ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನಮ್ಮ ಧರ್ಮದಲ್ಲಿ ನಡೆದು ಬಂದಿರುವಂತೆ ಜನಸಾಮಾನ್ಯರು ನಿಧನರಾದಾಗಲೂ, ಸನ್ಯಾಸಿ ಅಥವಾ ಯತಿಗಳು ದೇಹತ್ಯಾಗ ಮಾಡಿದಾಗಲೂ ನಡೆಸಲಾಗುವ ಅಂತಿಮ ವಿಧಿವಿಧಾನಗಳು ಸಂಪೂರ್ಣ ಭಿನ್ನವಾಗಿರುತ್ತವೆ. ಎರಡು ದಿನದ ಹಿಂದೆ ಹರಿಪಾದ ಸೇರಿದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರ ಅಂತಿಮ ವಿಧಿವಿಧಾನ ಹಾಗೂ ಬೃಂದಾವನದ ಹಿನ್ನೆಲೆಯಲ್ಲಿ ಯತಿಗಳಿಗೆ ಯಾವ ರೀತಿ ಅಂತಿಮ ವಿಧಿವಿಧಾನ ನಡೆಸಲಾಗುತ್ತದೆ ಎಂಬ ಕುರಿತಾಗಿ ಮಾಹಿತಿ ಲೇಖನ ಪ್ರಕಟಿಸಲು ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದ ಹಲವು ಓದುಗರು ವಿನಂತಿಸಿದ್ದರು. ಈ ಹಿನ್ನೆಲೆಯಲ್ಲಿ ಜ್ಯೋರ್ತಿವಿಜ್ಞಾನಂ ಖ್ಯಾತಿಯ ಪ್ರಕಾಶ್ ಅಮ್ಮಣ್ಣಾಯ ಅವರು ಈ ಕುರಿತ ವಿವರವಾದ ಮಾಹಿತಿಯನ್ನು ಈ ಲೇಖನದಲ್ಲಿ ಬರೆದಿದ್ದಾರೆ.
ಯಾವ ರಂಧ್ರದ ಮೂಲಕ ಪ್ರಾಣವು ಕಾಯವನ್ನು ಪ್ರವೇಶಿತೋ ಅದೇ ರಂದ್ರದ ಮೂಲಕ ನಿರ್ಗಮ ಆಗಬೇಕು. ಅದಕ್ಕಾಗಿ ಯತಿಗಳು ದೀಕ್ಷಾ ಸ್ವೀಕಾರ ಮಾಡಿದ ಮೇಲೆ ವೃತ ನಿಯಮಗಳ ಪಾಲನೆ ಮಾಡುತ್ತಾರೆ. ಜೀವನವಿಡೀ ಅನುಗ್ರಹಿಸುತ್ತಾ, ಪಂಧಾಮವನೈದಿದ ನಂತರವೂ ಊರ್ಧ್ವ ಲೋಕದಿಂದ ಅನುಗ್ರಹಿಸುವ ಶಕ್ತಿಗಾಗಿ ಇಂತಹ ವೃತ ನಿಯಮಗಳನ್ನು ಯತಿಗಳು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ.ಆ ಪ್ರಾಣ ನಿರ್ಗಮನಾ ರಂದ್ರವೇ ಬ್ರಹ್ಮ ರಂಧ್ರ. ಶಿರಸ್ಸಿನಲ್ಲಿ(ನೆತ್ತಿ ಎಂದು ಕರೆಯುತ್ತಾರೆ) ಈ ಮಾರ್ಗವಿರುತ್ತಾರೆ. ಅದಕ್ಕಾಗಿ ಯತಿಗಳನ್ನು ವೃಂದಾವನದೊಳಗಿರಿಸಿ ತೆಂಗಿನ ಕಾಯಿ ಒಡೆಯುತ್ತಾರೆ. ಯಾರೋ ಮತ್ಸರಿಗಳು ಅಜ್ಞಾನಿಗಳು ನಿಂದನೆ ಮಾಡಬಹುದು. ಐಷಾರಾಮಿ ಜೀವನ ನಡೆಸುವ ಯತಿಗಳಿಗೆ ಜನರ ಕಷ್ಟಗಳೇನು ಗೊತ್ತು ಎಂದು. ಈಗಾಗಲೇ ಪರಂಧಾಮವನೈದಿದ ಪೂಜ್ಯ ಪೇಜಾವರ ಶ್ರೀಗಳ ಬಗ್ಗೆ ಅಜ್ಞಾನಿಗಳು ನಿಂದನೆ ಮಾಡುವುದನ್ನು ನೋಡುತ್ತಿದ್ದೇವೆ.
ಯಾರಿಗಾಗಿ ಇಂತಹ ದೇಹದಂಡನೆಯ ವೃತಗಳು? ಲೋಕ ಕಲ್ಯಾಣಕ್ಕಾಗಿಯೇ ಅಂತಹ ಮಹಾ ಪುರುಷರು ಸರ್ವ ಸಂಘ ಪರಿತ್ಯಾಗಿಗಳಾಗುತ್ತಾರೆ. ಯತಿಗಳು ಯಾವುದೋ ಬೀದಿಯ ಕೊಳಚೆ ತೆಗೆದು ಉದ್ಧಾರ ಮಾಡಿದರೆ ಅದು ಆ ಕ್ಷಣಕ್ಕೆ ಮಾತ್ರ. ಯಾರೋ ಸೋತು ಹೋದಾಗ ಅವನನ್ನು ಮೇಲೆತ್ತಿದರೆ ಅದೂ ಆ ಕ್ಷಣಕ್ಕೆ ಮಾತ್ರ. ಕಟ್ಟಿಕೊಟ್ಟ ಬುತ್ತಿ ಉಂಡು ಮುಗಿಸುವ ತನಕ ಮಾತ್ರ ಎಂಬ ಗಾದೆಯಂತಾಗಬಾರದು. ಅದಕ್ಕಾಗಿ ಪ್ರಜೆಗಳಿಗೆ ಜಾಗೃತಿ ಮೂಡಿಸುವ ಕಾಯಕಕ್ಕೆ ಬೇಕಾಗಿಯೇ ನಮ್ಮಲ್ಲೇ ಅಂತಹ ಮನೋಭಾವನೆ ಇರುವಂತಹ ವ್ಯಕ್ತಿಯನ್ನು ಪೀಠದಲ್ಲಿ ಯತಿಗಳಾಗಿ ಕುಳ್ಳಿರಿಸುತ್ತೇವೆ.
ಆ ಯತಿಯು ಸರ್ವಸಂಗ ಪರಿತ್ಯಾಗ ಮಾಡಿ(ಸರ್ವಸಂಗ ಎಂದರೆ ಸ್ವಾರ್ಥಕ್ಕಾಗಿ, ಹೆಸರಿಗಾಗಿ ಸೇವೆ ಮಾಡದಿರುವುದು. ದೇವತೋಪಾಸನೆ ಮಾಡುತ್ತಾ ಪ್ರಜಾ ಸೇವೆ ಮಾಡುವಂತವರು ಯತಿಗಳಾಗುತ್ತಾರೆ) ಯತಿಗಳಾಗುತ್ತಾರೆ. ಇನ್ನು ಅವರ ಆಹಾರ ನಿಯಮವೂ ಬಹಳ ಕಠಿಣ. ಯಾಕೆಂದರೆ ದೇಹಕ್ಕೆ ಬೇಕಾಗುವ ಪೌಷ್ಟಿಕ ಆಹಾರವನ್ನು, ದೇವರ ಪ್ರೀತ್ಯರ್ಥ, ದೇವರಿಗೆ ಸಮರ್ಪಿಸಿ ಸೇವಿಸಬೇಕು. ಬೆಳಿಗೆ ಉಪವಾಸವಿದ್ದು,ಮದ್ಯಾಹ್ನ ದೇವರ ಪೂಜೆಯ ಬಳಿಕ ಯತಿಗಳು ಆಹಾರ ಸೇವಿಸುವುದನ್ನು ಯತಿ ಭಿಕ್ಷೆ ಎನ್ನುತ್ತಾರೆ. ರಾತ್ರಿಗೆ ಹಾಲು, ಫಲಗಳನ್ನು ಮಾತ್ರ ಸೇವಿಸುತ್ತಾರೆ. ಪಕ್ಷಗಳ ಏಕಾದಶಿ ಉಪವಾಸ,ಪರ್ವಾದಿ ದಿನಗಳಿಗೆ ಸಂಬಂಧಿಸಿದಂತೆ ಆಹಾರ ನಿಯಮ, ಜತೆಗೆ ಪಾಠ ಪ್ರವಚನಾದಿಗಳು, ಸಾರ್ವಜನಿಕ ಭೇಟಿ ಇತ್ಯಾದಿಗಳಿವೆ.
ಚಾತುರ್ಮಾಸ ವೃತವು ಅತ್ಯಂತ ವಿಶೇಷ ಕಾಲ. ಇದರ ಜತೆ ಲೋಕ ಸಂಚಾರ ಮಾಡಬೇಕು. ಹಾಗಾಗಿ ಇವರನ್ನು ಪಾರಿವ್ರ್ಯಾಜಕರು ಎಂದರು. ನಿರಂತರ ಸಂಚಾರ ಮಾಡುವ ಈ ಕಾಯಕಕ್ಕೆ ಹೀಗೆ ಕರೆದರು.
ಪೇಜಾವರ ಶ್ರೀಗಳು ತಮ್ಮ ಪ್ರವಚನಲ್ಲಿ,’ಯತಿಗಳು ನೀರಲ್ಲಿರುವ ಮತ್ಸ್ಯಗಳಂತಿರಬೇಕು. ಅದರ ಕೆಲಸ ಜಲ ಶುದ್ಧಿ ಮಾಡುವಂತದ್ದು ಮಾತ್ರ. ಅಲ್ಲಿ ಶುದ್ಧೀಕರಣ ಮಾಡುವಾಗ ನೀರು ಕುಡಿದುಕೊಂಡರೆ ಅದು ಅದರ ದೇಹ ಪೋಷಣೆಗೇ ವಿನಃ ಅದು ಸಂಪತ್ತಿನ ಕ್ರೋಢೀಕರಣಕ್ಕಲ್ಲ. ಆಗ ಪ್ರಜೆಗಳು ಕಾಳು ಹಾಕಿದರೆ ನಾರಾಯಣಾ ಎನ್ನುತ್ತಾ ಸ್ವೀಕರಿಸಬೇಕು’ ಎಂಬ ಜಾಗೃತಿ ಸಂದೇಶ ನೀಡುತ್ತಿದ್ದರು. ಯಾರೋ ಕೆಲವು ಸನ್ಯಾಸಿಗಳೆಂದು ಹೇಳಿಕೊಳ್ಳುವ ಮಂದಿ ತಪ್ಪು ಮಾಡಿದರೆ ಅದು ಇಡೀ ಸನ್ಯಾಸ ಸ್ವೀಕಾರ ಮಾಡಿದವರಿಗೆಲ್ಲ ಪರಿಣಾಮ ಆಗಲಾರದು. ಹೇಳುವವರ ಬಾಯಿ ಹೊಲಸಾಗಿರುವುದನ್ನು ಸಾತ್ವಿಕವಾಗಿ ತಿದ್ದಲು ಪ್ರಯತ್ನಿಸುವವರೇ ನಿಜವಾದ ಯತಿಗಳಾಗುತ್ತಾರೆ. ಅಂತಹ ಮಹಾಯತಿಗಳು ಪೇಜಾವರ ಶ್ರೀಗಳು.
ಯತಿಗಳಲ್ಲೂ ಬೇರೆ ಬೇರೆ ಸಂಪ್ರದಾಯ ವಿಧಾನಗಳಿವೆ. ಮಾಧ್ವ ದ್ವೈತ ಸಂಪ್ರದಾಯದಲ್ಲಿ, ಬ್ರಹ್ಮಚಾರಿ ಬಾಲ ವಟುವಿಗೆ ಸನ್ಯಾಸ ದೀಕ್ಷೆ ಕೊಡುತ್ತಾರೆ. ಸನ್ಯಾಸ ಎಂದರೆ ಕೇವಲ ಕಾವಿ ಹಾಕಿಕೊಳ್ಳುವಲ್ಲಿಗೇ ಸೀಮಿತವಾಗಲಾರದು. ಸತ್‌ನ್ಯಾಸ ಅಂದರೆ ಒಳ್ಳೆಯ ಸತ್ಕರ್ಮಾಸಕ್ತ ಜೀವನ ಎಂದರ್ಥ.
ನಾವೀಗ ಯತಿಗಳ ಅಂತ್ಯದ ವಿಚಾರ ನೋಡೋಣ. ಉಡುಪಿ ಕೃಷ್ಣ ಮಠದ ಸಂಪ್ರದಾಯದಲ್ಲಿ ಯತಿಗಳು ಹರಿಪಾದ ಸೇರಿದ ನಂತರ ಅವರನ್ನು ವೇಣುಪಾತ್ರೆಯೊಳಗಿಡುತ್ತಾರೆ. ಅಂದರೆ ಬಿದಿರ ಬುಟ್ಟಿಯಲ್ಲಿ ಪದ್ಮಾಸನದಲ್ಲಿ ಕೂರಿಸುತ್ತಾರೆ. ಇದಾದ ನಂತರ ಯತಿಗಳನ್ನು ಮಧ್ವ ಸರೋವರದಲ್ಲಿ ಅಭಿಷೇಕ ಮೂಲಕ ಸ್ನಾನ, ತದನಂತರ ಕೃಷ್ಣ ದೇವರ ದರ್ಶನ, ಆ ಯತಿಗಳ ಕೈಯಿಂದ ದೇವರಿಗೆ ಆರತಿ ಬೆಳಗಿಸುತ್ತಾರೆ. ಇದೆಲ್ಲ ಹೊರ ಆವರಣದಲ್ಲಿ ನಡೆಯುತ್ತದೆ. ನಂತರ ಕಿರಿಯ ಯತಿಗಳು ಅದೇ ಆರತಿಯನ್ನು ದೈವಾಧೀನ ಕಾಯದ ಯತಿಗಳಿಗೆ ಆರತಿ ಮಾಡುತ್ತಾರೆ.
ಇಲ್ಲಿಂದ ವೃಂದಾವನ ಪ್ರವೇಶ ಕಾರ್ಯ. ಪದ್ಮಾಸನ ಹಾಕಿರುವ ಯತಿಗಳ ಕಾಯವನ್ನು ಭೂಮಿಯಡಿಗೆ(ಹೊಂಡ) ಇಳಿಸುತ್ತಾರೆ. ಈ ಕಾರ್ಯವನ್ನು ಮಠದ ಶಿಷ್ಯವರ್ಗವೇ ಮಾಡುತ್ತದೆ. ಆ ಕಾಯಕ್ಕೆ ಪಂಚ ದ್ರವ್ಯಗಳನ್ನು ಹಾಕಬೇಕು. ಅಂದರೆ ಹತ್ತಿಯಿಂದ ಕಾಯವನ್ನು ಪೂರ್ಣ ಮುಚ್ಚಲಾಗುತ್ತದೆ. ನಂತರ ಉಪ್ಪು ಸುರಿಯುತ್ತಾರೆ. ಇದರ ಜತೆ ಸಾಸಿವೆ, ಪಚ್ಚೆ ಕರ್ಪೂರ, ಕರಿಮೆಣಸನ್ನು ಸುರಿಯುತ್ತಾರೆ. ಇದಕ್ಕೆ ಮೊದಲು ಯತಿಗಳು ತಮ್ಮ ಜೀವಿತಾವಧಿಯಲ್ಲಿ ಮಾಡುವ ಕೈ ದೇವತಾರ್ಚನೆಯ ಸಾಲಿಗ್ರಾಮ ಮತ್ತು ಪೂಜೆಗೆ ಬೇಕಾಗುವ ಸಾಹಿತ್ಯ ಪರಿಕರಗಳನ್ನು ಯತಿಗಳ ಇದಿರು ಇಡಲಾಗುತ್ತದೆ.
ಇದಾದ ನಂತರ ಪಂಚ ದ್ರವ್ಯಗಳನ್ನು ಹಾಕುತ್ತಾರೆ. ನಂತರ ಗಂಗೇ, ಯಮುನೇ, ಗೋದಾವರಿ, ಸರಸ್ವತೀ, ನರ್ಮದಾ, ಸಿಂಧು ಕಾವೇರಿ ತೀರ್ಥವನ್ನು ಅಭಿಷೇಕ ಮಾಡಿ ಮೃಣ್ಮಯ ಮಾಡುತ್ತಾರೆ. ಕೊನೆಗೆ ಶಿಲೆಯಿಂದ ವೃಂದಾವನ ನಿರ್ಮಿಸುತ್ತಾರೆ. ಈಗ Ready Made ವೃಂದಾವನ ಸಿಗುವುದರಿಂದ ಕೆಲಸ ಸುಲಭವಾಗುತ್ತದೆ. ಈ ಕಾರ್ಯಗಳೆಲ್ಲ ಮುಗಿದ ಬಳಿಕ, ಪೂಜಾದಿಗಳೆಲ್ಲ ಮುಗಿದ ಬಳಿಕ, ನಲವತ್ತೆಂಟನೆಯ ದಿನದಂದು ಪ್ರಥಮ ಆರಾಧನೆ ನಡೆಯುತ್ತದೆ. ಮುಂದೆ ಪ್ರತೀ ವರ್ಷವೂ ಆ ಯತಿಗಳ ಆರಾಧನೆ ನಡೆಯಬೇಕು. ಕಾಯ ಬಿಟ್ಟು ಹೋದರೂ ಆ ವೃಂದಾವನದ ದರ್ಶನದಿಂದ ಯತಿಗಳ ಅನುಗ್ರಹವಾಗುತ್ತದೆ. ಇದು ನಂಬಿಕೆ ಎಂದಲ್ಲ. ಇದು ಋಷಿ ಮುನಿಗಳು ತಿಳಿಸಿದ ನೈಜ ತತ್ವ. ನಾವು ಆ ತತ್ವವನ್ನು ನಂಬುವುದಷ್ಟೆ. ಸಪ್ತ ಲೋಕಗಳಲ್ಲಿ ವಿಷ್ಣು ಲೋಕದಿಂದ ಕೆಳ ಸ್ಥರದಲ್ಲಿರುವುದೇ ಜನಾ ಲೋಕ. ಅಲ್ಲಿ ಇರುವವರೇ ಪ್ರಜ್ಞರಾದ ಋಷಿ ಮುನಿಗಳು. ಅಲ್ಲಿಂದಲೇ ಲೋಕ ಕಲ್ಯಾಣಕ್ಕಾಗಿ ಯತಿಗಳನ್ನು ಭೂಮಿಗಿಳಿಸಿ ಭಗವಂತನು ಲೋಕೋದ್ಧಾರ ಮಾಡುತ್ತಾನೆ. ಇದು ಈ ಮರ್ತ್ಯ ಲೋಕದ ನಿಯಮ.
ಇದನ್ನೆಲ್ಲ ಯಾರು ಭಕ್ತಿ ಶ್ರದ್ಧೆಯಿಂದ ನೋಡುತ್ತಾರೋ, ನಂಬುತ್ತಾರೋ ಅವರಿಗೆ ಜೀವನದಲ್ಲಿ ಸಾರ್ಥಕತೆ ಸಿಗುತ್ತಾರೆ ನಂಬದವರ ಒಂದು ವರ್ಗವೂ ಜತೆಗಿರುತ್ತದೆ. ಅಂತವರಿಗೆ ,’ಸಂಶಯಾತ್ಮಾ ವಿನಶ್ಯತಿ’ ಎಂದು ಪ್ರಾಜ್ಞರು ಹೇಳಿರುತ್ತಾರೆ. ಯಾರೋ ಹೇಳಿದರು ಎಂದು ವಿದ್ಯಾವಂತರು ನಂಬಿದರೆ ಅದು ಮೂಢ ನಂಬಿಕೆ. ತಾತ್ವಿಕತೆಯನ್ನು ಅರಿತು ನಂಬಿದವರಿಗೆ ಅಥವಾ ವಿದ್ಯೆ ಇಲ್ಲದವನು (ಅರಿತುಕೊಳ್ಳಲು ಅಸಮರ್ಥ ಆಗಿದ್ದ ದೀನನು)ಭಕ್ತಿ ಶ್ರದ್ಧೆಯಿಂದ ಕೈ ಮುಗಿದರೆ ಅವನೂ ವಿಷ್ಣು ಸಾಯುಜ್ಯ ಪಡೆಯಲು ಅರ್ಹನಾಗುತ್ತಾನೆ.
Get in Touch With Us info@kalpa.news Whatsapp: 9481252093
Discussion about this post