ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಏಪ್ರಿಲ್‌ನಿಂದ ಡಿಸೆಂಬರ್ 2025ರವರೆಗೆ 3.5 ಕಿಮೀ KRIDE ಕಾರ್ಯಗತಗೊಳಿಸಿದ ಜೋಡಿ ಮಾರ್ಗ ಸೇರಿದಂತೆ ಒಟ್ಟು 26 ಕಿಮೀ ದ್ವಿಮುಖ ಮಾರ್ಗವನ್ನು ಕಾರ್ಯಾರಂಭ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆಯ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಪಿ. ಅನಂತ್ ತಿಳಿಸಿದರು.
ಹುಬ್ಬಳ್ಳಿಯ ಚಾಲುಕ್ಯ ಇನ್‌ಸ್ಟಿಟ್ಯೂಟ್‌ನಲ್ಲಿ ಇಂದು ನಡೆದ ನೈಋತ್ಯ ರೈಲ್ವೆಯ #Southwestern Railway ವಲಯ ರೈಲ್ವೆ ಬಳಕೆದಾರರ ಸಮಾಲೋಚನಾ ಸಮಿತಿಯ (ZRUCC) 25ನೇ ಸಭೆಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ವಲಯದ ಪ್ರಮುಖ ಸಾಧನೆಗಳನ್ನು ಉಲ್ಲೇಖಿಸಿ ಮಾತನಾಡಿದರು.
ಲಿಂಗನಬಂಡಿ–ಕುಷ್ಟಗಿ (9.9 ಕಿಮೀ) ಮತ್ತು ಚಿಕ್ಕಮಗಳೂರು–ಹಾದಿಹಳ್ಳಿ (9 ಕಿಮೀ) ಹೊಸ ಮಾರ್ಗಗಳಿಗೆ ಅನುಮೋದನೆಯನ್ನು ಪಡೆಯಲಾಗಿದೆ. ಕೃಷ್ಣಾ ನದಿಯ ಮೇಲೆ 805 ಮೀಟರ್ ಉದ್ದದ ಸೇತುವೆ ಕಾರ್ಯಾರಂಭವಾಗಿದ್ದು ಇದು ಪ್ರಮುಖ ಎಂಜಿನಿಯರಿಂಗ್ ಮೈಲಿಗಲ್ಲಾಗಿದೆ. ಗದಗ–ವಾಡಿ ಹೊಸ ಮಾರ್ಗ ಯೋಜನೆಯಡಿ 56 ಕಿಮೀ ತಳಕಲ್–ಕುಷ್ಟಗಿ ವಿಭಾಗವನ್ನು ಲೋಕಾರ್ಪಣೆ ಮಾಡಲಾಗಿದ್ದು, ಕುಷ್ಟಗಿ–ಹುಬ್ಬಳ್ಳಿ ಪ್ರಯಾಣಿಕರ ಸೇವೆ ಪ್ರಾರಂಭಿಸಲಾಗಿದೆ. ಬಳ್ಳಾರಿ–ಚಿಕ್ಜಾಜೂರು (₹3,078.86 ಕೋಟಿ) ಮತ್ತು ತೋರಣಗಲ್ಲು–ರಂಜಿತ್‌ಪುರ (₹445.69 ಕೋಟಿ) ಜೋಡಿ ಮಾರ್ಗ ಯೋಜನೆಗಳು ಸಹ ಮಂಜೂರಾತಿ ನೀಡಲಾಗಿದೆ ಎಂದರು.
ನಾಲ್ಕು ವಿದ್ಯುತ್ ಉಪಕೇಂದ್ರಗಳನ್ನು ಕಾರ್ಯಾರಂಭ ಮಾಡಲಾಗಿದ್ದು, 207 ಹಳಿ ಕಿಲೋಮೀಟರ್‌ಗಳನ್ನು ವಿದ್ಯುದೀಕರಿಸಲಾಗಿದೆ. ಇದರೊಂದಿಗೆ ಒಟ್ಟು ವಿದ್ಯುದೀಕೃತ ಜಾಲವು 6,284 ಹಳಿ ಕಿಲೋಮೀಟರ್‌ಗಳಿಗೆ (ಒಟ್ಟು ಜಾಲದ 94%) ಏರಿಕೆಯಾಗಿದೆ. ಈಗ 163 ಜೋಡಿ ರೈಲುಗಳು ವಿದ್ಯುತ್ ಚಾಲಿತ ಸಂಚರಿಸುತ್ತಿವೆ. 48 ವಿದ್ಯುತ್ ಲೋಕೋಮೋಟಿವ್‌ಗಳ ಸೇರ್ಪಡೆಯಿಂದ ಒಟ್ಟು ಸಂಖ್ಯೆ 326ಕ್ಕೆ ಏರಿಕೆಯಾಗಿದ್ದು, 30 ಜೋಡಿ ರೈಲುಗಳನ್ನು ಡೀಸೆಲ್‌ನಿಂದ ವಿದ್ಯುತ್ ಚಾಲಿತಕ್ಕೆ ಪರಿವರ್ತಿಸಲಾಗಿದೆ. ಇದರಿಂದ ಸುಮಾರು ₹39 ಕೋಟಿ ಇಂಧನ ಉಳಿತಾಯವಾಗಿದೆ ಎಂದು ತಿಳಿಸಿದರು.
2025ರ ಏಪ್ರಿಲ್‌ನಿಂದ ಡಿಸೆಂಬರ್ ಅವಧಿಯಲ್ಲಿ ಒಟ್ಟು ಆದಾಯ ₹6,694.05 ಕೋಟಿಗೆ ತಲುಪಿದ್ದು, ಹಿಂದಿನ ವರ್ಷಗಿಂತ ಶೇ. 11.44ರಷ್ಟು ಬೆಳವಣಿಗೆ ಕಂಡಿದೆ. ಪ್ರಯಾಣಿಕರ ಆದಾಯ ₹2,196.09 ಕೋಟಿ, ಸರಕು ಸಾಗಣೆ ಆದಾಯ ದಾಖಲೆಯ ₹4,039 ಕೋಟಿ, ವಿವಿಧ ಆದಾಯ ₹167 ಕೋಟಿ ಮತ್ತು ಪಾರ್ಸೆಲ್ ಆದಾಯ ದಾಖಲೆಯ ₹129 ಕೋಟಿಗೆ ತಲುಪಿದೆ ಎಂದರು.
ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳ ಸಮಯಪಾಲನೆ ಶೇ. 90ರಷ್ಟಿದ್ದು, ಅಖಿಲ ಭಾರತ ಮಟ್ಟದಲ್ಲಿ 4ನೇ ಸ್ಥಾನ ಪಡೆದಿದೆ. ವಲಯವು 224 ಮೇಲ್/ಎಕ್ಸ್‌ಪ್ರೆಸ್, 148 ಪ್ಯಾಸೆಂಜರ್ ಹಾಗೂ 4 ಗುತ್ತಿಗೆ ಪಡೆದ ಪಿಸಿಇಟಿ ರೈಲುಗಳನ್ನು ಸಂಚರಿಸಿದೆ. 125 ರೈಲುಗಳ ವೇಗವರ್ಧನೆಯಿಂದ ಒಟ್ಟು 3,335 ನಿಮಿಷಗಳ ಸಮಯ ಉಳಿತಾಯವಾಗಿದೆ. 10 ಹೊಸ ರೈಲುಗಳನ್ನು ಪರಿಚಯಿಸಲಾಗಿದ್ದು, 12 ಜೋಡಿ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಗಳು, 10 ವಿಶೇಷ ರೈಲುಗಳ ಕ್ರಮಬದ್ಧಗೊಳಿಸುವಿಕೆ, 16 ರೈಲುಗಳ ವಿಸ್ತರಣೆ ಹಾಗೂ 8 ರೈಲುಗಳನ್ನು ಸೂಪರ್‌ಫಾಸ್ಟ್ ವರ್ಗಕ್ಕೆ ಮೇಲ್ದರ್ಜೆಗೇರಿಸಲಾಗಿದೆ. ಹಬ್ಬದ ಸಂದರ್ಭಗಳಲ್ಲಿ 481 ವಿಶೇಷ ರೈಲುಗಳನ್ನು ಓಡಿಸಲಾಗಿದ್ದು, 614 ಹೆಚ್ಚುವರಿ ಬೋಗಿಗಳನ್ನು ಜೋಡಿಸಲಾಗಿದೆ. ಅಲ್ನಾವರ್–ದಾಂಡೇಲಿ ವಿಭಾಗವನ್ನು ಪ್ರಯಾಣಿಕರ ಸಂಚಾರಕ್ಕೆ ತೆರೆಯಲಾಗಿದ್ದು, ದಾಂಡೇಲಿ ವನ್ಯಜೀವಿ ಅಭಯಾರಣ್ಯಕ್ಕೆ ಪ್ರವಾಸೋದ್ಯಮ ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದು ಹೇಳಿದರು.
3,712 ಮಾರ್ಗ ಕಿಲೋಮೀಟರ್‌ಗಳಲ್ಲಿ ‘ಕವಚ’ ವ್ಯವಸ್ಥೆಗೆ ಮಂಜೂರಾತಿ ನೀಡಲಾಗಿದ್ದು, ಸುರಕ್ಷತೆ ಹೆಚ್ಚಿಸಲಾಗಿದೆ. 4 ಆರ್‌ಒಬಿ, 5 ಆರ್‌ಯುಬಿ, 7 FOB, 1 ಸಬ್‌ವೇ ಮತ್ತು 15 ಉನ್ನತ ಮಟ್ಟದ ವೇದಿಕೆಗಳನ್ನು ಕಾರ್ಯಾರಂಭ ಮಾಡಲಾಗಿದೆ. 5 ಲೆವೆಲ್ ಕ್ರಾಸಿಂಗ್ ಗೇಟ್‌ಗಳನ್ನು ಮುಚ್ಚಲಾಗಿದೆ. 126 ನಿಲ್ದಾಣಗಳಲ್ಲಿ ದಿವ್ಯಾಂಗ ಸ್ನೇಹಿ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, 78 ಲಿಫ್ಟ್‌ಗಳು ಮತ್ತು 62 ಎಸ್ಕಲೇಟರ್‌ಗಳನ್ನು ಸ್ಥಾಪಿಸಲಾಗಿದೆ. ಅಮೃತ ಭಾರತ್ ನಿಲ್ದಾಣ ಯೋಜನೆಯಡಿ 61 ನಿಲ್ದಾಣಗಳನ್ನು ಪುನರ್ ಅಭಿವೃದ್ಧಿಗೆ ಗುರುತಿಸಲಾಗಿದೆ. ಬೆಂಗಳೂರು–ಬೆಳಗಾವಿ ಮತ್ತು ಕಾಚಿಗುಡ–ಯಶವಂತಪುರ ನಡುವಿನ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಗಳು ಹೆಚ್ಚುವರಿ ನಿಲುಗಡೆಗಳೊಂದಿಗೆ ಪ್ರಾರಂಭಿಸಲಾಗಿದೆ ಎಂದರು.
2026–27ರ ರೈಲ್ವೆ ಬಜೆಟ್‌ನಲ್ಲಿ ಕರ್ನಾಟಕಕ್ಕೆ ₹7,748 ಕೋಟಿ ಹಂಚಿಕೆಯಾಗಿದ್ದು, ಹಿಂದಿನ ವರ್ಷ ₹7,564 ಕೋಟಿ ಹಂಚಿಕೆಯಾಗಿತ್ತು. 2026ರ ರೈಲ್ವೆ ಬಜೆಟ್‌ನಲ್ಲಿ ದೇಶದಾದ್ಯಂತ ಏಳು ಹೈ-ಸ್ಪೀಡ್ ರೈಲು ಕಾರಿಡಾರ್‌ಗಳನ್ನು ಪ್ರಸ್ತಾಪಿಸಲಾಗಿದ್ದು, ಹೈದರಾಬಾದ್–ಬೆಂಗಳೂರು ಮತ್ತು ಚೆನ್ನೈ–ಬೆಂಗಳೂರು ಕಾರಿಡಾರ್‌ಗಳು ನೈಋತ್ಯ ರೈಲ್ವೆಗೆ ಸಂಬಂಧಿಸಿದ ಪ್ರಮುಖ ಯೋಜನೆಗಳಾಗಿವೆ. ಇವು ಪ್ರಯಾಣ ಸಮಯವನ್ನು ಕಡಿಮೆ ಮಾಡಿ, ಪ್ರಾದೇಶಿಕ ಆರ್ಥಿಕ ಏಕೀಕರಣವನ್ನು ಬಲಪಡಿಸಿ, ವೇಗವಾದ ಮತ್ತು ಸ್ವಚ್ಛ ಸಾರಿಗೆ ವ್ಯವಸ್ಥೆಯನ್ನು ಉತ್ತೇಜಿಸುವ ಉದ್ದೇಶ ಹೊಂದಿವೆ ಎಂದು ತಿಳಿಸಿದರು.
ಸಭೆಯಲ್ಲಿ ಪ್ರಯಾಣಿಕರ ಸೌಲಭ್ಯಗಳು, ಮೂಲಸೌಕರ್ಯ ಅಭಿವೃದ್ಧಿ ಹಾಗೂ ರೈಲು ಸೇವೆಗಳ ಕುರಿತು ಸದಸ್ಯರಿಗೆ ವಿವರಿಸಲಾಯಿತು. ಹೆಚ್ಚುವರಿ ನಿಲುಗಡೆಗಳು, ರೈಲುಗಳ ಆವರ್ತನೆ ಹೆಚ್ಚಳ, ROB/RUB ನಿರ್ಮಾಣ, ಲಿಫ್ಟ್ ಹಾಗೂ ಎಸ್ಕಲೇಟರ್‌ಗಳ ಬೇಡಿಕೆಗಳನ್ನು ಸದಸ್ಯರು ಮಂಡಿಸಿದರು.
ಸಭೆಯಲ್ಲಿ ಇ. ತುಕಾರಾಂ, ಸಂಸದರು (ಬಳ್ಳಾರಿ), ಪ್ರಿಯಾಂಕಾ ಜಾರಕಿಹೊಳಿ, ಸಂಸದರು (ಚಿಕ್ಕೋಡಿ); ಯು. ಬಿ. ಬಣಕರ್, ಶಾಸಕರು (ಹಿರೇಕೆರೂರು) ಹಾಗೂ ಇತರ ZRUCC ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.
ZRUCC ಸದಸ್ಯರು : ಜಿ. ಕೆ. ಆದಪ್ಪಗೌಡರ್, ಕೆ. ಬಿ. ಲಿಂಗರಾಜು, ಪಿ. ಶ್ರೀನಿವಾಸ್ ಮೂರ್ತಿ, ದೇವಾನಂದ್ ಎಸ್. ನಾಯಕ್ ಭಂಡಾರಿ, ಮಹೇಂದ್ರ ಎಚ್. ಸಿಂಘಿ, ಬಾಬುಲಾಲ್ ಜಿ. ಜೈನ್, ಡಾ. ಲಕ್ಷ್ಮಣ್ ಎಚ್., ಬಸವರಾಜ್ ಕೆ. ಎಂ., ಉಮಾ ರೆಡ್ಡಿ, ರವಿರಾಜ ಸಾಗರ್, ಆರ್. ಸಿ. ಆಂಜಿನಪ್ಪ, ಬಿ. ಎನ್. ಲಕ್ಷ್ಮೀಪತಿ, ಚಿದಾನಂದ ದೇಮಶೆಟ್ಟಿ, ವಿಶ್ವನಾಥ ಪಾಟೀಲ್ ಹಾಗೂ ಶ್ರೀ ಉದಯ್ ಎಂ. ರೇವಣಕರ್ ಉಪಸ್ಥಿತರಿದ್ದರು.
ಸಭೆಯಲ್ಲಿ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಪಿ. ಅನಂತ್, ಇಲಾಖಾ ಮುಖ್ಯಸ್ಥರು ಮತ್ತು ನೈಋತ್ಯ ರೈಲ್ವೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ವಿವಿಧ ರೈಲ್ವೆ ಪಾಲುದಾರರ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ZRUCC ಸದಸ್ಯರು ಮಂಡಿಸಿದ ಬೇಡಿಕೆಗಳು ಮತ್ತು ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ ಅವುಗಳನ್ನು ಸಾಧ್ಯವಾದಷ್ಟು ಶೀಘ್ರ ಪರಿಹರಿಸಲು ನೈಋತ್ಯ ರೈಲ್ವೆ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಲಿದೆ ಎಂದು ಪಿ. ಅನಂತ್ ಭರವಸೆ ನೀಡಿದರು.
ಎಲ್ಲಾ ರೈಲ್ವೆ ಪಾಲುದಾರರೊಂದಿಗೆ ಸಮಗ್ರ ಪ್ರತಿನಿಧಿತ್ವ ಮತ್ತು ಸಮಾಲೋಚನೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಸಭೆಯನ್ನು ಕರೆಯಲಾಗಿತ್ತು. ಪ್ರಯಾಣಿಕರ ಸೌಲಭ್ಯಗಳು, ರೈಲು ಸೇವೆಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳನ್ನು ವಿವರವಾಗಿ ಚರ್ಚಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















