ಕಲ್ಪ ಮೀಡಿಯಾ ಹೌಸ್ | ಬೈಂದೂರು |
40 ವರ್ಷಗಳ ಕಾಲ ನಾನು ಪಕ್ಷಕ್ಕಾಗಿ ದುಡಿದರೂ ಈಗ ಪಕ್ಷೇತರನಾಗಿ ಸ್ಫರ್ಧೆ ಮಾಡುತ್ತಿರುವುದು ವೈಯಕ್ತಿಕವಾಗಿಯೇ ನೋವುಂಟು ಮಾಡಿದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ #KSEshwarappa ಹೇಳಿದರು.
ಬೈಂದೂರಿನಲ್ಲಿ #Byndoor ನಡೆದ ಹೋಬಳಿ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.
ನಾನು ಸ್ಪರ್ಧಿಸುತ್ತಿರುವುದು ಹಾಗೂ ಗೆಲ್ಲಬೇಕು ಎನ್ನುವುದು ಪ್ರಧಾನಿ ಮೋದಿ #NarendraModi ಹಾಗೂ ಗೃಹ ಸಚಿವ ಅಮಿತ್ ಶಾ #AmitShah ಅವರಿಗೂ ಸಹ ಇಷ್ಟವಿದೆ ಎನಿಸುತ್ತದೆ. ನಾನು ಗೆಲ್ಲುವ ಮೂಲಕ ರಾಜ್ಯದಲ್ಲಿ ಕುಟುಂಬ ರಾಜಕಾರಣ ಅಂತ್ಯವಾಗಬೇಕು ಎಂಬುದೂ ಸಹ ಅವರಿಗೂ ಇಷ್ಟವಿದ್ದಂತೆ ಕಾಣುತ್ತಿದೆ. ಹೀಗಾಗಿಯೇ ಅವರು ನನ್ನ ಸ್ಪರ್ಧೆಗೆ ವಿರೋಧ ಮಾಡಿಲ್ಲ ಎಂದರು.
ನಾನು ಇಲ್ಲಿಗೆ ಬಂದ ನಂತರ ಹಲವು ಮಂದಿ ಹಿಂದೂ ಧರ್ಮ, ಮೀನುಗಾರರ ಸಮಸ್ಯೆ, ಪ್ರವಾಸೋದ್ಯಮ ಸೇರಿದಂತೆ ಹಲವು ವಿಚಾರಗಳನ್ನು ಗಮನಕ್ಕೆ ತಂದಿದ್ದಾರೆ. ನಾನು ಚುನಾವಣೆಯಲ್ಲಿ ಗೆಲ್ಲುವ ಮುನ್ನ ಎಂದಿಗೂ ಭರವಸೆ ನೀಡುವ ಅಭ್ಯಾಸ ಹೊಂದಿಲ್ಲ. ಚುನಾವಣೆಯಲ್ಲಿ ಗೆದ್ದ ನಂತರ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಪರಿಹಾರಕ್ಕಾಗಿ ನಾನಿರುತ್ತೇನೆ ಎಂದರು.
ಹಿಂದೂಗಳ ಹಾಗೂ ಹಿಂದುತ್ವದ ಪರವಾಗಿ ಮಾತನಾಡುವ, ಹೋರಾಡುವವರನ್ನು ರಾಜ್ಯ ಬಿಜೆಪಿಯಲ್ಲಿ #BJP ಮೂಲೆಗುಂಪು ಮಾಡಲಾಗುತ್ತಿದೆ. ಯಾರು ಗೋವುಗಳನ್ನು ಕಡಿಯುತ್ತಾರೋ ಅವರಿಗೆ ಕಠಿಣ ಶಿಕ್ಷೆಯಾಗುವ ಕ್ರಮ ಆಗಲೇಬೇಕು. ಇದಕ್ಕಾಗಿ ನಾನು ಎಂದಿಗೂ ಹಿಂದುತ್ವದ ಪರವಾಗಿ ಹೋರಾಡುತ್ತೇನೆ ಎಂದರು.
ಸಿಟಿ ರವಿ #CTRavi ಅವರು ಪ್ರಧಾನ ಕಾರ್ಯದರ್ಶಿಯಾಗಿ ರಾಜ್ಯದಾದ್ಯಂತ ಸುತ್ತಿದರು. ಹಿಂದುತ್ವದ ಪರ ಹೋರಾಡಿದರು. ಆದರೆ, ಇಂದು ಅವರ ಪರಿಸ್ಥಿತಿ ಏನಾಗಿದೆ ಎಂದು ಪ್ರಶ್ನಿಸಿದರು.
ನಾನು 40 ವರ್ಷಗಳಿಂದ ಪಕ್ಷಕ್ಕಾಗಿ ದುಡಿದು ಇಂದು ಪಕ್ಷೇತರನಾಗಿ ಸ್ಪರ್ಧೆ ಮಾಡುವ ಪರಿಸ್ಥಿತಿ ಬಂದಿರುವುದು ವೈಯಕ್ತಿಕವಾಗಿ ನನಗೆ ನೋವಿದೆ. ಆದರೆ, ಇಂತಹ ನೋವನ್ನು ಲಕ್ಷಾಂತರ ಕಾರ್ಯಕರ್ತರು ಸಹ ಅನುಭವಿಸಿದ್ದಾರೆ. ಅವರೆಲ್ಲರ ನೋವಿಗೆ ಅಂತ್ಯ ಹಾಡಲು ಅವರುಗಳ ಧ್ವನಿಯಾಗಿ ನಾನು ಸ್ಪರ್ಧೆ ಮಾಡುತ್ತಿದ್ದೇನೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post