ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸರ್ಕಾರಿ ಶಾಲೆಗಳ ಶೈಕ್ಷಣಿಕ ಅಭಿವೃದ್ಧಿ ಹಾಗೂ ಮಕ್ಕಳ ಸುರಕ್ಷತೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಐವ್ಯಾಲ್ಯೂ ಇನ್ಫೋಸೊಲ್ಯೂಷನ್ಸ್ (Ivalue Infosolutions) ಲಿಮಿಟೆಡ್ ಸಂಸ್ಥೆಯು ತನ್ನ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಉಪಕ್ರಮದಡಿ ರಾಜಾನುಕುಂಟೆ ಸಮೀಪದ ಕಾಕೋಳಿನ (Kakolu) ಪಿಎಂ ಶ್ರೀ ಸರ್ಕಾರಿ ಸಂಯುಕ್ತ ಪ್ರೌಢಶಾಲೆಗೆ ಶಾಲಾ ಬಸ್ ಕೊಡುಗೆಯಾಗಿ ನೀಡಿದೆ.
ಮಕ್ಕಳ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ದೊರೆತಿರುವ ಈ ಬಸ್ ಕೊಡುಗೆಯು ಶಾಲೆಯ ಮಕ್ಕಳಲ್ಲಿ ಸಂತಸ ಮೂಡಿಸಿದೆ. ಸಂಸ್ಥೆಯ ಸಹಸಂಸ್ಥಾಪಕ ಹಾಗೂ ನಿರ್ದೇಶಕ ಕೃಷ್ಣರಾಜ ಶರ್ಮ ಅವರು ಶಾಲೆಗೆ ಬಸ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೃಷ್ಣರಾಜ ಶರ್ಮ ಅವರು, ಮಕ್ಕಳ ಶಿಕ್ಷಣದ ಹಾದಿಯನ್ನು ಸುಗಮಗೊಳಿಸುವುದರ ಜೊತೆಗೆ ಅವರ ಸುರಕ್ಷತೆಗೆ ಆದ್ಯತೆ ನೀಡುವುದು ಅತ್ಯಂತ ಮುಖ್ಯವಾಗಿದೆ. ಈ ಉದ್ದೇಶದಿಂದ ಶಾಲೆಗೆ ಬಸ್ ಕೊಡುಗೆ ನೀಡಲಾಗಿದ್ದು, ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಇಂತಹ ಸಾಮಾಜಿಕ ಕಳಕಳಿಯ ಕಾರ್ಯಗಳು ಪೂರಕವಾಗಲಿವೆ ಎಂದು ತಿಳಿಸಿದರು.
ದೂರದ ಗ್ರಾಮಗಳ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ
ಶಾಲೆಗೆ ಬಸ್ ದೊರೆತಿರುವುದರಿಂದ ವಿದ್ಯಾರ್ಥಿಗಳಿಗೆ ಸುರಕ್ಷಿತ, ಸುಗಮ ಹಾಗೂ ಅನುಕೂಲಕರ ಪ್ರಯಾಣದ ವ್ಯವಸ್ಥೆ ಕಲ್ಪಿಸಿದಂತಾಗಿದೆ. ವಿಶೇಷವಾಗಿ ದೂರದ ಗ್ರಾಮಗಳಿಂದ ಶಾಲೆಗೆ ಆಗಮಿಸುವ ಮಕ್ಕಳಿಗೆ ಇದರಿಂದ ಹೆಚ್ಚಿನ ಪ್ರಯೋಜನವಾಗಲಿದೆ.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್ಡಿಎಂಸಿ) ಅಧ್ಯಕ್ಷ ವಿಜೇತ ಆರ್. ಮಾತನಾಡಿ, ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ದೊರೆತಿರುವ ಈ ಕೊಡುಗೆ ವಿಶೇಷ ಉಡುಗೊರೆಯಾಗಿದೆ. ಶಾಲಾ ಬಸ್ನಿಂದ ಮಕ್ಕಳ ಪ್ರಯಾಣದ ಸಮಸ್ಯೆ ಕಡಿಮೆಯಾಗುವುದರ ಜೊತೆಗೆ ಸುರಕ್ಷಿತವಾಗಿ ಶಾಲೆಗೆ ಬಂದು ಹೋಗಲು ಅನುಕೂಲವಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದರು.
Also Read>> ಕಾರ್ಕಳ | ಕ್ರೈಸ್ಟ್ಕಿಂಗ್ ಶಾಲೆಯಲ್ಲಿ ಸಂಭ್ರಮದ ಮಕ್ಕಳ ಹಬ್ಬ
Ivalue Infosolutions: ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಖಾಸಗಿ ಸಂಸ್ಥೆಗಳ ಸಹಕಾರ ಅಗತ್ಯ
ಪಾಂಚಜನ್ಯ ಪ್ರತಿಷ್ಠಾನದ ಸಂಸ್ಥಾಪಕ ಟ್ರಸ್ಟಿ ಮುರಳಿ ಕಾಕೋಳು ಮಾತನಾಡಿ, ಸರ್ಕಾರಿ ಶಾಲೆಗಳ ಶೈಕ್ಷಣಿಕ ಅಭಿವೃದ್ಧಿ ಹಾಗೂ ಮೂಲಸೌಕರ್ಯಗಳ ಬಲವರ್ಧನೆಗೆ ಖಾಸಗಿ ಸಂಸ್ಥೆಗಳು ಸಾಮಾಜಿಕ ಹೊಣೆಗಾರಿಕೆಯೊಂದಿಗೆ ಕೈಜೋಡಿಸಿದಾಗ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರಲು ಸಾಧ್ಯವಾಗುತ್ತದೆ. ಐವ್ಯಾಲ್ಯೂ ಇನ್ಫೋಸೊಲ್ಯೂಷನ್ಸ್ ಸಂಸ್ಥೆಯ ಈ ಕೊಡುಗೆ ಇತರ ಸಂಸ್ಥೆಗಳಿಗೂ ಪ್ರೇರಣೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ದೀಕ್ಷಿತ್ ಕುಮಾರ್, ಹಿರಿಯ ಶಿಕ್ಷಕ ನಾರಾಯಣ ಸ್ವಾಮಿ, ವರ್ಧಮಾನ್ ಮೆಡಿ ಸೇಲ್ಸ್ ಪ್ರೈವೇಟ್ ಲಿಮಿಟೆಡ್ನ ಮಹೇಂದ್ರ ಚೌಹಾಣ್, ಕಾಫಿ ಆ್ಯಂಡ್ ಟೀ ಮಾಸ್ಟರ್ ಸಂಸ್ಥೆಯ ಸಿಇಒ ನಂಜರಾಜ ಅರಸ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










