ಹಿಂದೂಗಳಲ್ಲಿ ಪಿತೃದೇವತೆಗಳ/ತಮ್ಮ ಹಿರಿಯರನ್ನು ಧಾರ್ಮಿಕವಾಗಿ ನೆನೆಯುವ ಪವಿತ್ರ ಮಾಸ ಮಹಾಲಯ/ಪಕ್ಷ ಮಾಸ. ಇಂತಹ ಪಕ್ಷ ಮಾಸದ ಮಹತ್ವವೇನು? ಇದರ ಪವಿತ್ರವೇನು? ಆಚರಣೆಯ ಮಹತ್ವವೇನು? ಆಚರಣೆ ಹೇಗೆ ಎಂಬ ಕುರಿತಾಗಿ ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅವರು ಬರೆದಿರುವ ಲೇಖನ ಮಾಲಿಕೆ ಇಂದಿನಿಂದ ಪ್ರಕಟವಾಗಲಿದೆ.
ಪಕ್ಷವೆಂದರೇನು?
ಮಹಾಭಾರತ ಪುರಾಣದ ಪ್ರಕಾರ ಕರ್ಣ ಯುದ್ಧದಲ್ಲಿ ಹತನಾದಾಗಿ, ಸ್ವರ್ಗ ಸೇರಿದಾಗ ಅವನಿಗೆ ಬಂಗಾರ ಮತ್ತು ಆಭರಣಗಳನ್ನು ಆಹಾರವಾಗಿ ನೀಡಲಾಯಿತು. ಆದರೆ ಕರ್ಣನಿಗೆ ಬೇಕಾಗಿದ್ದು ನಿಜವಾದ ಆಹಾರ. ಇದರಿಂದ ಬೇಸತ್ತ ಕರ್ಣ ಇಂದ್ರನಲ್ಲಿ ಕೇಳುತ್ತಾನೆ. ಆಗ ಇಂದ್ರ ಹೇಳುತ್ತಾನೆ “ನೀನು ನಿನ್ನ ಪೂರ್ವಿಕರಿಗೆ ಅವರ ಶ್ರಾದ್ಧದಲ್ಲಿ ಅನ್ನವನ್ನು ದಾನವಾಗಿ ನೀಡಿಲ್ಲ. ಜೀವಮಾನ ಪೂರ್ತಿ ಬೇಕಾದಷ್ಟು ಬಂಗಾರಾದಿ ಆಭರಣಗಳನ್ನು ದಾನವಾಗಿ ನೀಡಿದ್ದೇ. ಅದಕ್ಕಾಗಿ ನಿನಗೆ ನಿಜವಾದ ಆಹಾರ ದೊರಕುತ್ತಿಲ್ಲ”. ತನಗೆ ತನ್ನ ಪೂರ್ವಜರ ಬಗ್ಗೆ ಏನೂ ಗೊತ್ತಿಲ್ಲದಿದ್ದರಿಂದ ಯಾವ ಶ್ರಾದ್ಧವನ್ನು ಮಾಡಲಾಗಿಲ್ಲ ಎಂದು ಕರ್ಣ ಹೇಳುತ್ತಾನೆ. ಇದಕ್ಕಾಗಿ ಅವನಿಗೆ ವಿಶೇಷವಾಗಿ ಪರಿಹಾರ ರೂಪವಾಗಿ ೧೫ ದಿನಗಳ ಕಾಲ ಭೂಲೋಕಕ್ಕೆ ಹೋಗಿ ಶ್ರಾದ್ಧ ಮಾಡಿ ಅವರ ನೆನಪಿನಲ್ಲಿ ಆಹಾರವನ್ನು ದಾನ ಮಾಡಲು ಅನುಮತಿ ನೀಡುತ್ತಾರೆ. ಆ ಕಾಲಕ್ಕೆ ಪಕ್ಷಮಾಸವೆನ್ನುತ್ತಾರೆ.
ಮಹಾಲಯ ಅಂದರೆ – “ಮಹಾ” – ದೊಡ್ಡ “ಲಯ” – ನಾಶ – ಸಮುದ್ರ ಮಥನ ಸಂದರ್ಭದಲ್ಲಿ ಬಹಳ ಋಷಿಗಳು ಮತ್ತು ದೇವತೆಗಳು ದೈತ್ಯರಿಂದ ಸಂಹರಿಸಲ್ಪಟ್ಟರು. ಈ ಋಷಿಗಳು ನಮ್ಮ ಪೂರ್ವಜರಾಗಿದ್ದುದರಿಂದ ಅವರ ನೆನಪಿನಲ್ಲಿ ಮಹಾಲಯ ಪಕ್ಷವವನ್ನು ಆಚರಿಸುತ್ತೇವೆ. ಅದುವೇ ಸರ್ವಪಿತೃ ಅಮಾವಾಸ್ಯೆ.
ಪಿತೃಗಳಿಗೆ ತಿಲ ತರ್ಪಣವೇಕೆ?
ಎಳ್ಳುಗಳ ಅಭಿಮಾನಿ ದೇವತೆ ಸೋಮ (ಚಂದ್ರ). ಅವು ಅವನ ವೃದ್ಧಿಗೂ ಕಾರಾಣವಾಗಿವೆ. ಅವನೇ ಪಿತೃಗಳಿಗೆ ಆಧಾರ. ಪಿತೃಲೋಕ ಚಂದ್ರನ ಮೇಲ್ಭಾಗದಲ್ಲಿದೆ. ಚಂದ್ರನ ಕಲೆಗಳೆ ಪಿತೃಗಳಿಗೆ ಆಹಾರ. ಆದ್ದರಿಂದ ಚಂದ್ರನಿಗೆ ಪ್ರಿಯವಾದ ಎಳ್ಳು ಪಿತೃದೇವತೆಗಳಿಗೂ ಪ್ರಿಯವಾಗಿವೆ. ಭೂಮಿಯಲ್ಲಿ ಸೂರ್ಯನ ಚಲನೆಗೆ ಅನುಗುಣವಾಗಿ ರಾತ್ರಿ ಹಗಲಾಗುವಂತೆ ಪಿತೃಲೋಕದಲ್ಲೂ ಸೂರ್ಯನ ಚಲನೆಗೆ ಕಾರಣವಾಗಿವೆ. ಭೂಮಿಯಲ್ಲಿ 24 ಘಂಟೆಗೆ ಒಂದು ದಿನವಾದರೆ ಚಂದ್ರನಲ್ಲಿ 15 ದಿನ ಹಗಲು 15 ದಿನ ರಾತ್ರಿಯಾದರೆ 1 ದಿನವಾಗುವುದು. ಶುಕ್ಲಪಕ್ಷದ ಅಷ್ಟಮಿಯಿಂದ ಕೃಷ್ನಪಕ್ಷದ ಅಷ್ಟಮಿಯವತೆಗೆ ಪಿತೃಗಳಿಗೆ ರಾತ್ರಿಯಾದರೆ, ಕೃಷ್ಣಪಕ್ಷದ ಅಷ್ಟಮಿಯಿಂದ ಶುಕ್ಲ ಪಕ್ಷದ ಅಷ್ಟಮಿಯವರೆಗೆ ಹಗಲು. ಅಂದರೆ ನಮ್ಮ ಒಂದು ತಿಂಗಳು ಪಿತೃಗಳಿಗೆ ಒಂದು ದಿನ. ಆಗ ಪಿತೃಗಳಿಗೆ ಅಮಾವಾಸ್ಯೆ ನಡು ಮಧ್ಯಾಹ್ನವೆನಿಸುತ್ತದೆ. ಆದ್ದರಿಂದ ಅಮಾವಾಸ್ಯೆಯಂದು ಪಿತೃಗಳಿಗೆ ತಿಲ ತರ್ಪಣಕ್ಕೆ ಮಹತ್ವ. ದಕ್ಷಿಣಾಯಣದ ಕನ್ಯಾಮಾಸದಲ್ಲಿ ಸೂರ್ಯನು ಭೂಮಿಗೆ ಅತಿ ಸಮೀಪದಲ್ಲಿರುವುದರಿಂದ ಪಿತೃಪಕ್ಷದಲ್ಲಿ ತರ್ಪಣ ಶ್ರಾದ್ಧಕ್ಕೆ ಹೆಚ್ಚಿನ ಮಹತ್ವವಿದೆ.
ದರ್ಬೆಯನ್ನು ಏಕೆ ಪವಿತ್ರ ಎನ್ನುತ್ತಾರೆ ?
ದರ್ಬೆ, ಕುಶ, ಬರ್ಹಿ, ಇವುಗಳು ಪವಿತ್ರ ದರ್ಬೆಯ ವಿವಿಧ ನಾಮಗಳು. ಒಮ್ಮೆ ಗರುಡನು ತನ್ನ ತಾಯಿಯಾದ ವಿನುತೆಗೆ, ಸರ್ಪಗಳ ತಾಯಿಯಾದ ಕದೃವಿನಿಂದ ಮುಕ್ತಿ ಪಡೆಯಲು, ದೇವೇಂದ್ರನಿಂದ ಅಮೃತವನ್ನು ಪಡೆದು ಅದನ್ನು ಸರ್ಪಗಳಿಗೆ ನೀಡುವುದಕ್ಕಾಗಿ ಸ್ನಾನ ಮಾಡಿ ಶುದ್ಧವಾಗಿ ಬರಲು ಹೇಳುತ್ತಾನೆ. ಮತ್ತು ಆ ಸರ್ಪಗಳು ಪುನಃ: ಬರುವವರೆಗೂ ದರ್ಬೆಯ ಮೇಲೆ ಇಟ್ಟಿರುತ್ತಾನೆ. ಅಷ್ಟರಲ್ಲಿ ದೇವೇಂದ್ರನು ಬಂದು ಆದರೆ ಅಮೃತವನ್ನು ಹೊತ್ತುಕೊಂಡು ಹೋಗುವಾಗ ಆದರೆ ಅಮೃತದ ಒಂದು ಬಿಂದು ದರ್ಬೆಯ ಮೇಲೆ ಬೀಳುತ್ತದೆ. ಆದ್ದರಿಂದ ದರ್ಬೆಯು ಶುದ್ಧವಾಗಿದೆ ಮತ್ತು ಪವಿತ್ರವೆನಿಸಿದೆ.
” ಶ್ರಾದ್ಧದಲ್ಲಿ ಬರುವ ಕೆಲವು ಶಬ್ದಗಳ ಅರ್ಥ ವಿಶೇಷಗಳು “
- ಸಂಕಲ್ಪ = ” ಸಂಕಲ್ಪ: ಕರ್ಮ ಮಾನಸಂ ” ಉಕ್ತಿಯಂತೆ ಇಂಥಹ ಕರ್ಮ ಮಾಡುತ್ತೇನೆಂದು ಮನಸ್ಸಿನಿಂದ ನಿಶ್ಚಯಿಸಿ ಉಚ್ಛಾರ ಮಾಡುವುದು!
- ಕ್ಷಣ = ದೇವ – ಪಿತೃ ಸ್ಥಾನಗಳಲ್ಲಿರುವ ಬ್ರಾಹ್ಮಣರಿಗೆ ಆಮಂತ್ರಣ ಕೊಡುವುದು ” ಕ್ಷಣ ” ಎನ್ನಿಸುತ್ತದೆ.
- ಮಧುಮತೀ ಜಪ = ಮಧುವಾತಾ ಋತಾಯತೇ ಮಂತ್ರದ ೩ ಋಕ್ಕುಗಳನ್ನು ಜಪಿಸುವುದು.
- ಕುಶ = ದರ್ಭೆ
- ಯುವ = ಅಕ್ಕಿ ಕಾಳು
- ತಿಲ = ಕರಿ ಎಳ್ಳು
- ಭೃಂಗರಾಜ = ಗರಗದ ಸೊಪ್ಪು
- ನವೀತಿ = ಜನಿವಾರವನ್ನು ಮಾಲಾಕಾರವಾಗಿ ಹಾಕಿಕೊಳ್ಳುವುದು
- ಪ್ರಾಚೀನಾವೀತಿ = ಜನಿವಾರವು ಬಲ ಹೆಗಲ ಮೇಲಿದ್ದು ಎಡಗೈ ಕೆಳಗೆ ಇರುವಂತೆ ಅಪಸವ್ಯ ಹಾಕಿಕೊಳ್ಳುವುದು. ಇಂದು ” ಪಿತೃ ಅರ್ಚನೆ ” ಮಾಡುವಾಗ ಇರಬೇಕಾದುದು.
- ಸವ್ಯ = ಜನಿವಾರವು ಎಡ ಹೆಗಲ ಮೇಲಿರುವ ಬಲಗೈ ಕೆಳಗೆ ಇರುವಂತೆ ಹಾಕಿ ಕೊಳ್ಳುವುದು
- ದರ್ಭ ಪತ್ರ = ತುಂಡು ಮಾಡಿದ ದರ್ಭೆಗಳು
- ಕೂರ್ಚ = ಏಳು ( 7 ) ದರ್ಭೆಗಳಿಂದ ಕೂಡಿಸಿ ಮಾಡಿದ ಸಾಧನ. ಇದು ಪಿಂಡಪ್ರಧಾನದಲ್ಲಿ ಅತಿ ಮುಖ್ಯವಾದುದು.
- ಪಾಣಿ ಹೋಮ = ಬ್ರಾಹ್ಮಣರ ಕೈಯಲ್ಲಿ ಹೋಮ ಮಾಡುವುದು
- ವಿಕಿರ = ದೇವ – ಪಿತೃ ಬ್ರಾಹ್ಮಣರ ಎಲೆಯ ಮುಂಭಾಗದಲ್ಲಿ ನೀರು ಹಾಕಿ ಅನ್ನವನ್ನು ಉದುರಿಸುವುದು.
- ಪಾರ್ವಣ = ” ತ್ರಯಾಕೃತಂ ಪಾರ್ವಣಂ ” ಎಂಬ ಉಕ್ತಿಯಂತೆ ಪಿತೃ, ಪಿತಾಮಹ, ಪ್ರಪಿತಾಮಹ ಈ ಮೂವರಿಗೆ ಕೊಡಲ್ಪಟ್ಟ ಪಿಂಡಗಳಿಗೆ ” ಪಾರ್ವಣ ” ಎಂದು ಕರೆಯುತ್ತಾರೆ.
- ಪಾತ್ರೋಚ್ಚಾಲನ = ದೇವ, ಪಿತೃ ಬ್ರಾಹ್ಮಣರ ಭೋಜನಾನಂತರ ಉಚ್ಛಿಷ್ಟದ ಎಲೆಗಳನ್ನು ತೆಗೆದು ಬಿಡುವುದು.
- ಬ್ರಹ್ಮಾರ್ಪಣ = ಶ್ರಾದ್ಧದಲ್ಲಿ ದೇವ, ಪಿತೃ ಬ್ರಾಹ್ಮಣರ ಉದ್ಧಿಶ್ಯವಾಗಿ ಕೊಡುವ ಅನ್ನವನ್ನು ಕೃಷ್ಣಾರ್ಪಣ ಪೂರ್ವಕ ಅರ್ಪಿಸುವುದು.
- ಅಷ್ಟಾರ್ಘ್ಯ ಪದಾರ್ಥಗಳು = ಕುಶ ಪುಷ್ಪ ತಿಲ ವ್ರೀಹಿ ಕ್ಷೀರದಧ್ಯಾಜ್ಯಸರ್ಷಪಾ: । – ದರ್ಭೆ, ತುಳಸೀ ( ಹೂ ). ಎಳ್ಳು, ಅಕ್ಕಿ, ಹಾಲು, ಮೊಸರು, ತುಪ್ಪ, ಬಿಳಿ ಸಾಸುವೆ!
- ಬ್ರಹ್ಮದಂಡ = ದಕ್ಷಿಣೆ – ದರ್ಭೆ – ಎಳ್ಳು ಇವುಗಳನ್ನು ತಟ್ಟೆಯಲ್ಲಿ ಹಾಕಿರುವುದು.
- ಶಕಲ = ಎರಡು ಉದ್ದವಾದ ದರ್ಭೆಗಳು
ಪಿತೃಪಕ್ಷದಲ್ಲಿ ಷಣ್ಣವತಿನಾಮಕನ ಸ್ಮರಣೆ
ಷಣ್ಣವತಿ ವಾಚ್ಯನಾದ ಶ್ರೀಹರಿಯ ಸ್ಮರಣೆ ಪಿತೃಕಾರ್ಯಗಳಲ್ಲಿ ಹಾಗೂ ಭಗವದ್ರೂಪಗಳ ಪರಿಗಣನೆಯಲ್ಲಿ ವಿಶೇಷವೆನಿಸಿದೆ… ಈ ಪದದ ಪ್ರತಿಪಾದ್ಯನೂ ಪರಮಾತ್ಮನೇ ಆಗಿದ್ದಾನೆ ….
ಇದನ್ನೇ ಶ್ರೀ ಮಾನವೀಪ್ರಭುಗಳು ಹರಿಕಥಾಮೃತಸಾರದಲ್ಲಿ
ಷಣ್ಣವತಿ ಎಂಬಕ್ಷರೇಡ್ಯನು ಹಣ್ಣವತಿ ನಾಮದಲಿ ಕರೆಸುತ
ತನ್ನವರು ಸದ್ಭಕ್ತಿಪೂರ್ವಕದಿಂದ ಮಾಡುತಿಹ
ಪುಣ್ಯಕರ್ಮವ ಸ್ವೀಕರಿಸಿ ಕಾರುಣ್ಯಸಾಗರ ಸಲಹುವನು ಬ್ರಹ್ಮಣ್ಯ ದೇವ ಭವಾಬ್ದಿ ಪೋತ ಬಹುಪ್ರಕಾರದಲಿ ಅಂತ ಹೇಳ್ತಾರೆ…
ಮತ್ತೊಂದು ಪದ್ಯದಲಿ ಸಹಾ
ಪಿತೃಗೆ ತರ್ಪಕನೆನಿಸಿಕೊಂಡತುಳ ಮಹಿಮನು ಷಣ್ಣವತಿನಾಮದಲಿ ನೆಲೆಸಿಹನು ಅಂತ
ಅರ್ಥಾತ್ ಷಣ್ಣವತಿ ನಾಮದಿಂದ ಪರಮಾತ್ಮನು ವಸು, ರುದ್ರ,ಆದಿತ್ಯರಲ್ಲಿ ಹಾಗೂ ಪಿತೃಕಾರ್ಯಕ್ಕೆ ಸಂಬಂಧಿಸಿದ ಕರ್ತೃ, ಕರ್ಮ, ಕ್ರಿಯೆಗಳ ಒಳಗಿದ್ದು ಅಧಿಕಾರಿಗಳು ಮಾಡುವಂತಹಾ ಸೇವೆಗಳನ್ನು ಸ್ವೀಕರಿಸಿ ಅವರವರ ಪಿತೃಗಳಿಗೆ ಅನಂತಾನಂತ ಸುಖಗಳನ್ನು ನೀಡುವನು ಎಂದು. ಇದನ್ನೇ ಇನ್ನೂ ಒಂದು ರೀತಿಯಲ್ಲಿ ನೋಡಿದರೆ….
ಷಣ್ಣವತಿನಾಮಕ ಶ್ರೀಹರಿ, ಅನಿರುದ್ಧರೂಪದ ತೊಂಭತ್ತು ಮೂರು (96) ರೂಪದಿಂದ, ಯಜಮಾನನಲ್ಲಿದ್ದು ವಸು , ರುದ್ರ ಹಾಗೂ ಆದಿತ್ಯರಲ್ಲಿ ಅನಿರುದ್ಧ, ಪ್ರದ್ಯುಮ್ನ, ವಾಸುದೇವ ರೂಪದಿಂದ ಇದ್ದು ಭಕ್ತಿಯಿಂದ ಮಾಡುವಂತಹಾ ಪಿತೃಕಾರ್ಯಗಳನು ಸ್ವೀಕರಿಸಿ ಪಿತೃಗಳಿಗೆ ಸುಖವನ್ನು ನೀಡುವನು ಅಂತ.
ಇದನ್ನು ತಿಳಿಸಿದ ಹರಿಕಥಾಮೃತಸಾರದ ಪದ್ಯ…
ಷಣ್ಣವತಿನಾಮಕನು ವಸು ಮೂಗಣ್ಣ ಭಾಸ್ಕರರೊಳಗೆ ನಿಂತು ಪ್ರಪನ್ನರನುದಿನ ನಿಷ್ಕಪಟಸದ್ಭಕ್ತಿಯಲಿ ಮಾಳ್ಪ ಪುಣ್ಯಕರ್ಮವ ಸ್ವೀಕರಿಸಿ ಕಾರುಣ್ಯ ಸಾಗರನಾ ಪಿತೃಗಳಿಗಗಣ್ಯ ಸುಖವಿತ್ತವರ ಪೊರೆವನು ಎಲ್ಲ ಕಾಲದಲಿ ಈ ಷಣ್ಣವತಿ ಗಣನೆಯನ್ನು ಶಾಸ್ತ್ರದಲಿ …..
ಅಮಾಮನುಯುಗಕ್ರಾಂತ ಧೃತಿಪಾತ ಮಹಾಲಯಾಃ/
ತಿಸ್ರಾಷ್ಟಕಾ ಇಮಾಃ ಪ್ರೋಕ್ತಾ ಷಣ್ಣವತ್ಯಃ ಪ್ರಕೀರ್ತಿತಾಃ//
ಅಂತ…ಅರ್ಥಾತ್…
12 – ಅಮಾವಾಸ್ಯೆ
12 – ವೈಧೃತಿ
14 – ಮನ್ವಾದಿ
12 – ವ್ಯತೀಪಾತ
4- ಯುಗಾದಿ
15 – ಮಹಾಲಯಾ
12 – ಸಂಕ್ರಮಣ
15- ಅಷ್ಟಕಶ್ರಾದ್ಧಗಳು (ಅಂದರೇ ಭಾದ್ರಪದ, ಮಾರ್ಗಶಿರ, ಪುಷ್ಯ, ಮಾಘ, ಫಾಲ್ಗುಣ – ಬಹುಳ ಸಪ್ತಮಿ, ಅಷ್ಟಮಿ, ನವಮಿ ತಿಥಿಗಳು)
ಒಟ್ಟು – 96
ಇಲ್ಲಿ ಒಂದು ಅನುಮಾನ ಬರಬಹುದು… ಹೋದವರು ಬೇರೇ ಯೋನಿಗಳಲ್ಲಿ ಜನ್ಮಿಸಿರ್ತಾರೆ ಅಲ್ವಾ ಅಂತ… ಆದರೆ…
ಸಾವು ಎನ್ನುವುದು ಈ ಸ್ಥೂಲ ದೇಹಕ್ಕೆ ಹೊರತು , ಈ ಜೀವನಿಗಲ್ಲ. ಜೀವ ಎಂದಿಗೂ ಶಾಶ್ವತವಾದುದ್ದು. ಜೀವಕ್ಕೆ ದೇಹಾಂತರವಾಗಿ ಯಾವ ಲೋಕಕ್ಕೆ ಹೋಗುತಾನೆ ಅನ್ನುವುದು ಗೊತ್ತಿಲ್ಲ. ಅದರೇ ಸಾವು ಅನಿವಾರ್ಯ. ಈಗ ಯಾವುದೇ ಯೋನಿಯಲ್ಲಿ ಜನಿಸಿದರೂ ಸಹಾ… ಅಂದರೆ ಕೀಟವಾಗಲಿ, ಹಸುವಾಗಲೀ, ಹಂದಿಯಾಗಲೀ, ಇರುವೆ, ಮನುಷ್ಯ ಹೇಗೇ ಹುಟ್ಟಿ ಬರಲೀ .. ಹಿಂದಿನ ಜನ್ಮದ ಬಂಧುಗಳು ಈ ಜೀವನ ನಿಮಿತ್ತ ಶ್ರಾದ್ಧವನ್ನು ಮಾಡಿದಾಗ, ನಮಗೆ ಅಂದರೆ ನಮ್ಮೊಳಗಿನ ಈ ಜೀವನಿಗೆ ಇದ್ದಕ್ಕಿದ್ದಂತೆ ತೃಪ್ತಿ , ಸಂತೋಷ ಆಗುತದೆ…. ನಾವು ಖುಷಿಯನ್ನು ಒಮ್ಮೊಮ್ಮೆ ಅನುಭವಿಸುತ್ತಿರ್ತೇವೆ … ಅದು ಇದೇನೇ… ಅದು ಹೇಗೆ ಅಂದರೆ ಮೇಲೆ ನೋಡಿದಂತೆ… ನಾವು ನೀಡುವ ತಿಲೋದಕಗಳಲ್ಲಿನ ಸ್ವಾಖ್ಯರಸವನ್ನು ವಸು,ರುದ್ರ ಆದಿತ್ಯರಾಂತರ್ಗತ – ಪ್ರದ್ಯುಮ್ನ, ಅನಿರುದ್ಧ, ವಾಸುದೇವ ರೂಪೀ ಪರಮಾತ್ಮ ಸ್ವೀಕಾರ ಮಾಡಿ ಆಯಾ ಜೀವಿಗಳು ಅವು ಸ್ವೀಕಾರ ಮಾಡುವ ಆಹಾರದಲ್ಲಿ ಅಮೃತವನ್ನು ಸೇರಿಸಿ ಅವರಿಗೆ ಸುಖವನ್ನು ನೀಡ್ತಾರೆ. ಅಲ್ಲದೇ ಅವರು ಆಯಾ ಯೋನಿಗಳಲ್ಲಿ ಕಷ್ಟಗಳನ್ನು ಮೀರಿ ಸದ್ಗತಿಯನ್ನು ಸಹಾ ಹೊಂದುತ್ತಾರೆ…
Discussion about this post