಯಗೊಳಿಸಿದ್ದು ನಿಚ್ಚಳವಾಗಿದೆ.
ರಾಗಿಣಿ, ಸಂಜನಾ ಅವರು ಮಾಡಿರಬಹುದಾದ ಅಪರಾಧಗಳನ್ನು ಎತ್ತಿಹಿಡಿಯುವ ಅತ್ಯುತ್ಸಾಹದಲ್ಲಿ ಪತ್ರಕರ್ತ/ಸುದ್ದಿ ವಾಹಿನಿಗಳು ವಿವೇಕ ಕಳೆದುಕೊಂಡು ತಮಗೆ ತಾವೆ ಬೆತ್ತಲಾಗುತ್ತಿವೆ. ರಾಗಿಣಿ, ಸಂಜನಾ ಅವರು ಉಟ್ಟ ಬಟ್ಟೆ, ಉಂಡ ಅನ್ನ, ಮದುವೆ, ಯಾರೊಂದಿಗೂ ಇರಬಹುದಾದ ಸಲುಗೆ, ಸ್ನೇಹ, ಪ್ರೇಮದ ಕುರಿತ ವ್ಯಂಗ್ಯ, ಬಿರುನುಡಿಗಳ ಜೊತೆಗೆ ಅಶ್ಲೀಲವೇ ನಾಚುವಂತೆ ನಾಲಿಗೆಯಾಡಿಸುವ ನ್ಯೂಸ್ ಚಾನಲ್‌ನ ಬ್ರೇಕಿಂಗ್ ನ್ಯೂಸ್‌ಗಳ, ನಿರೂಪಕರೇ ಬಳಸಿದ ಪದಗಳನ್ನು ಮತ್ತೆ ಪ್ರಸ್ತಾಪಿಸಿದರೆ ಈ ಬರಹದ ಉದ್ದೇಶವೂ ನಿರರ್ಥಕ ಅಥವಾ ಅವಿವೇಕವನ್ನು ಹೊದ್ದುಬಿಡುತ್ತದೆ.
ಮುದ್ರಣ ಮಾಧ್ಯಮದಲ್ಲಿ ದಿನಪತ್ರಿಕೆಗಳ ಭಾಷೆಗೂ ಟ್ಯಾಬ್ಲಾಯ್ಡ್ ಪತ್ರಿಕೋದ್ಯಮದ ಭಾಷೆಗೂ ಸಾಕಷ್ಟು ಭಿನ್ನತೆ ಎಲ್ಲಾ ಕಾಲದಲ್ಲೂ ಮುಂದುವರೆದಿದೆ. ಸದ್ಯಕ್ಕೆ ಟ್ಯಾಬ್ಲಾಯ್ಡ್ ಪತ್ರಿಕೋದ್ಯಮ ತಳ ಹಿಡಿದಿರುವಾಗ ಇದರ ಜಾಗವನ್ನು ಇಂದು ಎಲೆಕ್ಟ್ರಾನಿಕ್ಸ್ ಮಾಧ್ಯಮಗಳು ಆಕ್ರಮಿಸಿಕೊಳ್ಳುತ್ತಿವೆಯೇನೊ ಎಂಬ ಅನುಮಾನ ಬರದೆ ಇರದು.
ಶಾಲೆಯಲ್ಲಿ ಕನ್ನಡದ ಯಾವುದೇ ಕವಿಯ ಪದ್ಯವನ್ನು ಹೇಳಲು ತಿಣುಕಾಡುವ ವಿದ್ಯಾರ್ಥಿಗಳು ಟಿವಿಯಲ್ಲಿ ಕಂಡುಕೇಳುವ ಸಿನಿಮಾವೊಂದರ ಹಾಡನ್ನೋ, ತಮ್ಮಿಷ್ಟದ ಹೀರೋ, ಹೀರೋಯಿನ್ ಡೈಲಾಗ್‌ಗಳನ್ನೋ. ಕ್ಷಣಮಾತ್ರದಲ್ಲಿ ಸರಾಗವಾಗಿ ಹಾಡುವುದು-ಆಡುವುದನ್ನು ನಾವು ಕಾಣುತ್ತೇವೆ. ಅದೇ ದೃಶ್ಯ ಮಾಧ್ಯಮದ ದೊಡ್ಡ ಸಾಧ್ಯತೆ. ಇಂತಹ ದೃಶ್ಯಮಾಧ್ಯಮದ ಭಾಗವಾಗಿರುವ ಸುದ್ದಿ ವಾಹಿನಿಗಳು ಸುದ್ದಿ ನಿರೂಪಣೆಯಲ್ಲಿ ಸಂವೇದನಾಶೀಲವಾಗಿ, ಸೃಜನಾತ್ಮಕವಾಗಿ ಒಳಗೊಳ್ಳಬಹುದಾದ ಮಾಹಿತಿ. ಬೋಧನೆ ಮತ್ತು ವಿಶ್ಲೇಷಣೆಯ ನೆಲೆಗಟ್ಟಿನಿಂದ ಅಂಚಿಗೆ ಜಾರಿ ನಿಂದನೆ, ಕೀಳು ರಂಜನೆ-ಪ್ರಚೋದನೆಯ ಪ್ರಪಾತಕ್ಕೆ ವೀಕ್ಷಕ ಸಮೂಹವನ್ನು ತಳ್ಳುತ್ತಿವೆ. ಜನ ಬಯಸಿದ್ದನ್ನು ತೋರಿಸುತ್ತೇವೆ, ಜನ ಮೆಚ್ಚಿದ್ದಾರೆ (ಟಿಆರ್‌ಪಿ) ಎನ್ನುವ ಸಮರ್ಥನಾಕೋರರು ತಮ್ಮೊಳಗಿನ ಅಸಲಿ ದೋಷವನ್ನು ಜನರ ಮೇಲಾಕಿ ಸಾಮಾಜಿಕ ಮತ್ತು ವೃತ್ತಿಪರ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವುದೇ ಆಗಿರುತ್ತದೆ.
ಸುದ್ದಿ ಮಾಧ್ಯಮಕ್ಕೂ ಒಂದು ಭಾಷೆ ಇದೆ. ಸಂವಹನಮುಖಿಯಾಗಿರುವ ಸುದ್ದಿ ವಾಹಿನಿಗಳು/ಮಾಧ್ಯಮಗಳು ಭಾಷೆಯನ್ನು ಸಭ್ಯವಾಗಿ ಬಳಸುವುದು ವೃತ್ತಿಧರ್ಮ ಕೂಡ. ಸಂವಹನ ಎಂಬುದು ಸಂಕೇತ (Encode)ವಾಗಿಯೂ, ನುಡಿ (language)ಯಲ್ಲಿಯೂ ಇರುತ್ತದೆ. ಇಂತಹ ಸಂದರ್ಭದಲ್ಲಿ ಸಂಕೇತಗಳು ಮತ್ತು ನುಡಿಗಳು ತನ್ನದೇ ಸಮಾಜಮುಖಿ ಸಂಸ್ಕೃತಿ ಮತ್ತು ಜ್ಞಾನವನ್ನು ಒಳಗೊಂಡಿರುತ್ತದೆ. ರಾಗಿಣಿ, ಸಂಜನಾರನ್ನು ಕೀಳು ರೋಚಕ ಪದಗಳಿಂದ ಬಿಂಬಿಸುವ ಸುದ್ದಿವಾಹಿನಿಗಳ ಆಂತರ್ಯದಲ್ಲಿ ಲಿಂಗತಾರತಮ್ಯ ಪ್ರತಿಪಾದಿಸುವ ನೀಚತನ ಅಡಗಿಲ್ಲ ಎಂದು ಹೇಳಲಾದೀತೆ?
ಹೆಣ್ಣನ್ನು ನಿಂದಿಸುವ, ಲೇವಡಿ ಮಾಡುವ ಮೂಲಕ ಗಂಡಾಹಂಕಾರ ವಿಜೃಂಭಿಸುತ್ತಿದೆ. ಗಂಡು-ಹೆಣ್ಣಿನ ನಡುವಿನ ಪ್ರಕ್ರಿಯೆಯಲ್ಲಿ ಗಂಡು ಸದಾ ವಿಜೃಂಭಿಸುತ್ತಾನೆ. ಹೆಣ್ಣು ಸದಾ ನರಳುತ್ತಾಳೆ. ‘ಸೂಳೆಗಾರಿಕೆ’, ‘ಹಾದರ’, ಇವೆಲ್ಲವೂ ಪ್ರಕ್ರಿಯೆಯ ರೂಪವಾಗಿದ್ದರೂ ಅದನ್ನು ಆರೋಪಿಸುವುದು ಮಾತ್ರ ಹೆಣ್ಣಿನ ಮೇಲೆಯೆ. ಇಲ್ಲಿ ಗಂಡು ಸದಾ ತನ್ನ ಪಾರಮ್ಯವನ್ನು ಕಾಪಾಡಿಕೊಳ್ಳಲೋ ಅಥವಾ ತನ್ನ ನೀಚತನವನ್ನು ಮರೆಮಾಚಲು ನಿಂದನೆಯ ಅಸ್ತ್ರ ಗಳನ್ನು ಆಕ್ರಮಣಕಾರಿಯಾಗಿ ಬಳಸುತ್ತಲೆ ಬಂದಿದ್ದಾನೆ. ಇದೇ ಸ್ವರೂಪವನ್ನೆ ಸುದ್ದಿ ವಾಹಿನಿಗಳಲ್ಲೂ ಕಾಣುವಂತಾಗಿರುವುದು. ಅವುಗಳಿಗೆ ಬಂದೊದಗಿರುವ ರೋಗ ಕೊರೋನಾ. ಇಲ್ಲಿ ನುಡಿ ಮತ್ತು ಸಂಕೇತವನ್ನು ಅಪಭ್ರಂಶಗೊಳಿಸಿದ ಕೀರ್ತಿಕಲಶ ಕನ್ನಡದ ಬಹುತೇಕ ಖಾಸಗಿ ಸುದ್ದಿ ವಾಹಿನಿಗಳಿಗೆ ಸಲ್ಲುತ್ತದೆ.
ಸುದ್ದಿ ವಾಹಿನಿಗಳ ಮುಖ್ಯ ಉದ್ದೇಶ ಸಮಾಜದೊಂದಿಗೆ ಅರ್ಥಪೂರ್ಣ ಸಂವಹನದ ನಂಟನ್ನು ಬಲಗೊಳಿಸಿಕೊಳ್ಳುವುದು. ಆ ಮೂಲಕ ವೈಚಾರಿಕ ಪ್ರಜ್ಞೆಯನ್ನು ಬಿತ್ತುವುದೇ ಆಗಿರುವಾಗ ಈ ಸಂವಹನಕ್ಕೆ ಬಳಸಲ್ಪಡುವ ಸಂಕೇತ ಮತ್ತು ನುಡಿಗಳು ಆರೋಗ್ಯಪೂರ್ಣವೂ, ಸಂವಾದಮಾರ್ಗವನ್ನೂ ಹೊಂದಿರತಕ್ಕದ್ದು. ಇದು ಸಮುದಾಯದ ಏಳಿಗೆಗೆ ಸುದ್ದಿ ಮಾಧ್ಯಮಗಳು ಕೊಡಬಹುದಾದ ದೊಡ್ಡ ಕೊಡುಗೆಯಾಗಬಲ್ಲದು. ಖ್ಯಾತ ಸಮಾಜ ವಿಜ್ಞಾನಿ ಜಾರ್ಜ್ ಗರ್ಬ್ನರ್ ಹೇಳುವಂತೆ ‘ಸಂವಹನವು ಸಂದೇಶಗಳಿಂದ ಆವೃತವಾದ ಸಂವಾದವಾಗಿದ್ದು, ವಿಶಿಷ್ಟವಾಗಿಯೇ ಮನುಷ್ಯನಿಗೆ ಸಂಬಂಧಿಸಿದ ಪ್ರಕ್ರಿಯೆಯಿಂದ ಸಂಸ್ಕೃತಿಯನ್ನು ನಿರ್ಮಾಣ ಮಾಡುವಂತಹ ವಿಶಿಷ್ಟ ಕ್ರಿಯೆ’.
ಈ ಹಿನ್ನೆಲೆಯಲ್ಲಿ ಕನ್ನಡದ ಸುದ್ದಿ ವಾಹಿನಿಗಳ ಕಡೆಗೆ ನೋಡಿದಾಗ ಕನ್ನಡ ಸುದ್ದಿವಾಹಿನಿಗಳು ಇಂತಹ ಸಂವಹನ ಸಂಸ್ಕೃತಿಯಿಂದ ದೂರ ಉಳಿದಿವೆ. ಅದರಲ್ಲೂ ಹೆಣ್ಣಿನ ವಿಷಯ ಬಂದಾಗ ಆಕೆಯನ್ನು ಮತ್ತದೆ ಪರಂಪರಾಗತವಾದ್ದ ಸಿದ್ಧಮಾದರಿಯ ನಿಂದನೆ, ಲೇವಡಿಗಳಿಂದ ವರ್ಣಾತೀತಗೊಳಿಸಿ ಗಂಡಾಳಿಕೆಯನ್ನು ಮೆರೆಯುತ್ತಿವೆ. ಇಲ್ಲಿ ಇನ್ನೊಂದು ಪ್ರಮುಖ ವಿಷಯವೆಂದರೆ ಹೆಣ್ಣು ಒಬ್ಬಳು ಸುದ್ದಿನಿರೂಪಕಿಯಾಗಿದ್ದರೂ ಆಕೆಯ ಬಾಯಿಯಲ್ಲೂ ಸ್ತ್ರೀ ನಿಂದನೆ ನಡೆಯುವುದು ವಿಪರ್ಯಾಸ.
ಸುದ್ದಿಮನೆಗಳಲ್ಲಿ ಸಂಪಾದಕ/ಆಡಳಿತ ಮಂಡಳಿಯ ಮರ್ಜಿಗೆ ತಕ್ಕಂತೆ ಅಲ್ಲಿ ಕೆಲಸ ಮಾಡುವ ಪತ್ರಕರ್ತನೊಬ್ಬ/ಳು ಪ್ರಜ್ಞಾಪೂರ್ವಕವಲ್ಲದೆಯೂ ಸಂವೇದನೆಯನ್ನು, ಸೂಕ್ಷ್ಮತೆಯನ್ನು ಕಳೆದುಕೊಂಡುಬಿಟ್ಟರೆ ಅದು ಅಕ್ಷಮ್ಯವೆ. ವ್ಯವಹಾರದ ಮಾದರಿಯಲ್ಲಿ ರೂಪುಗೊಳ್ಳುತ್ತಿರುವ ಸುದ್ದಿ ಮಾಧ್ಯಮಗಳು ಮನುಷ್ಯ ಸಂಬಂಧಿತ ಪ್ರತಿಯೊಂದನ್ನು ಲಾಭಕ್ಕೆ ಬಳಸಿಕೊಳ್ಳುವ ಹವಣಿಕೆಯಲ್ಲಿರುತ್ತವೆ. ಸೈದ್ಧಾಂತಿಕ, ವೈಚಾರಿಕ ಚೌಕಟ್ಟುಗಳಿಗೆ ಇಲ್ಲಿ ಬೆಲೆ ಇಲ್ಲ.
ನಿರ್ಭಯ, ಪ್ರಿಯಾಂಕರೆಡ್ಡಿ (ಬಡ, ನಿರ್ಗತಿಕ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ-ಹತ್ಯೆ ಪ್ರಕರಣಗಳು ಟಿಆರ್‌ಪಿ ವ್ಯಾಪ್ತಿಗೆ ಬರುವುದಿಲ್ಲದಿರುವುದರಿಂದ ಅವುಗಳು ಬ್ರೇಕಿಂಗ್ ನ್ಯೂಸ್, ಪ್ಯಾನಲ್ ಡಿಸ್ಕಷನ್‌ನಿಂದ ಹೊರಉಳಿದಿರುತ್ತವೆ!)ಯಂತಹ ಹೆಣ್ಣುಮಕ್ಕಳ ಅತ್ಯಾಚಾರ ಪ್ರಕರಣದಲ್ಲಿ ಸ್ತ್ರೀ ಸಂವೇದನೆಯ ಸೋಗು ಕೂಡ ವ್ಯಾಪಾರಿ ಮನಃಸ್ಥಿತಿಯಿಂದ ಕೂಡಿದ್ದರೆ ಡ್ರಗ್ಸ್ ದಂಧೆ ಪ್ರಕರಣದ ಆರೋಪಿಗಳಾದ ಸಂಜನಾ, ರಾಗಿಣಿ ಅವರ ಬದುಕಿನ ಅದ್ವಾನಗಳೂ ರಂಜನೆ, ಪ್ರಚೋದನೆಯ ಸರಕಾಗಿ ಲಾಭಕ್ಕೆ ತೂಗುತ್ತವೆ. ಇಲ್ಲಿ ಲಿಂಗ ಸಂವೇದನೆಯ ನಿರಾಕರಣೆಯೂ ಪ್ರಜ್ಞಾಪೂರ್ವಕವಾಗಿ ನಡೆದುಹೋಗಿಬಿಡುತ್ತದೆ.
“ಭಾಷೆ ಕೂಡ ಸಾಂಸ್ಕೃತಿಕ ಬಂಡವಾಳ. ಅದು ಒಂದು ಸಮುದಾಯದ ಸಂಪನ್ಮೂಲ ಕೂಡ” ಎಂಬುದನ್ನು ಖ್ಯಾತ ಭಾಷಾ ವಿದ್ವಾಂಸರಾದ ಪ್ರೊ.ಕೆ.ವಿ.ನಾರಾಯಣ ಅವರು ಪ್ರತಿಪಾದಿಸಿದ್ದಾರೆ. ಹೀಗಿರುವಾಗ ಸುದ್ದಿ ಮಾಧ್ಯಮಗಳು ಬಳಸುವ ಭಾಷೆ ಶುದ್ಧವಾಗಿಯೂ. ಸಮುದಾಯ ಸಂಪನ್ಮೂಲವಾಗಿಯೂ ಉಳಿಯಬೇಕು. ಇಂದು ಮುದ್ರಣ ಮಾಧ್ಯಮದಲ್ಲಿನ ಅನೇಕ ದಿನಪತ್ರಿಕೆಗಳು, ವಾರಪತ್ರಿಕೆಗಳು ಭಾಷಾ ಸಂಸ್ಕೃತಿಯನ್ನು ಉಳಿಸಿಕೊಂಡ ಪರಿಣಾಮವೇ ಜನರ ಕೈಯಲ್ಲಿವೆ.
‘ಲಂಕೇಶ್ ಪತ್ರಿಕೆ’ ಕನ್ನಡಭಾಷೆಯ ನುಡಿ ಮತ್ತು ಸಂಕೇತದ ಶ್ರೀಮಂತಿಕೆಯನ್ನು, ರಚನಾತ್ಮಕ ಟೀಕೆಯ ಸಾಧ್ಯತೆಯನ್ನು ಕಟ್ಟಿಕೊಟ್ಟ ಜನಮಾಧ್ಯಮವಾಗಿತ್ತು ಎಂಬುದನ್ನು ಮರೆಯಲಾಗದು. ದೃಶ್ಯ ಮಾಧ್ಯಮದ 24*7 ಸುದ್ದಿ ವಾಹಿನಿಗಳು ಏಕಕಾಲದಲ್ಲಿ ಭಾಷೆಯನ್ನು, ಸಂಸ್ಕೃತಿಯನ್ನು, ವೈಚಾರಿಕ ನೋಟವನ್ನು, ಸಾಮಾಜಿಕ ಹೊಣೆಗಾರಿಕೆಯನ್ನು ಬಿತ್ತುವ ಅತ್ಯಂತ ಮಹತ್ವದ ಅವಕಾಶವನ್ನು ಅರಿಯದೆ ಕೀಳು ಅಭಿರುಚಿಯ ರಂಜನೆ, ಪ್ರಚೋದನೆಯಿಂದ ನೋಡುಗ ಜನಸಮುದಾಯವನ್ನು ಸಂಸ್ಕೃತಿಹೀನರನ್ನಾಗಿ, ಮೂಢರನ್ನಾಗಿ, ಭಾಷಾ ಅಸಭ್ಯತೆಗೆ ಗುರಿ ಮಾಡುವ ಕೆಲಸದಲ್ಲಿ ನಿರತವಾಗಿವೆ.
*ಲೇಖಕರು ಅನುಭವೀ ಪತ್ರಕರ್ತರು; ‘ಶಿವಮೊಗ್ಗ ಟೆಲೆಕ್ಸ್’ ದಿನಪತ್ರಿಕೆ ಸಂಪಾದಕರು. ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸಂದಿದೆ. ಎರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.
(ಕೃಪೆ: ಚಿಂತನಾಶೀಲ ಸಮಾಜಮುಖಿ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post