ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಜೆಎನ್’ಎನ್ ಇಂಜಿನಿಯರಿಂಗ್ ಕಾಲೇಜು ಹಾಗೂ ಇನ್’ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರ್ಸ್ ಮಂಗಳೂರಿನ ಉಪವಿಭಾಗದ ವತಿಯಿಂದ ಅ.14 ಮತ್ತು 15ರಂದು ಎರಡು ದಿನಗಳ ಕಾಲ ಕಾಲೇಜಿನ ಎಂಬಿಎ ಎಂಸಿಎ ಸಭಾಂಗಣದಲ್ಲಿ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಅಂತಾರಾಷ್ಟ್ರೀಯ ಸಮ್ಮೇಳನ ಏರ್ಪಡಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ. ನಾಗೇಂದ್ರಪ್ರಸಾದ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲೆಕ್ಟ್ರಿಕಲ್ ಸರ್ಕ್ಯೂಟ್ ರೊಬೊಟಿಕ್ಸ್, ವಿಎಲ್ಎಸ್ಐ ನಂತಹ ಅನೇಕ ನಾವೀನ್ಯ ವಿಷಯಗಳ ಕುರಿತು ಕಾರ್ಯಕ್ರಮದಲ್ಲಿ ಚರ್ಚೆಯಾಗಲಿದೆ. ಸಮ್ಮೇಳನದಲ್ಲಿ ವಿಶ್ವದ ತಾಂತ್ರಿಕ ಪರಿಣಿತರು, ಉದ್ಯಮಿಗಳು, ಶೈಕ್ಷಣಿಕ ತಜ್ಞರು ಭಾಗವಹಿಸಲಿದ್ದು, ಅನೇಕ ಸಂಶೋಧನಾರ್ಥಿಗಳು ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಿದ್ದಾರೆ ಎಂದರು.
ಅ.14ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಸಿಡಾಕ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಸ್.ಡಿ. ಸುದರ್ಶನ್ ಸಮ್ಮೇಳನ ಉದ್ಘಾಟಿಸಲಿದ್ದು, ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್. ನಾರಾಯಣರಾವ್, ಕಾರ್ಯದರ್ಶಿ ಎಸ್.ಎನ್. ನಾಗರಾಜ್, ಪ್ರಾಂಶುಪಾಲ ಡಾ.ಕೆ. ನಾಗೇಂದ್ರ ಪ್ರಸಾದ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಮ್ಮೇಳನದ ಸಂಘಟನಾ ಮುಖ್ಯಸ್ಥರಾದ ಡಾ.ಮಂಜುನಾಥ ಪಿ., ಡಾ.ಎಸ್.ವಿ. ಸತ್ಯನಾರಾಯಣ, ಡಾ.ಪೂರ್ಣಲತಾ ಜಿ. ಉಪಸ್ಥಿತರಿರುವರು ಎಂದರು.
ಎರಡು ದಿನಗಳ ಕಾರ್ಯಕ್ರಮದಲ್ಲಿ ಜರ್ಮನಿಯ ಕಾರ್ಪೊರೇಟ್ ಸಂಶೋಧನಾ ಕೇಂದ್ರದ ಸಂಶೋಧನಾರ್ಥಿ ಹೈಕೊ ಕೊಜಿಯಲಕ್ ಅವರು ಕಾರ್ಖಾನೆಗಳ ಸ್ವಯಂಚಾಲಿತ ಯಾಂತ್ರಿಕರಣದಲ್ಲಿನ ಸವಾಲುಗಳು, ಪಿಲಾನಿಯ ಬಿಟ್ಸ್ ವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಸ್ನೇಹಂಸುಸಾಹ ಅವರು ನ್ಯೂರಲ್ ನೆಟ್ಸ್ ಕರಿತು, ಬೆಂಗಳೂರು ಐಐಎಸ್ಸಿ ಪ್ರಾಧ್ಯಾಪಕ `ಡಾ.ಎ.ಜಿ. ರಾಮಕೃಷ್ಣನ್ ಪ್ರಾಣಾಯಾಮದ ಮಹತ್ವದ ಕುರಿತು ಮಾತನಾಡಲಿದ್ದಾರೆ ಎಂದರು.
ಬೆಂಗಳೂರಿನ ಐಐಎಸ್ಸಿಯ ಸತೀಶ್ ಧವನ್, ಕೇಂದ್ರದ ಪ್ರಾಧ್ಯಾಪಕ ಡಾ.ಸಿ.ಪಾಂಡುರಂಗನ್, ಶೂನ್ಯ ಜ್ಞಾನದ ಪ್ರೊಟೊಕಾಲ್ ಕುರಿತು ಮಾತನಾಡಲಿದ್ದಾರೆ. ಇದೇ ವೇಳೆ ನೂತನ ಎನ್ಇಪಿ ಅನ್ವಯ ಶಿಕ್ಷಣ ಸಂಸ್ಥೆಗಳು ಹಾಗೂ ಉದ್ಯೋಗ ಸಂಸ್ಥೆಗಳ ನಡುವಿನ ಸಂಬಂಧ ವೃದ್ಧಿಯ ಅವಶ್ಯಕತೆ ಕುರಿತು ತಜ್ಞರಿಂದ ಚರ್ಚೆ ನಡೆಯಲಿದೆ. ಮಂಗಳೂರಿನ ನಾವಿಗೊ ಕಂಪನಿಯ ಸಿಇಓ ಪ್ರವೀಣ್ ಕುಮಾರ್ ಕಲಭಾವಿ, ಐಐಎಸ್ಸಿ ಹಿರಿಯ ಪ್ರಾಧ್ಯಾಪಕ ಡಾ.ಎ.ಜಿ. ರಾಮಕೃಷ್ಣನ್, ಮಣಿಪಾಲ ಡಾಟ್ ನೆಟ್ ಕಂಪನಿಯ ನಿರ್ದೇಶಕ ಡಾ.ಯು.ಸಿ.ನಿರಂಜನ್, ಮಣಿಪಾಲದ ಎಂಎಹೆಚ್ಇ ನಿರ್ದೇಶಕ ಡಾ.ಕರುಣಾಕರ್.ಎ.ಕೆ, ಜೆಎನ್ಎನ್ಸಿಇ ಕಾಲೇಜಿನ ಎಂಬಿಎ ವಿಭಾಗದ ನಿವೃತ್ತ ನಿರ್ದೇಶಕರಾದ ಪ್ರೊ.ಎಸ್.ದಿವಾಕರ್ ರಾವ್ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸಮ್ಮೇಳನ ಸಂಘಟನಾ ಮುಖ್ಯಸ್ಥ ಡಾ.ಮಂಜುನಾಥ ಮಾತನಾಡಿ, ಇದೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ಸಮ್ಮೇಳನ ನಮ್ಮ ಕಾಲೇಜಿಮನಲ್ಲಿ ನಡೆಯುತ್ತಿದ್ದು, ಇದರ ಪ್ರಯೋಜನವನ್ನು ಪಡೆಯಬೇಕು, ಅ.15ರಂದು ಸಂಜೆ 4:30ಕ್ಕೆ ಸಮಾರೋಪ ಸಮಾರಂಭದಲ್ಲಿ ಐಐಎಸ್ಸಿ ಹಿರಿಯ ಪ್ರಾಧ್ಯಾಪಕ ಡಾ.ಎ.ಜಿ. ರಾಮಕೃಷ್ಣನ್ ಸಮಾರೋಪ ನುಡಿಗಳನ್ನಾಡಲಿದ್ದಾರೆ. ಮಣಿಪಾಲ ಡಾಟ್ ನೆಟ್ ಕಂಪನಿಯ ನಿರ್ದೇಶಕರಾದ ಡಾ.ಯು.ಸಿ.ನಿರಂಜನ್, ರಾಷ್ಟ್ರೀಯ ಶಿಕ್ಷಣ ಸಮಿತಿ ಉಪಾಧ್ಯಕ್ಷರಾದ ಸಿ.ಆರ್.ನಾಗರಾಜ, ಸಹ ಕಾರ್ಯದರ್ಶಿಗಳಾದ ಡಾ.ಪಿ.ನಾರಾಯಣ್ ಸೇರಿದಂತೆ ಮತ್ತಿತರರು ಉಪಸ್ಥಿತರಿರುವರು ಎಂದರು.
ಸುದ್ದಿಗೋಷ್ಟಿಯಲ್ಲಿ ಸಮ್ಮೇಳನದ ಸಂಘಟನಾ ಮುಖ್ಯಸ್ಥ ಡಾ.ಎಸ್.ವಿ. ಸತ್ಯನಾರಾಯಣ, ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ. ನೃಪತುಂಗ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post