ಇಂದು ಕಾರ್ಗಿಲ್ ವಿಜಯ್ ದಿವಸ್… ಇಂತಹ ಯುದ್ದದಲ್ಲಿ ಪಾಲ್ಗೊಂಡು ಸುಬೇದಾರ್ ಆಗಿರುವ ಯೋಗೇಂದ್ರ ಸಿಂಗ್ ಯಾದವ್ ಕೆಲವು ವರ್ಷಗಳ ಹಿಂದೆ ಶಿವಮೊಗ್ಗಕ್ಕೆ ಆಗಮಿಸಿದ್ದರು. ಆ ವೇಳೆ ಅವರೊಂದಿಗೆ ನಡೆಸಿದ ಸಂದರ್ಶನದ ಭಾಗ ಇಲ್ಲಿದೆ.
ಭಾರತದ ಸಾಂಪ್ರದಾಯಿಕ ಶತ್ರು ಪಾಕಿಸ್ಥಾನದ ಮೇಲೆ ಎಂದೆಂದಿಗೂ ಮರೆಯಲಾರದ ಅಪ್ರತಿಮ ವಿಜಯವನ್ನು ಸಾಧಿಸಿದ ಕಾರ್ಗಿಲ್ ಸಮರದಲ್ಲಿ ಶತ್ರುಗಳ ಗುಂಡಿಗೆ ಎದೆಯೊಡ್ಡಿ 527 ಮಂದಿ ಸೈನಿಕರು ವೀರ ಮರಣವನ್ನಪ್ಪಿದರು. ಇಡೀ ದೇಶವೇ ಹೆಮ್ಮೆ ಪಡುವಂತೆ ಯುದ್ದದಲ್ಲಿ ಜಯಗಳಿಸಲು ಕಾರಣರಾದ ಸಾವಿರಾರು ಯೋಧರಲ್ಲಿ ಉತ್ತರ ಪ್ರದೇಶದ ಸುಬೇದಾರ್ ಯೋಗೇಂದ್ರ ಸಿಂಗ್ ಯಾದವ್ ಪ್ರಮುಖರು. ತಮ್ಮ ಸಹೋದ್ಯೋಗಿಗಳನ್ನೆಲ್ಲಾ ಕಣ್ಣ ಮುಂದೆಯೇ ಕಳೆದುಕೊಂಡು, ತಮ್ಮ ಮೈಯಲ್ಲಿ ಶತ್ರುಗಳ ಗುಂಡು ಹೊಕ್ಕಿದ್ದರೂ ಲೆಕ್ಕಿಸದೇ, ಶತ್ರುಗಳೊಂದಿಗೆ ಸೆಣಸಿ, ಟೈಗರ್ ಹಿಲ್‌ಸ್ನ್ನು ಭಾರತಕ್ಕೆ ಗೆದ್ದು ಕೊಟ್ಟ ವೀರಾಗ್ರಣಿ ಯೋಗೇಂದ್ರ ಸಿಂಗ್. ಇವರ ಈ ಅಪ್ರತಿಮ ಸಾಧನೆಗಾಗಿ ಭಾರತ ಸರ್ಕಾರ ಸೇನಾ ಯೋಧರಿಗೆ ನೀಡುವ ದೇಶ ಅತ್ಯುನ್ನತ, ಶ್ರೇಷ್ಠ ಪರಮವೀರ ಚಕ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ತಮ್ಮ ಈ ಅಪ್ರತಿಮ ಸಾಧನೆಯಿಂದಲೇ ದೇಶದ ಕೋಟ್ಯಂತರ ಯುವಕರಿಗೆ ಆದರ್ಶವಾಗಿರುವ ವೀರಾಗ್ರಣಿ ಯೋಗೇಂದ್ರ ಯಾದವ್.
ಪ್ರಶ್ನೆ: ಇತ್ತೀಚಿನ ದಿನಗಳಲ್ಲಿ ಸೇನೆಗೆ ಸೇರುವ ಯುವಕರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಎಲ್ಲಾ ಯುವಕರು ದೇಶಪ್ರೇಮದಿಂದಲೇ ಸೇರುತ್ತಿದ್ದಾರೆ ಎನಿಸುತ್ತದಯೇ?
ಯೋಗೇಂದ್ರ: ಮೊದಲನೆಯದಾಗಿ ನಮ್ಮ ದೇಶದ ಪ್ರತಿ ಯುವಕನಲ್ಲೂ ದೇಶ ಪ್ರೇಮ ಎನ್ನುವುದಿರುತ್ತದೆ. ಇದರಲ್ಲಿ ಅನುಮಾನಗಳಿಲ್ಲ. ಆದರೆ ಯಾವುದೇ ಉದ್ಯೋಗ ದೊರೆಯುತ್ತಿಲ್ಲ ಎಂದು ಸೇನೆಗೆ ಸೇರುವ ಮನಸ್ಥಿತಿಯಿರಬಾರದು. ದೇಶ ಕಾಯುವುದು ಒಂದು ಪುಣ್ಯದ ಕೆಲಸ ಎಂದು ಭಾವಿಸಬೇಕು.
ಪ್ರಶ್ನೆ: ದೇಶದ ಯುವಕರಲ್ಲಿ ದೇಶಪ್ರೇಮ ಕಡಿಮೆಯಾಗುತ್ತಿದೆ ಎನಿಸುತ್ತದೆಯೇ?
ಯೋಗೇಂದ್ರ: ಭಾರತೀಯರಲ್ಲಿ ಎಂದಿಗೂ ದೇಶಪ್ರೇಮ ಕಡಿಮೆಯಾಗುವುದಿಲ್ಲ. ಸೇನೆಯಲ್ಲಿದ್ದು ಮಾತ್ರವೇ ದೇಶ ಸೇವೆ ಮಾಡಬೇಕೆಂದಿಲ್ಲ. ನಮ್ಮ ಪ್ರತಿ ಯುವಕನೂ ತಮ್ಮದೇ ಆದ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವುದೂ ಒಂದು ರೀತಿಯ ದೇಶ ಸೇವೆಯೇ. ಡಾಕ್ಟರ್, ಇಂಜಿನಿಯರ್, ಸರ್ಕಾರಿ ನೌಕರ, ಅಧಿಕಾರಿ ಎಲ್ಲರೂ ಒಂದು ರೀತಿಯಲ್ಲಿ ದೇಶ ಸೇವೆ ಮಾಡುತ್ತಲೇ ಇರುತ್ತಾರೆ. ಹೀಗಾಗಿ ದೇಶಪ್ರೇಮ ಕಡಿಮೆಯಾಗಿದೆ ಎನಿಸುವುದಿಲ್ಲ.
ಪ್ರಶ್ನೆ: ಭಾರತದ ಬಳಿ ಅಣ್ವಸ್ತ್ರಗಳು ಕಡಿಮೆಯಿದೆ. ಯುದ್ಧ ಘೋಷಣೆಯಾದರೆ 20 ದಿನಗಳಲ್ಲಿ ಭಾರತದ ಅಸ್ತ್ರಗಳು ಖಾಲಿಯಾಗುತ್ತವೆ ಎನ್ನುವ ಅಂಶ ನಿಜವೇ?
ಯೋಗೇಂದ್ರ: ಈ ವಿಚಾರ ಖಂಡಿತಾ ಸುಳ್ಳು. ದೇಶವನ್ನು ರಕ್ಷಿಸಲು ಬೇಕಾದಷ್ಟು ಅಸ್ತ್ರಗಳು ಸೇನೆಯಲ್ಲಿವೆ. ಹಾಗೆಯೇ ಇಲ್ಲಿ ಶತ್ರುಗಳು ಎಷ್ಟೇ ಪ್ರಬಲರಾಗಿದ್ದರೂ, ಅವರನ್ನು ಎದುರಿಸಿ, ಜಯಭೇರಿ ಬಾರಿಸುವಷ್ಟು ಸಾಮರ್ಥ್ಯ ಭಾರತೀಯ ಸೇನೆಗೆ ಇದೆ. ಅಸ್ತ್ರ, ಅಣ್ವಸ್ತ್ರಕ್ಕಿಂತಲೂ, ಭಾರತೀಯ ಸೇನೆಯಲ್ಲಿರುವ ಪ್ರತಿಯೊಬ್ಬ ಯೋಧನೂ ಒಂದೊಂದು ಪ್ರಬಲ ಅಸ್ತ್ರ. ಯಾರೇ ನಮ್ಮ ಮೇಲೆ ದಾಳಿಗೆ ಮುಂದಾದರೂ ಎದುರಿಸುವ ಸಾಮರ್ಥ್ಯ ನಮಗಿದೆ.
ಪ್ರಶ್ನೆ: ಪಾಕಿಸ್ಥಾನ ಸೇನೆಗೆ ಹೋಲಿಕೆ ಮಾಡಿದರೆ ಭಾರತೀಯ ಸೇನಾ ಸಾಮರ್ಥ್ಯ ಹೇಗಿದೆ?
ಯೋಗೇಂದ್ರ: ಭಾರತೀಯ ಸೇನೆ ಜಗತ್ತಿನ 2ನೇ ಅತಿದೊಡ್ಡ ಸೇನೆ. ಹೀಗಾಗಿ ಪಾಕ್‌ಗೆ ಹೋಲಿಕೆ ಮಾಡಿದರೆ ನಮ್ಮ ಸಾಮರ್ಥ್ಯ ಹೆಚ್ಚಿದೆ. ಎಲ್ಲಕ್ಕಿಂತ ಮಿಗಿಲಾಗಿ ನಮ್ಮೊಂದಿಗೆ ನೈತಿಕ ಬಲವಿದೆ.
ಪ್ರಶ್ನೆ: ಕಾಶ್ಮೀರ ವಿಚಾರದಲ್ಲಿ ಪಾಕ್‌ನೊಂದಿಗೆ ಯುದ್ಧ ಘೋಷಣೆಯಾದರೆ, ಕಾಶ್ಮೀರವನ್ನು ವಶಪಡಿಸಿಕೊಳ್ಳಬಹುದೇ?
ಯೋಗೇಂದ್ರ: ಖಂಡಿತಾ ವಶಪಡಿಸಿಕೊಳ್ಳಬಹುದು. ಆ ಸಾಮರ್ಥ್ಯ ನಮಗಿದೆ.
ಪ್ರಶ್ನೆ: ಪಾಕಿಸ್ಥಾನದ ಅಪ್ರಚೋದಿತ ದಾಳಿ ವಿಚಾರದಲ್ಲಿ ಅಲ್ಲಿಂದ ಒಂದು ಗುಂಡಿಗೆ, ಪ್ರತಿಯಾಗಿ ಈ ಕಡೆಯಿಂದ ಮೂರು ಗುಂಡು ಹಾರಲಿ ಎಂದು ರಕ್ಷಣಾ ಸಚಿವ(ಈಗ ಮಾಜಿ) ಮನೋಹರ್ ಪರಿಕ್ಕರ್ ಹೇಳಿದ್ದರು. ಈ ಬಗ್ಗೆ ತಮ್ಮ ಅಭಿಪ್ರಾಯ?
ಯೋಗೇಂದ್ರ: ಗಡಿ ವಿಚಾರದಲ್ಲಿ ಶಾಂತಿ ಒಪ್ಪಂದ ಉತ್ತಮವೇ. ಆದರೆ ದಾಳಿಗೆ ಪ್ರತಿದಾಳಿ ಉತ್ತರವಾದಾಗ ಶತ್ರುಗಳಿಗೆ ತಕ್ಕ ಪಾಠ ಕಲಿಸಬಹುದು. ಶಾಂತಿ ವಿಚಾರ ಒತ್ತಟ್ಟಿಗಿದ್ದರೂ, ಆಕ್ರಮಣಕಾರಿ ನೀತಿಗೆ ದಮನಕಾರಿ ನೀತಿಯಿದ್ದಾಗಲೇ, ಸೈನ್ಯದ ಸಾಮರ್ಥ್ಯ ಏನೆಂಬುದು ಜಗತ್ತಿಗೆ ತಿಳಿಯುತ್ತದೆ.
ಪ್ರಶ್ನೆ: ಪಾಕಿಸ್ಥಾನಕ್ಕೆ ಅಣ್ವಸ್ತ್ರ ಪೂರೈಕೆ ವಿಚಾರದಲ್ಲಿ ಅಮೆರಿಕಾ ಸಹಾಯ ಮಾಡುತ್ತಿದೆ ಎಂಬ ಆರೋಪದ ಬಗ್ಗೆ?
ಯೋಗೇಂದ್ರ: ಇದೊಂದು ಅಂತರ್ರಾಷ್ಟ್ರೀಯ ಮಟ್ಟದ ವಿಚಾರ. ಇದರಲ್ಲಿ ಬಹಳಷ್ಟು ಗೊಂದಲಗಳಿವೆ. ಇದರ ಬಗ್ಗೆ ಹೆಚ್ಚಿಗೆಯೇನು ಹೇಳುವುದು ತರವಲ್ಲ.
ಪ್ರಶ್ನೆ: ಮ್ಯಾನ್ಮಾರ್ ಗಡಿಯಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯ ಯಶಸ್ಸಿನಿಂದ ಸೇನೆಯ ಬಲ ಹೆಚ್ಚಾಗಿದೆಯೇ?
ಯೋಗೇಂದ್ರ: ಇದೊಂದು ಸಂವೇದನಾ ಶೀಲ ವಿಚಾರವಾಗಿದೆ. ಗಡಿರೇಖೆಯಲ್ಲಿ ನಡೆದ ಕಾರ್ಯಾಚರಣೆಯಾದ್ದರಿಂದ ಈ ಬಗ್ಗೆ ಮಾತನಾಡುವುದು ಪ್ರಸ್ತುತ ಸೂಕ್ತವಲ್ಲ. ಆದರೆ, ಈ ಕಾರ್ಯಾಚರಣೆಯ ಯಶಸ್ಸಿನಿಂದ ಸೇನೆಯ ನೈತಿಕ ಬಲ ಹೆಚ್ಚಾಗಿರುವುದೆ.
ಪ್ರಶ್ನೆ: ಸರ್ಕಾರಗಳು ಬದಲಾದಾಗ ಸೇನೆಯ ಕಾರ್ಯ ವಿಧಾನವೂ ಬದಲಾಗುತ್ತದೆಯೇ?
ಯೋಗೇಂದ್ರ: ಇಲ್ಲಿ ಯಾವುದೇ ಸರ್ಕಾರಗಳಿದ್ದರೂ ಅದು, ಸೇನೆಗೆ ವಿಚಾರವಲ್ಲ. ಕಾರಣ, ದೇಶ ರಕ್ಷಣೆಯ ದೃಷ್ಟಿಯಿಂದ ಸೇನಾ ವ್ಯಾಪ್ತಿಯಲ್ಲೇ ತೆಗೆದುಕೊಳ್ಳಬಹುದಾದ ಕೆಲವು ಅಧಿಕಾರಗಳು ಇರುತ್ತವೆ. ಸೇನೆ ಎಂದಿಗೂ ದೇಶ ರಕ್ಷಣೆಯಲ್ಲಿ ತೊಡಗಿಕೊಂಡಿರುತ್ತದೆ.
ಪ್ರಶ್ನೆ: ಸೇನೆಗೆ ಸೇರುವ ಆಕಾಂಕ್ಷಿಗಳಿಗೆ ಹಾಗೂ ಯುವಕರಿಗೆ ತಮ್ಮ ಸಂದೇಶ?
ಯೋಗೇಂದ್ರ: ದೇಶ ಕಾಯುವ ಕಾಯಕ ಒಂದು ಪುಣ್ಯಕರವಾದ ಕೆಲಸ. ಭಾರತೀಯ ಸೇನೆ ಜಗತ್ತಿನ 2ನೇ ಅತಿದೊಡ್ಡ ಸೈನ್ಯ ಎಂಬ ಹೆಗ್ಗಳಿಕೆ ಪಡೆದಿದೆ. ಇಂತಹ ಸೇವೆಯಲ್ಲಿ ಯುವಕರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಸೇರಬೇಕು. ಬೇರಾವುದೇ ಉದ್ಯೋಗ ದೊರೆಯುತ್ತಿಲ್ಲ ಎಂದು ಸೇನೆಗೆ ಸೇರುವ ಮನಸ್ಥಿತಿ ಹೊಂದಬಾರದು.
ದೇಶ ಸೇವೆ ಮಾಡುವ ಮಹೋನ್ನತ ಉದ್ದೇಶದಿಂದ ಸೇರಬೇಕು. ಇದರಲ್ಲಿ ಕೇವಲ ಪರೀಕ್ಷೆ ಎದುರಿಸಲು ಸಿದ್ಧರಾದರೆ ಸಾಲದು. ಅಗತ್ಯ ಪೂರ್ವ ತಯಾರಿ ಮಾಡಿಕೊಂಡು, ದೈಹಿಕ ಪರೀಕ್ಷೆ ಹಾಗೂ ಲಿಖಿತ ಪರೀಕ್ಷೆಗಾಗಿ ಧೀರ್ಘಾವದಿ ಸಿದ್ಧತೆ ನಡೆಸಬೇಕು. ಎಲ್ಲಕ್ಕಿಂತ ಮಿಗಿಲಾಗಿ ಇದನ್ನು ದೇಶ ಸೇವೆ ಎಂದು ಮನಸ್ಸಿನಲ್ಲಿ ದೃಢ ಸಂಕಲ್ಪ ಮಾಡಿಕೊಳ್ಳಬೇಕು.
-ಸಂದರ್ಶನ: ಎಸ್.ಆರ್. ಅನಿರುದ್ಧ ವಸಿಷ್ಠ
Discussion about this post