ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೆಸ್ಕಾಂನ ಮೆಟ್ರೋಪಾಲಿಟನ್ ಪ್ರದೇಶ ವಲಯದಲ್ಲಿ ಫೆಬ್ರವರಿ 14, 2023ರವರೆಗೆ ಒಟ್ಟು 10,74,000 ಸಿಂಗಲ್ ಫೇಸ್ ಡಿಜಿಟಲ್ ಮೀಟರ್‌ಗಳನ್ನು ಅಳವಡಿಸಲಾಗಿದ್ದು, ಇದುವರೆಗೆ ಶೇ. 70ರಷ್ಟು ಪ್ರಗತಿ ಸಾಧಿಸಲಾಗಿದೆ.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಒಟ್ಟು 58,77,000 ಎಲ್ ಟಿ ವಿದ್ಯುತ್ ಮಾಪಕಗಳಿವೆ. ಸಮೀಕ್ಷೆಯ ಪ್ರಕಾರ ಇವುಗಳಲ್ಲಿ 17,23,000 ಇಲೆಕ್ಟ್ರೊ ಮೆಕಾನಿಕಲ್ ಮೀಟರ್ ಗಳಾಗಿದ್ದು, ಇವುಗಳನ್ನು ಡಿಎಲ್‌ಎಮ್‌ಎಸ್ ಸ್ಟ್ಯಾಟಿಕ್ (ಡಿವೈಸ್ ಲ್ಯಾಂಗ್ವೇಜ್ ಮೆಸೇಜ್ ಸ್ಪೆಸಿಫಿಕೇಷನ್) ಡಿಜಿಟಲ್ ಮಾಪಕಗಳನ್ನಾಗಿ ಪರಿವರ್ತಿಸುವ ಕಾರ್ಯಕ್ಕೆ ಬೆಸ್ಕಾಂ ಜುಲೈ 2022 ರಂದು ಚಾಲನೆ ನೀಡಿತ್ತು
ಡಿಎಲ್ಎಮ್ಎಸ್ ಸ್ಟ್ಯಾಟಿಕ್ ಮೀಟರ್ ಗ್ರಾಹಕ ಸ್ನೇಹಿಯಾಗಿದ್ದು ಸಿಂಗಲ್ ಫೇಸ್ ಅಥವ 3 ಫೇಸ್ ಮೀಟರ್ ಅಳವಡಿಸಿಕೊಂಡಿರುವ ಗ್ರಾಹಕರಿಗೆ ವಿದ್ಯುತ್ ವೊಲ್ಟೇಜ್ ಮತ್ತು ವಿದ್ಯುತ್ ಸಂಪರ್ಕಿತ ಲೋಡ್ ಮಾಹಿತಿ ಪಡೆಯಬಹುದಾಗಿದೆ. ಈ ಡಿಜಿಟಲ್ ಮೀಟರ್‌ಗಳನ್ನು ಉಚಿತವಾಗಿ ಅಳವಡಿಸಲಾಗುತ್ತಿದ್ದು ಗ್ರಾಹಕರಿಂದ ಯಾವುದೇ ಶುಲ್ಕವನ್ನು ಪಡೆಯುವುದಿಲ್ಲವೆಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.

ಈ ಹಿಂದಿನ ಮೆಕಾನಿಕಲ್ ಮೀಟರ್ ಗಳು ಸಂಪರ್ಕಿತ ಲೋಡ್, ಪವರ್ ಫ್ಯಾಕ್ಟರ್ ಮತ್ತು ವೊಲ್ಟೇಜ್ ಗಳನ್ನು ದಾಖಲಿಸುವ ವ್ಯವಸ್ಥೆ ಇರಲಿಲ್ಲ. ಇದರಿಂದಾಗಿ ಬೆಸ್ಕಾಂಗೆ ವಿದ್ಯುತ್ ಶುಲ್ಕ ಸಂಗ್ರಹಣೆಯಲ್ಲಿ ನಷ್ಟ ಉಂಟಾಗುತ್ತಿತ್ತು.
ಈಗಿನ ಡಿಜಿಟಲ್ ಮೀಟರ್ ಗಳಲ್ಲಿ ಈ ಎಲ್ಲಾ ಸೌಲಭ್ಯಗಳಿದ್ದು, ಗ್ರಾಹಕರು ಕಡಿಮೆ ಪ್ರಮಾಣದಲ್ಲಿ ವಿದ್ಯುತ್ ಬಳಸಿದರೂ ಸಹಾ ಅದು ಡಿಜಿಟಲ್ ಮೀಟರ್ ನಲ್ಲಿ ದಾಖಲಾಗುತ್ತದೆ. ಉದಾಹರಣೆಗೆ ಮೊಬೈಲ್ ಚಾರ್ಜಿಂಗ್, ಟೆಲಿವಿಷನ್ ಸ್ಟಾಂಡ್ ಬೈ ಮೋಡ್ ಮತ್ತು ಜಿರೋ ವ್ಯಾಟ್ ಬಲ್ಬ್ ಬಳಕೆ ಯ ವಿದ್ಯುತ್ ಪ್ರಮಾಣವನ್ನು ಡಿಜಿಟಲ್ ಮೀಟರ್ ದಾಖಲಿಸುತ್ತದೆ.
ಆದರೆ ಈ ಸಣ್ಣ ಪ್ರಮಾಣದ ವಿದ್ಯುತ್ ಬಳಕೆಯನ್ನು ಮೆಕಾನಿಕಲ್ ಮೀಟರ್ ಗಳು ದಾಖಲಿಸುವುದಿಲ್ಲ. ಇದರೊಂದಿಗೆ ಗ್ರಾಹಕರು ನಿಖರವಾಗಿ ಬಳಸುವ ವಿದ್ಯುತ್ ಪ್ರಮಾಣವನ್ನು ಮಾತ್ರ ಡಿಜಿಟಲ್ ಮೀಟರ್‌ನಲ್ಲಿ ದಾಖಲಿಸಿ ಬಿಲ್ಲಿಂಗ್ ಮಾಡಲಾಗುತ್ತದೆ. ಇದರಿಂದಾಗಿ ಗ್ರಾಹಕರಿಗೆ ವಿದ್ಯುತ್ ಉಳಿತಾಯಕ್ಕೆ ಸಹಾಯವಾಗುತ್ತದೆ.

ಒಂದು ವೇಳೆ ದೋಷಯುಕ್ತ ಡಿಜಿಟಲ್ ಮೀಟರ್ ಅಳವಡಿಸಿದ್ದರೆ, ಗ್ರಾಹಕರು ಸಂಬಂಧಪಟ್ಟ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರ ಗಮನಕ್ಕೆ ತರಲು ವಿನಂತಿಸಲಾಗಿದೆ.
ದೋಷಯುಕ್ತ ಡಿಜಿಟಲ್ ಮೀಟರ್ ರೇಟಿಂಗ್ ಖಾತರಿ ಪಡಿಸಿಕೊಂಡು ತಕ್ಷಣ ಸೂಕ್ರ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ಗಳಿಗೆ ಸೂಚನೆ ನೀಡಲಾಗಿದೆ ಎಂದು ಬೆಸ್ಕಾಂ ಎಂಡಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.
ದೋಷಯುಕ್ತ ಮೀಟರ್ ಅಳವಡಿಸಿದ್ದರೆ ಅಥವಾ ಮೀಟರ್ ಅಳವಡಿಕೆ ಸಂದರ್ಭದಲ್ಲಿ ಗ್ರಾಹಕರಿಂದ ಹಣಕ್ಕೆ ಬೇಡಿಕೆ ಇಟ್ಟ ಕುರಿತು ದೂರು ಬಂದರೆ, ಸಂಬಂಧಪಟ್ಟ ಗುತ್ತಿಗೆದಾರರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಬೆಸ್ಕಾಂ ಎಂಡಿ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post