ಕಲ್ಪ ಮೀಡಿಯಾ ಹೌಸ್ | ಧಾರವಾಡ |
ನಗರದ ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ನ್ಯಾಕ್ (NAAC) 4ನೇ ಆವೃತ್ತಿಯಲ್ಲಿಯೂ ಸಹ ವಿಶ್ವವಿದ್ಯಾಲಯವು ತನ್ನ ‘ಎ’ ಗ್ರೇಡ್ ಶ್ರೇಣಿಯನ್ನು ಉಳಿಸಿಕೊಂಡು ಸತತವಾಗಿ 4 ನೇ ಸಲವೂ ‘ಎ’ ಗ್ರೇಡ್ ಉಳಿಸಿಕೊಂಡ ಹಿರಿಮೆಗೆ ಪಾತ್ರವಾಗಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ. ಬಿ. ಗುಡಸಿ ಅವರು ಹೇಳಿದರು.
ಅವರು ಕರ್ನಾಟಕ ವಿಶ್ವವಿದ್ಯಾಲಯದ Karnataka University ಸಿಂಡಿಕೆಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ವಿಶ್ವವಿದ್ಯಾಲಯವು ಎ ಗ್ರೇಡ್ ನ್ಯಾಕ್ ಮಾನ್ಯತೆ ಪಡೆದಿರುವ ಕುರಿತು ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಕರ್ನಾಟಕ ವಿಶ್ವವಿದ್ಯಾಲಯವು 1949 ರಲ್ಲಿ ಬಾಂಬೆ ಆದಿಪತ್ಯ (ಪ್ರಸಿಡೆನ್ಸಿ)ದಿಂದ ಅನುಮೋದನೆಗೊಂಡು ಪ್ರಾರಂಭವಾಯಿತು. ಉತ್ತರ ಕರ್ನಾಟಕ ಶಿಕ್ಷಣ ಕಾಶಿಯೆಂದೇ ಪ್ರಸಿದ್ದಿಯಾದ ಕರ್ನಾಟಕ ವಿಶ್ವವಿದ್ಯಾಲಯವು ತನ್ನ ಭೌತಿಕ ಮತ್ತು ಬೌದ್ಧಿಕ ಬೆಳವಣಿಗೆಯೊಂದಿಗೆ ಅಂತಾರಾಷ್ಟ್ರೀಯ ಖ್ಯಾತಿಗೆ ಪಾತ್ರವಾಗಿದೆ. ವಿವಿಧ ಜ್ಞಾನ ಶಾಖೆಗಳಲ್ಲಿ ನಡೆಸಿದ ಅಂತರಶಿಸ್ತೀಯ ಮತ್ತು ಬಹುಶೀಸ್ತಿಯ ಸಂಶೋಧನೆಗಳು ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿರುವುದು ವಿಶ್ವವಿದ್ಯಾಲಯದ ಶೈಕ್ಷಣಿಕ ಹಿರಿಮೆಯಾಗಿದೆ. ಕರ್ನಾಟಕ ರಾಜ್ಯದ ಎಲ್ಲ ಸರಕಾರಿ ವಿಶ್ವವಿದ್ಯಾಲಯಗಳಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ಅಧಿಕ ಸಿಜಿಪಿಎ ಗ್ರೇಡ್ನೊಂದಿಗೆ ಮೊದಲ ಸ್ಥಾನದಲ್ಲಿರುವುದು ಹೆಮ್ಮೆಯ ವಿಷಯವಾಗಿದೆ. ಈ ಮಾನ್ಯತೆಯು ದಿನಾಂಕ ಅಕ್ಟೊಬರ್ 11, 2022 ರಿಂದ ಐದು ವರ್ಷಗಳವರೆಗೆ ಮಾನ್ಯವಾಗಿರುತ್ತದೆ ಎಂದು ಹೇಳಿದರು.
ವಿಶ್ವವಿದ್ಯಾಲಯದ ಧನಸಹಾಯ ಆಯೋಗವು ವಿಶ್ವವಿದ್ಯಾಲಯಗಳ ಶೈಕ್ಷಣಿಕ ಗುಣಮಟ್ಟ ಅಳೆಯಲು ರಾಷ್ಟ್ರೀಯ ಮೌಲೀಕರಣ ಮತ್ತು ಮಾನ್ಯತಾ ಪರಿಷತ್ (NAAC) ಯನ್ನು 1994ರಲ್ಲಿ ಸ್ಥಾಪಿಸಿದ್ದು, ಅಲ್ಲಿಂದೀಚೆಗೆ ಕರ್ನಾಟಕ ವಿಶ್ವವಿದ್ಯಾಲಯವು ಕಳೆದ ಮೂರು ಆವೃತ್ತಿಯಲ್ಲಿಯೂ ನಿರಂತರವಾಗಿ ‘ಎ’ ಶ್ರೇಣಿಯನ್ನು ಪಡೆಯುತ್ತಾ ಬಂದಿರುವುದು ಹೆಮ್ಮೆಯ ವಿಷಯವಾಗಿದೆ. ಈ ಬಾರಿ ನಾಲ್ಕನೆ ಆವೃತ್ತಿಯಲ್ಲಿ ವಿಶ್ವವಿದ್ಯಾಲಯವು ಕಳೆದ ಐದು ವರ್ಷಗಳ ತನ್ನ ಶೈಕ್ಷಣಿಕ ಸಾಧನೆಯನ್ನು ಪರಿಶೀಲನೆಗಾಗಿ ಮಾರ್ಚ್ 15, 2022 ರಂದು ಮೌಲ್ಯಮಾಪನಕ್ಕಾಗಿ ರಾಷ್ಟ್ರೀಯ ಮೌಲೀಕರಣ ಮತ್ತು ಮಾನ್ಯತಾ ಪರಿಷತ್ಗೆ ಸಾದರಪಡಿಸಿತ್ತು. ಈ ಹಿನ್ನೆಲೆಯಲ್ಲಿ ನ್ಯಾಕ್ ಪೀರ್ ತಂಡ (NAAC Peer Team) ಸೆಪ್ಟೆಂಬರ್ 29, 2022 ರಿಂದ ಅಕ್ಟೊಬರ್ 01, 2022ರವರೆಗೆ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ, ವಿಶ್ವವಿದ್ಯಾಲಯದ ‘ಭೌತಿಕ ಮತ್ತು ಬೌದ್ಧಿಕ ಮೌಲ್ಯಮಾಪನ ಮಾಡಿ ಸಮಿತಿಯು, ತನ್ನ ವರದಿಯಲ್ಲಿ ವಿಶ್ವವಿದ್ಯಾಲಯದ ಪತ್ಯೇತರ ಚಟುವಟಿಕೆ, ಬೋಧನೆ, ಮೌಲ್ಯಮಾಪನ, ಸಂಶೋಧನೆ, ಮೂಲಭೂತ ಸೌಕರ್ಯ, ವಿದ್ಯಾರ್ಥಿಗಳ ಸಹಕಾರ ಮತ್ತು ಪ್ರಗತಿ, ಆಡಳಿತ ಇತ್ಯಾದಿ ವಿಷಯಗಳ ಕುರಿತು ವರದಿಯನ್ನು ನ್ಯಾಕ್ ಕಚೇರಿಗೆ ಸಲ್ಲಿಸಿತ್ತು ಎಂದರು.
ಕಳೆದ ಐದು ವರ್ಷಗಳಲ್ಲಿ ವಿಶ್ವವಿದ್ಯಾಲಯವು ಸಾವಿರಕ್ಕೂ ಅಧಿಕ ಅಂತರಾಷ್ಟ್ರೀಯ ಗುಣಮಟ್ಟದ ಮೌಲಿಕವಾದ ವಿಜ್ಞಾನದ ಲೇಖನಗಳನ್ನು ಪ್ರಕಟಿಸಿದ್ದು, ವಿಶ್ವವಿದ್ಯಾಲಯದ ಹೈಯರ್ ಇಂಡೆಕ್ಸ್ (h-index) 99ಕ್ಕಿಂತ ಅಧಿಕವಾಗಿದೆ. ಈ ಕಾರಣಕ್ಕಾಗಿ, ವಿಶ್ವವಿದ್ಯಾಲಯವು ರಾಷ್ಟ್ರೀಯ ಸಂಸ್ಥೆಗಳಾದ ಯುಜಿಸಿ, ಡಿಎಸ್ಟಿ, ಸಿಎಸ್ಐಆರ್, ಡಿಬಿಟಿ, ವಿಜಿಎಸ್ಟಿ ಗಳಿಂದ ಸಂಶೋಧನೆ ಮತ್ತು ಮೂಲಭೂತ ಸೌಕರ್ಯಕ್ಕಾಗಿ ಸಾಕಷ್ಟು ಹಣಕಾಸಿನ ನೆರವನ್ನು ಪಡೆದುಕೊಂಡಿದೆ ಎಂದರು.
Also read: ಜೆಎನ್’ಎನ್’ಸಿಇಯಲ್ಲಿ ಅ.14-15ರಂದು ಅಂತಾರಾಷ್ಟ್ರೀಯ ಸಮ್ಮೇಳನ
ಕರ್ನಾಟಕ ವಿಶ್ವವಿದ್ಯಾಲಯವು ಅಂತರ್ರಾಷ್ಟ್ರೀಯ ವಿಶ್ವವಿದ್ಯಾಲಯಗಳೊಂದಿಗೆ ಮತ್ತು ದೇಶದ ಅನೇಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳೊಂದಿಗೆ ಶೈಕ್ಷಣಿಕ ಒಡಂಬಡಿಕೆ ಮಾಡಿಕೊಂಡಿದ್ದು, ಈ ನಿಯಮಗಳಡಿಯಲ್ಲಿ ವಿದ್ಯಾರ್ಥಿಗಳು ಎರಡು ಸಂಸ್ಥೆಗಳ ಸಹಭಾಗಿತ್ವದಲ್ಲಿ ಉನ್ನತ ಶಿಕ್ಷಣ ಪಡೆಯುವ ಅವಕಾಶ ಕಲ್ಪಿಸಿಕೊಟ್ಟಿದೆ. ಕಳೆದ ಎಪ್ಪತ್ತಮೂರು ವರ್ಷಗಳಿಂದ ವಿಶ್ವವಿದ್ಯಾಲಯವು ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ವಿದ್ವತ್ ಲೋಕದ ಗಣ್ಯರನ್ನು ಬರಮಾಡಿಕೊಂಡಿದೆ. ಹಾಗೆಯೇ ಕರ್ನಾಟಕ ವಿಶ್ವವಿದ್ಯಾಲಯದ ಅನೇಕ ಪ್ರಾಧ್ಯಾಪಕರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿ ತಮ್ಮ ವಿದ್ವತ್ ಪ್ರದರ್ಶನ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ವಿಶ್ವವಿದ್ಯಾಲಯಕ್ಕೆ ಜಾಗತಿಕ ಮಟ್ಟದ ಘನತೆ ಪ್ರಾಪ್ತವಾಗಿದೆ. ಕರ್ನಾಟಕ ಕಾಲೇಜಿನ ಪ್ರಾಚಾರ್ಯರಾದ ಡಾ. ವಿ.ಕೃ.ಗೋಕಾಕ ಹಾಗೂ ಡಾ.ಗಿರೀಶ ಕಾರ್ನಾಡ, ಡಾ.ಚಂದ್ರಶೇಖರ ಕಂಬಾರರಂತ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು ಸಾಹಿತ್ಯ ಕ್ಷೇತ್ರದಲ್ಲಿ ಕೊಡಮಾಡುವ ಉನ್ನತ ಮಟ್ಟದ ಜ್ಞಾನಪೀಠ ಪ್ರಶಸ್ತಿಯನ್ನು ಪಡೆಯುವುದರ ಹಿಂದೆ ಕರ್ನಾಟಕ ವಿಶ್ವವಿದ್ಯಾಲಯದ ಕೊಡುಗೆ ಇದೆ ಎಂಬುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಆಧುನಿಕತೆಯ ಬದಲಾವಣೆಗೆ ಅನುಗುಣವಾಗಿ ಕವಿವಿ ಯಲ್ಲಿ ಬಹುವಿಧಧ ವಿಷಯಗಳ ಪದವಿಯನ್ನು ಆರಂಭಿಸಲಾಗುವುದು. ಸ್ಕೂಲ್ ಆಫ್ ಫಾರ್ಮಸಿಟಿಕಲ್ ಸೈನ್ಸ್, ಸೆಂಟರ್ಫಾರ್ ನ್ಯಾನೋಟೆಕ್ನಾಲಜಿ, ಆರ್ಟಿಫಿಸಿಯಲ್ ಇಂಟಲಿಜನ್ಸ್, ಡಾಟಾಸೈನ್ಸ್ ಸೇರಿದಂತೆ ಹಲವಾರು ವಿಷಯಗಳಲ್ಲಿ ಪದವಿ, ಸ್ನಾತಕೋತ್ತರ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಸಂಶೋಧನೆ ಹಾಗೂ ಅಭಿವೃದ್ಧಿ ಕುರಿತಂತೆ ಹಲವಾರು ಖಾಸಗಿ ಕಂಪನಿಗಳ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ರಾಷ್ಟ್ರೀಯ ಸ್ಟಾಕ್ ಎಕ್ಸಚೇಂಜ್ ಅಕಾಡೆಮಿ, ಇನ್ಫೊಸಿಸ್ ಸಹ ಸಹಭಾಗಿಯಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಹಲವಾರು ಉದ್ಯಮಗಳ ಹಾಗೂ ತಜ್ಞರ ನಡುವಿನ ಮಧ್ಯದ ಕೊರತೆ ನೀಗಿಸಲು ವಿವಿಧ ಕಂಪನಿಗಳ ಜೊತೆಯೂ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಡಿಜಿಟಲ್ ಲೈಬ್ರರಿ, ಪ್ರಾಣಿಮಾನೆ ಸೇರಿದಂತೆ ಸಂಶೋಧನಾ ಅಭಿವೃದ್ಧಿ ಕೋಶ ಸ್ಥಾಪಿಸಲಾಗುತ್ತಿದೆ. ವಿವಿಧ ಅಧ್ಯಯನ ಪೀಠಗಳು ಸಹ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.
ಬಸವಪೀಠದಿಂದ ಬಸವತತ್ವ ಎಲ್ಲೆಡೆ ಪ್ರಚಾರವಾಗುತ್ತಿದೆ. ಜಗತ್ತಿನ ಮೊದಲಿನ ಸಂಸತ್ “ಅನುಭವ ಮಂಟಪ” ಎಂದು ಪುಷ್ಠಿಕರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಪುರಾವೆ ಸಾಕ್ಷ್ಯಗಳನ್ನು ನೀಡುವಲ್ಲಿ ಬಸವಪೀಠ ತೊಡಗಿಸಿಕೊಂಡಿದೆ. ಆಗಿನ ಕಾಲದ ವಚನಗಳು, ತಾಳೆಗರಿಗಳನ್ನು ಪುರಾವೆಯಾಗಿ ಪ್ರಸ್ತಾವನೆಯೊಂದನ್ನು ಕೇಂದ್ರ ಸರ್ಕಾರಕ್ಕೆ ಶೀಘ್ರವೇ ಕಳುಹಿಸಲಾಗುವುದು.
–ಕುಲಸಚಿವರು
ಶರಣರಾದ ಡಾ.ಜಿ.ಸಿ.ತಲ್ಲೂರ, ಪ್ರೊ.ರಾಜೂರ, ಡಾ.ಅರವಿಂದ ಜತ್ತಿ, ಬಸವಪೀಠದ ನಿರ್ದೇಶಕರಾದ ಪ್ರೊ.ಕುಂದಗೋಳ ಸೇರಿದಂತೆ ಹಲವಾರರ ನೇತೃತ್ವದಲ್ಲಿ ಐತಿಹಾಸಿಕ ಕ್ರಾಂತಿಕಾರಕ ಪ್ರಸ್ತಾವನೆ ಸಿದ್ಧಗೊಳ್ಳುತ್ತಿರುವುದಾಗಿ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕವಿವಿ ಕುಲಸಚಿವರಾದ ಯಶಪಾಲ ಕ್ಷೀರಸಾಗರ, ಮೌಲ್ಯಮಾಪನ ಕುಲಸಚಿವ ಕೃಷ್ಣಮೂರ್ತಿ, ಕವಿವಿ ವಿತ್ತಾಧಿಕಾರಿ ಅಂಜನಾದೇವಿ ತಾಮ್ರಗುಂಡಿ, ಐಕ್ಯೂಎಎಸ್ ನಿರ್ದೇಶಕ ಪ್ರೊ.ಎಸ್.ಟಿ. ಬಾಗಲಕೋಟಿ, ಸಹ ನಿರ್ದೇಶಕ ಡಾ.ಗುರುರಾಜ ಹಡಗಲಿ, ಸಿಂಡಿಕೇಟ್ ಸದಸ್ಯರಾದ ಹಂಸವೇಣಿ, ಕಲ್ಮೇಶ ಹಾವೇರಿಪೇಟ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post