ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭವಿಷ್ಯದಲ್ಲಿ ಅನೇಕ ಉದ್ಯೋಗಗಳನ್ನು ಯಂತ್ರಗಳೇ ನಿರ್ವಹಿಸುವ ಸಾಧ್ಯತೆಯಿದ್ದು, ಕಂಪ್ಯೂಟರ್ ಸೈನ್ಸ್ ಪದವೀಧರರು ಕೇವಲ ಉದ್ಯೋಗ ಅರಸುವವರಾಗದೆ, ನೈಜ ಜಗತ್ತಿನ ಸಮಸ್ಯೆಗಳಿಗೆ ನವೀನ ತಾಂತ್ರಿಕ ಪರಿಹಾರಗಳನ್ನು ಕಂಡುಕೊಳ್ಳುವವರಾಗಬೇಕು ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್. ನಾಗರಾಜ ಹೇಳಿದರು. ನಗರದ ಜೆ.ಎನ್.ಎನ್. ಎಂಜಿನಿಯರಿಂಗ್ ಕಾಲೇಜಿನ (JNCCE) ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ವತಿಯಿಂದ ಗುರುವಾರ ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರಮಟ್ಟದ ಹ್ಯಾಕಥಾನ್ ‘ಮಂಥನ-2026’ (Manthan-2026) ಉದ್ಘಾಟಿಸಿ ಅವರು ಮಾತನಾಡಿದರು.
ನೈಜ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹ್ಯಾಕಥಾನ್ ವೇದಿಕೆ
ತರಗತಿಯಲ್ಲಿ ಕಲಿತ ಜ್ಞಾನವನ್ನು ನೈಜ ಜೀವನದ ಸಮಸ್ಯೆಗಳ ಪರಿಹಾರಕ್ಕೆ ಬಳಸಿಕೊಳ್ಳುವುದೇ ಕಲಿಕೆಯ ನಿಜವಾದ ಪರೀಕ್ಷೆಯಾಗಿದೆ. ಈ ನಿಟ್ಟಿನಲ್ಲಿ ಹ್ಯಾಕಥಾನ್ಗಳು ವಿದ್ಯಾರ್ಥಿಗಳಿಗೆ ತಮ್ಮ ಆಲೋಚನೆಗಳನ್ನು ಪರೀಕ್ಷಿಸಲು, ಹೊಸ ಸಾಧ್ಯತೆಗಳನ್ನು ಅನ್ವೇಷಿಸಲು ಹಾಗೂ ಸೃಜನಶೀಲ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಉತ್ತಮ ವೇದಿಕೆಯಾಗಿವೆ ಎಂದು ತಿಳಿಸಿದರು.
ಫೇಸ್ಬುಕ್ನ ಜನಪ್ರಿಯ ‘ಲೈಕ್’ ಚಿಹ್ನೆಯಂತಹ ಪರಿಕಲ್ಪನೆಗಳೂ ಆಂತರಿಕ ಹ್ಯಾಕಥಾನ್ಗಳ ಮೂಲಕ ರೂಪುಗೊಂಡ ಉದಾಹರಣೆಗಳಿವೆ. ಇಂತಹ ಕಾರ್ಯಕ್ರಮಗಳು ನವೀನ ಆಲೋಚನೆಗಳಿಗೆ ಪ್ರಾಯೋಗಿಕ ಮೌಲ್ಯ ತಂದುಕೊಡುತ್ತವೆ ಎಂದು ಹೇಳಿದರು.

ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ತಾಂತ್ರಿಕ ಬೆಳವಣಿಗೆಗಳ ಕುರಿತು ನಿರಂತರ ಅರಿವು ಹೊಂದಿರಬೇಕು. ತಾರ್ಕಿಕ ಚಿಂತನೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು, ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಅನುಗುಣವಾಗಿ ತಮ್ಮ ಕೌಶಲಗಳನ್ನು ವೃದ್ಧಿಸಿಕೊಳ್ಳಬೇಕು. ದತ್ತಾಂಶ ಮತ್ತು ತಂತ್ರಜ್ಞಾನದ ಯುಗದಲ್ಲಿ ಮಾಹಿತಿ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಪ್ರಯೋಗಗಳ ಮೂಲಕ ಜ್ಞಾನ ಪರಿಪೂರ್ಣ
ಕಾಲೇಜಿನ ಸಂಶೋಧನಾ ಡೀನ್ ಡಾ. ಎಸ್.ವಿ. ಸತ್ಯನಾರಾಯಣ ಮಾತನಾಡಿ, ತರಗತಿಯ ಕಲಿಕೆ ಜ್ಞಾನದ ಒಂದು ಭಾಗವಷ್ಟೇ. ಕಲಿತ ಪರಿಕಲ್ಪನೆಗಳನ್ನು ಪ್ರಯೋಗಗಳ ಮೂಲಕ ಪರೀಕ್ಷಿಸಿ, ಹೊಸ ಆಲೋಚನೆಗಳನ್ನು ಕಾರ್ಯರೂಪಕ್ಕೆ ತಂದು ಅನುಭವ ಗಳಿಸಿದಾಗ ಮಾತ್ರ ಜ್ಞಾನ ಪರಿಪೂರ್ಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ವಿಭಾಗದ ಮುಖ್ಯಸ್ಥೆ ಡಾ. ಮಂಜುಳಾ ಜಿ.ಆರ್. ಪ್ರಾಸ್ತಾವಿಕವಾಗಿ ಮಾತನಾಡಿ, ಉದ್ಯಮ ಕ್ಷೇತ್ರದ ನಿರೀಕ್ಷೆಗಳು ಮತ್ತು ಶೈಕ್ಷಣಿಕ ಕಲಿಕೆಯ ನಡುವಿನ ಅಂತರವನ್ನು ಕಡಿಮೆ ಮಾಡುವ ಸೇತುವೆಯಾಗಿ ಹ್ಯಾಕಥಾನ್ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.

JNCCE: ವಿಜೇತರಿಗೆ ₹50 ಸಾವಿರ ಪ್ರಥಮ ಬಹುಮಾನ
ಗುಜರಾತ್ ಸೇರಿದಂತೆ ರಾಜ್ಯದ ವಿವಿಧ ಎಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿ ತಂಡಗಳು ರಾಷ್ಟ್ರಮಟ್ಟದ ಈ ಹ್ಯಾಕಥಾನ್ನಲ್ಲಿ ಭಾಗವಹಿಸಿವೆ. 24 ಗಂಟೆಗಳ ಕಾಲ ನಡೆಯುವ ತಾಂತ್ರಿಕ ಸವಾಲಿನಲ್ಲಿ ವಿದ್ಯಾರ್ಥಿಗಳು ತಮ್ಮ ವಿಶ್ಲೇಷಣಾ ಸಾಮರ್ಥ್ಯ, ತಾರ್ಕಿಕ ಚಿಂತನೆ, ತಂಡದ ಸಹಕಾರ ಹಾಗೂ ನವೀನ ಪರಿಹಾರ ರೂಪಿಸುವ ಕೌಶಲವನ್ನು ಪ್ರದರ್ಶಿಸಲಿದ್ದಾರೆ.
Also Read>> ಶಿವಮೊಗ್ಗ ಪಿಇಎಸ್ ಪಬ್ಲಿಕ್ ಶಾಲೆಯಲ್ಲಿ ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮ
ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ ₹50,000, ದ್ವಿತೀಯ ಬಹುಮಾನವಾಗಿ ₹25,000 ಹಾಗೂ ತೃತೀಯ ಬಹುಮಾನವಾಗಿ ₹15,000 ನಗದು ಬಹುಮಾನ ನೀಡಲಾಗುವುದು ಎಂದು ಆಯೋಜಕರು ತಿಳಿಸಿದರು.
ಕಾರ್ಯಕ್ರಮದಲ್ಲಿ ಜೆಎನ್ಎನ್ಸಿಇ ಪ್ರಾಂಶುಪಾಲ ಡಾ. ವೈ. ವಿಜಯಕುಮಾರ್, ಸಂಶೋಧನಾ ಡೀನ್ ಡಾ. ಎಸ್.ವಿ. ಸತ್ಯನಾರಾಯಣ, ಡಾ. ಸುಷ್ಮಾ ಆರ್.ಬಿ., ಡಾ. ನಮಿತಾ ಎಂ.ವಿ., ಹಿರಿಯ ವಿದ್ಯಾರ್ಥಿ ಮುರಳಿ ವೆಂಕಟ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










