ಹಬ್ಬಗಳು:
ಗಯಾನಾದ ಹಿಂದೂಗಳು ಹೋಳಿ, ದೀಪಾವಳಿ ಹಬ್ಬಗಳನ್ನು ತುಂಬಾ ಜೋರಾಗಿ ಆಚರಿಸಿದರೆ, ಮುಸ್ಲಿಮರು ಈದ್-ಫಿತರ್ ಹಬ್ಬವನ್ನು ಆಚರಿಸುತ್ತಾರೆ. ಹೋಳಿ ಮತ್ತು ದೀಪಾವಳಿ ಹಬ್ಬದ ದಿನಗಳನ್ನು ಸಾರ್ವತ್ರಿಕ ರಜಾದಿನ ಎಂದು ಘೋಷಿಸಲಾಗಿದೆ.
ಪ್ರಮುಖರು:
ಚೆಡ್ಡಿ ಜಗನ್, ಜಾನೆಟ್ ಜಗನ್, ಭರತ್ ಜಗದೇವ್. ಡೊನಾಲ್‌ಡ್ ರಾಮೋತರ್ ಗಯಾನಾದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಜಾನೆಟ್ ಜಗನ್, ಭರತ್ ಜಗದೇವ್ ಪ್ರಧಾನಮಂತ್ರಿ ಪಟ್ಟ ಅಲಂಕರಿಸಿದ್ದಾರೆ. ಗಯಾನಾದ ಈಗಿನ ಪ್ರಧಾನಮಂತ್ರಿ ಸಹ ತಮಿಳುನಾಡು ಮೂಲದ ಇಂಡೋ ಕೆರಿಬಿಯನ್ ಮೂಸೆಸ್ ವೀರಸಾಮಿ ನಾಗಮುತ್ತು. ಹೊರದೇಶದ ಭಾರತೀಯರ ಸೇವೆಯನ್ನು ಸ್ಮರಿಸುವ ಸಲುವಾಗಿ ಪ್ರತಿವರ್ಷ ಭಾರತ ಸರ್ಕಾರ ಆಚರಿಸುವ ‘ಪ್ರವಾಸಿ ಭಾರತೀಯ ದಿವಸ್’ನಲ್ಲಿ ಗಯಾನಾದ ಮಾಜಿ ಅಧ್ಯಕ್ಷ ಡೊನಾಲ್‌ಡ್ ರಾಮೋತರ್‌ರನ್ನು 2015ರಲ್ಲಿ ಭಾರತೀಯ ಸರ್ಕಾರದ ವತಿಯಿಂದ ಸನ್ಮಾನಿಸಲಾಯಿತು.
ಟ್ರಿನಿಡಾಡ್ ಟೋಬಾಗೋದ ಭಾರತೀಯರು:
ಟ್ರಿನಿಡಾಡ್ ಟೊಬಾಗೋದ ಭಾರತೀಯರು ಪ್ರಮುಖವಾಗಿ ಹಿಂದಿ ಮತ್ತಿತರ ಉಪಭಾಷೆಗಳನ್ನು ಮಾತಾಡುತ್ತಾರೆ. ಅವರನ್ನು ಆರ್ಯ- ಹಿಂದವಿ ಜನರೆಂದೇ ಗುರುತಿಸಲಾಗುತ್ತದೆ. ಸ್ಪಷ್ಟವಾಗಿ ಹೇಳಬೇಕಾದರೆ, ಇವರೆಲ್ಲಾ ಗಂಗಾ-ಯಮುನಾ ತಟದ ಉತ್ತರ ಭಾರತೀಯರು. ಅವರಲ್ಲೂ ಸಹ ಹಲವಾರು ಗುಂಪುಗಳನ್ನು ಮಾಡಿಕೊಂಡಿದ್ದಾರೆ. ಉದಾಹರಣೆಗೆ, ಬಿಹಾರಿ, ಹರ್ಯಾನ್ವಿ, ಅವಧಿ, ಮಾಲ್ವಿ, ಹಿಮಾ ಚಲಿ, ಭೋಜ್‌ಪುರಿ ಹೀಗೆ ಹಲವಾರು ಗುಂಪುಗಳನ್ನಾಗಿ ವಿಂಗಡಿಸಿಕೊಂಡಿದ್ದಾರೆ.
1874 ರಿಂದ 1917ರವರೆಗೆ ಟ್ರಿನಿಡಾಡ್ ಮತ್ತು ಟೊಬಾಗೋಗೆ ಬಂದ ಭಾರತೀಯಲ್ಲಿ ಅತಿ ಹೆಚ್ಚು ಅಂದರೆ ಶೇ.50.7 ಪ್ರತಿಶತ ಆಗಿನ ಯುನೈಟೆಡ್ ಪ್ರಾವಿನ್‌ಸ್ ಅಂದರೆ ಇಂದಿನ ಉತ್ತರ ಪ್ರದೇಶ ಸಹಿತ ಮಧ್ಯಪ್ರದೇಶದ ಹಲವು ಭಾಗಗಳಿಗೆ ಸೇರಿದವರು. 1,34,113 ಗುತ್ತಿಗೆ ನೌಕರರಲ್ಲಿ ಸುಮಾರು 5,000 ಭಾರತೀಯರು ತಮ್ಮನ್ನು ಮದ್ರಾಸಿ ಅಂದರೆ ತಮಿಳು ಮೂಲದವರು ಮತ್ತು ಕಲ್ಕತ್ತೀಯಾ ಅಂದರೆ ಬೆಂಗಾಲಿಯವರು ಎಂದು ಹೇಳಿಕೊಂಡಿದ್ದಾರೆ.
(ಮುಂದುವರೆಯುವುದು)
Discussion about this post