ಕಲ್ಪ ಮೀಡಿಯಾ ಹೌಸ್ | ಆನಂದಕಂದ ಲೇಖನ ಮಾಲಿಕೆ-15 |
ನಾವೆಲ್ಲರೂ ರಾಮನನ್ನು ಆದರ್ಶ ಪುರುಷರನ್ನಾಗಿಸಿಕೊಂಡಿದ್ದೇವೆ. ರಾಜ್ಯವೆಂದರೆ ರಾಮರಾಜ್ಯ! ಮಗನಿದ್ದರೆ ರಾಮನಂಥ ಮಗನಿರಬೇಕು ಎಂದು ಈಗಲೂ ಜನರೆನ್ನುತ್ತಾರೆ. ರಾಮ ಕೇವಲ ದೇವರಾಗಿ ಉಪದೇಶ ಮಾಡದೆ ಮನಷ್ಯನಾಗಿ ನಮ್ಮೊಡನೆದ್ದು ಅನೇಕ ಪಾತ್ರಗಳಲ್ಲಿ ತಾನೇ ನಡೆದು ತೋರಿಸಿದ್ದಾನೆ.
ಮಗನಾಗಿ ರಾಮ-ಪಿತೃವಾಕ್ಯ ಪರಿಪಾಲಕ
ರಾಮನು ದಶರಥನಿಗೆ ಪ್ರೀತಿಯ ದಾಶರಥಿ ಯಾಗಿ ತಂದೆಯ ಮಾತಿಗೆ ಎಂದೂ ತಪ್ಪದೆ, ಅತ್ಯಂತ ಪ್ರೀತಿ ಗೌರವಗಳಿಂದ ನಡೆದುಕೊಂಡ. ತನಗೆ ರಾಜನ ಪಟ್ಟವಿಲ್ಲವೆಂದು ತಿಳಿದಾಗಲೂ, ತಂದೆಯ ಮೇಲೆ ಅದೇ ಪ್ರೀತಿ ಗೌರವದಿಂದಲೇ ಇದ್ದ. ಅಬ್ಬಾ! ರಾಮ ಎಂಥಾ ಅಚ್ಚರಿ. ಇಂದಿನ ಸಿನಿಮಾ ಧಾರವಾಹಿಗಳಲ್ಲಿ ತೋರಿಸುವಂತೆ, ನಮಗೆ ಬೇಕಾದ ವಸ್ತು ಸಿಗಲಿಲ್ಲ ಎಂದರೆ ಮನೆಯ ವಸ್ತುಗಳನ್ನೆಲ್ಲ ಹಾಳುಮಾಡಿ, ಸಿಕ್ಕಲ್ಲಿ, ಸಿಕ್ಕಿದ್ದನ್ನೆಲ್ಲ ಎಸೆದು ಹಠ ಮಾಡುವ ನಾವೆಲ್ಲಿ? ಕಾಡಿಗೆ ಹೋಗಬೇಕಾಗಿ ಬಂದಾಗಲೂ ಮುಖದಲ್ಲಿ ಸಣ್ಣ ಬೇಸರದ ಗೆರೆಯೂ ಇಲ್ಲದೆ ತಂದೆ ಮಾತನ್ನು ನಡೆಸಲು ಹೆಮ್ಮೆಯಿಂದಲೇ ಕಾಡಿಗೆ ಹೊರಟ ರಾಮನೆಲ್ಲಿ? ಇದಕ್ಕಾಗಿಯೇ ರಾಮ ಆದರ್ಶವಾಗಿ ನಿಲ್ಲುವುದು. ರಾಮನನ್ನು ಕಾಡಿಗೆ ಕಳುಹಿಸಿದಳೆಂದು ಕೈಕೇಯಿ ಮೇಲೆ ಕೋಪಗೊಂಡ ಭರತನು ಆಕೆಯನ್ನು ನಿಂದಿಸುವಾಗ “ತಾಯಿ ಕೈಕೇಯಿಯನ್ನು ಎಂದಿಗೂ ನಿಂದಿಸಕೂಡದು, ನಿಂದಿಸಿದ ಪಕ್ಷದಲ್ಲಿ ನಿನ್ನ ಮುಖವನ್ನು ನಾನು ನೋಡುವುದಿಲ್ಲ” ಎಂದು ಶ್ರೀರಾಮ ಭರತನನ್ನು ತಡೆಯುವ ಮೂಲಕ ಎಚ್ಚರಿಸುತ್ತಾನೆ.ರಾಜನಾಗಿ ರಾಮ
ರಾಮನು ಪ್ರಜೆಗಳನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ. ಪ್ರಜೆಗಳಲ್ಲಿ ಯಾರಿಗಾದರೂ ತೊಂದರೆ ಉಂಟಾದರೆ ತಾನೇ ಖುದ್ದಾಗಿ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದ. ಮಕ್ಕಳ ಸಂತೋಷವನ್ನು ತಂದೆ ಅನುಭವಿಸುವಂತೆ ಪ್ರಜೆಗಳ ಸಂತೋಷವನ್ನು ತಾನು ಪ್ರೀತಿಯಿಂದ ಜೊತೆಗಿದ್ದು ಸವಿಯುತ್ತಿದ್ದ. ವೇಷ ಮರೆಸಿಕೊಂಡು ಪ್ರಜೆಗಳ ಮಧ್ಯೆ ಓಡಾಡಿ, ಅವರ ಕಷ್ಟ ಸುಖಗಳನ್ನು ತಿಳಿಯುತ್ತಿದ್ದ, ತಿಳಿದು ದುಃಖಗಳನ್ನು ತಿಳಿಗೊಳಿಸುತ್ತಿದ್ದ.
ರಾಮನು ಪತಿಯಾಗಿ
ರಾಮನು ಸೀತೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ತಾನು ಕಾಡಿಗೆ ಹೊರಟುನಿಂತಾಗ ತಾನೂ ಬರುವುದಾಗಿ ಹಠ ಹಿಡಿದ ಸೀತೆಯನ್ನು ಬಗೆ ಬಗೆಯಾಗಿ ತಡೆದ. ಆದಾಗ್ಯೂ ಕೇಳದ ಸೀತೆಯು ಲಕ್ಷ್ಮಣ ರಾಮನೊಡನೆ ಕಾಡಿಗೆ ಹೊರಟಳು. ಮತ್ತೆ ಶೂರ್ಪನಖಿ ಬಂದಾಗಲೂ ಮರ್ಯಾದಾಪುರುಷೋತ್ತಮನಾದ ಶ್ರೀರಾಮ ತಾನು ಏಕಪತ್ನಿ ವ್ರತಸ್ಥ ಎಂದು ಆಕೆಯನ್ನು ತಡೆದ. ಅಶ್ವಮೇಧ ಯಜ್ಞದ ಪ್ರಸಂಗ ಬಂದಾಗ ಬೇರೆ ವಿವಾಹವಾಗದೆ ಬಂಗಾರದ ಸೀತೆಯನ್ನು ಮಾಡಿ ಪಕ್ಕದಲ್ಲಿ ಇರಿಸಿಕೊಂಡು ಯಾಗ ಮಾಡಿದನು. ಸೀತೆ ಜೊತೆಯಲ್ಲಿದ್ದಾಗಲೂ ಇಲ್ಲದಿದ್ದಾಗಲೂ ರಾಮನು ಸೀತಾಪತಿಯಾಗಿಯೇ ಇದ್ದ.ಅಣ್ಣನಾಗಿ ರಾಮ
ರಾಮ ಕಾಡಿಗೆ ಹೋಗಬೇಕಾಗಿ ಬಂದಾಗ ಭರತನ ಬಗ್ಗೆ ಕೊಂಕು ಮಾತು ಆಡಲಿಲ್ಲ. ಕಾಡಿನಲ್ಲಿ ಲಕ್ಷ್ಮಣನಿಗಾಗಿ ಕಾಳಜಿ ವಹಿಸಿದ. ಮಾರೀಚ ವಧೆ ಸಂದರ್ಭದಲ್ಲಿ ಮೊದಲೇ ಸೀತೆಯಿಂದ ಬೈಸಿಕೊಂಡು ಬಂದ ಲಕ್ಷ್ಮಣನ ಮನಸ್ಸಿಗೆ ಇನ್ನಷ್ಟು ನೋವಾದೀತು ಎಂದು ಯೋಚಿಸಿದ ರಾಮ, ಸೀತೆಯನ್ನು ಬಿಟ್ಟು ನೀನೇಕೆ ಇಲ್ಲಿ ಬಂದೆ? ಎಂದು ಒಮ್ಮೆ ಮಾತ್ರ ಕೇಳಿದ ಹೊರತೂ ಮತ್ತೆಂದೂ ಆತನನ್ನು ನಿಂದಿಸಲಿಲ್ಲ. ಈಗಂತೂ ಮಕ್ಕಳು ಪರೀಕ್ಷೆಯಲ್ಲಿ ಚೆನ್ನಾಗಿ ಅಂಕ ಪಡೆಯಲಿಲ್ಲವೆಂದರೆ ಮಕ್ಕಳನ್ನು ಪರಿಪರಿಯಾಗಿ ನಿಂದಿಸುತ್ತಾರೆ. ಒಮ್ಮೆಯಾದರೂ ಮಗುವಿನ ಜಾಗದಲ್ಲಿ ನಿಂತು ಯೋಚಿಸಿ ನಿರ್ಣಯಿಸಬೇಕಲ್ಲವೇ? ರಾಮನು ಕೊನೆಯ ತನಕವೂ ಲಕ್ಷಮಣನಿಗೆ ‘ನಿನ್ನಿಂದ ಹೀಗಾಯಿತು‘ ಎಂದು ಮಾತಿನಿಂದ ತಿವಿಯಲಿಲ್ಲ.
ಹೀಗೆ ರಾಮಚಂದ್ರನು ಸೂರ್ಯವಂಶದಲ್ಲಿ ಬಂದ ಬೆಳದಿಂಗಳು. ಈ ಲೇಖನದಲ್ಲಿ ರಾಮಚಂದ್ರನ ಹಲವಾರು ಮುಖಗಳ ಪರಿಚಯವನ್ನು ಮಾಡುವ ಪ್ರಯತ್ನವನ್ನು ಮಾಡಿದ್ದೇನೆ. ರಾಮನು ಎಲ್ಲಾ ಪಾತ್ರಗಳನ್ನೂ ಪರಿಪೂರ್ಣವಾಗಿ, ಸಮರ್ಥವಾಗಿ ನಿರ್ವಹಿಸುತ್ತಾನೆ. ಇದಕ್ಕೇ ರಾಮನೊಬ್ಬ ಆದರ್ಶ ವ್ಯಕ್ತಿಯಾಗಿ ನಿಂತ. ರಾಮಾಯಣವನ್ನು ಈ ನಿಟ್ಟಿನಲ್ಲಿ ಓದಿ, ಅದರಂತೆ ಜೀವನದಲ್ಲಿ ರಾಮನ ಆದರ್ಶಗಳನ್ನು ಅಳವಡಿಸಿಕೊಳ್ಳೋಣ. ಇದಕ್ಕೆ ಪೂರಕವಾಗಿಯೇ ಅಯೋಧ್ಯಾಪತಿ ಶ್ರೀರಾಮಚಂದ್ರ ನಮಗಾಗಿ 500 ವರ್ಷಗಳ ನಂತರ ಮತ್ತೆ ಭಾರತದ ಅಸ್ಮಿತೆಯ ಮೂರ್ತರೂಪವಾಗಿ ಬಾಲರೂಪದಲ್ಲಿ ಪ್ರತಿಷ್ಠಾಪನೆಗೊಂಡಿದಾನೆ. ರಾಮನಂತಹ ರಾಜನ ಸಂರಕ್ಷಣೆಯಲ್ಲಿ ನಾವೆಲ್ಲರೂ ಸುರಕ್ಷಿತವಾಗಿದ್ದೇವೆ. “ರಾಜಾ ಕಾಲಸ್ಯ ಕಾರಣಂ” ಎಂಬ ಮಾತು ಸತ್ಯಗೊಳಿಸುವಲ್ಲಿ ನಾವು ಕಂಕಣಬದ್ಧರಾಗಬೇಕಿದೆ. ಆತನ ಆದರ್ಶಗುಣಗಳನ್ನು ಅಳವಡಿಸಿಕೊಂಡು ರಾಮನೆಂದರೆ ಭರತ, ಭಾರತವೆಂದರೆ ರಾಮ ಎಂಬ ಘೋಷವನ್ನು ಜಗತ್ತಿನಾದ್ಯಂತ ಮೊಳಗಿಸುವಲ್ಲಿ ಕಾರ್ಯರತರಾಗಬೇಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post