ಕಲ್ಪ ಮೀಡಿಯಾ ಹೌಸ್ | ಮೈಸೂರು |
ಧರ್ಮ ಪಾಲನೆ, ಸರ್ವರ ಕರ್ತವ್ಯ. ಧರ್ಮ ರಹಿತ ಸಮಾಜ ಎಂದಿಗೂ ಕಲ್ಯಾಣವಾಗಲಾರದು ಎಂದು ಶ್ರೀ ಯತಿರಾಜ ಮಠದ ಶ್ರೀ ಮದ್ ಯದುಗಿರಿ ಯತಿರಾಜ ಜೀಯರ್ ಸ್ವಾಮೀಜಿ ತಿಳಿಸಿದ್ದಾರೆ.
ಸುಮಾರು 250 ವರ್ಷಗಳ ಇತಿಹಾಸ ಹೊಂದಿರುವ, ಸಾಕ್ಷಿ ವೆಂಕಟರಮಣ ದೇಗುಲವೆಂದೇ ಎಲ್ಲೆಡೆ ಪ್ರಸಿದ್ದವಾಗಿರುವ ಮುಮ್ಮಡಿ ಶ್ರೀ ಕೃಷ್ಣರಾಜ ಒಡೆಯರ್ ಅವರಿಂದ ಸ್ಥಾಪಿತಗೊಂಡ, ಮೈಸೂರಿನ ಮೊತ್ತ ಮೊದಲ ಶ್ರೀ ಶ್ರೀನಿವಾಸ ದೇವಸ್ಥಾನ, ಹಳೆಬಂಡಿಕೇರಿಯ ಶ್ರೀ ಪ್ರಸನ್ನ ವೆಂಕಟರಮಣ ದೇವಸ್ಥಾನದ ಮಹಾಕುಂಬಾಭಿಷೇಕ, ದ್ವಾರಾರ್ಚನೆ, ಚತುಸ್ಥಾನಾರ್ಚನ, ಮಹಾ ಪೂರ್ಣಾಹುತಿ, ಮಹಾ ಸಂಪ್ರೋಕ್ಷಣಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡುತ್ತಿದ್ದರು.
“ಈ ದೇಗುಲದ ಜೀರ್ಣೋದ್ದಾರದಿಂದ ಹಳೆ ಬಂಡಿಕೇರಿ ಹೊಸ ಬಂಡಿಕೇರಿಯಾಗಿ ಬದಲಾಗಿದೆ. ನಮ್ಮ ಪೂರ್ವಾಶ್ರಮದಲ್ಲೂ ಈ ದೇಗುಲಕ್ಕೆ ನಾವು ಆಗಮಿಸುತ್ತಿದ್ದೆವು. ಈ ದೇಗುಲ ಈ ಭಾಗದ ಎಲ್ಲಾ ಆಸ್ತಿಕರ ಪಾಲಿಗೆ ಶ್ರೀರಕ್ಷೆಯಂತಿದೆ,” ಎಂದು ಶ್ರೀ ಯತಿರಾಜ ಜೀಯರ್ ಸ್ವಾಮೀಜಿ ತಿಳಿಸಿದರು.
“ಈ ದೇಗುಲದ ರಾಜಗೋಪುರ, ವಿಮಾನ ಗೋಪುರ, ಹೀಗೆ ಎಲ್ಲವೂ ವಿಶಿಷ್ಟವಾಗಿ ನಿರ್ಮಾಣಗೊಂಡಿವೆ. ದೇಗುಲಗಳ ಜೀರ್ಣೋದ್ಧಾರ ಸಮಾಜದ ಆರೋಗ್ಯದ ಪ್ರತಿಬಿಂಬ,” ಎಂದು ಅವರು ಬಣ್ಣಿಸಿದರು.
ಸಂಸದ ಯದುವೀರ್ ಒಡೆಯರ್, ಬಿಜೆಪಿ ನಗರಾಧ್ಯಕ್ಷ ಎಲ್ ನಾಗೇಂದ್ರ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಎಸ್ ರಾಮಸ್ವಾಮಿ, ಶ್ರೀನಿವಾಸ ಅಯ್ಯರ್ ಹಾಗು ಕುಟುಂಬವರ್ಗ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
