ಶ್ರೀವಿಲ್ಲಿಪುತ್ತೂರ್: ಲೋಕಸಭಾ ಚುನಾವಣೆ ಘೋಷಣೆಯಾಗುವ ಹೊಸ್ತಿಲಲ್ಲಿರುವ ಬೆನ್ನಲ್ಲೇ, ಜಯಲಲಿತಾ ಅವರ ಉಸಿರೇ ಆಗಿದ್ದ ಎಐಎಡಿಎಂಕೆ ಪ್ರಧಾನಿ ನರೇಂದ್ರ ಮೋದಿ ಪರ ಬ್ಯಾಟಿಂಗ್ ಮಾಡಿದೆ.
ಈ ಕುರಿತಂತೆ ಮಾತನಾಡಿರುವ ತಮಿಳುನಾಡು ಸಚಿವ ಕೆ.ಟಿ. ರಾಜೇಂದ್ರ ಬಾಲಾಜಿ, ಅಮ್ಮ (ಜಯಲಲಿತಾ) ಬದುಕಿದ್ದಾಗ ಅವರು ಪಕ್ಷದ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದರು. ಈಗ ಅಮ್ಮ’ ಬದುಕಿಲ್ಲ. ಅಮ್ಮನ’ ಅನುಪಸ್ಥಿತಿಯಲ್ಲಿ ಮೋದಿ ಅವರು ನಮ್ಮ ಪಕ್ಷಕ್ಕೆ ಹಾಗೂ ನಮ್ಮ ಪಕ್ಷಕ್ಕೆ ತಂದೆ ಇದ್ದಂತೆ. ನಾವು ಅವರ ನಾಯಕತ್ವವನ್ನು ಒಪ್ಪಿಕೊಳ್ಳುತ್ತೇವೆ ಎಂದಿದ್ದಾರೆ.
2014ರ ಲೋಕಸಭಾ ಚುಣಾವಣೆಯಲ್ಲಿ ಜಯಲಲಿತಾ ನರೇಂದ್ರ ಮೋದಿ ಅವರಿಗೆ ಬೆಂಬಲ ನೀಡಿರಲಿಲ್ಲ. ಈ ಬಗ್ಗೆ ಮಾತನಾಡಿದ ಎಐಎಡಿಎಂಕೆ ಸಚಿವ, 2014ರಲ್ಲಿ ತಮಿಳುನಾಡಿನ ಶಕ್ತಿಯನ್ನು ದೇಶಕ್ಕೆ ತಿಳಿಸಲು ಅಮ್ಮ ಏಕಾಂಗಿಯಾಗಿ ಚುಣಾವಣೆಗೆ ಸ್ಪರ್ಧಿಸಿದ್ದರು. ಆದರೆ, ಅಮ್ಮ ಯಾವಾಗಲೂ ನರೇಂದ್ರ ಮೋದಿಯವರನ್ನು ಗೌರವಿಸುತ್ತಿದ್ದರು. ಹೀಗಾಗಿ, ಈಗ ನಾವು ಮೋದಿಯವರನ್ನು ಬೆಂಬಲಿಸಲು ತೀರ್ಮಾನಿಸಿದ್ದೇವೆ ಎಂದಿದ್ದಾರೆ.

















