ಫ್ಲೋರಿಡಾ: ಸಾಮಾನ್ಯವಾಗಿ ಪ್ರತಿಯೊಬ್ಬರೂ ಮನೆಯಲ್ಲಿ ಒಂದು ಬೈಕ್, ಕಾರುಗಳನ್ನು ಹೊಂದಬೇಕು ಎಂದು ಆಸೆ ಪಡುತ್ತಾರೆ. ಅಂತೆಯೇ, ಅವರವರ ಆರ್ಥಿಕ ಸಾಮರ್ಥ್ಯಕ್ಕೆ ತಕ್ಕಂತೆ ದ್ವಿಚಕ್ರ ವಾಹನ, ಕಾರುಗಳು ಅದರಲ್ಲಿ ಐಷಾರಾಮಿ ಕಾರುಗಳು, ಇನ್ನೂ ಹೆಚ್ಚು ಶ್ರೀಮಂತರಾಗಿದ್ದರೆ ಹೆಲಿಕಾಪ್ಟರ್ ಅಥವಾ ಕಿರು ವಿಮಾನ ಹೊಂದಿರುತ್ತಾರೆ.
ನಮ್ಮ ದೇಶದ ಮಟ್ಟಿಗೆ ನೋಡುವುದಾದರೆ ಸಾಮಾನ್ಯವಾಗಿ ಬೈಕ್’ಗಳು ಪ್ರತಿ ಮನೆಯಲ್ಲೂ ಇರುತ್ತವೆ. ಈಗೀಗ ಕಾರುಗಳನ್ನು ಹೊಂದಿರುವ ಕುಟುಂಬಗಳೂ ಸಹ ಸಾಕಷ್ಟಿವೆ. ಆದರೆ, ಹೆಲಿಕಾಪ್ಟರ್ ಹಾಗೂ ಕಿರು ವಿಮಾನಗಳನ್ನು ಹೊಂದಿರುವವರು ಕೆಲವೇ ಕೆಲವು ವ್ಯಕ್ತಿಗಳು ಮಾತ್ರ.
ಆದರೆ, ಅಮೆರಿಕಾದಲ್ಲೊಂದು ಗ್ರಾಮವಿದೆ.. ಅಲ್ಲಿನ ಪ್ರತಿ ಮನೆಯೂ ಸಹ ವಿಮಾನ ಹಾಗೂ ರನ್ ವೇ ಹೊಂದಿದೆ.
ಅಮೆರಿಕಾದ ಫ್ಲೋರಿಡಾ ರಾಜ್ಯದಲ್ಲೊಂದು ಗ್ರಾಮದಲ್ಲಿರುವ ಪ್ರತಿ ಮನೆಯಲ್ಲೂ ಕಿರು ವಿಮಾನವಿದೆ. ಸುಮಾರು ಆರು ಸಾವಿರ ಕುಟುಂಬಗಳಿರುವ ಈ ಗ್ರಾಮದಲ್ಲಿರುವ ಎಲ್ಲ ಕುಟುಂಬಗಳೂ ಸ್ವಂತ ವಿಮಾನಗಳನ್ನು ಹೊಂದಿದ್ದು, ವಿಮಾನ ಹೊಂದಿಲ್ಲದ ಯಾವುದೇ ಮನೆ ಇಲ್ಲಿಲ್ಲ.
ಎರಡನೆಯ ಮಹಾಯುದ್ದ ನಡೆದ ಪ್ರದೇಶದಲ್ಲಿ ಈ ಮಾಜಿ ಮಿಲಿಟರಿ ಗ್ರಾಮವಿದ್ದು, ಇಡಿಯ ಪ್ರದೇಶದಲ್ಲಿ ಅತ್ಯಾಧುನಿಕ, ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗಿದೆ.
ಈಗಾಗಲೇ ಹೇಳಿದಂತೆ ಇಲ್ಲಿನ ಪ್ರತಿ ಮನೆಯೂ ವಿಮಾನವನ್ನು ಹೊಂದಿದ್ದು, ಇದಕ್ಕಾಗಿ ವಿಶೇಷ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದೆ. ಅಲ್ಲದೇ, ಬಹಳಷ್ಟು ಮಂದಿ ತಮ್ಮ ಮನೆ ಮುಂಭಾಗವೇ ವಿಮಾನಗಳನ್ನು ಪಾರ್ಕ್ ಮಾಡಿಕೊಳ್ಳುತ್ತಾರೆ. ಕೆಲವೊಂದು ಕುಟುಂಬಗಳು 3-4 ವಿಮಾನಗಳನ್ನು ಹೊಂದಿವೆ. ಇವುಗಳನ್ನು ಪಾರ್ಕ್ ಮಾಡಲು ಮನೆಯ ಮುಂಭಾಗ ರನ್ ವೇ ರೀತಿಯಲ್ಲಿಯೇ ಪ್ರದೇಶ ನಿರ್ಮಾಣ ಮಾಡಿಕೊಳ್ಳಲಾಗಿದೆ.
ಪೈಲಟ್’ಗಳಿಗೆ ಮಾರ್ಗದರ್ಶನ ಮಾಡಲು ವಿಶೇಷ ತಂತ್ರಜ್ಞಾನವನ್ನು ರೂಪಿಸಿಕೊಳ್ಳಲಾಗಿದೆ. ಈ ತಂತ್ರಜ್ಞಾನದಿಂದಾಗಿ ವಿಮಾನ ಯಾವ ರಸ್ತೆಯಲ್ಲಿದೆ, ಎಲ್ಲಿ ಸಂಚರಿಸುತ್ತಿದೆ ಎಂದು ತಿಳಿಯುವ ಜೊತೆಯಲ್ಲಿ ಪೈಲಟ್’ಗಳಿಗೆ ಮಾರ್ಗದರ್ಶನವೂ ಸಹ ದೊರೆಯುತ್ತದೆ.
ನಮ್ಮ ದೇಶದಲ್ಲಿ ಮನೆ ಮುಂಭಾಗ ಕಾರು ಹಾಗೂ ಬೈಕುಗಳನ್ನು ಪಾರ್ಕ್ ಮಾಡುವಂತೆ ಈ ಗ್ರಾಮದಲ್ಲಿ ವಿಮಾನಗಳನ್ನು ಪಾರ್ಕ್ ಮಾಡುವುದು ಇಡಿಯ ವಿಶ್ವದಲ್ಲೇ ಅಪರೂಪದ್ದಾಗಿದೆ. ಇಂತಹ ಅತ್ಯಾಧುನಿಕ ಪರಿಸ್ಥಿತಿ ನಮ್ಮ ದೇಶದಲ್ಲಿ ಬರಲು ಸಾಧ್ಯವೇ?
(Photo: travelandleisure)
Discussion about this post