ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ರಾಜ್ಯ ಸರ್ಕಾರದ ಕಾರ್ಯವೈಖರಿ ವಿರುದ್ಧ ಕಿಡಿ ಕಾರಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್’ಗೆ ಸಚಿವ ಕೆ.ಎಸ್. ಈಶ್ವರಪ್ಪ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ.
ಮದ್ಯ ಮಾರಾಟ ಆತುರದ ನಿರ್ಧಾರ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದ ಸಿದ್ದರಾಮಯ್ಯಗೆ ಅವರು ತಿರುಗೇಟು ನೀಡಿದ್ದು, ಮದ್ಯ ಮಾರಾಟ ಮಾಡಿ ಎಂದು ಇವರೇ ಸಲಹೆ ನೀಡಿದ್ದರು. ಈಗ ಪೂರ್ವ ತಯಾರಿ ಮಾಡಿಲ್ಲ ಎನ್ನುತ್ತಿದ್ದಾರೆ. ಪೂರ್ವ ತಯಾರಿ ಎಂದ್ರೆ ಏನು? ಕುಡುಕರ ಬಾಯಿಗೆ ಬೀಗ ಹಾಕಿ, ಮದ್ಯವನ್ನು ಅವರ ಬಾಯಿಗೆ ಹಾಕಬೇಕಿತ್ತಾ? ನನಗೆ ಅರ್ಥ ಆಗ್ತಿಲ್ಲ ಸಿದ್ದರಾಮಯ್ಯರ ಹೇಳಿಕೆ. ಕುಡುಕರಿಗೆ ಶಿಸ್ತು ಪಾಲನೆ ಮಾಡಿ ಅಂದ್ರೆ ಮಾಡ್ತಾರೆಯೇ? ಕುಡುಕರು ಹೇಗೆ ಇರಬೇಕು ಎಂದು ಸಿದ್ದರಾಮಯ್ಯ ನೇತೃತ್ವದಲ್ಲಿ ಒಂದು ಸಮಿತಿ ಮಾಡಿದ್ರೆ ಉತ್ತಮ. ಸಿದ್ದರಾಮಯ್ಯರು ಹೇಳಲಿ, ಸಲಹೆ ನೀಡಲಿ ಅವರು ಹೇಳಿದಂತೆ ನಾವು ಮಾಡ್ತೇವೆ ಎಂದು ಕುಟುಕಿದರು.
ಡಿ.ಕೆ. ಶಿವಕುಮಾರ್’ಗೂ ಟಾಂಗ್
ಕಾರ್ಮಿಕರನ್ನು ಅವರವರ ಊರಿಗೆ ಕಳಿಸುವಲ್ಲಿ ಸರ್ಕಾರ ಎಡವಿದೆ ಎನ್ನುವ ಪ್ರತಿಪಕ್ಷಗಳ ಟೀಕೆಗೆ ಗರಂ ಆಗಿರುವ ಈಶ್ವರಪ್ಪ, ಡಿಕೆ ಶಿವಕುಮಾರ್ ಗೆ ಕಣ್ಣು ಕಾಣಲ್ವಾ? ಅವರು ಕಣ್ಣಿದ್ದು ಕುರುಡರಾಗಿದ್ದಾರೆ. ದೇಶದಲ್ಲಿ ಕೊರೋನಾ ಕಂಟ್ರೋಲ್ ಉತ್ತಮವಾಗಿ ಮಾಡ್ತಿರೋದೆ ಕರ್ನಾಟಕ. ಅದಕ್ಕೆ ಜನರು ನಮ್ಮನ್ನು ಪ್ರಶಂಸಿಸುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಮತ್ತು ಡಿಕೆಶಿ ಪೈಪೋಟಿಗೆ ಬಿದ್ದು ಮಾತಾಡುತ್ತಿದ್ದಾರೆ. ಡಿಕೆ ಶಿವಕುಮಾರ್ ಸೋನಿಯಾ ಗಾಂಧಿ ಮೆಚ್ಚಿಸೋಕೆ ಮಾಡ್ತಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಪಕ್ಷವೊಂದು ಇದೆ ಎಂದು ತೋರಿಸವ ಪ್ರಯತ್ನ ಅಷ್ಟೇ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಪೈಪೋಟಿ ಶುರುವಾಗಿದೆ ಎಂದು ಚಾಟಿ ಬೀಸಿದರು.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
Get in Touch With Us info@kalpa.news Whatsapp: 9481252093
Discussion about this post