ನಮ್ಮ ಹಿಂದೂ ಧರ್ಮದ ದೇವತಾರಾಧನೆ ಪೂಜಾ ಸಂಸ್ಕೃತಿ ವಿಧಾನದಲ್ಲಿ ಸರ್ವ ಪ್ರಥಮವಾಗಿ ಗಣಪತಿಯನ್ನ ಪೂಜಿಸುತ್ತೇವೆ, ಮನುಷ್ಯನ ಬದುಕಲ್ಲಿ ಹುಟ್ಟಿನಿಂದ ಆರಂಭವಾಗಿ ಅಂತ್ಯದ ತನಕ ವಿನಾಯಕನು ಪ್ರತಿ ಹಂತದಲ್ಲೂ ಆವರಿಸಿಕೊಂಡಿದ್ದಾನೆ.
ಗಣಪತಿಯ ಬಗೆಗಿನ ಸತ್ಯವಾದ ಪುರಾಣ ಆಧಾರಿತ ಕುತೂಹಲ ಅಂಶಗಳನ್ನು ಈ ಲೇಖನದ ಮೂಲಕ ನಿಮಗೆ ತಿಳಿಸುವ ಪ್ರಯತ್ನ ಮಾಡಲಾಗಿದೆ.
ವಿನಾಯಕನೆಂದರೆ:
ವಿನಾ’ಅಂದರೆ ಶಿವನಿಲ್ಲದೆ ಜನಿಸಿದವನು ವಿನಾಯಕಎಂಧರ್ಥ, ಪಾರ್ವತಿ ಶರೀರದಿಂದ ತೆಗೆದ ಬೆವರು ಮಿಶ್ರಿತ ಕೊಳೆಯಿಂದ ಹುಟ್ಟಿದವನು ಗಣಪ. ಗೌರಿ ಗಣೇಶ ಪರಿಶುದ್ಧವಾದ ವಾತ್ಸಲ್ಯ ಬಾಂಧವ್ಯ ತಾಯಿ ಮಗನ ಕಲ್ಪನೆ ಸಂಬಂದ ಸೂಚಿಸಿ ಹೇಳುವುದಾದರೆ ಪಾರ್ವತಿ ಗಣಪತಿ ಹೊರತು ಪಡಿಸಿದರೆ ಇನ್ಯಾವ ಸೂಕ್ತ ಉದಾರಣೆ ಸಿಗುವುದಿಲ್ಲ.
ವಿನಾಯಕ ಗಣಪತಿಯಾದ:
ಶಿವನಲ್ಲಿಪ್ರಮಥ ಗಣಗಳಿವೆ ಅದೊಂದು ಗಣಗಳ ಪರಿವಾರದ ವ್ಯವಸ್ಥೆ ಆ ಗಣಗಳಿಗೆಲ್ಲಾ ನಾಯಕನಾಗಿ ವಿನಾಯಕ ಗಣಪತಿಯಾಗುತ್ತಾನೆ.
ಗಣಪತಿ ವಿಘ್ನೇಶ್ವರನಾದ:
ಗಣಪತಿಯಲ್ಲಿ 2 ವಿಶೇಷವಾದ ಶಕ್ತಿಗಳಿವೆ, ಜೀವನದಲ್ಲಿ ನಾವು ಎದರರಿಸಬಹುದಾದಂತಹ ಕಷ್ಟ ತೊಂದರೆಗಳು ಸಮಸ್ಯೆಗಳನ್ನು ವಿಘ್ನ ರೂಪದಲ್ಲಿ ನೀಡುವ ನಕರಾತ್ಮಕ ಶಕ್ತಿ, ಇನ್ನೊಂದು ರೀತಿಯಲ್ಲಿ ಬರಬಹುದಾದ ವಿಘ್ನಗಳನ್ನು ಈತನೇ ಸಕರಾತ್ಮವಾಗಿ ನಿವಾರಣೆ ಮಾಡುಂತಹ ದ್ವಿಗುಣ ಶಕ್ತಿ ಹೊಂದಿದ್ದಾನೆ. ಗಣಪತಿಗೆ ಹೇಳುವಂತೆ ಸ್ತುತಿ ಹರ್ಷಿತಾಯ ನಮಃ ಎಂಬಂತೆ ಸರ್ವ ಪ್ರಥಮವಾಗಿ ಗಣಪತಿಯನ್ನ ಸ್ತುತಿಸಿ ಆತನ ಮಹಿಮೆಗಳನ್ನು ಹೊಗಳಿದರೆ ಗಣಪ ಹರ್ಷಿತನಾಗಿ ನಮಗೆ ಬರುವ ವಿಘ್ನಗಳನ್ನೆಲ್ಲಾ ನಿವಾರಣೆ ಮಾಡಿ ವಿಘ್ನೇಶ್ವರನಾಗಿ ನಮ್ಮನ್ನು ಸಲಹುತ್ತಾನೆ.
ಓಂಕಾರ ಸ್ವರೂಪಿಯ ಹಿಂದಿನ ಜನ್ಮ:
ಇದು ಗಣಪತಿಯ ಆಸಕ್ತಿಕರ ಮತ್ತು ಕುತೂಹಲ ವಿಷಯ, ಗಣಪತಿಯ ಅಷ್ಟೋತ್ತರದಲ್ಲಿ ದ್ವೈಮಾತುರಾಯ ನಮಃ ಎಂದು ಅರ್ಥಾತ್ ಗಣಪತಿಗೆ ಇಬ್ಬರು ತಾಯಂದಿರು ಎಂದು ಸೂಚಿಸುತ್ತದೆ, ತಕ್ಷಣಕ್ಕೆ ಇದರ ಅರ್ಥದ ಹಿಂದೆ ಹೋದರೆ ಗಣಪತಿಗೆ ಶಿವ ಪತ್ನಿ ಪಾರ್ವತಿ ಒಂದು ತಾಯಿಯಾದರೆ ಮತ್ತೊಬ್ಬ ಮಾತೃ ಸ್ವರೂಪಿಯಾಗಿ ಗಂಗೆ ಕಂಡು ಬರುತ್ತಾರೆ.
ಆದರೆ ದ್ವೈಮಾತುರಾಯ ನಮಃದ ಸಂಗತಿಯೇ ಬೇರೆ ಇದೆ, ಗಣಪ ಪಾರ್ವತಿ ಸುತನಾಗುವ ಮೊದಲು ಭೂಮಿಯಲ್ಲಿ ಆತನ ಜನನವಾಗಿತ್ತು ಎಂಬುದು ಪುರಾಣದಲ್ಲಿ ತಿಳಿಸಲಾಗಿದೆ.
ವರೇಣ್ಯ ಎಂಬ ರಾಜನಿಗೆ ಪುಷ್ಪಕಮಾ ಎಂಬ ಪತ್ನಿ ಇರುತ್ತಾಳೆ ಈ ದಂಪತಿಗಳಿಗೆ ಗಂಡು ಮಗುವೊಂದು ಜನಿಸುತ್ತದೆ, ಹುಟ್ಟದ ಮಗು ಅರ್ಧ ಮನುಷ್ಯ ರೂಪಿಯಂತಹ ಕೈಕಾಲುನ್ನು ಹೊಂದಿ ಆನೆ ಮುಖವನ್ನು ಪಡೆದಿರುತ್ತದೆ ಮಗುವಿನ ಈ ವಿರೂಪವನ್ನು ಕಂಡ ರಾಣಿ ಪುಷ್ಪಕ ಮಾಲ ಮಗುವನ್ನು ತ್ಯಜಿಸುವ ಕೆಟ್ಟ ನಿರ್ಧಾರಕ್ಕೆ ಬಂದು ಮಗುವನ್ನು ಸರೋವರವೊಂದರಲ್ಲಿ ತೇಲಿ ಬಿಡುತ್ತಾಳೆ.
ಸರೋವರದಲ್ಲಿ ತೇಲಿ ಹೋಗುತ್ತಿದ್ದ ಮಗುವಿನ ಕೂಗು ಅಳು ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಪಾರ್ಶ್ವನೆಂಬ ಋಷಿಗೆ ಕೇಳಿಸುತ್ತದೆ ಕೂಗು ಕೇಳಿ ಬರುತ್ತಿದ್ದ ದಿಕ್ಕಿನೆಡೆಗಡ ಹೋಗುತ್ತಾನೆ. ಸರೋವರ ಬಳಿ ಬಂದು ತೇಲಿ ಹೋಗುತ್ತದ್ದ ಮಗುವನ್ನು ರಕ್ಷಿಸಿ ತನ್ನ ಆಶ್ರಮಕ್ಕೆ ಕೊಂಡೊಯ್ಯುತ್ತಾನೆ. ಆಶ್ರಮದಲ್ಲಿ ತನ್ನ ಪತ್ನಿ ದೀಪ ವತ್ಸಲೆಗೆ ನಡೆದ ಘಟನೆ ಬಗ್ಗೆ ತಿಳಿಸಿ ಮಗುವನ್ನು ಸಾಕಲು ತಿಳಿಸುತ್ತಾನೆ. ಪತಿಗೆ ಸಿಕ್ಕ ಮಗುವನ್ನು ದೀಪ ವತ್ಸಲೆ ಅತ್ಯಂತ ಮಮತೆ ವಾತ್ಸಲ್ಯದಿಂದ ಬೆಳೆಸುತ್ತಾಳೆ. ಬೆಳೆದ ಮಗು ವಿನಮ್ರತೆಯಿಂದ ತಾಯಿಯ ಸೇವೆ ಮಾಡಿಕೊಂಡಿರುತ್ತದೆ. ಆ ಸೇವೆಯ ಫಲವಾಗಿ ಮುಂದೆ ಪಾರ್ವತಿ ಮಗನಾಗಿ ಅದೇ ರೂಪದಲ್ಲಿ ಗಣಪತಿಯ ಜನ್ಮವಾಗುತ್ತದೆ.
ಹೀಗೆ ಗಣಪತಿಯ ಮೊದಲ ತಾಯಿಯಾಗಿ ದೀಪವತ್ಸಲೆ ಹಾಗೂ ಎರಡನೆ ತಾಯಿಯಾಗಿ ಪಾರ್ವತಿ ಎಂದು ಹೇಳಬಹುದು. ಹಾಗಿದ್ದಲ್ಲಿ ದೀಪವತ್ಸಲೆ ಕೈಸೇರುವ ಮೊದಲು ಜನ್ಮ ನೀಡಿದ ಪುಷ್ಪಕ ರಾಣಿಯು ಸಹ ತಾಯಿ ಅಲ್ಲವೇ ಎಂಬ ಮಾತು ಬರುತ್ತದೆ. ಪುರಾಣ ಶಾಸ್ತ್ರಗಳು ಈ ವಾದವನ್ನು ಒಪ್ಪುವುದಿಲ್ಲ. ಕಾರಣ ಹೆತ್ತ ಮಾತ್ರಕ್ಕೆ ತಾಯಿಯು ತನ್ನ ತಾಯಿ ಪದವಿಗೆ ನ್ಯಾಯ ಕೊಟ್ಟಂತೆ ಆಗುವುದಿಲ್ಲ, ಜನ್ಮ ನೀಡಿದ ಮಗುವನ್ನು ತಂದೆ ತಾಯಿ ಇಬ್ಬರೂ ಬೆಳೆಸಿ ಪೋಷಿಸಿ ಸಮಾಜಕ್ಕೆ ಜವಾಬ್ದಾರಿಯುತ ವ್ಯಕ್ತಿಯನ್ನಾಗಿ ಮಾಡುವುದು ಪೋಷಕರ ಆದ್ಯ ಕರ್ತವ್ಯ, ಈ ಕರ್ತವ್ಯದಿಂದ ವಿಮುಖರಾದರೆ ಅಂತವರು ಮಾತೃ ಸ್ಥಾನಕ್ಕೆ ಅನರ್ಹರು ಎಂಬುದಾಗಿ ಶಾಸ್ತ್ರ ಹೇಳುತ್ತದೆ.
ಮಾತೃ ಕರ್ತವ್ಯದಿಂದ ದೂರ ಸರಿದ ಪುಷ್ಪಕರಾಣಿ ತಾಯಿ ಸ್ಥಾನದಿಂದ ದೂರವಾಗಿದ್ದಾಳೆ. ಆ ಕಾರಣಕ್ಕಾಗಿ ಗಣಪತಿಗೆ ಇಬ್ಬರು ತಾಯಂದಿರು ಎಂದು ತಿಳಿಸಲಾಗಿದೆ.
ಕಲಿಯುಗದಲ್ಲೂ ಅವತರಿಸಲಿದ್ದಾನೆ ವಿನಾಯಕ:
ಗಣಪತಿಯ ಒಟ್ಟು 32 ರೂಪಗಳನ್ನು ಮುದ್ಗಲ ಪುರಾಣದಲ್ಲಿ ಬಹಳ ಅಚ್ಚುಕಟ್ಟಾಗಿ ವರ್ಣಿಸಲಾಗಿದೆ. ಯುಗ ಯುಗಗಳಲ್ಲೂ ಗಣಪತಿಯ ಅವತಾರವಾಗಿದೆ. ಕೃತ ಯುಗದಲ್ಲಿ ಗಣಪತಿಯು ದಶಭುಜಗಳನ್ನು ಹೊಂದಿ ಸಿಂಹರೂಢನಾಗಿ ಅವತಾರವೆತ್ತಿ ದುಷ್ಟ ಸಂಹಾರ ಮಾಡಿದ್ದಾನೆ.
ತ್ರೇತಾ ಯುಗದಲ್ಲಿ ಗಣಪತಿ ಷಟ್ಭುಜನಾಗಿ ಮಯೂರ ರೂಢನಾಗಿ ಅವತರಿಸಿದ್ದಾನೆ. ದ್ವಾಪರ ಯುಗದಲ್ಲಿ ದ್ವಿಭುಜಗಳನ್ನು ಹೊಂದಿ ಮೂಷಿಕ(ಇಲಿ)ರೂಢನಾಗಿ ಅವತಾರವೆತ್ತಿದ್ದಾನೆ.
ಇಲ್ಲಿ ನಾವು ಗಮನಿಸಬೇಕಾದ ಅಂಶ ಎಂದರೆ ದ್ವಾಪರ ಯುಗದಲ್ಲಿದ್ದ ಗಣಪತಿಯ ಅವತಾರದ ರೂಪವನ್ನು ನಾವಿಂದು ಕಲಿಯುಗದಲ್ಲೂ ಪೂಜಿಸುತ್ತಿದ್ದೇವೆ… ಪುರಾಣದಲ್ಲಿ ಹೇಳಿರುವ ಪ್ರಕಾರ ಕಲಿಯುಗದಲ್ಲೂ ಗಣಪತಿಯ ಅವತಾರ ಆಗಲಿದೆ. ಹಾಗೆಂದು ನಾವು ಇಂದು ಅನುಸರಿಸುತ್ತಿರುವ ಗಣಪತಿಯ ಪೂಜಾ ವಿಧಾನದ ಬಗ್ಗೆ ಗೊಂದಲಕ್ಕೆ ಒಳಗಾಗಬೇಕಿಲ್ಲ. ನಮ್ಮ ಆರಾಧನೆ ಪದ್ಧತಿಯನ್ನು ಮುಂದುವರೆಸಿಕೊಂಡು ಹೋಗುವುದರ ಜೊತೆಗೆ ನಾವು ನಮ್ಮಲ್ಲಿ ಜಹಳ ಮುಖ್ಯವಾದ ಅಂಶವೊಂದನ್ನು ಪೂಜಾ ವಿಧಾನದಲ್ಲಿ ಅಳವಡಿಸಿಕೊಳ್ಳಬೇಕಿದೆ.
ಗಣಪತಿಯ ಅಷ್ಟೋತ್ತರದಲ್ಲಿ ಧೂಮ್ರಕೇತವೇ ನಮಃ ಎಂಬ ಮಂತ್ರವಿದೆ. ಇಲ್ಲಿ ನಾವು ತಿಳಿಯಬೇಕಾದ ವಿಷಯವೆಂದರೆ ಕಲಿಯುಗದಲ್ಲಿ ಗಣಪತಿಯು ಅವತರಿಸಿ ಬರಲಿದ್ದು ಅವನ ರೂಪದ ವಿವರಣೆ ಬಗ್ಗೆ ತಿಳಿಯುವುದಾದರೆ ಕಲಿಯುಗದಲ್ಲಿ ಗಣಪ ದ್ವಿಭುಜಗಳನ್ನು ಹೊಂದಿ ಅಶ್ವ(ಕುದುರೆ)ರೂಢನಾಗಿ ಬರುತ್ತಾನೆ. ಈ ಯುಗದಲ್ಲಿ ಬರುವ ಗಣಪನ ಹೆಸರೇ ಧೂಮ್ರಕೇತು.
ನಾವು ನಮ್ಮಲ್ಲಿ ಅಳವಡಿಸಿಕೊಳ್ಳಬೇಕಾದ ಅಂಶವೆಂದರೆ, ದ್ವಾಪರಯುಗದ ಗಣಪತಿಯನ್ನು ಆರಾಧಿಸುವುದರ ಜೊತೆಗೆ ಮುಂದೆ ಹೊಂದಲಿರುವ ಧೂಮ್ರಕೇತುವಿನ ಅವತಾರದ ಗಣಪನನ್ನು ಈಗಿಂದಲೇ ಪೂಜಿಸಿಕೊಂಡು ಆ ಅದ್ಬುತ ಶಕ್ತಿಯ ಸಂಪರ್ಕವನ್ನು ಪಡೆದುಕೊಳ್ಳುವ ಕಾರ್ಯ ನಮ್ಮಿಂದಾಗಬೇಕಿದೆ.
ಗಣಪತಿಯ ಕಲಿಯುಗದ ಧೂಮ್ರಕೇತು ಅವತಾರದ ಇನ್ನೊಂದು ವಿಶೇಷತೆ ಎಂದರೆ ಶ್ರೀಕೃಷ್ಣ ಗೀತೋಪದೇಶದಲ್ಲಿ ಹೇಳಿರುವಂತೆ ಅಧರ್ಮದ ಮೇರೆ ಮೀರಿದಾಗ ದುಷ್ಟ ಶಿಕ್ಷೆಗೆ ಶಿಷ್ಟರ ರಕ್ಷಣೆಗೆ ಮತ್ತೆ ಅವತರಿಸಿ ಧರ್ಮ ಸಂಸ್ಥಾಪನೆ ಮಾಡುವುದಾಗಿ ಹೇಳಿದ್ದಾನೆ.
ಕಲಿಯುಗದ ಧೂಮ್ರಕೇತು(ಗಣಪತಿ)ವಿನ ಅವತಾರ ಶ್ರೀವಿಷ್ಣುವಿನ ಕಲ್ಕಿ ಅವತಾರಕ್ಕೆ ಮುನ್ನುಡಿ ಆಗಲಿದೆ. ಕಲಿಯುಗದಲ್ಲಿ ಮುಂದೆ ಸಂಭವಿಸಬಹುದಾದ ಅಧರ್ಮ ಕೃತ್ಯಗಳನ್ನು ಮೆಟ್ಟಿ ನಿಂತು ಪಾಪಿಗಳಿಗೆ ವಿಘ್ನ ನೀಡಿ ಅವರಲ್ಲಿ ಭಯ ಹುಟ್ಟಿಸಿ ವಿಷ್ಣುವಿನ ಕಲ್ಕಿ ಅವತಾರಕ್ಕೆ ಗಣಪತಿಯು ವಾತಾವರಣ ಸೃಷ್ಟಿಸುತ್ತಾನೆ. ಇಲ್ಲ ಕಲ್ಕಿ ದೂಮ್ರಕೇತುವಿನಂತೆ ಅಶ್ವರೂಡನಾಗಿ ಬರುವುದು ಮತ್ತೊಂದು ವಿಶೇಷತೆ ಎಂದು ಹೇಳಬಹುದು.
ಗರಿಕೆ ಪ್ರಿಯ ಗಣೇಶನ ಒಲಿಸಿಕೊಳ್ಳುವ ಸುಲಭ ಮಾರ್ಗ:
ಸಾಮಾನ್ಯವಾಗಿ ನಾವು ಗಣಪತಿಗೆ ಗರಿಕೆಯನ್ನು ಸಮರ್ಪಿಸಿ ಪೋಜಿಸುತ್ತೇವೆ ಇದು ಒಂದು ಭಾಗವಾದರೆ ಗಣಪತಿಗೆ ಪ್ರಿಯವಾದ ವಸ್ತುವೊಂದು ನಮ್ಮ ನಡುವೆ ಇದೆ.
ಬ್ರಹ್ಮಾಂಡ ಪುರಾಣದ ಗಣಪತಿ ಶ್ಲೋಕದಲ್ಲಿ ಹೇಳಿರುವಂತೆ ಶಮೀಪತ್ರೇ ಗಣೇಶಸ್ಯ ಸದಾ ಸಂತೋಷದಾಯಕಃ ಅಂದರೆ ಶಮೀ ಪತ್ರೆ (ಬನ್ನಿ ಎಲೆ)ಯನ್ನು ಗಣಪತಿಗೆ ಅರ್ಪಿತವಾದಲ್ಲಿ ಗಣಪತಿ ಅತ್ಯಂತ ಸಂತೋಷನಾಗುತ್ತಾನೆ.
ಶ್ಲೋಕದ ಮುಂದುವರೆದ ಭಾಗವನ್ನು ನೋಡಿದರೆ ಇಯಂಶಮೀ ವಿಘ್ನ ಗಣೇಶ್ವರ ಪ್ರಿಯ ಗಣೇಶೋಹಂ ಸ್ವಯಮೇವ ಚಾಗತಃ ಅರ್ಥಾತ್ ಗಣಪನ ಪೂಜೆಯಲ್ಲಿ ಶಮೀಪತ್ರೆಯನ್ನ ಸಮರ್ಪಿಸಿದಾಗ ಸ್ವತಃ ಗಣಪತಿಯೇ ಯಾವುದಾದರೂ ರೂಪದಲ್ಲಿ ಬಂದು ಸ್ವೀಕರಿಸುತ್ತಾನೆ ಎಂಬ ವಿಷಯವನ್ನು ತಿಳಿಸುತ್ತದೆ.
ಶಮೀಪತ್ರೆಯಲ್ಲಿ ಅನೇಕ ಔಷಧಿ ಗುಣಗಳಿದ್ದು ಅದರ ಗುಣ ದೈವೀ ಶಕ್ತಿಯೊಂದಿಗೆ ಬೆರೆತು ನಮ್ಮ ಸಮಸ್ಯೆ ವಿಘ್ನಗಳನ್ನೆಲ್ಲಾ ನಿವಾರಣೆ ಆಗುವಲ್ಲಿ ಯಾವುದೇ ಸಂಶಯವಿರುವುದಿಲ್ಲ.
ಭಾರತ ವಿಶ್ವಗುರುವಾಗಿ ಬೆಳೆಯುತ್ತಿರುವ ಇಂದಿನ ಸಂಧರ್ಭದಲ್ಲಿ ನಮ್ಮ ಹಿಂದೂ ಧರ್ಮದ ಶಾಸ್ತ್ರ, ಸಂಸ್ಕೃತಿ, ದೇವತೆಗಳ ಶಕ್ತಿ ಆರಾಧನಾ ರೂಪದಲ್ಲಿ ಆಚರಿಸುವ ಹಬ್ಬ, ಉತ್ಸವಗಳನ್ನು ಸಮರ್ಪಕವಾಗಿ ಕ್ರಮಬದ್ಧವಾಗಿ ಆಚರಸಿಕೊಂಡು ನಮ್ಮ ಮುಂದಿನ ಪೀಳಿಗೆಗೆ ಆರೋಗ್ಯಕರ ಶ್ರೇಷ್ಠ ವಾತವರಣ ನಿರ್ಮಾಣ ಮಾಡುವುದರ ಮೂಲಕ ನಮ್ಮ ಧರ್ಮದ ಸಂಸ್ಕೃತಿ ಪರಿಚಯಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಓದುಗರಿಗೆಲ್ಲರಿಗೂ ಶ್ರೀಗೌರಿ-ಶ್ರೀವರಸಿದ್ಧಿವಿನಾಯಕ ಚತುರ್ಥಿಯ ಶುಭಾಶಯಗಳು
ಲೇಖನ: ವಿನಯ್ ಕುಮಾರ್ ಎಚ್.ಎಮ್.
ಮಾಹಿತಿ: ಪುರಾಣ ಸಂಗ್ರಹ
ಮೊ: 9901867943.
Discussion about this post