ಯುಗಾದಿ ಅಥವಾ ಉಗಾದಿ ಎಂದರೆ ಸೃಷ್ಟಿಯ ಆರಂಭ ಅಥವಾ ಹೊಸ ಸಂವತ್ಸರ ಎಂದು ಹಿರಿಯರು ಹೇಳುತ್ತಾರೆ. ಸೃಷ್ಠಿಕರ್ತನಾದ ಬ್ರಹ್ಮದೇವನು ಈ ದಿನದಿಂದಲೇ ತನ್ನ ಸೃಷ್ಠಿ ಕ್ರಿಯೆ ಆರಂಭಿಸಿದ್ದು ಎನ್ನುವ ಅಂಶವೂ ಯುಗಾದಿಯ ಆಚರಣೆಯೊಂದಿಗೆ ಸೇರಿಕೊಂಡಿದೆ.
ಅಭ್ಯಂಜನ ಮಾಡಿ, ಹೊಸಬಟ್ಟೆ ತೊಟ್ಟು, ಬೇವು ಬೆಲ್ಲ ತಿಂದು, ಹೋಳಿಗೆ ಊಟ ಮಾಡಿ ಸಂಭ್ರಮಿಸುವ ವರ್ಷಾವಧಿ ಹಬ್ಬವೇ ಯುಗಾದಿ… ಈ ಹಬ್ಬವನ್ನು ಹೆಚ್ಚಾಗಿ ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಆಚರಿಸುವರು. ಮಹಾರಾಷ್ಟ್ರದಲ್ಲಿ ಗುಡಿಪಡ್ವವಾದರೆ ಆಂಧ್ರ ಮತ್ತು ಕರ್ನಾಟಕಗಳಲ್ಲಿ ಇದು ಯುಗಾದಿ.
ಹಬ್ಬದ ಆಚರಣೆಯ ವಿಧಾನ
ಯುಗಾದಿ ಹಬ್ಬದಂದು ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿಯನ್ನಿಡುವರು. ಮುಂಜಾನೆ ಬೇಗನೆದ್ದು ಹರಳೆಣ್ಣೆ ಅಥವಾ ಕೊಬ್ಬರಿ ಎಣ್ಣೆಯನ್ನು ಮೈ ಕೈಗೆಲ್ಲ ಹಚ್ಚಿ ಕೆಲವು ಸಮಯದ ನಂತರ ಸೀಗೇಕಾಯಿಯಿಂದ ತಲೆಯನ್ನು ತೊಳೆದುಕೊಳ್ಳುವುದು ರೂಢಿ. ಮಾವಿನ ಬೇವಿನ ತಳಿರು ತೋರಣವನ್ನು ಮನೆಗಳ ಮುಂಬಾಗಿಲಿಗೆ ಮತ್ತು ದೇವರ ಮನೆಯ ಬಾಗಿಲಿಗೆ ತಳಿರು ತೋರಣವಾಗಿ ಕಟ್ಟುವರು. ಪುಣ್ಯಾಹ ಮಂತ್ರಗಳನ್ನು ಉಚ್ಚರಿಸಿ ಮಾವಿನೆಲೆಯಿಂದ ಮನೆಯ ಎಲ್ಲ ಕಡೆ ಕಳಶದ ನೀರನ್ನು ಸಿಂಪಡಿಸುವರು. ನಂತರ ಹೊಸ ಬಟ್ಟೆ ಧರಿಸಿ ದೇವಾಲಯಗಳಿಗೆ ಹೋಗಿ ಬರುತ್ತಾರೆ, ಗ್ರಾಮೀಣ ಪ್ರದೇಶಗಳಲ್ಲಿ ಪಂಚಾಂಗವನ್ನು ಮನೆಯಲ್ಲಿ ಅಥವ ಪಂಚಾಯಿತಿ ಕಟ್ಟೆಯಲ್ಲಿ ಹಿರಿಯರು ಓದುವರು ಮತ್ತೆಲ್ಲರೂ ಅದನ್ನು ಕೇಳುವರು.
ವಿಶೇಷ ತಿನಿಸು
ಒಬ್ಬಟ್ಟು ಅಥವಾ ಹೋಳಿಗೆ ಬೇಳೆಯ ಹೂರಣದಲ್ಲಿ ಮಾಡುವರು. ಸಂಜೆಯ ವೇಳೆಯಲ್ಲಿ ಗುರು ಹಿರಿಯರ ಮನೆಗಳಿಗೆ ಹೋಗಿ ಅವರಿಗೆ ಕಾಲುಮುಟ್ಟಿ ನಮಸ್ಕರಿಸಿ ಅವರ ಆಶೀರ್ವಾದ ಪಡೆವರು.
ಬೇವು-ಬೆಲ್ಲ= ಸೂರ್ಯನ ತಾಪ ಹೆಚ್ಚಿರುವ ಈ ಕಾಲದಲ್ಲಿ ಬೇವು ಬೆಲ್ಲ ತಿನ್ನುವುದರಿಂದ ಶರೀರ ವಜ್ರಕಾಯವಾಗುತ್ತದೆ ಎಂಬುದು ನಂಬಿಕೆ.
ಒಬ್ಬಟ್ಟು, ಮಾವಿನ ಕಾಯಿ ಚಿತ್ರಾನ್ನ ಮಾಡಿ ಮನೆ ಮಂದಿಯೆಲ್ಲಾ ಒಟ್ಟಿಗೆ ಕುಳಿತು ಊಟ ಮಾಡುತ್ತಾರೆ ಯುಗಾದಿಯ ದಿನ ಸುಖದ ಸಂಕೇತವಾದ ಬೆಲ್ಲವನ್ನೂ ಮತ್ತು ಕಷ್ಟದ ಸಂಕೇತವಾದ ಬೇವನ್ನೂ ಸಮನಾಗಿ ಸ್ವೀಕರಿಸುವರು.
ಬೇವು – ಬೆಲ್ಲದ ಮಿಶ್ರಣವನ್ನು ತಿನ್ನುವಾಗ ಹೇಳುವ ಶ್ಲೋಕ
ಶತಾಯು: ವಜ್ರದೇಹಾಯ ಸರ್ವಸಂಪತ್ಕರಾಯಚ
ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ॥
ಕನ್ನಡದಲ್ಲಿ ಇದರರ್ಥ ಹೀಗಿದೆ: ನೂರು ವರುಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಅರಿಷ್ಟ ನಿವಾರಣೆಗೆ ಬೇವು ಬೆಲ್ಲ ಸೇವನೆ ಮಾಡುತ್ತೇನೆ.
ಸಮಸ್ತ ಹಿಂದೂ ಬಾಂಧವರಿಗೆ ಹೊಸವರ್ಷ ಯುಗಾದಿ ಹಬ್ಬದ ಹಾರ್ಥಿಕ ಶುಭಾಶಯಗಳು. ನಿಮ್ಮ ಬಾಳಲ್ಲಿ ಬೇವು ಕಡಿಮೆ ಇರಲಿ ಬೆಲ್ಲವೆ ಹೆಚ್ಚಾಗಿರಲಿ ಎಂದು ತಾಯಿ ಚೌಡೇಶ್ವರಿ ದೇವಿಯಲ್ಲಿ ಪ್ರಾರ್ಥಿಸುತ್ತೇನೆ.
ಅಭಿಷೇಕ್ ನಾಯಕ್ ಮಲೆನಾಡು
ಚಿತ್ರಕೃಪೆ/ವೀಡಿಯೋ/ಕನ್ನಡ ಚಿತ್ರರಂಗದ ಬಾಲನಟಿ ಮಿನುಗು ತಾರೆ ಆನ್ಯಶೆಟ್ಟಿ
Discussion about this post