ಕಲ್ಪ ಮೀಡಿಯಾ ಹೌಸ್ | ಬೀದರ್ |
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಪೊಲಕಪಳ್ಳಿ, ಕಾಡವಾದ, ಹಜ್ಜರಗಿ, ಚಿಟ್ಟಾವಾಡಿ, ಬಗದಲ್ ತಾಂಡ ಸೇರಿದಂತೆ ವಿವಿಧ ಗ್ರಾಮಗಳ ಕಾಂಗ್ರೆಸ್, ಬಿಜೆಪಿ ಪಕ್ಷಗಳ ಯುವಕರು, ಮುಖಂಡರು ನೂರಾರು ಸಂಖ್ಯೆಯಲ್ಲಿ ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪುರ್ ಪಿ ಗ್ರಾಮದ ಹೊರವಲಯದಲ್ಲಿರುವ ತಮ್ಮ ನಿವಾಸದ ಆವರಣದಲ್ಲಿ ವಿವಿಧ ಗ್ರಾಮಗಳ ನೂರಾರು ಜನ ಯುವಕರು, ಮುಖಂಡರಿಗೆ ಗುರುವಾರ ಜೆಡಿಎಸ್ ಶಾಲು ಹೊದಿಸಿ, ಪಕ್ಷದ ಧ್ವಜ ನೀಡುವ ಮೂಲಕ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಜೆಡಿಎಸ್ ಪಕ್ಷಕ್ಕೆ ಬರಮಾಡಿಕೊಂಡರು.
ಈ ವೇಳೆ ಮಾತನಾಡಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ಜೆಡಿಎಸ್ ಪಕ್ಷ ರೈತರ, ಬಡವರ, ಶ್ರಮಿಕರ ಪರವಾಗಿರುವ ಪಕ್ಷವಾಗಿದೆ. ರಾಷ್ಟ್ರೀಯ ಪಕ್ಷಗಳು ಮಾಡದಂತಹ ಅನೇಕ ಮಹತ್ವದ ಅಭಿವೃದ್ಧಿ ಕೆಲಸಗಳನ್ನು ನಮ್ಮ ಪಕ್ಷ ಮಾಡಿದೆ. ರಾಜ್ಯದಲ್ಲಿ ಈ ಬಾರಿ ಪ್ರಾದೇಶಿಕ ಪಕ್ಷಕ್ಕೆ ಅಪಾರವಾದ ಜನ ಬೆಂಬಲ ವ್ಯಕ್ತವಾಗಿದೆ. ನಮ್ಮ ಪಕ್ಷ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿದಂತೆ ಪ್ರತಿಯೊಬ್ಬರೂ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಜೆಡಿಎಸ್ ಪಕ್ಷ ಅಧಿಕಾರದಲ್ಲಿ ಇದ್ದಾಗ ಮಾಡಿದ ಜನಪರ ಕೆಲಸಗಳ ಬಗ್ಗೆ ಜನರಿಗೆ ಮಾಹಿತಿ ನೀಡುವುದರೊಟ್ಟಿಗೆ ಅಧಿಕಾರಕ್ಕೆ ಬಂದರೆ ಜಾರಿಗೊಳಿಸಲಿರುವ ಮಹತ್ವದ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಶ್ರಮಿಸಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಪಕ್ಷದ ಮುಖಂಡರಿಗೆ, ಕಾರ್ಯಕರ್ತರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪೊಲಕಪಳ್ಳಿ, ಕಾಡವಾದ, ಹಜ್ಜರಗಿ, ಚಿಟ್ಟಾವಾಡಿ, ಬಗದಲ್ ತಾಂಡಗಳ ಮುಖಂಡರು, ಕಾರ್ಯಕರ್ತರು ಸೇರಿದಂತೆ ಅನೇಕರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















