ಬೆಂಗಳೂರು: ಪ್ರತಿಪಕ್ಷಗಳ ವಿರುದ್ಧ ರಾಜ್ಯದ ಜನತೆ ದಂಗೆ ಏಳುವಂತೆ ಕರೆ ನೀಡಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿರುವುದು ರಾಜದ್ರೋಹವಾಗಿದ್ದು, ಸಂವಿಧಾನ ವಿರೋಧಿಯಾಗಿದೆ ಎಂದು ಬಿಜೆಪಿ ಮುಖಂಡ ಆರ್. ಅಶೋಕ್ ಕಿಡಿ ಕಾರಿದ್ದಾರೆ.
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ದಂಗೆ ಏಳಿ ಎಂದು ನಕ್ಸಲರು ಕರೆ ನೀಡುತ್ತಾರೆ, ರಕ್ತಪಾತ ಮಾಡುವುದು ನಕ್ಸಲರ ಕೆಲಸ. ಈ ರೀತಿ ಹೇಳುವವರು ಸಂವಿಧಾನ ವಿರೋಧಿಗಳಾಗಿದ್ದು, ಸಂವಿಧಾನವನ್ನು ಬುಡಮೇಲು ಮಾಡುವ ಕೃತ್ಯವಾಗಿದೆ ಐಪಿಸಿ ಸೆಕ್ಷನ್ 209 ಎ ಅಡಿಯಲ್ಲಿ ರಾಷ್ಟ್ರದ್ರೋಹದ ಕೆಲಸವಾಗುತ್ತದೆ ಎಂದು ಕಿಡಿ ಕಾರಿದರು.
ರಾಜ್ಯದಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ರಾಜ್ಯದ ಮುಖ್ಯಮಂತ್ರಿಯೇ ದಂಗೆಯೇಳುವಂತೆ ಕರೆ ನೀಡುತ್ತಾರೆ. ಈ ಕುರಿತಂತೆ ರಾಜ್ಯಪಾಲರನ್ನು ಭೇಟಿಯಾಗಿ ಮಧ್ಯಪ್ರವೇಶ ಮಾಡುವಂತೆ ಮನವಿ ಮಾಡಲಾಗುವುದು ಎಂದರು.
ಬಿಎಸ್‌ವೈ ಅವರನ್ನು ಪದೇ ಪದೇ ಜೈಲಿಗೆ ಹೋಗಿಬಂದವರು ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಹೇಳುತ್ತಾರೆ. ನೆನಪಿರಲಿ, ತುರ್ತು ಪರಿಸ್ಥಿತಿಯ ನಂತರ ಇಂದಿರಾಗಾಂಧಿಯೂ ಸಹ ಜೈಲಿಗೆ ಹೋಗಿಬಂದವರು. ಬಿಎಸ್‌ವೈ ವಿರುದ್ಧ ಮಾಡಲಾಗಿದ್ದ ಆರೋಪಗಳಲ್ಲಿ ಸುಪ್ರೀಂ ತೀರ್ಪು ನೀಡಿ ಅವರು ನಿರಪರಾಧಿ ಎಂದು ಘೋಷಿಸಿದೆ. ಆದರೆ, ಪದೇ ಪದೇ ಬಿಎಸ್‌ವೈ ಅವರನ್ನು ಹೀಯಾಳಿಸುವುದು ಸರಿಯಲ್ಲ ಎಂದರು.
ಪ್ರತಿಪಕ್ಷಗಳ ಮುಖಂಡರಿಗೆ ರಕ್ಷಣೆ ಕೊಡಬೇಕಾದ್ದು ಸರ್ಕಾರದ ಕರ್ತವ್ಯ. ಆದರೆ, ಪ್ರತಿಪಕ್ಷ ಮುಖಂಡರ ಬಾಯಿ ಮುಚ್ಚಿಸಲು ಆಡಳಿತ ಪಕ್ಷದ ಕಾರ್ಯಕರ್ತರೇ ಬಿಎಸ್‌ವೈ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದು ಹೇಯ. ಕಾಂಗ್ರೆಸ್‌ನವರಿಗೆ ಪ್ರತಿಭಟನೆಯ ಚಟವಿದ್ದರೆ ಸೋನಿಯಾ, ರಾಹುಲ್ ಮನೆ ಮುಂದೆ ಪ್ರತಿಭಟನೆ ಮಾಡಲಿ ಎಂದರು.

















