ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನಿಂದಿಸುವವನು ಸಾಹಿತಿಯಲ್ಲ…
ಪ್ರಶ್ನಿಸುವವನೂ ಸಾಹಿತಿಯಲ್ಲ…
ವಿಮರ್ಶಿಸುವನನು ಸಾಹಿತಿ…
ಚಿಕ್ಕ ವಸ್ತುವನ್ನೂ ಅಂದವಾಗಿ ವರ್ಣಿಸಿ ಅದರ ಅಂದವನ್ನು ಹೆಚ್ಚಿಸುವವನು ಸಾಹಿತಿ.
ಯಾಕೋ ಸಾಹಿತಿ, ಸಾಹಿತ್ಯ, ಬರಹಗಾರ ಇದಕ್ಕಿರುವ ಅರ್ಥವೇ ಕಳೆದು ಹೋದಂತಿದೆ. ಒಂದು ವಸ್ತುವನ್ನು, ವ್ಯಕ್ತಿಯನ್ನು, ಧರ್ಮವನ್ನು, ಜಾತಿಯನ್ನು ನಿಂದಿಸುವವನು ಸಾಹಿತಿಯೇ? ಒಂದು ಪ್ರಬಂಧವನ್ನು ಬರೆದು ಸೋಷಿಯಲ್ ಮೀಡಿಯಾದಲ್ಲಿ ಹಾಕುವವನು ಬರಹಗಾರನೇ? ಇಲ್ಲ ಯಾವುದೋ ಒಂದು ವಿಷಯವನ್ನು ಕೆಟ್ಟದಾಗಿ ಪ್ರಶ್ನಿಸುವವನು ಸಾಹಿತಿಯೇ?ಹಾಗಾದರೆ ಒಂದು ವಿಷಯದ ಬಗ್ಗೆ ಅಂದವಾಗಿ ಬರೆಯುವವನು ಯಾರು? ಒಂದು ವಸ್ತುವನ್ನು ಪದಪುಂಜಗಳಲ್ಲಿ ಅಲಂಕರಿಸುವವನು ಯಾರು? ವಸ್ತುವಿನ ಅಂದವನ್ನು ವರ್ಣಿಸಿ ಅದಕ್ಕೆ ಮೆರಗು ತರುವವನು ಯಾರು?
ಯಾವುದೋ ಘಟನೆ ಸಂಬಂಧವಿಲ್ಲದ್ದು ಅಂತ ತುಂಬಾ ಬಾರಿ ಅನ್ನಿಸಿದರೂ ಕೆಲವೊಮ್ಮೆ ಅವು ಮನಸಿನಾಳದಲ್ಲಿ ಕೂತುಬಿಡುತ್ತವೆ.
ನಿಜವಾಗಿಯೂ ಇದರಲ್ಲಿ ಮೂಗು ತೂರಿಸುವ ಅಗತ್ಯವಿಲ್ಲ ಎಂದು ಯಾರೇ ಹೇಳಿದರೂ ನಿಂದಕನೊಬ್ಬನನ್ನು ಸಾಹಿತಿಯೆಂದು ಸಾರಿ ಸಾರಿ ಹೇಳುವಾಗ, ವರ್ಣಿಸಿ ಅಂದಗಾಣಿಸುವ ಬರಹಗಾರನ ಅಂತರಾಳದಲ್ಲಿ ನೋವು ಬರದೇ ಇರುವುದೇ?
ಇತ್ತೀಚಿಗೆ ಎಲ್ಲರೂ ಬರಹಗಾಗರರೇ ಸಂತಸದ ವಿಷಯವೇ ಆದರೆ ಸಾಹಿತಿ ಎನಲು ಅದಕ್ಕೆ ಅರ್ಥವಿರಬೇಕು. ಸಾಹಿತಿಗೂ ಬರಹಗಾರನಿಗೂ ಅಜಗಜಾಂತರ ವ್ಯತ್ಯಾಸವಿದೆ.ಬರಹಗಾರ ಒಂದು ವಿಷಯವನ್ನು ಸಂಕ್ಷಿಪ್ತವಾಗಿ ಇದ್ದ ಹಾಗೇ ಬರೆಯುವವನು. ಸಾಹಿತಿ ಒಂದು ವಿಷಯವನ್ನು ಕಥೆಯ ರೂಪದಲ್ಲೋ, ಒಂದು ಘಟನೆಯನ್ನು ಕವನದ ರೂಪದಲ್ಲೋ ಅಂದವಾಗಿ ಅದನ್ನು ಪ್ರಕೃತಿಯ ರೂಪದಲ್ಲೋ ವರ್ಣಿಸಿ, ಪರ್ಯಾಯವಾಗಿ ಹಲವಾರು ಉದಾಹರಣೆಯೊಂದಿಗೆ ಅದನ್ನು ಬರೆಯುವವನು.
ಹೀಗಾದಾಗ ಬರಹಗಾರ ಮತ್ತು ಸಾಹಿತಿ ಒಂದೇ ಅಲ್ಲ ಅಲ್ಲವೇ? ಮತ್ತೇಕೆ ಕೆಲವರಿಗೆ ಇಂತಹ ಪಟ್ಟ. ಬರೆಯುವವರೆಲ್ಲಾ ಸಾಹಿತಿಗಳೇ ಆಗಿದ್ದರೆ ಇಲ್ಲಿ ಜಗವೆಲ್ಲಾ ಸಾಹಿತಿಗಳಿಂದಲೇ ತುಂಬಿರುತಿತ್ತು.
ಪ್ರಚಾರಕ್ಕಾಗಿ ಜನಬಲದ ಹಿಂದೆಯೋ, ಹಣಬಲದ ಹಿಂದೆಯೋ ಹೋಗಿ ಅವನ ಕುರಿತು ಹೊಗಳಿ ಅಟ್ಟಕ್ಕೇರಿಸಿ ಅವರವರ ಬೇಳೆ ಬೇಯಿಸಿಕೊಳ್ಳುವವರೂ ಈಗೀಗ ಸಾಹಿತಿಗಳೇ.
ಕರೆದು ಮಣೆಹಾಕಬೇಕೆಂದು ಮನದಲ್ಲಿ ಅಂದುಕೊಂಡು ಗೀಚುವವನು ಸಾಹಿತಿಯಲ್ಲ. ಏನನ್ನೂ ಬಯಸದೇ ತನ್ನ ನೆಮ್ಮದಿಗಾಗಿ ಮೌನವಾಗಿ ತೋಚಿದ್ದನ್ನು ಗೀಚಿ, ಅರಿತದ್ದನ್ನು ಹಂಚಿ ಜಗತ್ತಿಗೆ ನೆನಪಿಗಾಗಿ ತನ್ನ ಅಕ್ಷರಗಳ ಉಡುಗೊರೆ ಕೊಡುವವನೇ ಸಾಹಿತಿ.
ಇವೆಡರ ಮಧ್ಯೆ ಇರುವ ಅಂತರವನ್ನು ತಿಳಿದುಕೊಂಡು ಒಬ್ಬ ವ್ಯಕ್ತಿಯನ್ನು ಏನೆಂದು ನಿರ್ಧರಿಸುವುದು ಒಳಿತು ಅಲ್ಲವೇ?
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post