ಪ್ಯಾರಿಸ್: ಜಗತ್ಪ್ರಸಿದ್ಧ ಈ ಮಹಾನಗರದಲ್ಲಿರುವ ರಾಯಭಾರ ಕಚೇರಿ ಸಭಾಂಗಣದಲ್ಲಿ ದಸರಾ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಗೀತ ಹಾಗೂ ಭರತನಾಟ್ಯ ವೈಭವ ಅನಾವಣಗೊಂಡಿದ್ದು, ವಿದೇಶಿ ನೆಲದಲ್ಲಿ ಭಾರತೀಯ ಸಂಸ್ಕೃತಿಯ ಬಗ್ಗೆ ಮತ್ತೊಮ್ಮೆ ಪರಿಚಯವಾಯಿತು.
ಹೌದು… ಈಗಾಗಲೇ ಪ್ಯಾರಿಸ್‌ನಲ್ಲಿ ಕರ್ನಾಟಕ ಸಂಗೀತ ಮತ್ತು ಭರತನಾಟ್ಯ ಎಂದರೆ ಮನೆಮಾತು ಎಂಬಷ್ಟು ಖ್ಯಾತಿ ಪಡೆದ ಕಾರ್ನಾಟಿಕ್ ಕನ್ಸರ್‌ವೇಟರಿ ಆಫ್ ಪ್ಯಾರಿಸ್ (ಸಿಸಿಪಿ) ಸಂಸ್ಥೆ ಸಂಗೀತ ಮತ್ತು ನೃತ್ಯದ ಮೂಲಕ ಭಾವೈಕ್ಯತೆ ಬೆಸೆಯುವ ಉದ್ದೇಶದಿಂದ ನೃತ್ಯ-ನಾದ ಸರಣಿಯ 5ನೆಯ ಆವೃತ್ತಿ ಕಾರ್ಯಕ್ರಮ ಆಯೋಜಿಸಿದ್ದು ಕಲಾರಸಿಕರ ಹೃನ್ಮನ ತಣಿಸಿತು.

ಈ ಸಮಾರಂಭದಲ್ಲಿ ಅವರ ಶಿಷ್ಯರು ಗಣಪತಿ, ಸರಸ್ವತಿ ಮೇಲಿನ ಕೃತಿಗಳನ್ನು ಮನೋಜ್ಞವಾಗಿ ಹಾಡಿದರು. ಖ್ಯಾತ ಕಲಾವಿದ ಡಾ. ಎಂ. ಬಾಲಮುರಳಿ ಕೃಷ್ಣ ಅವರ ರಚನೆಗಳನ್ನು ಮಧುರವಾಗಿ ಹೊಮ್ಮಿಸಿದರು. ಪ್ಯಾರಿಸ್‌ನಲ್ಲಿ ಈಗಾಗಲೇ ನೆಲೆಸಿ ಕರ್ನಾಟಕ ಸಂಗೀತ ಕಲಿಕೆಯಲ್ಲಿ ವಿಶೇ ಪರಿಣತಿ ತೋರಿರುವ ಭಾರತ, ಫ್ರಾನ್ಸ್, ಯೂರೋಪ್, ಬ್ರಿಟನ್ ಮತ್ತು ಶ್ರೀಲಂಕಾದ ಯುವ ಕಲಾವಿದರು ಕರ್ನಾಟಕ ಶಾಸೀಯ ಸಂಗೀತ ಪ್ರಕಾರದಲ್ಲಿ ವಿವಿಧ ಕೃತಿಗಳಿಗೆ ಕೊರಳಾಗಿದ್ದು, ಸಭಿಕರ ಮನ ಸೂರೆಗೊಂಡಿತು. ಇಷ್ಟು ಮಾತ್ರವಲ್ಲ, ಲಾಲ್ ಗುಡಿ ಜಯರಾಮನ್, ಚಿತ್ರವೀಣಾ ರವಿಶಂಕರ್, ಮಧುರೈ ಮುರಳೀಧರನ್ ಕೃತಿಗಳು ಅವರೆಲ್ಲರ ಕಂಠ ಸಿರಿಯಿಂದ ಮೂಡಿಬಂದವು. ಗಮನೀಯ ಸಂಗತಿ ಎಂದರೆ ಭಾರತ ರತ್ನ ವಿದುಷಿ ಎಂ.ಎಸ್. ಸುಬ್ಬುಲಕ್ಷ್ಮೀ ಅವರ ಜನ್ಮ ಶತಮಾನೋತ್ಸವ ವರ್ಷವಿದು. ಈ ಪ್ರಯುಕ್ತ ಯುವ ಕಲಾವಿದರು ಎಂ.ಎಸ್. ಅಮ್ಮ ಅವರು ಹಾಡಿದ ಜನಪ್ರಿಯ ಕೃತಿಗಳನ್ನೂ ಹಾಡಿ ಕಲಾಸಕ್ತರ ಹೃದಯ ಗೆದ್ದರು.

ಈ ವೇದಿಕೆ ಕೇವಲ ಗಾಯನಕ್ಕೆ ಮಾತ್ರವಲ್ಲ, ನರ್ತನಕ್ಕೂ ನೆಲೆಯಾಗಿತ್ತು. ಉದಯೋನ್ಮುಖ ನೃತ್ಯದ ಕಲಾವಿದೆ ಅನುಷಾ ಚೀರೇರ್ ಅವರು ಆರಭಿ ರಾಗದ ಪುಷ್ಪಾಂಜಲಿಯಿಂದ ಭರತನಾಟ್ಯ ಪ್ರದರ್ಶನ ಆರಂಭಿಸಿದರು. ಷಣ್ಮುಖಪ್ರಿಯ ರಾಗದ ವರ್ಣಂ ಮತ್ತು ಆದಿತಾಣದ ಓಂಕಾರ ಪ್ರಣವ ಮುದ ನೀಡಿದವು. ಜಯದೇವ ಕವಿಯ ಅಷ್ಟಪದಿಯಿಂದ ಆಯ್ದ ಯಾಹಿ ಮಾಧವ ಗೀತೆಗೆ ಚೇತೋಹಾರಿ ನೃತ್ಯ ಪ್ರದರ್ಶನ ಮಾಡಿದ್ದು ಸಭಿಕರ ಕರತಾಡನಕ್ಕೆ ಸಾಕ್ಷಿಯಾಗಿತ್ತು. ಕದನ ಕುತೂಹಲ ರಾಗದ ತಿಲ್ಲಾನದೊಂದಿಗೆ ಅನುಷಾ ಕಛೇರಿಗೆ ಮಂಗಳ ಹಾಡಿದರು. ವಿದುಷಿ ಭಾವನಾ ಅವರ ಹಿನ್ನೆಲೆ ಗಾಯನ ಮತ್ತು ನಟುವಾಂಗ ನೃತ್ಯಾಭಿನಯದ ರಂಗನ್ನು ನೂರು ಪಟ್ಟು ಹೆಚ್ಚಿಸಿತ್ತು.
ಈ ವರ್ಷ ನಾವು ಸನಾತನ ಎಂಬ ಸರಣಿ ಆರಂಭಿಸಿದ್ದೇವೆ. ಭಾರತದಿಂದ ಆಗಮಿಸುವ ಉದಯೋನ್ಮುಖ ಕಲಾವಿದರಿಗೆ ವೇದಿಕೆ ನೀಡುವುದು, ಸನಾತನ ಕಲಾ ಪರಂಪರೆಯನ್ನು ಫ್ರೆಂಚರಿಗೆ ದರ್ಶನ ಮಾಡಿಸುವುದು ಮತ್ತು ಆ ಮೂಲಕ ಭಾರತ -ಫ್ರಾನ್ಸ್ ಸಾಂಸ್ಕೃತಿಕ ಸಂಬಂಧವನ್ನು ಇನ್ನಷ್ಟು ಬಲ ಪಡಿಸುವುದು ಈ ಸರಣಿಯ ಉದ್ದೇಶ.
-ವಿದುಷಿ ಭಾವನಾ ಪ್ರದ್ಯುಮ್ನ
ಕಾರ್ನಾಟಿಕ್ ಕನ್ಸರ್‌ವೇಟರಿ ಆಫ್ ಪ್ಯಾರಿಸ್ ಅಧ್ಯಕ್ಷೆ
ಪಕ್ಕವಾದ್ಯಮೇಳ ನೃತ್ಯ-ಗಾಯನದ ರುಚಿಯನ್ನು ನೂರ್ಮಡಿಗೊಳಿಸಿತ್ತು. ಮೃದಂಗದಲ್ಲಿ ವೆಂಕಟಕೃಷ್ಣ ಸುಂದರಂ, ಪಿಟೀಲಿನಲ್ಲಿ ಪಿ. ಪರಮೇಶ್ವರ ಲಿಂಗಂ ಸಹಕಾರ ಅದ್ಭುತವಾಗಿತ್ತು. ಮೇಸನ್ ಡಿ ಐ ಇಂಡೇ (ಇಂಡಿಯಾ ಹೌಸ್ ) ಸಂಸ್ಥೆ ಈ ಕಾರ್ಯಕ್ರಮಕ್ಕೆ ಸಹಯೋಗ ನೀಡಿತ್ತು. ಕಲಾಪ್ರಿಯರ ಮನೋಭೂಮಿಕೆಯಲ್ಲಿ ಬಹುಕಾಲ ಭದ್ರವಾಗಿ ನೆನಪುಳಿಯುವಂಥ ಕಾರ್ಯಕ್ರಮವೊಂದು ವಿದುಷಿ ಭಾವನಾ ಪ್ರದ್ಯುಮ್ನರ ನೇತೃತ್ವದಲ್ಲಿ ಜರುಗಿದ್ದು ಹಲವರ ಅಂತರಂಗ ಪ್ರಶಂಸೆಗೆ ಪಾತ್ರವಾಯಿತು.

ಸಂಗೀತ-ನೃತ್ಯ ಕಲಾ ಪ್ರದರ್ಶನಕ್ಕೆ ಮನದುಂಬಿ ಪ್ರಶಂಸೆ ವ್ಯಕ್ತಪಡಿಸಿದ ಅವರು, ಭಾರತದಾದ್ಯಂತ ಮಾತೆ ದುರ್ಗಾ ಪೂಜೆ ಅಂಗವಾಗಿ ಫ್ರಾನ್ಸ್ ನೆಲದಲ್ಲೂ ಪಸರಿಸಿದ ಕಲಾವಿದರು ಭಾರತದ ಸಾಂಸ್ಕೃತಿಕ ರಾಯಭಾರಿಗಳೇ ಆಗಿದ್ದಾರೆ ಎಂದು ಶ್ಲಾಸಿದರು. ನೃತ್ಯ-ನಾದ ಸರಣಿ ನಿರ್ದೇಶಕ ಪ್ರದ್ಯುಮ್ನ ಕಂದಾಡೈ ಮತ್ತಿತರರಿದ್ದರು.
ಕಾರ್ನಾಟಿಕ್ ಕನ್ಸರ್‌ವೇಟರಿ ಆಫ್ ಪ್ಯಾರಿಸ್
ಬೆಂಗಳೂರು ಮೂಲದ ವಿದುಷಿ ಭಾವನಾ ಪ್ರದ್ಯುಮ್ನ ಅವರ ಕನಸಿನ ಕೂಸು ಕಾರ್ನಾಟಿಕ್ ಕನ್ಸರ್‌ವೇಟರಿ ಆಫ್ ಪ್ಯಾರಿಸ್. ವಿದೇಶದಲ್ಲಿ ನೆಲೆಸಿದ್ದರೂ ಪರಿಶುದ್ಧ ಭಾರತೀಯ ಸಂಗೀತ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಜಗದಗಲ ಪಸರಿಸಲು ಸಂಕಲ್ಪ ತೊಟ್ಟಿದ್ದಾರೆ ವಿದುಷಿ ಭಾವನಾ. ಎರಡು ರಾಷ್ಟ್ರಗಳಲ್ಲಿ ಈಗಾಗಲೇ 10ಕ್ಕೂ ಹೆಚ್ಚು ಮಹತ್ವಪೂರ್ಣ ಕರ್ನಾಟಕ ಸಂಗೀತ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿ ಸೈ ಎನಿಸಿಕೊಂಡವರು. ತಾನೂ ಬೆಳೆಯಬೇಕು, ತನ್ನಂತೆ ಇರುವ ಕಲಾ ಆಸಕ್ತರನ್ನೂ ಬೆನ್ನು ತಟ್ಟಿ ಬೆಳೆಸಬೇಕು ಎಂಬುದು ಭಾವನಾ ಅವರ ಉದ್ದೇಶ. ಹೀಗಾಗಿ ಸಿಸಿಪಿ ಸಂಸ್ಥೆ ಕಳೆದ 5 ವರ್ಷಗಳಲ್ಲಿ 40ಕ್ಕೂ ಹೆಚ್ಚು ಕಲಾವಿದರಿಗೆ ವೇದಿಕೆ ಕಲ್ಪಿಸಿಕೊಟ್ಟಿದೆ ಎಂಬುದು ಉಲ್ಲೇಖಾರ್ಹ ಸಂಗತಿಯೇ ಆಗಿದೆ.

ಭಾವನಾ ಅವರ ಪ್ರತಿಭೆ, ಪಾಂಡಿತ್ಯ ಮತ್ತು ಅದಮ್ಯ ಉತ್ಸಾಹಕ್ಕೆ ಸದಾ ನೀರೆಯುತ್ತ ಅಹರ್ನಿಶಿ ಬೆಂಬಲವಾಗಿ ನಿಂತವರು, ಭಾವನಾ ಅವರ ಪತಿ ಶ್ರೀ ಪ್ರದ್ಯುಮ್ನ ಕಂದಾಡೈ. ಕಲಾಸಕ್ತಿಯ ದಂಪತಿಗಳು ಭಾರತದ ಪ್ರಧಾನಿ ಮೋದಿ ಸೇರಿ ಯಾವುದೇ ಗಣ್ಯಾತಿಗಣ್ಯರು ಪ್ಯಾರಿಸ್ ಗೆ ಭೇಟಿ ನೀಡಿದಾಗ, ಅವರನ್ನು ಸನಾತನ ಸಂಸ್ಕೃತಿಯ ಬೀಡು ಭರತ ಖಂಡದ ಪರವಾಗಿ ಸ್ವಾಗತಿಸಿ, ಸತ್ಕರಿಸುವಲ್ಲೂ ಮುಂಚೂಣಿಯಲ್ಲಿ ಇರುವುದು ಸಮಸ್ತ ಭಾರತೀಯರಿಗೆ ಹೆಮ್ಮೆ.







Discussion about this post