ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಆರ್’ಎಸ್’ಎಸ್’ #RSS ಹೆಸರು ಉಲ್ಲೇಖಿಸದೇ ಸರ್ಕಾರದ ಯಾವುದೇ ಸ್ಥಳಗಳಲ್ಲಿ ಖಾಸಗಿ ಸಂಘ ಸಂಸ್ಥೆಗಳು ಕಾರ್ಯಕ್ರಮ ನಡೆಸಲು, ಮೆರವಣಿಗೆ, ಪಥಸಂಚಲನ ನಡೆಸಲು ಪೂರ್ವಾನುಮತಿ ಅಗತ್ಯ ಎಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಧಾರವಾಡ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಈ ಕುರಿತಂತೆ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠ ಈ ಮಹತ್ವದ ಮಧ್ಯಂತರ ತಡೆಯಾಜ್ಞೆ ನೀಡಿದ್ದು, ಸಂವಿಧಾನ ನೀಡಿರುವ ಮೂಲಭೂತ ಹಕ್ಕನ್ನು ಸರ್ಕಾರದ ಒಂದು ಆದೇಶದ ಮೂಲಕ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಆದೇಶವು ಮೇಲ್ನೋಟಕ್ಕೆ ಕಾನೂನು ಬಾಹಿರವಾಗಿದೆ ಎಂದು ಸ್ಪಷ್ಟಪಡಿಸಿದೆ.
10 ಜನಕ್ಕಿಂತ ಹೆಚ್ಚು ಜನ ಸೇರಿದರೆ ಅಕ್ರಮ ಕೂಟವೆಂದು ಪರಿಗಣಿಸಿ ಆರ್’ಎಸ್’ಎಸ್ ಪಥಸಂಚಲನಕ್ಕೆ ಅನುಮತಿ ನೀಡದೇ ಇರುವ ಸರ್ಕಾರದ ಕ್ರಮ ಪ್ರಶ್ನಿಸಿ ಪುನಶ್ಚೇತನ ಸೇವಾ ಸಂಸ್ಥೆ’ ಹೈಕೋರ್ಟ್ #HighCourt ಧಾರವಾಡ ಪೀಠಕ್ಕೆ ರಿಟ್ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ಪೀಠ ರಾಜ್ಯ ಸರ್ಕಾರ, ಗೃಹ ಇಲಾಖೆ, ಹುಬ್ಬಳ್ಳಿ ಕಮಿಷನರ್’ಗೆ ನೋಟಿಸ್ ನೀಡಿದೆ.
ಹೈಕೋರ್ಟ್ ನೀಡಿರುವ ಈ ತಡೆಯಾಜ್ಞೆಯ ಮೂಲಕ ಚಿತ್ತಾಪುರ #Chittapura ಸೇರಿದಂತೆ ರಾಜ್ಯದಾದ್ಯಂತ ಆರ್’ಎಸ್’ಎಸ್ ನಡೆಸಲು ಉದ್ದೇಶಿಸಿದ್ದ ಪಥಸಂಚಲನಗಳಿಗೆ ಉಂಟಾಗಿದ್ದ ತಡೆ ತೆರವಾಗಿದೆ.
2025 ರ ಅ.18 ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಧಾರವಾಡದ ಪುನಶ್ಚೇತನ ಸೇವಾ ಸಂಸ್ಥೆ ಪ್ರಶ್ನಿಸಿತ್ತು. ಈ ವಿಚಾರವಾಗಿ ಸರ್ಕಾರಕ್ಕೆ ನೋಟಿಸ್ ನೀಡಿರುವ ಹೈಕೋರ್ಟ್ ಧಾರವಾಡ ಪೀಠ, ಅನುಮತಿಯಿಲ್ಲದೇ 10 ಜನ ಜನ ಸೇರಿದರೆ ಅಪರಾಧವೆಂದು ಸರ್ಕಾರದ ಆದೇಶದಲ್ಲಿದೆ.
ರಸ್ತೆ, ಪಾರ್ಕ್, ಮೈದಾನ, ಕೆರೆ ಇತ್ಯಾದಿಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿದೆ. ಪೊಲೀಸ್ ಕಾಯ್ದೆಯಲ್ಲಿ ಇರುವ ಅಧಿಕಾರವನ್ನು ಸರ್ಕಾರ ಆದೇಶದ ಮೂಲಕ ಚಲಾಯಿಸಿದೆ. ಸಂವಿಧಾನದ ಆರ್ಟಿಕಲ್ 19 (1)ಅ, ಆ, ನೀಡಿರುವ ಹಕ್ಕನ್ನು ಸರ್ಕಾರ ಕಿತ್ತುಕೊಂಡಿದೆ. ಸಂವಿಧಾನ ನೀಡಿರುವ ಹಕ್ಕನ್ನು ಸರ್ಕಾರಿ ಆದೇಶ ಕಿತ್ತುಕೊಳ್ಳಲಾಗದು ಎಂದು ಅಭಿಪ್ರಾಯಪಟ್ಟಿದೆ.
ಇನ್ನು, 2013ರ ಬಿಜೆಪಿ ಸರ್ಕಾರದ ಕಾಲದಲ್ಲೇ ಖಾಸಗಿ ಸಂಘಗಳು ಸರ್ಕಾರಿ ಸ್ಥಳ ಬಳಸಲು ಪೂರ್ವಾನುಮತಿ ಪಡೆಯಬೇಕು ಎಂಬ ನಿಯಮವಿತ್ತು. ಇದೇ ನಿಯಮವನ್ನು ಆಧಾರವಿಟ್ಟು ಪ್ರಸ್ತುತ ಸರ್ಕಾರ ಹೊಸ ಆದೇಶ ಹೊರಡಿಸಿತ್ತು. ಈ ನಿರ್ಧಾರಕ್ಕೆ ಮುನ್ನ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್’ಎಸ್’ಎಸ್ ಚಟುವಟಿಕೆಗಳಿಗೆ ನಿಗ್ರಹ ಹೇರುವಂತೆ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದರು.
ನಂತರ, ಈ ಆದೇಶವನ್ನು ಮುಂದಿಟ್ಟುಕೊಂಡು ಚಿತ್ತಾಪುರದಲ್ಲಿ ನಡೆಯಬೇಕಿದ್ದ ಆರ್’ಎಸ್’ಎಸ್ ಪಥಸಂಚಲನವನ್ನು ನಿರ್ಬಂಧಿಸಲಾಯಿತು.
ಇದೇ ವೇಳೆ ಅರ್ಜಿದಾರರ ಪರವಾಗಿ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ವಾದ ಮಂಡಿಸಿ, ಸರ್ಕಾರ 10 ಜನಕ್ಕಿಂತ ಹೆಚ್ಚು ಸೇರುವಂತಿಲ್ಲ ಎಂದು ನಿರ್ಬಂಧ ವಿಧಿಸಿದೆ. ಇದು ಸಂವಿಧಾನದ ಆರ್ಟಿಕಲ್ 19(1)(A) ಮತ್ತು 19(1)(B) (ಸ್ವಾತಂತ್ರ ಮತ್ತು ಸಭೆ ಸೇರುವ ಹಕ್ಕು) ಉಲ್ಲಂಘನೆ. ಸರ್ಕಾರದ ಆದೇಶ ಕಾನೂನುಬಾಹಿರ ಎಂದು ವಾದ ಮಂಡಿಸಿದರು.
ಹೈಕೋರ್ಟ್ ಈ ವಾದವನ್ನು ಅಂಗೀಕರಿಸಿ, ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ. ಸರ್ಕಾರದ ಪರ ವಕೀಲರು ವಾದ ಮಂಡಿಸಲು ಒಂದು ದಿನದ ಕಾಲಾವಕಾಶ ಕೇಳಿದ್ದಾರೆ.
ಸರ್ಕಾರದ ಆದೇಶದಲ್ಲಿ ಏನಿತ್ತು?
- ಯಾವುದೇ ಖಾಸಗಿ ಸಂಘ, ಸಂಸ್ಥೆ ಅಥವಾ ಸಂಘಟನೆಗಳು ಸರ್ಕಾರಿ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸಲು ಪೂರ್ವಾನುಮತಿ ಕಡ್ಡಾಯ.
- ಸರ್ಕಾರಿ/ನಿಗಮ/ಮಂಡಳಿ/ಶಾಲೆ-ಕಾಲೇಜುಗಳು, ಉದ್ಯಾನ, ಮೈದಾನ, ಸಾರ್ವಜನಿಕ ರಸ್ತೆ, ಕೆರೆ ಅಥವಾ ಇತರ ಸರ್ಕಾರಿ ಆಸ್ತಿಗಳನ್ನು ಬಳಸಲು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಅಗತ್ಯ.
- 10ಕ್ಕಿಂತ ಹೆಚ್ಚು ಜನರು ಒಂದೇ ಉದ್ದೇಶಕ್ಕಾಗಿ ಒಟ್ಟಾಗಿ ಸಾಗಿದರೆ ಅದನ್ನು ಮೆರವಣಿಗೆ ಅಥವಾ ರಾಲಿ ಎಂದು ಪರಿಗಣಿಸಲಾಗುವುದು.
- ಇಂತಹ ಕಾರ್ಯಕ್ರಮಗಳ ಅನುಮತಿಗಾಗಿ ಮೂರು ದಿನ ಮುಂಚಿತವಾಗಿ ಲಿಖಿತ ಅರ್ಜಿ ಸಲ್ಲಿಸಬೇಕಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















