ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಅವಳು ನನಗಿಂತ ಕೇವಲ ಒಂದು ವರುಷ ದೊಡ್ಡವಳಿರಬಹುದು. ಅದ್ಯಾವುದೋ ಊರಿನ ಮೂಲೆಯಲ್ಲಿ ಬೆಳೆದ ಅವಳು, ಎಲ್ಲೋ ಹುಟ್ಟಿ ಬೆಳೆದ ನಾನು, ಭೇಟಿಯಾದದ್ದೇ ಆಕಸ್ಮಿಕ. ಭಾವನಾತ್ಮಕ ಮನಸ್ಸಿನ ಅವಳು ಹಂಚಿಕೊಳ್ಳುವ ಅದೆಷ್ಟೋ ವಿಚಾರಗಳಲ್ಲಿ ಬೇರೆಯವರ ಬಗ್ಗೆ ಪ್ರೀತಿ, ಕರುಣೆ, ಅನುಕಂಪ, ಮುಗ್ಧತೆ ಎದ್ದು ಕಾಣ್ತಾ ಇತ್ತು. ಸದಾ ಇನ್ನೊಬ್ಬರ ನೋವಿಗೆ ಸ್ಪಂದಿಸುವ ಮನಸು. ಅದಕ್ಕೆ ಕಾರಣ ಆಕೆ ಬೆಳೆದು ಬಂದ ವಾತಾವರಣ, ಅತಿ ಚಿಕ್ಕ ವಯಸ್ಸಿಗೆ ತಾಯಿ ತಂದೆ ಇಬ್ಬರನ್ನ ಕಳೆದುಕೊಂಡು ಕುಟುಂಬಿಕರ ಮಡಿಲಲ್ಲಿ ಬೆಳೆದ ಮಗು. ಪ್ರೀತಿಗೇನು ಕೊರತೆ ಇರಲಿಲ್ಲವೋ ಅಥವಾ ಸಿಕ್ಕಿದ ಅಲ್ಪ ಪ್ರೀತಿಯನ್ನೇ ದೊಡ್ಡದು ಅಂತ ಅಂದುಕೊಳ್ಳೋ ಅವಳ ಮನಸ್ಸೋ ಗೊತ್ತಿಲ್ಲ ಒಟ್ಟಾರೆ ಬೇರೆಯವರ ಕೆಲಸ ಮಾಡೋದು ಅವರನ್ನ ಖುಷಿಯಾಗಿಡೋದು, ಇನ್ನೊಬ್ಬರಿಗೆ ಸಹಾಯ ಮಾಡೋದು ಇದೆಲ್ಲ ಅವಳ ವಿಶೇಷ ಗುಣಗಳು. ಈ ಕಾರಣಗಳಿಗಾಗಿಯೇ ಅವಳ ಸ್ನೇಹಿತೆಯರ ಬಳಗವು ಬಹಳ ದೊಡ್ಡದಾಗೇ ಇತ್ತು.
ಮುಖದಲ್ಲಿ ಸದಾ ಮೂಡುವ ನಗು ಮನಸ್ಸಿನ ಕೊರತೆಗಳನ್ನ ಮರೆಮಾಚುವಲ್ಲಿ ಯಶಸ್ವಿ ಆಗ್ತಾ ಇತ್ತು ಅನ್ನೋದು ನನಗವಳನ್ನ ನೋಡಿದಾಗ ಅನಿಸ್ತಾ ಇದ್ದದ್ದು. ಹಾಗೆ ನೋಡಿದರೆ ಅವಳಿಗೆ ಅಳು ಕೂಡ ಬಹಳ ಬೇಗ ಬರ್ತಾ ಇತ್ತು. ಆ ಅಳು ನನಗೆ ಕೆಟ್ಟ ಕೋಪ ತರಿಸ್ತಾ ಇದ್ದದ್ದು ಕೂಡ ಹೌದು. ಈ ಅಳು ಅಸಹಾಯಕತೆ ಬೇರೆಯವರಿಂದ ಒಂದಿಷ್ಟು ಅನುಕಂಪ ಕೊಡಿಸುವ ಕೆಲಸ ಮಾಡಬಹುದು ಬಿಟ್ರೆ. ಅದರಿಂದ ಸಾಧಿಸೋದು ಏನು ಇಲ್ಲ. ಬದಲಾಗಿ ಅಳುವವರನ್ನು ಪ್ರಪಂಚ ಇನ್ನೂ ಕೂಡ ಜೋರಾಗೆ ಅಳಿಸುತ್ತೆ, ಅದರಿಂದ ಮನರಂಜನೆ ಕೂಡ ತಗೋಬಹುದು. ಹಾಗಾಗಿ ಅವಳ ಕಣ್ಣಲ್ಲಿ ನೀರು ಬರುವ ಸಾಧ್ಯತೆ ಇದೆ ಅಂದ್ರೆ ನನ್ನ ಬೈಗುಳ ಕೂಡ ಶುರು ಆಗಿ ಬಿಡುತ್ತೆ ತುಂಬಾನೇ ನಿರ್ದಾಕ್ಷಿಣ್ಯವಾಗಿ ಗದರಿಬಿಡುತ್ತೇನೆ. ಈ ಗದರುವಿಕೆಯಿಂದಾದರೂ ಅವಳು ತುಸು ಗಟ್ಟಿಯಾಗಲಿ ಅನ್ನೋ ಆಸೆ ನನ್ನದು. ಹಾಗೆ ನೋಡಿದರೆ ನಾನವಳ ಜೊತೆ ಮಾಮೂಲಿಗಿಂತ ಕಠಿಣವಾಗಿ ಮಾತಾಡಿದ್ದೆ ಜಾಸ್ತಿ. ಅದಕ್ಕೆ ಕಾರಣ ಅವಳ ಅತಿ ಅನಿಸುವ ಭಾವುಕತೆ. ಆದರೂ ಅದ್ಯಾವುದೋ ಸ್ನೇಹ, ಪ್ರೀತಿ, ಕಾಳಜಿ ಅವಳನ್ನು ನನ್ನ ಆತ್ಮೀಯರ ಬಳಗದಲ್ಲಿ ಸೇರಿಸಿಬಿಟ್ಟಿತ್ತು.
ಆಗಲೇ ಅವಳ ಮದುವೆ ಕೂಡ ನಿಶ್ಚಯವಾಗಿತ್ತು. ಸಂಭ್ರಮ ಸಡಗರಗಳೆಲ್ಲ ಕಳೆದ ಮೇಲೆ ಗಂಡನ ಮನೆಯ ವಾತಾವರಣದಲ್ಲಿ ಹೊಸ ಜೀವನ ಕಟ್ಟಿಕೊಳ್ಳುವ ಸಮಯದಲ್ಲೇ, ಅವಳಿಗೆ ಗಂಡನ ಉದಾಸೀನತೆ, ಸಂಸಾರದ ಬಗೆಗಿನ ನಿರಾಸಕ್ತಿಯ ಅರಿವಾಗುತ್ತಲೇ ತನ್ನದು ನೆಪಮಾತ್ರದ ಮದುವೆ ಅನ್ನುವ ಜೀರ್ಣಿಸಿಕೊಳ್ಳಲಾಗದ ಸತ್ಯದ ಅರಿವಾಗಿತ್ತು. ಇದನ್ನ ಕೇಳುವಾಗಲೇ ತಡೆಯಾಲಾರದ ಸಂಕಟವಾಗಿದ್ದು ನನಗೆ, ಜೊತೆಗೆ ಕೋಪ, ಮನೆಯವರೆಲ್ಲ ತಮ್ಮ ಜವಾಬ್ದಾರಿ ಕಳೆದುಕೊಳ್ಳುವ ತರಾತುರಿಯಲ್ಲಿ ಒಂದು ಮುಗ್ಧ ಹುಡುಗಿಯ ಜೀವನ ಹಾಳು ಮಾಡಿಬಿಟ್ಟರಲ್ಲ ಎಂದು. ಮದುವೆ ಅನ್ನೋದು ಒಂದು ಹುಡುಗ ಹುಡುಗಿಯ ಜೀವನ ಹಾಳು ಮಾಡುತ್ತೆ ಅಂದ್ರೆ ಅಂತಹ ಮದುವೆ ಅವಶ್ಯಕತೆ ಯಾಕಿರುತ್ತೆ ಅನ್ನೋದೇ ಇವತ್ತಿಗೂ ಸಮಾಜದ ಮುಂದಿರುವ ಬಗೆಹರಿಯದ ಪ್ರಶ್ನೆ.
ಗಂಡ ಎಂತವನೇ ಆದರೂ ಹೊಂದಿಕೊಂಡು ಹೋಗಬೇಕು ಅನ್ನೋ ಗಿಣಿಪಾಠ ಇವತ್ತಿನ ಈ ಆಧುನಿಕ ಯುಗದಲ್ಲೂ ಹೆಣ್ಣಿಗೆ ಜಾಸ್ತಿ ಅನ್ವಯ ಆಗ್ತಾ ಇದೆ ಅನ್ನೋದು ಅಷ್ಟೇ ಸತ್ಯ. ಇದು ನಿಮ್ಮ ಗಮನಕ್ಕೂ ಬಂದಿರಬಹುದು ಹಾಗಂತ ಗಂಡು ದೌರ್ಜನ್ಯಕ್ಕೆ ಒಳಗಾಗ್ತಾ ಇಲ್ಲ ಅನ್ನೋದು ಕೂಡ ಸುಳ್ಳು.
ಸಮಾಜಕ್ಕೆ, ಕುಟುಂಬಕ್ಕೆ, ಅಂಜುವ ಅದೆಷ್ಟೋ ಜನ ಇವತ್ತಿಗೂ ಕೂಡ ಸುಖ ಶಾಂತಿ ಇಲ್ಲದ ದಾಂಪತ್ಯ ಜೀವನದಲ್ಲಿ ಸಿಕ್ಕಿಕೊಂಡಿದ್ರೂ ಕೂಡ ಎಲ್ಲವನ್ನ ನುಂಗಿ ಬದುಕ್ತಾ ಇದ್ದಾರೆ.ಇಲ್ಲಿ ಈ ಹುಡುಗಿಯ ಕಥೆಯೂ ಅಷ್ಟೇ ಹೆಸರಿಗೊಂದು ಮದುವೆ ಹೇಳಿಕೊಳ್ಳಲು ಗಂಡ, ಕುಟುಂಬ ಎಲ್ಲ ಇದ್ದರೂ ಎಲ್ಲರಂತಿರದ ಸಂಸಾರ. ಗಂಡನ ಮನೆಯ ಪ್ರತಿಯೊಬ್ಬರ ಸೇವೆ, ಚಾಕರಿ ಮಾಡೋದನ್ನು ಖುಷಿಯಿಂದ ಮಾಡೋ ಈ ಹೆಣ್ಣು ಅದೆಷ್ಟೋ ಒಳ್ಳೆ ಗುಣಗಳ ಭಂಡಾರವನ್ನೇ ತನ್ನೊಳಗಿರಿಸ್ಕೊಂಡಿದ್ದರಿಂದ ಎಲ್ಲರ ಪ್ರೀತಿ ಸಂಪಾದನೆ ಮಾಡಿದ್ದಳು. ತವರು ಮನೆ, ಗಂಡನ ಮನೆ ಎರಡೂ ಕಡೆ ಒಂದಿಷ್ಟು ಪ್ರಾಮಾಣಿಕ ಪ್ರೀತಿ ಗಳಿಸಿದ್ದೆ ತನ್ನ ಒಳ್ಳೆ ಮನಸು ಪರೋಪಕಾರದ ಗುಣದಿಂದ. ಶಾಲಾದಿನಗಳಲ್ಲಿ ಅತ್ಯುತ್ತಮ ವಿದ್ಯಾರ್ಥಿನಿಯಾಗಿದ್ದ ಆಕೆ ಆಟೋಟ, ಸಾಂಸ್ಕೃತಿಕ ಚಟುವಟಿಕೆ, ಎಲ್ಲದ್ರಲ್ಲೂ ಮುಂದೆ. ಎಲ್ಲವನ್ನು ನಿಭಾಯಿಸುವ ಶಕ್ತಿ, ಚುರುಕುತನ ಅವಳ ಆಸ್ತಿ. ಮದುವೆಯಲ್ಲಿ ಸೋತ ಅವಳು ತನ್ನ ಇಡೀ ಜೀವನ ಹೀಗೆ ಕಳೆದುಬಿಡಬೇಕಲ್ಲ ಮುಂದೆ ಹೇಗೆ ಅನ್ನೋದು ನೆನೆಸಿಕೊಂಡಾಗೆಲ್ಲ ನನಗೆ ಬಹಳ ಬೇಸರ ಅನಿಸ್ತಾ ಇತ್ತು.
ಡೈವೋರ್ಸ್ ಇನ್ನೊಂದು ಮದುವೆ ಇಂತದ್ದೆಲ್ಲಾ ಕನಸಲ್ಲೂ ಯೋಚನೆ ಮಾಡದ ಕೌಟುಂಬಿಕ ಚೌಕಟ್ಟಿನಲ್ಲಿ ಬಂಧಿಯಾಗಿರೋ ಹೆಣ್ಣು ಆಕೆ. ತನ್ನ ಹಣೆಬರಕ್ಕೆ ಯಾರನ್ನು ಹೊಣೆ ಮಾಡದೆ ಅದನ್ನ ಅನುಭವಿಸ್ತೇನೆ ಅನ್ನುವ ಆಕೆಯ ಸ್ವಭಾವ, ಇವತ್ತಿನ ದಿನಗಳಲ್ಲಿ ಕೇವಲ ತನಗೋಸ್ಕರ ಬದುಕಬೇಕು, ವ್ಯಕ್ತಿ ಸ್ವಾತಂತ್ರ್ಯ, ಇರುವಷ್ಟು ದಿನ ಜೀವನವನ್ನು ಎಂಜಾಯ್ ಮಾಡ್ಬೇಕು ಅದು ಮಾನವನ ಹಕ್ಕು ಅನ್ನುವ, ಮುಂದುವರಿದ ಸಮಾಜದ ಸತ್ಯ ವಿಚಾರಗಳೆಲ್ಲ ಇಂತಹ ಮುಗ್ಧ, ತಪ್ಪನ್ನೇ ಮಾಡದ ಕೇವಲ ಮದುವೆಯಿಂದ ಜೀವನ ಕಳೆದುಕೊಂಡ ಅದೆಷ್ಟೋ ಹೆಣ್ಣುಮಕ್ಕಳ ನೋವಿನ ಮುಂದೆ ಗೌಣ ಅನಿಸಿಬಿಡುತ್ತದೆ.
ಅವಳ ಬಗ್ಗೆ ಯೋಚನೆ ಮಾಡಿದಾಗ ನನಗೆ ಹೊಳೆದದ್ದು ಒಂದೇ ಅವಳಿಗೊಂದು ಕೆಲಸ ಅಥವಾ ಸ್ವಉದ್ಯೋಗ, ಅದನ್ನು ಮಾಡುವಷ್ಟು ಚಾಕಚಕ್ಯತೆ ಅವಳಲ್ಲಿ ಖಂಡಿತ ಇದೆ ಅಂತ ನನಗೆ ಗೊತ್ತಿತ್ತು ಅದನ್ನೇ ಅವಳಿಗೆ ಹೇಳಿದಾಗ, ಅವಳು ಅಂತಹ ಆಸಕ್ತಿ ತೋರಿಸಲಿಲ್ಲ. ಮನೇಲಿ ಕೆಲಸ ಅಷ್ಟೊಂದಿದೆ, ಮತ್ತೆ ಹೊರಗಡೆ ಹೋಗಿ ದುಡಿಯೋದಕ್ಕೆ ಗಂಡನ ಮನೆಯವರ, ತನ್ನ ಮನೆಯವರ ಸಹಕಾರ ಹೇಗೂ ಸಿಗೋದಿಲ್ಲಾ ಅನ್ನೋದೇ ಅವಳ ನಿರಾಸಕ್ತಿಗೆ ಕಾರಣ. ಆಗಲೇ ನನಗವಳ ದಡ್ಡತನಕ್ಕೆ ಕೋಪ ಬಂದಿದ್ದು, ಸಂಸಾರದಲ್ಲೂ ನೆಮ್ಮದಿ ಸಿಗೋದಿಲ್ಲ, ಅತ್ತ ಜೀವನಾಧಾರಕ್ಕೂ ಏನು ಇಲ್ಲ ಅಂದ್ರೆ ಇವಳ ಮುಂದಿನ ಬದುಕು ನಡೆಯೋದಾದರೂ ಹೇಗೆ? ಇವಳಿಗೆ ಇದನ್ನ ಅರ್ಥ ಮಾಡಿಸೋದು ಹೇಗೆ, ಇಂತಹ ಅದೆಷ್ಟೋ ಹೆಣ್ಣು ಮಕ್ಕಳು ಮುಂದೆ ಬೇರೆಯವರ ಅಡಿಯಾಳಾಗಿ ಬದುಕಿದ ಎಷ್ಟೋ ಉದಾಹರಣೆಗಳನ್ನ ನೋಡಿದ ಮೇಲೆ ನನಗೆ ಇವಳ ವಿಷ್ಯದಲ್ಲಿ ಸುಮ್ಮನಿರಲು ಸಾಧ್ಯ ಆಗ್ಲಿಲ್ಲ.
ದುಡಿಮೆ ಅಥವಾ ಹಣ ಯಾವುದಕ್ಕೂ ಸೊಲ್ಯೂಷನ್ ಅಲ್ಲ. ಆದ್ರೆ ಸ್ವಾವಲಂಬಿ ಜೀವನ ಕೊಡುವ ಶಕ್ತಿ ಧೈರ್ಯ ಬೇರಾವುದೂ ಕೂಡ ಕೊಡೋದಕ್ಕೆ ಸಾಧ್ಯ ಇಲ್ಲ ಇವತ್ತು ಎಷ್ಟೋ ಹೆಣ್ಣುಮಕ್ಕಳ ನೆಮ್ಮದಿಗೆ ಇದೇ ಕಾರಣ ಕೂಡ. ಕೆಲವು ಹೆಣ್ಣು ಮಕ್ಕಳಿಗೆ ಇಂತಹ ವಿಚಾರ ಹೇಳಿದ ತಕ್ಷಣ ಹೌದು ಅನಿಸಿ ಒಪ್ಪಿಕೊಂಡು ಬಿಡ್ತಾರೆ. ಆದ್ರೆ ಬಹಳ ಜನರನ್ನ ಆರ್ಥಿಕವಾಗಿ ಸ್ವಾವಲಂಭಿ ಮಾಡೋದು ಕಷ್ಟದ ಕೆಲಸ. ಇವಳ ವಿಚಾರದಲ್ಲಿ ಹಾಗನಿಸಿದ ಕೂಡಲೇ ಅನಿವಾರ್ಯವಾಗಿ ನಾನು ಬೇರೆ ದಾರಿ ಹಿಡಿಯಲೇ ಬೇಕಾಯ್ತು ನೀನು ಹೀಗೆ ಇರು, ಏನೂ ಮಾಡ್ಬೇಡ, ಹೇಗಿದ್ರು ಸೇವೆ ಮಾಡೋದ್ರಲ್ಲಿ ಎತ್ತಿದ ಕೈಯಲ್ವ, ಅದರಲ್ಲೇ ಜೀವನ ಕಳೆದುಬಿಡು. ನಿನಗೆ ಎಷ್ಟು ಹೇಳಿದ್ರೂ ಅಷ್ಟೇ, ನನಗೆ ಬುದ್ಧಿ ಇಲ್ಲ.ಅಂತ ಖಾರವಾಗಿ ಮಾತಾಡೋದಕ್ಕೆ ಶುರು ಮಾಡಿದ ಮೇಲೆ ಒಂದು ದಿನ ಅವಳೇ ಹೇಳಿದ್ಲು ಕೆಲಸ ಹುಡುಕೋಕೆ ಶುರು ಮಾಡಿದೀನಿ, ಕೆಲವು ಕಡೆ ಅರ್ಜಿ ಕೂಡ ಹಾಕಿದೀನಿ ಅಂತ. ಅವಳದೇ ಊರಿನಲ್ಲಿ ಕೆಲಸ ಸಿಕ್ಕರೆ ಮಾತ್ರ ಅವಳಿಗೆ ಅನುಕೂಲ ಆದ್ರಿಂದ ನಾನು ಕೂಡ ಕೆಲಸ ಹುಡುಕೋ ವಿಷ್ಯದಲ್ಲಿ ಸಹಾಯ ಮಾಡೋಕಾಗದ ಪರಿಸ್ಥಿತಿಯಲ್ಲಿದ್ದೆ. ಎಲ್ಲೋ ಒಂದು ಕಡೆ ಅಲ್ಪ ಸಮಾಧಾನ ನನಗೆ.
ಇದಾಗಿ ತುಂಬಾ ಸಮಯ ಕಳೆದಿತ್ತು. ಒಂದು ದಿನ ಇದ್ದಕ್ಕಿದ್ದ ಹಾಗೆ ಅವಳು ಗ್ರಾಮಪಂಚಾಯತ್ ಎಲೆಕ್ಷನ್ ಬರ್ತಾ ಇದೆ ಅಲ್ವ, ನನಗೆ ನಿಲ್ಲೋದಕ್ಕೆ ಒಂದು ಆಫರ್ ಬಂದಿದೆ ಅಂತ ಸಹಜವಾಗಿ ಹೇಳಿದಾಗ, ತಕ್ಷಣ ನಿಂತುಬಿಡು ಅಂದೆ ನಾನು. ಏನ್ ತಮಾಷೆ ಮಾಡ್ತಿದ್ದೀರಾ ನೀವು ರಾಜಕೀಯ ಎಲ್ಲಿ? ನಾನೆಲ್ಲಿ? ಅಂತ ಹಗುರವಾಗಿ ನಕ್ಕು ಸುಮ್ಮನಾದಾಗ, ಸರಿ ಬಿಡು ಏನು ಮಾಡ್ಬೇಡ, ಅತ್ತ ಕೆಲಸ ಹುಡುಕೋ ವಿಷ್ಯದಲ್ಲಿ ಪ್ರಗತಿ ಕಾಣಿಸ್ತಾನೆ ಇಲ್ಲ. ಸ್ವ ಉದ್ಯೋಗದ ಸುದ್ದಿ ಇಲ್ಲ. ಈಗ ಜನಸೇವೆ ಮಾಡೋ ಅವಕಾಶ ಯಾವುದೋ ರೂಪದಲ್ಲಿ ಸಿಗ್ತಾ ಇದೆ ಅದಕ್ಕೂ ಬೇಡ ಅಂದ್ರೆ, ಇನ್ನೇನ್ ಮಾಡ್ತೀಯ ನೀನು? ನಿನ್ನ ತರಹ ಎಷ್ಟೋ ಜನಕ್ಕೆ ಪಾಪ ನಿನಗಿರುವಷ್ಟು ಸಾಮರ್ಥ್ಯ, ಧೈರ್ಯವೇ ಇಲ್ಲ. ಅಂತದ್ರಲ್ಲಿ ನಿಂಗೆ ಆ ತಾಕತ್ತಿದೆ ರಾಜಕೀಯ ಅನ್ನೋದು ಖಂಡಿತ ಸುಲಭ ಅಲ್ಲ, ಅದು ಎಂತೆಂತಹ ವ್ಯಕ್ತಿಗಳನ್ನು ಕೂಡ ಬದಲಾಯಿಸಿಬಿಟ್ಟಿದೆ. ಹಾಗೆ ಹೇಳ ಹೆಸರಿಲ್ಲದಂತೆ ಕೂಡ ಮಾಡಿದೆ. ನಿಜ ಆದರೆ ಈ ಹೋರಾಟದ ಬದುಕಲ್ಲಿ ನೀನ್ಯಾಕೆ ಒಂದು ಮನಸ್ಸು ಮಾಡಬಾರ್ದು? ಸೋಲು, ಗೆಲುವು ಎಲ್ಲವೂ ಇದ್ದದ್ದೇ ಸೋತರೆ ಅದು ಕೂಡ ಒಂದು ಪಾಠ, ಗೆದ್ದರೆ ನಿನಗೆ ನಿನ್ನಂತಹ ಅದೆಷ್ಟೋ ವ್ಯಕ್ತಿಗಳಿಗೆ ಸಹಾಯ ಮಾಡೋ ಅವಕಾಶ. ಎಲ್ಲದಕ್ಕಿಂತ ನಿನ್ನ ಸಾಮರ್ಥ್ಯದ ಅರಿವು ನಿನಗಾಗುತ್ತೆ ನಿನ್ನ ಕುಟುಂಬದಲ್ಲಿ ನಿನ್ನ ಸ್ಥಾನಮಾನ ಬದಲಾಗುತ್ತೆ. ನಿನ್ನ ಆತ್ಮವಿಶ್ವಾಸ ಹೆಚ್ಚುತ್ತೆ. ಹಾಗೆ ಇನ್ನೊಂದು ಮಾತು ಇವತ್ತು ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಮಹಿಳೆಯರನ್ನು ಇವತ್ತಿಗೂ ಕೂಡ ರಬ್ಬರ್ ಸ್ಟ್ಯಾಂಪ್’ಗಳಂತೆ ಬಳಸಿಕೊಂಡು, ರಾಜಕೀಯದಾಟವನ್ನ ಆಡುವ ಪದ್ಧತಿ ಇವತ್ತಿಗೂ ಇದೆ. ಮೀಸಲಾತಿಯ ನೆಪದಲ್ಲಿ ಅದೆಷ್ಟೋ ಮಹಿಳೆಯರನ್ನು ನಿಲ್ಲಿಸಿ, ಗೆಲ್ಲಿಸಿ, ಆಡಳಿತ ತಮ್ಮ ಕೈಯಲ್ಲೇ ನಡೆಸುವ ವ್ಯವಸ್ಥೆ ಕೂಡ ನಡೆದುಕೊಂಡು ಬರ್ತಾ ಇದೆ. ಆದರೆ ನೀನು ಮಾತ್ರ ಆ ರೀತಿ ಆಗದೆ ಅಲ್ಪ ಸ್ವಲ್ಪ ಸ್ವಂತ ಬುದ್ಧಿ ಬಳಸಿ, ನಿನ್ನ ವ್ಯಾಪ್ತಿಯಲ್ಲಿ ಬರುವ ಸಮಸ್ಯೆಗಳಿಗೆ ಸಾಧ್ಯ ಆದಷ್ಟು ಸ್ಪಂದಿಸಿ, ನೊಂದ ನಿನ್ನಂತಹ ಅಸಹಾಯಕರಿಗೆ ಸಹಾಯ ಮಾಡೋದಕ್ಕೆ ಆದ್ರೆ ಆ ಚಿಕ್ಕ ಬದಲಾವಣೆಗಿಂತ ಬೇರೆ ಖುಷಿ ಏನಿದೆ ಹೇಳು.
ಇವತ್ತು ರಾಜಕೀಯ ಎಷ್ಟೇ ಕೆಟ್ಟದ್ದು ಅಂದರೂ ಕೂಡ ಅಲ್ಲಿಯೂ ಒಳ್ಳೆಯ ಪ್ರಾಮಾಣಿಕ ವ್ಯಕ್ತಿಗಳಿದ್ದಾರೆ ಅಭಿವೃದ್ಧಿಯನ್ನು ಬಯಸುವ ಮಹಾನ್ ನಾಯಕ, ನಾಯಕಿಯರಿದ್ದಾರೆ. ಒಂದಲ್ಲ ಒಂದು ದಿನ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವದ ನಿಜ ಆಶಯ ಈಡೇರುತ್ತೆ. ಅದು ಗ್ರಾಮ ಪಂಚಾಯತ್ ನಿಂದಲೇ ಶುರು ಆಗ್ಬೇಕು. ಎಷ್ಟೋ ಜನ ರಾಜಕೀಯದ ಕನಸು ಕಾಣ್ತಾರೆ ಆದ್ರೆ ಅವಕಾಶ ಕೆಲವರ ಪಾಲಿಗೆ ಮಾತ್ರ ನಿನಗದು ಆನಾಯಾಸವಾಗಿ ಸಿಕ್ಕಿದೆ. ಇದನ್ನ ಬಳಸಿಕೋ, ಅನ್ನೋ ನನ್ನ ಮಾತುಗಳಿಗೆ ಒಪ್ಪಿ, ಆಕೆ ಬರುವ ಪಂಚಾಯತ್ ಎಲೆಕ್ಷನ್’ಗೆ ಸ್ಪರ್ಧಿಸ್ತಾ ಇದ್ದಾಳೆ. ನನಗೊತ್ತು ಎಲ್ಲ ಹೇಳುವ ಹಾಗೆ ರಾಜಕೀಯ ಅಷ್ಟು ಸುಲಭ ಅಲ್ಲ. ಆದ್ರೆ ಅವಳಿಗಿರುವ ಸಹಾಯ ಮಾಡ್ಬೇಕು ಅನ್ನೋ ಮನಸು, ಪ್ರಾಮಾಣಿಕತೆ, ಕಷ್ಟಗಳಿಗೆ ಮಿಡಿಯುವ ಹೃದಯ ಇದು ನೈಜ ರಾಜಕೀಯಕ್ಕೆ ಸಾಕು, ಇದು ಸಾಲದು ಅನ್ನೋ ಲೆವೆಲ್ಗೆ ನಾವು ಬರೋದಕ್ಕೆ ಕಾರಣ ಆದ ಕೆಟ್ಟ ಶಕ್ತಿಗಳು ಇಂತಹ ಪ್ರಾಮಾಣಿಕ ಶಕ್ತಿಗಳ ಮುಂದೆ ಒಂದಲ್ಲ ಒಂದು ದಿನ ಸೋಲಲೇ ಬೇಕು. ಆ ಸುದಿನದ ಕನಸು ಕಾಣಿ ಅದೆಷ್ಟೋ ಆಶಾವಾದಿ ಭಾರತೀಯರ ಸಾಲಲ್ಲಿ ನಾನು ಕೂಡ ಇದ್ದೇನೆ. ಅಂದ ಹಾಗೆ ನೀವು ಕೂಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವವರಾದರೆ ಮೊದಲನೇದಾಗಿ ತಪ್ಪದೆ ಮತ ಚಲಾಯಿಸಿ. ಹಾಗೆ ನಿಮ್ಮಗ್ರಾಮದ ಭವಿಷ್ಯವನ್ನೇ ಬದಲಿಸಬಲ್ಲ ಜನಪ್ರತಿನಿಧಿಗಳ ಬಗ್ಗೆ ನಿಮ್ಮ ಒಲವಿರಲಿ. ತಮ್ಮ ಭವಿಷ್ಯ ಬದಲಿಸಿಕೊಳ್ಳಲು ಬರುವ ವ್ಯಕ್ತಿಗಳ ಕೈಗೆ ಅಧಿಕಾರ ಸಿಗೋ ಹಾಗೆ ಆಗದಿರಲಿ. …ಗ್ರಾಮಗಳ ಅಭಿವೃದ್ಧಿ ಆಗದೆ ದೇಶದ ಅಭಿವೃದ್ಧಿ ಅಸಾಧ್ಯ ಏನಂತೀರಾ?
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post