ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬಹಳ ವರ್ಷಗಳ ಹಿಂದೆ ಕೆಲವು ಕಾಯಿಲೆಗಳು ವೇಗವನ್ನು ಪಡೆದುಕೊಂಡು ಕೋಟ್ಯಂತರ ಜನರ ಬದುಕನ್ನು ನಾಶ ಮಾಡಿದ್ದು ಇತಿಹಾಸ. ಅದೇ ಶತಮಾನಗಳು ಕಳೆದನಂತರ ಮಾನವನ ಅತಿಯಾದ ಹಣದ ದಾಹ, ಅಧಿಕಾರದ ವ್ಯಾಮೋಹ, ಸ್ವಪ್ರತಿಷ್ಠೆ ಹೆಚ್ಚಾಗುತ್ತಿದ್ದಂತೆ ಗೊತ್ತಿಲ್ಲದೆ ಇರುವ ನೂರಾರು ವೈರಾಣುಗಳು ಮಾನವನ ದೇಹಕ್ಕೆ ನಾಟಿ ಮನುಷ್ಯನ ಜೀವ ಕಿತ್ತುಕೊಂಡು ಅವರ ಕುಟುಂಬಗಳನ್ನು ಅನಾಥವನ್ನಾಗಿ ಮಾಡುತ್ತಿದೆ.
ಕೋವಿಡ್19 ಹಿಂದೆಲ್ಲಾ ಬರುತ್ತಿದ್ದ ಮಹಾಮಾರಿ ಖಾಯಿಲೆಗಳಿಗೆ ಹೋಲಿಸಿದರೆ ಈ ಖಾಯಿಲೆ ಹೆಚ್ಚಾಗಿ ಜೀವ ಹಾನಿ ಉಂಟು ಮಾಡುವುದಿಲ್ಲ, ನಮ್ಮ ಭಾರತೀಯ ಆಹಾರ ಪದ್ದತಿ ಮತ್ತು ಜೀವನ ಶೈಲಿ ನಮ್ಮ ಭಾರತೀಯ ಜನರ ಆರೋಗ್ಯವನ್ನು ಈ ಮಟ್ಟಿಗೆ ಕಾಪಾಡಿಕೊಂಡು ಬಂದಿದೆ.
ಭಾರತೀಯ ನಾಗರಿಕರು ತಮ್ಮ ನಿತ್ಯದ ಬದುಕಿನಲ್ಲಿ ರೋಗ ನಿರೋಧಕ ಶಕ್ತಿ ಇರುವ ಆಹಾರವನ್ನೇ ಹೆಚ್ಚಾಗಿ ಬಳಸುವುದರಿಂದ ಜೀವಕ್ಕೆ ಯಾವುದೇ ರೀತಿಯ ಹಾನಿಯು ಕೂಡ ಆಗುವುದಿಲ್ಲ. ಎಂದು ಋಷಿ ಮುನಿಗಳ ಕಾಲದಲ್ಲೇ ತಾಳೆಗರಿಯ ಮೇಲೆ ಬರೆದಿರುವುದನ್ನು ಈಗಲೂ ಕೂಡ ಪಾಲಿಸುತ್ತಿದ್ದೇವೆ. ಅಂತಹ ಪುಣ್ಯ ಭೂಮಿ ಆಗಿದೆ ಈ ನಮ್ಮ ಭರತ ಖಂಡ.
ಕೋವಿಡ್19 ಎದುರಿಸಲು ಕೋವಿಡ್ ವಾರಿಯರ್ಸ್ ಎಷ್ಟೇ ಪ್ರಯತ್ನ ಪಡುತ್ತಿದ್ದರು ಜನರು ಮಾತು ಕೀಳದಿರುವುದು ಶೋಚನೀಯ ಸಂಗತಿ. ತನ್ನ ಮನೆಯಲ್ಲಿಯೇ ಕಂದಮ್ಮಗಳನ್ನು, ಹಿರಿಯ ನಾಗರಿಕರನ್ನು ಇಟ್ಟಿಕೊಂಡು ತಾನು ಯಾವ ಸುರಕ್ಷತೆಯೂ ತೆಗೆದುಕೊಳ್ಳದೆ ಇನ್ನೊಬ್ಬರ ಜೀವದ ಹಾನಿಗೆ ಕಾರಣರಾಗುತ್ತಿದ್ದಾರೆ. ಒಂದು ಕಡೆ ಬಡವರ ಬವಣೆಗಳಾದರೆ ಇನ್ನೊಂದೆಡೆ ಪಾಪ ಈ ಶಿಕ್ಷಕರ ಮಕ್ಕಳ ಪಾಡು ಕೇಳುವವರಿಲ್ಲ.
ಮಕ್ಕಳು ತನ್ನ ತಾಯಿ ತಂದೆಯ ಬಳಿ ಮೊದಲ ವಿದ್ಯಾಭ್ಯಾಸ ಕಲಿತು ಶಾಲೆಯಲ್ಲಿ ನೆಚ್ಚಿನ ಗುರುಗಳು ಹೇಳಿಕೊಟ್ಟ ಪಠ್ಯಗಳನ್ನು ನೇರವಾಗಿ ಕಲಿತು ಮನೆಯಲ್ಲಿ ತಂದೆ ತಾಯಿಯರೊಡನೆ ಒಪ್ಪಿಸುತ್ತಿದ್ದರು. ಶಿಕ್ಷಕರ ಆ ಶಾಲೆಯಲ್ಲಿನ ಪಠ್ಯ ಕಲಿಸುವಿಕೆ ಮಕ್ಕಳಲ್ಲಿ ಹೆಚ್ಚಿನ ಉತ್ಸಾಹ ಬರುತ್ತಿತ್ತು, ಶಿಕ್ಷಕರು ಕೂಡ ಮಕ್ಕಳ ಜೊತೆ ಬೆರೆತು ಕಲಿಕೆಯಲ್ಲಿ ಶ್ರದ್ಧೆ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಿದ್ದರು. ಮಕ್ಕಳು ಕೂಡ ಅದೇ ಉತ್ಸಾಹದಲ್ಲಿ ಶಿಕ್ಷಕರೊಡನೆ ಬೆರೆತು ಕಲಿಕೆ ಮಾಡುತ್ತಿದ್ದರು. ಇದೇ ಕಲಿಕೆಯು ಇಂದು ಶಿಕ್ಷಕರ ಜೀವನಕ್ಕೆ ಕೊಡಲಿ ಪೆಟ್ಟು ಕೊಟ್ಟು, ಮಕ್ಕಳ ಮನಃಸ್ಥಿತಿಯನ್ನೇ ಕುಗ್ಗಿಸುತ್ತಿದೆ.
ಹೌದು… ಕೋವಿಡ್19 ಎಂಬ ವೈರಾಣು ಮಕ್ಕಳ ಭವಿಷ್ಯ ಮತ್ತು ಶಿಕ್ಷಕರ ಬದುಕನ್ನೇ ಕಿತ್ತುಕೊಂಡಿದೆ. ಮಕ್ಕಳು ನೇರವಾಗಿ ಶಿಕ್ಷಕರೊಡನೆ ಕಲಿತ ಕಲಿಕೆಯನ್ನೇ ಹೆಚ್ಚಾಗಿ ಗಮನಿಸುವುದಿಲ್ಲ, ಇನ್ನು ಈ ಮೊಬೈಲ್ ಕಂಪ್ಯೂಟರ್ ಮೂಲಕ ಯಾವ ಮಟ್ಟಿಗೆ ತಮ್ಮ ಮನೋವಿಕಾಸ ಮತ್ತು ವಿದ್ಯೆಯನ್ನು ವೃದ್ಧಿಸಿಕೊಳ್ಳುತ್ತಾರೆ ಎಂಬುದು ಅರಿತುಕೊಳ್ಳಲು ಸಾಧ್ಯವಿಲ್ಲ. ಇದರ ಮಧ್ಯೆಯು ಕೆಲವರ ಮಕ್ಕಳು ಗುರುಕುಲ ಶಾಲೆಗಳಲ್ಲಿ ಓದುತ್ತಿರುವುದು ಸಂತೋಷದ ಸಂಗತಿ. ದುಡ್ಡಿಗೋಸ್ಕರ ಮಕ್ಕಳಿಗೆ ಹೆಚ್ಚಾಗಿ ಶಾಲೆಯಲ್ಲಿ ಹೆಚ್ಚಿನ ರೀತಿಯಲ್ಲಿ ಒತ್ತಡ ಹಾಕಿ online ತರಗತಿಗಳನ್ನು ಮಾಡಿ ಮಕ್ಕಳ ಚಿಂತನೆಗಳಿಗೆ ಪೆಟ್ಟು ಕೊಡುತ್ತಿವೆ ಈ ಶಿಕ್ಷಣ ಸಂಸ್ಥೆಗಳು.
ಪೋಷಕರು ತಮ್ಮ ಮಕ್ಕಳಿಗೆ ಮನೆಯಲ್ಲಿಯೇ ಗುರುಕುಲ ಮಾದರಿಯಲ್ಲಿಯೇ ಮಕ್ಕಳಿಗೆ ಸಂಸ್ಕಾರ ಹೇಳಿಕೊಟ್ಟು ಮಕ್ಕಳೊಡನೆ ಮಕ್ಕಳಾಗಿ ಬೆರೆತು ಮಕ್ಕಳ ಪಠ್ಯಗಳನ್ನು ಆಡುತ್ತಾ ಆಡುತ್ತಾ, ಹೇಳಿಕೊಟ್ಟು ಮಕ್ಕಳಿಗೆ ಕ್ರಿಯಾಶೀಲತೆ ಕೊರತೆ ಬರದಂತೆ ನೋಡಿಕೊಳ್ಳಬಹುದು. ಮನೆಯಲ್ಲಿಯೇ ಪಠ್ಯದ ಜೊತೆ ಸಂಸ್ಕಾರ, ಇತಿಹಾಸ, ನೀತಿ ಬೋಧನೆಗಳನ್ನು ಕಂಪ್ಯೂಟರ್ ಬದಲು ತಾಯಿ ತಂದೆಯರು ಕಲಿಸಬೇಕಿದೆ. ಇದರ ಜೊತೆಯಲ್ಲಿ ಸ್ವಲ್ಪ ಮಟ್ಟಿಗೆ ಶಾಲೆಯ ತರಗತಿಯ ಪಠ್ಯ ಶಿಕ್ಷಕರು ಹೇಳಿ ಕೊಟ್ಟ ಹಾಗೆ ಓದಿಕೊಂಡು ಹೋದರೆ ಸಾಕು, ಹೆಚ್ಚಾಗಿ ಮಕ್ಕಳಿಗೆ ಕಂಪ್ಯೂಟರ್ ಮೊಬೈಲ್ ಶಿಕ್ಷಣ ಹೊರತುಪಡಿಸಿ ಮನೋವಿಕಾಸ ವೃದ್ಧಿಸುವ ನೀತಿ ಪಾಠಗಳೇ ಈ ದಿನಗಳಲ್ಲಿ ಮಕ್ಕಳಿಗೆ ಕೊಡುವ ಉತ್ತಮ ಮನೋವಿಕಾಸ.
ಶಿಕ್ಷಕ ವೃತ್ತಿಯನ್ನೇ ನೆಚ್ಚಿಕೊಂಡು ಬದುಕುತ್ತಿರುವ ಒಳ್ಳೆಯ ಶಿಕ್ಷಕರನ್ನು ಈ ಕೋವಿಡ್ 19 ಇಂದ ಕಳೆದುಕೊಳ್ಳದಿರೋಣ. ನಮ್ಮ ಕೈಯಲ್ಲಿ ಎಷ್ಟು ಸಾಧ್ಯವಾಗುತ್ತದೆಯೋ ಅಷ್ಟು ಸಹಾಯಧನ ನೀಡೋಣ ಬಡ ಶಿಕ್ಷಕರಿಗೆ. ಏಕೆಂದರೆ ಮಕ್ಕಳ ಭವಿಷ್ಯಕ್ಕೆ ಗುರುವಿನ ಕೊಡುಗೆ ಅಪಾರ. ಅವರ ನೆರವಿಗೆ ಹೋಗೋಣ ಮತ್ತು ಸಾಧ್ಯವಾದಷ್ಟು ಮಕ್ಕಳ ಮನೋಬಲ ಕುಗ್ಗದಂತೆ, ಕ್ರಿಯಾಶೀಲತೆ ಹಾಳಾಗದಂತೆ, ಮಕ್ಕಳ ಜೊತೆಯಲ್ಲಿಯೇ ಉತ್ತಮ ಸ್ನೇಹಿತರಾಗಿ ಭವಿಷ್ಯವನ್ನು ರೂಪಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಕೋವಿಡ್19 ಬದಿಗಿಟ್ಟು ಮಕ್ಕಳ ಭವಿಷ್ಯ ಮತ್ತು ಶಿಕ್ಷಕರ ಜೀವನದ ಬಗ್ಗೆ ಚಿಂತನೆ ಮಾಡಿ ಭವಿಷ್ಯದಲ್ಲಿ ಎಚ್ಗರಿಕೆಯ ಹೆಜ್ಜೆಯನ್ನು ಇಡೋಣ.
Get In Touch With Us info@kalpa.news Whatsapp: 9481252093
Discussion about this post