ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದ ವತಿಯಿಂದ ನಗರದ ಎಂ.ಜಿ. ಕಾಲೋನಿಯ ರೈಲ್ವೆ ಮೈದಾನದಲ್ಲಿ 12ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಸಾಮೂಹಿಕ ಯೋಗಾಭ್ಯಾಸದ ಮೂಲಕ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ರೈಲ್ವೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಅವರ ಕುಟುಂಬ ಸದಸ್ಯರು ಉತ್ಸಾಹದಿಂದ ಭಾಗವಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಆಶುತೋಷ್ ಕುಮಾರ್ ಸಿಂಗ್, ದೈನಂದಿನ ಜೀವನದಲ್ಲಿ ಯೋಗದ ಮಹತ್ವವನ್ನು ವಿವರಿಸಿದರು. “ಯೋಗವು ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲದೆ ಮಾನಸಿಕ ಯೋಗಕ್ಷೇಮ ಹಾಗೂ ಮನಶಾಂತಿಗೂ ಸಹಕಾರಿ” ಎಂದು ಹೇಳಿದರು.
Also Read>> ತೀರ್ಥಹಳ್ಳಿ | ಎರಡು ಕಾರುಗಳ ನಡುವೆ ಭೀಕರ ಡಿಕ್ಕಿ | ಹಲವರಿಗೆ ಗಾಯ
ಯೋಗಾಭ್ಯಾಸದಲ್ಲಿ ಆಸನಗಳು, ಪ್ರಾಣಾಯಾಮ, ಧ್ಯಾನ ಇವು ಪ್ರಮುಖ ಅಂಶಗಳಾಗಿವೆ. ಆಸನಗಳು ದೇಹದ ಲವಚಿಕತೆ ಮತ್ತು ಬಲವನ್ನು ಹೆಚ್ಚಿಸುತ್ತವೆ. ಪ್ರಾಣಾಯಾಮವು ಉಸಿರಾಟದ ನಿಯಂತ್ರಣದ ಮೂಲಕ ಮನಸ್ಸನ್ನು ಶಾಂತಗೊಳಿಸುತ್ತದೆ. ಧ್ಯಾನವು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ ಎಂದು ಹೇಳಿದರು.
ನಿತ್ಯ ಯೋಗ ಮಾಡುವುದರಿಂದ ದೈಹಿಕ ಆರೋಗ್ಯ ಉತ್ತಮವಾಗುತ್ತದೆ. ಹೃದಯ ಆರೋಗ್ಯ, ರಕ್ತದ ಒತ್ತಡ ನಿಯಂತ್ರಣ, ದೇಹದ ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಯೋಗ ಸಹಕಾರಿ. ಜೊತೆಗೆ ಮಾನಸಿಕ ಆರೋಗ್ಯಕ್ಕೂ ಯೋಗ ಬಹಳ ಮುಖ್ಯ. ಆತಂಕ, ಒತ್ತಡ, ಖಿನ್ನತೆ ಇವುಗಳನ್ನು ಕಡಿಮೆ ಮಾಡಲು ಯೋಗ ಪರಿಣಾಮಕಾರಿ ಎಂದು ಹೇಳಿದರು.
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಯೋಗ ತರಬೇತುದಾರರಾದ ಕಿಶೋರ್ ಮತ್ತು ಅವರ ತಂಡದ ಮಾರ್ಗದರ್ಶನದಲ್ಲಿ ವಿವಿಧ ಯೋಗಾಸನಗಳು, ಸೂರ್ಯ ನಮಸ್ಕಾರ ಹಾಗೂ ಪ್ರಾಣಾಯಾಮಗಳನ್ನು ಅಭ್ಯಾಸ ಮಾಡಲಾಯಿತು.
Also Read>> ಶಿಕಾರಿಪುರ | ಯುವಕರು ಪ್ರಗತಿಗೆ ಸದಾ ಸಿದ್ಧರಾಗಿರಬೇಕು | ಡಾ.ರವೀಂದ್ರ ಕರೆ
ಕಾರ್ಯಕ್ರಮದಲ್ಲಿ ಹಿರಿಯ ಉಪ ಮಹಾಪ್ರಬಂಧಕರಾದ ಮನೋಜ್ ಕುಮಾರ್, ಪ್ರಧಾನ ಮುಖ್ಯ ಸುರಕ್ಷತಾ ಅಧಿಕಾರಿಯಾದ ಎಂ. ರಾಮಕೃಷ್ಣ, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಪರೀಕ್ಷಿತ್ ಮೋಹನ್ ಪುರಿಯಾ ಮತ್ತು ಪ್ರವೀಣ್ ಕಾತರಕಿ, ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ ಉಮಾ ಶರ್ಮಾ, ವೆಂಕಟೇಶ್ ನಾಯಕ್, ಮಹಿಳಾ ಕಲ್ಯಾಣ ಸಂಘಟನೆಯ ಅಧ್ಯಕ್ಷೆ ರೀನಾ ಸಿಂಗ್ ಸೇರಿದಂತೆ ಅನೇಕ ಅಧಿಕಾರಿಗಳು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















