ಭದ್ರಾವತಿ: ಮೈಸೂರು ಕಾಗದ ಕಾರ್ಖಾನೆಯ ಭ್ರಷ್ಠ ಅಧಿಕಾರಿಗಳು ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚುವ ಹುನ್ನಾರ ನಡೆಸಿ ಕಾರ್ಮಿಕ ಇಲಾಖೆಯ ಕಾರ್ಯದರ್ಶಿಗಳಿಗೆ ಕಾರ್ಖಾನೆಯಲ್ಲಿ ಸಂಪೂರ್ಣ ಉತ್ಪಾದನೆ ಸ್ಥಗಿತ ಮಾಡಲಾಗಿದೆ ಎಂಬ ಪತ್ರ ಬರೆದಿರುವುದು ದುರಂತ ಎಂದು ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಜಿ. ಬಸವರಾಜಯ್ಯ ಮನವಿಯಲ್ಲಿ ತಿಳಿಸಿದ್ದಾರೆ.
ಎಂಪಿಎಂ ಕಾಗದ ಕಾರ್ಖಾನೆ ನೌಕರರ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಮಿನಿ ವಿಧಾನಸೌಧ ಮುಂಭಾಗ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಇದೇ ಸ್ಥಿತಿ ಮುಂದುವರೆದರೆ ಕಾರ್ಖಾನೆಯಲ್ಲಿ ಹಾಲಿ ಉಳಿದಿರುವ ಕಾಯಂ ಕಾರ್ಮಿಕರ ಬದುಕೂ ಸಹ ಬೀದಿ ಪಾಲಾಗಲಿದೆ. ಸರ್.ಎಂ. ವಿಶ್ವೇಶ್ವರಯ್ಯ ಸ್ಥಾಪಿಸಿರುವ ಎಂಪಿಎಂ ಕಾರ್ಖಾನೆಯನ್ನು ಆಡಳಿತ ವರ್ಗದ ಕೈಗಳು ನಿಷ್ಕ್ರಿಯೆ ಆಳ್ವಿಕೆಯಿಂದ ಅಧೋಗತಿಗೆ ತಂದು ನಿಲ್ಲಿಸಿದ್ದಾರೆ. ಸ್ವಯಂ ನಿವೃತ್ತಿ ಯೋಜನೆಯಡಿ ಸಾವಿರಾರು ಕಾರ್ಮಿಕರು ನಿವೃತ್ತಿ ಪಡೆಯುವಂತೆ ಮಾಡಲಾಗಿದೆ. ಸ್ವಯಂ ನಿವೃತ್ತಿ ಪಡೆಯದ ಸುಮಾರು 240 ಮಂದಿ ಕಾರ್ಮಿಕರು ಎಂಪಿಎಂ ಮತ್ತೆ ಪ್ರಾರಂಭವಾಗುವ ವಿಶ್ವಾಸ ಹೊತ್ತು ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂದಲ್ಲಾ ನಾಳೇ ಕಾರ್ಖಾನೆ ಮತ್ತೆ ಉತ್ತಮ ಪರಿಸ್ಥಿತಿ ತಲುಪುತ್ತದೆ ಎಂಬ ಆಶಾ ಭಾವನೆ ಹೊಂದಿದ್ದಾರೆ. ಸ್ವಯಂ ನಿವೃತ್ತಿ ಪಡೆದ ಕಾರ್ಮಿಕರಿಗೆ ನೀಡಬೇಕಾಗಿರುವ ಸವಲತ್ತುಗಳು ನೀಡದೆ ಸತಾವಣೆ ಮಾಡಲಾಗುತ್ತಿದೆ. ಕಾರ್ಖಾನೆಯ ಮನೆಗಳಲ್ಲಿ ವಾಸಿಸುತ್ತಿರುವವರಿಗೆ ಖಾಲಿ ಮಾಡುವಂತೆ ನೋಟೀಸ್ ನೀಡಲಾಗುತ್ತಿದೆ ಎಂದರು.
ಇಷ್ಟೆಲ್ಲಾ ಅವಾಂತರಗಳು, ಅನಾಹುತಗಳು ನಡೆಯುತ್ತಿದ್ದರು ನಿವೃತ್ತಿ ಪಡೆದ ಕೆಲ ಪಟ್ಟಭದ್ರ ಹಿತಾಸಕ್ತಿ ಅಧಿಕಾರಿಗಳು ಪುನಃ ಹಿಂಬಾಗಿಲಿನಿಂದ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿಕೊಂಡು ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚುವ ಪ್ರಯತ್ನ ಮಾಡುತ್ತಿದ್ದಾರೆ. ಆದ್ದರಿಂದ ಈ ಹಿಂದೆ ನಗರಕ್ಕಾಗಮಿಸಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೀಡಿದ್ದ ಭರವಸೆಯಂತೆ ಈ ಕಾರ್ಖಾನೆಯನ್ನು ಪುನರಾರಂಭಗೊಳಿಸಬೇಕು. ಭ್ರಷ್ಟ ಅಧಿಕಾರಿಗಳನ್ನು ಕಾರ್ಖಾನೆಯಿಂದ ಹೊರಗಟ್ಟಿ ಕಳಂಕ ರಹಿತ ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳನ್ನು ನೇಮಿಸಬೇಕು. ನೌಕರರಿಗೆ ಸಿಗಬೇಕಾದ ಸವಲತ್ತುಗಳನ್ನು ಒದಗಿಸಿ ಕೊಡಬೇಕು. ಕಾರ್ಖಾನೆಯನ್ನು ಸರಕಾರಿ ಸ್ವಾಮ್ಯದಲ್ಲಿಯೆ ಉಳಿಸಬೇಕೆಂದು ಒತ್ತಾಯಿಸಿದರು.
ಪ್ರಸ್ತುತ ಉಳಿದಿರುವ ಕಾರ್ಮಿಕರನ್ನು ಬಳಸಿಕೊಂಡು ಅತಿಕಡಿಮೆ ಬಂಡವಾಳ ತೊಡಗಿಸಿ ಉತ್ಪಾದನೆ ಪ್ರಾರಂಭಿಸಬೇಕು. ಕಾರ್ಖಾನೆಯ ಆಡಳಿತದ ಸುಮಾರು 75 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿರುವ ಕಚ್ಚಾ ವಸ್ತುಗಳಾದ ನೀಲಗಿರಿ ಮತ್ತು ಅಕೇಶಿಯ ಮರಗಳನ್ನು ಕಡಿತಲೆ ಮಾಡಿ ಮಾರಾಟ ಮಾಡುವ ಮೂಲಕ ಕಾರ್ಮಿಕರಿಗೆ ನೀಡಬೇಕಾದ ಸಂಬಳ ಮತ್ತು ಸೌಲಭ್ಯ ನೀಡಬಹುದಾಗಿರುತ್ತದೆ. ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಮುಚ್ಚದಂತೆ ಮರುಜೀವ ನೀಡಿ ಸರ್’ಎಂವಿ ರವರ ಹೆಸರನ್ನು ಉಳಿಸಲು ಮುಂದಾಗಬೇಕೆಂದು ಬಸವರಾಜಯ್ಯ ಒತ್ತಾಯಿಸಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಧರ್ಮಪ್ರಸಾದ್ ಮಾತನಾಡಿ ಎಂಪಿಎಂ ಕಾರ್ಖಾನೆಯ ಇಂದಿನ ದುಸ್ಥಿತಿಗೆ ಕಾರ್ಖಾನೆಯ ಕೆಟ್ಟ ಆಡಳಿತ ನೀತಿ ಮತ್ತು ಸ್ಥಳೀಯ ಜನಪ್ರತಿನಿಧಿಗಳೆಂದು ಆರೋಪಿಸಿದರು. ತಹಶೀಲ್ದಾರ್ ಸೋಮಶೇಖರ್ ಮನವಿಯನ್ನು ಸ್ವೀಕರಿಸಿದರು.
ಈ ಸಂಧರ್ಭದಲ್ಲಿ ಕಾರ್ಮಿಕ ಮುಖಂಡರಾದ ಲಿಂಗೋಜಿರಾವ್, ಮುತ್ತು, ರಮೇಶ್, ಬ್ರಹ್ಮಲಿಂಗಯ್ಯ, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್.ರಾಜು, ಮನೆ ಮಾಲೀಕರ ಸಂಘದ ಅಧ್ಯಕ್ಷ ಎಲ್.ವಿ.ರುದ್ರಪ್ಪ ಹಾಗೂ ವಿವಿಧ ಸಂಘಸಂಸ್ಥೆಗಳ ಮುಖಂಡರು ಹಾಜರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post