ಶಿವಮೊಗ್ಗ: ತಂಬಾಕಿನಲ್ಲಿರುವ ಶೇ.70ರಷ್ಟು ರಾಸಾಯನಿಕಗಳು ಮಾರಕ ಕ್ಯಾನ್ಸರ್’ಗೆ ರಹದಾರಿಯಾಗಿದ್ದು, ಇದು ಧೂಮಪಾನಕ್ಕಿಂತ ಹೆಚ್ಚು ಅಪಾಯಕಾರಿ ಎಂದು ರಾಜಸ್ಥಾನ ಕೋಟದ ದಾಸ್ವಾನಿ ಡೆಂಟಲ್ ಕಾಲೇಜು ಹಾಗೂ ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ. ಸಚಿನ್ ಸಿನ್ಹಾ ಆತಂಕ ವ್ಯಕ್ತಪಡಿಸಿದರು.
ಸುಬ್ಬಯ್ಯ ದಂತ ವೈದ್ಯಕೀಯ ಮಹಾವಿದ್ಯಾಲಯದ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ರಾಷ್ಟ್ರೀಯ ದಂತ ವೈದ್ಯರ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ನಿರಂತರ ದಂತ ಸಂರಕ್ಷಣಾ ಶಿಕ್ಷಣ ಕಾರ್ಯಕ್ರಮದಲ್ಲಿ ಮಾದಕ ವಸ್ತುಗಳ ಬಳಕೆ ಮತ್ತು ಅಸ್ವಸ್ಥತೆ ಹಾಗೂ ನಿಯಂತ್ರಣೆಯ ಕುರಿತು ಅವರು ಉಪನ್ಯಾಸ ನೀಡಿದರು.
ತಂಬಾಕಿನಲ್ಲಿ ಸರಿಸುಮಾರು 7 ಸಾವಿರದಷ್ಟು ರಾಸಾಯನಿಕ ಅಂಶಗಳಿವೆ. ಅದರಲ್ಲಿ 70 ರಾಸಾಯನಿಕಗಳು ಕ್ಯಾನ್ಸರ್ ಕಾರಕವಾಗಿವೆ. ಆದಷ್ಟು ಇವೆಲ್ಲಾ ಮಾರಕ ವಸ್ತುಗಳಿಂದ ನಾವು ದೂರವಿದ್ದಷ್ಟು ಹೆಚ್ಚು ಆರೋಗ್ಯವಾಗಿರಲು ಸಾಧ್ಯವಾಗುತ್ತದೆ ಎಂದರು.
ತಂಬಾಕು ಸೇವನೆ ಹಾಗೂ ಧೂಮಪಾನದಿಂದ ಪ್ರತಿನಿತ್ಯ ಭಾರತದಲ್ಲಿ 2 ಸಾವಿರಕ್ಕೂ ಹೆಚ್ಚುಮಂದಿ ಸಾವನ್ನಪ್ಪುತ್ತಿದ್ದಾರೆ. ಅತಿಯಾದ ತಂಬಾಕು ಸೇವನೆ, ಧೂಮಪಾನದಿಂದ ಮನುಷ್ಯ ಇಂದು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾನೆ. ಧೂಮಪಾನದಿಂದ ಶೇ. 90 ರಷ್ಟು ಜನರು ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಧೂಮಪಾನ ಮಾಡುವ ವ್ಯಕ್ತಿ, ತನ್ನ ಆರೋಗ್ಯವನ್ನು ಹಾಳುಮಾಡಿಕೊಳ್ಳುವುದರ ಜೊತೆಗೆ ತನ್ನ ಸುತ್ತಲು ಇರುವ ಸಮಾಜವನ್ನು ಮತ್ತು ಧೂಮಪಾನ ಮಾಡದ ವ್ಯಕ್ತಿಗಳನ್ನೂ ಅನಾರೋಗ್ಯಕ್ಕೆ ತುತ್ತಾಗುವಂತೆ ಮಾಡುತ್ತಿದ್ದಾನೆ ಎಂದು ಬೇಸರ ವ್ಯಕ್ತಪಡಿಸಿದರು.
ಧೂಮಪಾನದಿಂದ ಹೊರ ಬರುವ ಕಾರ್ಬನ್ ಮೊನಾಕ್ಸೈಡ್ ಎಂಬ ವಿಷಕಾರಿ ಅನಿಲ ನಮ್ಮ ದೇಹದ ಅಂಗಗಳನ್ನು ಹಂತ-ಹಂತವಾಗಿ ನಾಶಮಾಡುತ್ತಾಬರುತ್ತದೆ. ಶ್ವಾಸಕೋಶ, ಹೃದಯ, ಮೂತ್ರಪಿಂಡ, ಮಿದುಳು ಹೀಗೆ ದೇಹದ ಎಲ್ಲಾ ಅಂಗಗಳು ಹಾಳಾಗಿ ಕೊನೆಗೆ ಒಂದು ದಿನ ರೋಗಿಯು ಸಾವನ್ನಪ್ಪುವಂತೆ ಮಾಡುತ್ತದೆ ಎಂದರು.
ಕಾರ್ಬನ್ ಮೊನಾಕ್ಸೈಡ್ ಡಿಟೆಕ್ಟರ್‌ನ ಪ್ರಯೋಗಿಕ ಮಾದರಿಯನ್ನು ವಿದ್ಯಾರ್ಥಿಗಳಿಗೆ ತೋರಿಸಲಾಯಿತು.
ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ನಿರ್ದೇಶಕ ಡಾ. ಎಸ್. ನಾಗೇಂದ್ರ ಮಾತನಾಡಿ, ಯುವಜನತೆ ಹೆಚ್ಚಾಗಿ ಇಂದು ಮಾದಕ ವ್ಯಸನ ಹಾಗೂ ದಷ್ಚಟಗಳಿಗೆ ಬಲಿಯಾಗುತ್ತಿರುವುದು ಆತಂಕಕಾರಿ ಸಂಗತಿ. ನಮ್ಮ ದೇಶ ಪ್ರಪಂಚದಲ್ಲೇ ಹೆಚ್ಚು ಯುವಕರನ್ನು ಹೊಂದಿರುವ ರಾಷ್ಟ್ರವಾಗಿದೆ ಆದರೂ, ಅಷ್ಟೇ ಪ್ರಮಾಣದಲ್ಲಿ ಯುವಜನತೆ ಮಾದಕ ವ್ಯಸನದ ದಾಸರಾಗಿದ್ದಾರೆ. ಓದಲು ಬೇರೆ ಊರು ಮತ್ತು ರಾಜ್ಯಗಳಿಂದ ಬರುವ ಮಕ್ಕಳು ಇಲ್ಲಿ ಬಂದು ಉತ್ತಮ ಶಿಕ್ಷಣವನ್ನು ಪಡೆಯಬೇಕು ಹೊರತು ಯಾವುದೇ ಮಾದಕ ವ್ಯಸನಕ್ಕೆ ಬಲಿಯಾಗಬಾರದು ಎಂದರು.
ಶೈಕ್ಷಣಿಕ ನಿರ್ದೇಶಕ ಡಾ.ಆರ್.ಪಿ. ಪೈ ಮಾತನಾಡಿ, ಕಾಲೇಜು ಮಟ್ಟದಲ್ಲಿ ದುಶ್ಚಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅಗತ್ಯ ಮಾಹಿತಿಯನ್ನು ಒದಗಿಸುವ ಕಾರ್ಯಕ್ರಮವನ್ನು ಮಾಡುತ್ತಿರಬೇಕು. ಇದರಿಂದ ಅವರಲ್ಲಿ ಮಾದಕ ವಸ್ತು, ತಂಬಾಕು, ಮದ್ಯ ಸೇವನೆ ಮಾಡದಂತೆ ಜಾಗೃತಿ ಮೂಡುತ್ತದೆ ಹಾಗೂ ಭವಿಷ್ಯದಲ್ಲಿ ಅವರು ಉತ್ತಮ ವಿದ್ಯಾರ್ಥಿಗಳಾಗಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ನಡೆದ ರಾಜ್ಯಮಟ್ಟದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ದಂತ ವೈದ್ಯಕೀಯ ವಿದ್ಯಾರ್ಥಿನಿ ರಜಿಯಾ ಅವರಿಗೆ ಪ್ರಥಮ ಬಹುಮಾನ ಲಭಿಸಿತು. ನೆರೆದಿದ್ದವರಿಗೆ ತಂಬಾಕು ಬಳಸದಂತೆ ಪ್ರಮಾಣವಚನ ಭೋದಿಸಲಾಯಿತು.
ಈ ವೇಳೆ ಮನೋವೈದ್ಯ ಡಾ.ಎಂ. ರಾಜೇಶ್ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ತಂಬಾಕಿನಂತಹ ಮಾದಕ ವಸ್ತುಗಳನ್ನು ಬಳಸಿದಲ್ಲಿ ಮೊದಲು ವ್ಯಕ್ತಿಯು ಮಾದಕತೆಯಲ್ಲಿ ಮುಳುಗಿ ಭವಿಷ್ಯದಲ್ಲಿ ಮಾದಕತೆ ವ್ಯಕ್ತಿಯನ್ನು ಬಲಿ ಪಡೆಯುತ್ತದೆ. ತಂಬಾಕು ಹಾಗೂ ಮಾದಕ ವಸ್ತುಗಳು ಮಾನಸಿಕ ಸ್ಥಿಮಿತವನ್ನು ಅಸ್ತವ್ಯಸ್ತಗೊಳಿಸುತ್ತವೆ. ಒತ್ತಡದ ಜೀವನ ಕ್ರಮದಿಂದ ಮಾನಸಿಕ ದಣಿವು ನಿವಾರಿಸಿಕೊಳ್ಳಲು ತಂಬಾಕಿನಂತಹ ಮಾದಕ ವಸ್ತುಗಳಿಗೆ ಬಲಿಯಾಗಬಾರದು. ಬದಲಿಗೆ ನಿಯಮಿತ ವ್ಯಾಯಾಮ, ಯೋಗ ಆಹಾರ ಪದ್ದತಿ ಇವೇ ಇತ್ಯಾದಿ ಜೀವನ ಶೈಲಿಯಲ್ಲಿ ಬದಲಾವಣೆಯನ್ನು ಮಾಡಿಕೊಂಡಲ್ಲಿ ಸದೃಢ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕಿ ಡಾ. ವಿನಯಾ ಶ್ರೀನಿವಾಸ್, ಡಾ. ಲತಾ ನಾಗೇಂದ್ರ, ಸುಬ್ಬಯ್ಯ ದಂತ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಬಿ.ಎಸ್. ಸುರೇಶ್, ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಸ್.ಎಂ. ಕಟ್ಟಿ, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ.ವನ್ಮಲಾ ಸತೀಶ್, ವೈದ್ಯಕೀಯ ಅಧೀಕ್ಷಕ ಡಾ. ಬಿ. ಶ್ರೀನಿವಾಸ್, ವಿಭಾಗ ಮುಖ್ಯಸ್ಥೆ ಡಾ. ಆರ್.ಡಿ. ಧರ್ಮಶ್ರೀ, ಸಹಾಕ ಪ್ರಾಧ್ಯಾಪಕ ಡಾ. ಜೆ. ಚೇತನ್ ಉಪಸ್ಥಿತರಿದ್ದರು.
Discussion about this post