ದೇಶದ ಇತಿಹಾಸದಲ್ಲೇ ಕರಾಳ ವರ್ಷಗಳಾದ ತುರ್ತು ಪರಿಸ್ಥಿತಿಗೆ ಈಗ 43 ವರ್ಷ
ಅದು ಸ್ವತಂತ್ರ ಭಾರತದ ಕರಾಳ ದಿನಗಳು… ದೇಶಕ್ಕೆ ಸ್ವತಂತ್ರ ತಂದೊಕೊಟ್ಟೆವು ಎಂದು ಹೆಮ್ಮೆಯಿಂದ ಬೀಗುವ ಕಾಂಗ್ರೆಸ್ ಪಕ್ಷ ಇಂದಿರಾಗಾಂಧಿಯೇ ದೇಶದ ಸ್ವಾತಂತ್ರ್ಯ ಕಸಿದಿದ್ದರು.
ಹೌದು, ಅದು 21 ತಿಂಗಳ ಕಾಲ ದೇಶವನ್ನು ಕಾಡಿದ್ದ ಸ್ವಾರ್ಥದ ನಿರ್ಧಾರ 1975ರ ಜೂನ್ 25ರ ಮಧ್ಯರಾತ್ರಿಗೂ ಕೆಲವು ನಿಮಷಗಳ ಮೊದಲು ಹೊರಬಿದ್ದಿತ್ತು. ಅಂದಿನ ಪ್ರಧಾನಿ ಇಂದಿರಾಗಾಂಧಿ ಕೈಗೊಂಡ ಕಠಿಣ ನಿರ್ಧಾರ ಸ್ವತಂತ್ರ ಭಾರತದಲ್ಲಿ ಜನರ ಹಲವು ರೀತಿಯ ಸ್ವಾತಂತ್ರ್ಯವನ್ನು ಕಸಿದಿತ್ತು.
ಇಂದಿರಾಗಾಂಧಿ ಕೈಗೊಂಡಿದ್ದ ಸರ್ವಾಧಿಕಾರಿಯಂತಹ ನಿರ್ಧಾರಗಳು ಹೇಗಿದ್ದವು ಗೊತ್ತಾ?
ಬಾಂಗ್ಲಾದೇಶದ ವಿಮೋಚನಾ ಯುದ್ದ ಇಂದಿರಾಗಾಂಧಿ ಪ್ರೊಫೈಲನ್ನು ಬೆಳೆಸಿತ್ತು. ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟಗಾರರಿಗೆ ಗಣನೀಯ ರಾಜತಾಂತ್ರಿಕ, ಆರ್ಥಿಕ ಮತ್ತು ಮಿಲಿಟರಿ ಬೆಂಬಲವನ್ನು ಒದಗಿಸಲು ವಿಶ್ವದಾದ್ಯಂತ ಮಾನ್ಯತೆ ಪಡೆಯಿತು. ಪಾಕಿಸ್ಥಾನದ ವಿರುದ್ಧದ ವಿಜಯದ ಉತ್ಸಾಹದಲ್ಲಿ ಕಾಂಗ್ರೆಸ್ 1971 ರಲ್ಲಿ ಜಯಗಳಿಸಿತು. ಇಂದಿರಾಗಾಂಧಿ ಮರಳಿ ಅಧಿಕಾರಕ್ಕೆ ಬಂದು ಅಬ್ಬರಿಸಿದರು. ಆ ವೇಳೆ ಆಕೆಯನ್ನು ದೇವಿ ದುರ್ಗೆಗೆ ಹೋಲಿಕೆ ಮಾಡಿದ್ದೂ ಇದೆ.
ಅಂದು ಚುನಾವಣೆಯಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿದ್ದ ಲೋಕ ಬಂಧು ರಾಜ್ ನಾರಾಯಣ್ ಸೋತಿದ್ದೇ ಎಲ್ಲ ಅನಿಷ್ಠಗಳಿಗೂ ಕಾರಣವಾಗಿತ್ತು. ಅಂದು ನಿಜಕ್ಕೂ ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು ಜಯಗಳಿಸಿದ್ದ ಇಂದಿರಾ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲಾಯಿತು. ರಾಜಮನೆತನಕ್ಕೆ ಸೇರಿದ್ದ ಸಭ್ಯ ರಾಜ್ ನಾರಾಯಣ್ ಅವರು, ಇಂದಿರಾ ವಿರುದ್ಧ ಅಲಹಾಬಾದ್ ಹೈಕೋರ್ಟಿನಲ್ಲಿ ಪ್ರಕರಣ ದಾಖಲಿಸಿದರು.
ಅಂದಿನ ಖಡಕ್ ನ್ಯಾಯಾಧೀಶ ಜಗಮೋಹನ್ ಸಿನ್ಹಾ ತೆಗೆದುಕೊಂಡ ನಿರ್ಧಾರ ಮಾತ್ರ ಐತಿಹಾಸಿಕ. ಜಯಗಳಿಸಿದ ಅಭ್ಯರ್ಥಿ ಇಂದಿರಾ ಗಾಂಧಿ ಚುನಾವಣೆ ಅಕ್ರಮವೆಸಗಿದ್ದು, ಅವರ ಆಯ್ಕೆ ಅಸಿಂಧು. ಬದಲಿಗೆ, ಚುನಾವಣೆ ಗೆದ್ದಿರುವುದು ರಾಜ್ ನಾರಾಯಣ್ ಅವರೇ ಎಂದು ಸಿನ್ಹಾ ತೀರ್ಪು ನೀಡಿಬಿಟ್ಟರು. ಅಷ್ಟೇ ಅಲ್ಲ ಇಂದಿರಾ ಇನ್ನು ಆರು ವರ್ಷ ಚುನಾವಣೆ ಕಣಕ್ಕಿಳಿಯುವಂತಿಲ್ಲ ಎಂದು 1974ರ ಜೂನ್ 25ರಂದು ಸಾರಿಬಿಟ್ಟಿತು ಇಂದಿರಾ ಅವರನ್ನು ಕೆರಳಿಸಿತ್ತು.
ಇದರಿಂದ ವ್ಯಘ್ರಗೊಂಡಿದ್ದ ಇಂದಿರಾ ಗಾಂಧಿ ಅದಾಗತಾನೆ ಮುಗಿದಿದ್ದ ಪಾಕಿಸ್ಥಾನ ವಿರುದ್ಧದ ಯುದ್ಧದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತೆಗೆ ಅಪಾಯ ಇದೆ, ಭೀಕರ ಕ್ಷಾಮ ಇದೆ, 1973ರ ತೈಲ ಸಂಕಷ್ಟದ ಭೀಕರ ಪರಿಣಾಮ ಎದುರಾಗಿದೆ, ದೇಶದ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿದೆ ಎಂಬ ನೆಪವನ್ನು ಮುಂದಿಟ್ಟುಕೊಂಡು ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿಬಿಟ್ಟರು. ಅಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳಿಗಾಗಿ ಅಧಿಕಾರಕ್ಕೆ ಬಂದ ಇಂದಿರಾಗಾಂಧಿಯ ಸರ್ವಾಧಿಕಾರಿ ಮನಃಸ್ಥಿತಿ ಬಯಲಾಗುತ್ತಾ ಹೋಯಿತು.
ಸರ್ಕಾರದ ಮಟ್ಟದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸಿದ್ಧಾರ್ಥ ಶಂಕರ ರಾಯ್ ಆಂತರಿಕ ತುರ್ತು ಪರಿಸ್ಥಿತಿ ಘೋಷಣೆ ಪ್ರಸ್ತಾಪವನ್ನು ಪ್ರಧಾನಿ ಇಂದಿರಾ ಮುಂದೆ ಹಿಡಿದು ನಿಂತರು. ರಬ್ಬರ್ ಸ್ಟಾಂಪ್ ರಾಷ್ಟ್ರಪತಿಯೆನಿಸಿದ ಫಕ್ರುದ್ದೀನ್ ಅಲಿ ಅಹಮದ್ ಪ್ರಧಾನಿ ಪ್ರಸ್ತಾವನೆಗೆ ಅಂಕಿತ ಹಾಕಿದ್ದರು.
ಈ ನಡುವೇ ಸಂವಿಧಾನದ ಪರಿಚ್ಚೇದ 352ರ ಅನುಸಾರ ತಮಗೆ ವಿಶೇಷಾಧಿಕಾರಿ ದಕ್ಕಿಸಿಕೊಂಡ ಇಂದಿರಾ, ಪೌರಹಕ್ಕುಗಳನ್ನು ಕಸಿದುಕೊಂಡು ತಮ್ಮ ವಿರೋಧಿಪಾಳಯದ ನಾಯಕರ ಧ್ವನಿ ಅಡಗಿಸಲು ಇನ್ನಿಲ್ಲದ ಶ್ರಮ ಹಾಕಿದರು.
ಇನ್ನೊಂದೆಡೆ ಮಾಧ್ಯಮದ ಧ್ವನಿಯನ್ನು ಅಡಗಿಸಿದ ಇಂದಿರಾ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇರಿದಂತೆ ಅನೇಕ ಸಂಘಟನೆಗಳಿಗೆ ನಿಷೇಧ ಹೇರಿದರು. ಪ್ರಧಾನಿ ಇಂದಿರಾ ತಮಗೆ ನ್ಯಾಯಾಂಗದ ಸಂರಕ್ಷಣೆ ಕಲ್ಪಿಸಿಕೊಳ್ಳುವುದರ ಜತೆಗೆ ನಾಗರಿಕರು ಯಾವುದೇ ಕೋರ್ಟ್‌ಗಳಲ್ಲಿ ಸರ್ಕಾರವನ್ನು ಪ್ರಶ್ನಿಸುವಂತಿಲ್ಲ ಎಂದೂ ಸಂವಿಧಾನಕ್ಕೆ ತಿದ್ದುಪಡಿ ತಂದು, ಸ್ವಾತಂತ್ರ್ಯವನ್ನು ಕಸಿದರು.
ಮೀಸಾ ಕಾಯಿದೆಯನ್ನು ದುರುಪಯೋಗ ಮಾಡಿಕೊಂಡು ಪ್ರಮುಖ ಹೋರಾಟಗಾರರನ್ನು ಜೈಲಿಗೆ ಅಟ್ಟಲಾಯಿತು. ಇಂದಿರಾಗಾಂಧಿಯವರು ಆಟಾಟೋಪವನ್ನು ಕಂಡು ಕಿಡಿ ಕಾರಿದ ಸುಪ್ರೀಂ ಕೋರ್ಟ್ ಅಧಿಕಾರದಲ್ಲಿರುವ ರಾಜಕಾರಣಿಗಳ ಅನುಕೂಲಕ್ಕೆ ತಕ್ಕಂತೆ ಕೇವಲ ಸಂಸತ್ತಿನ ಅನುಮೋದನೆ ಪಡೆದು ಕರಾಳ ಶಾಸನಗಳನ್ನು ರೂಪಿಸುವಂತಿಲ್ಲ ಅಥವಾ ತಿದ್ದುಪಡಿ ತರುವಂತಿಲ್ಲ ಎಂದು ಆದೇಶಿಸಿದರು.
ಜನಸಂಖ್ಯೆ ದೇಶದಲ್ಲಿ ಮಿತಿಮೀರುತ್ತಿದೆ ಎಂದು ಬುದ್ದಿ ಇಲ್ಲದ ಸಂಜಯ್ ಗಾಂಧಿ ತಮ್ಮ ಪಕ್ಷದ ಕಾರ್ಯಕರ್ತರಿಗೆ ಟಾರ್ಗೆಟ್ ನೀಡುತ್ತಾ ಕೈಗೆ ಸಿಕ್ಕಿದವರಿಗೆಲ್ಲಾ ಬಲವಂತದ ಫ್ಯಾಮಿಲಿ ಪ್ಲಾನಿಂಗ್ ಆಪರೇಶನ್ ಮಾಡಿಸಿದ್ದು ದೇಶದ ಮತ್ತೊಂದು ದುರಂತ.
ಈ ಆದೇಶ ನೀಡಿದ್ದ ನ್ಯಾಯಮೂರ್ತಿ ಖನ್ನಾ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಬೇಕಿತ್ತು. ಆದರೆ, ಅವರ ಮೇಲಿನ ಸಿಟ್ಟಿಗೆ ಇಂದಿರಾ ಅವರ ಅವಕಾಶವನ್ನು ಕಿತ್ತುಕೊಂಡಿದ್ದರು.
ಇಷ್ಟೆಲ್ಲಾ ಆದ ನಂತರ ಜನವರಿ 23, 1977ದಂದು ಚುನಾವಣೆ ಪ್ರಸ್ತಾವನೆಯನ್ನು ರಾಷ್ಟ್ರದ ಮುಂದಿಟ್ಟ ಇಂದಿರಾ ಮಾರ್ಚ್ ತಿಂಗಳಿನಲ್ಲಿ ಚುನಾವಣೆ ನಡೆಸುವುದಾಗಿ ಘೋಷಿಸಿ, ಅದೇ ವೇಳೆ ಬಂಧಿತ ನಾಯಕರನ್ನು ಬಿಡುಗಡೆಗೊಳಿಸಿದರು. ಇದರ ಬೆನ್ನಲ್ಲೇ ಮಾರ್ಚ್ 23, 1977ರಂದು ತುರ್ತು ಪರಿಸ್ಥಿತಿ ಅಧಿಕೃತವಾಗಿ ಅಂತ್ಯವಾಯಿತು.
ಆನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಜನತಾ ಪಕ್ಷ 298 ಸ್ಥಾನಗಳನ್ನು ಗಳಿಸಿ, ಮೊರಾರ್ಜಿ ದೇಸಾಯಿ ದೇಶದ ಮೊಟ್ಟ ಮೊದಲ ಕಾಂಗ್ರೆಸ್ಸೇತರ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು.
ಒಟ್ಟಿನಲ್ಲಿ ಸರ್ವಾಧಿಕಾರಿ ಮನಃಸ್ಥಿತಿಯ ಇಂದಿರಾ ಗಾಂಧಿ ತಮ್ಮ ಸ್ವಾರ್ಥಕ್ಕಾಗಿ ಕೈಗೊಂಡ ನಿರ್ಧಾರ ಇಡಿಯ ದೇಶಕ್ಕೇ ಒಂದು ಕಪ್ಪು ಚುಕ್ಕೆಯಾಗಿ ಪರಿಣಮಿಸಿತ್ತು.
-ಎಸ್.ಆರ್. ಅನಿರುದ್ಧ ವಸಿಷ್ಠ
9008761663
Discussion about this post